ಅನುಷ್ ಎ ಶೆಟ್ಟಿ · ಕನ್ನಡ · Uncategorized

‘ಕಳ್ಬೆಟ್ಟದ ದರೋಡೆಕೋರರು’ – ಅನುಷ್ ಎ ಶೆಟ್ಟಿ

FB_IMG_1536510234405.jpg

ಪುಸ್ತಕ: ಕಳ್ಬೆಟ್ಟದ ದರೋಡೆಕೋರರು (ಕಾದಂಬರಿ)

ಲೇಖಕರು: ಅನುಷ್ ಎ ಶೆಟ್ಟಿ

ಪ್ರಕಾಶಕರು: ಅನುಗ್ರಹ ಪ್ರಕಾಶನ (9980808031 / 7204852477)

ಸಾಮಾನ್ಯವಾಗಿ ಎಲ್ಲ ಊರುಗಳಲ್ಲೂ ಯಾವುದಾದರೂ ಒಂದು ನಿಗೂಢವಾದ, ಪ್ರವೇಶ ನಿಷಿದ್ಧವಾದ ಪ್ರದೇಶವಿರುತ್ತದೆ. ಅದು ಊರಹೊರಗಿನ ಬೆಟ್ಟವಿರಬಹುದು, ಗುಡ್ಡವಿರಬಹುದು, ಭೂತಬಂಗಲೆಯಿರಬಹುದು, ಸೋಮಾರಿಕಟ್ಟೆಯಿರಬಹುದು, ಬಿಳಲುಗಳಿಂದ ತುಂಬಿಕೊಂಡಿರುವ ಆಲದಮರವಿರಬಹುದು. ಆ ಸ್ಥಳದ ಬಗ್ಗೆ ಅನೇಕರು, ಹಾಗಾಯಿತಂತೆ ಹಾಗಾಯಿತಂತೆ, ಅಷ್ಟು ಜನ ಸತ್ತರಂತೆ ಅಂತ ಸ್ಥಳ ಪುರಾಣವನ್ನೂ, ಅದರ ಇತಿಹಾಸವನ್ನೂ ಪುಂಖಾನುಪುಂಖವಾಗಿ ಹೇಳುತ್ತಿರುತ್ತಾರೆ. ಊರಹಿರಿಯರಂತೂ ನಮ್ಮ ಕಾಲದಲ್ಲಿ ಇಂತಿಂಥ ಘಟನೆಗಳು ನಡೆದವು ಮತ್ತು ನಾವದನ್ನು ಕಣ್ಣಾರೆ ನೋಡಿದ್ದೇವೆ ಅಂತ ಅದಕ್ಕೊಂದಿಷ್ಟು ರೆಕ್ಕೆ ಪುಕ್ಕ ಜೋಡಿಸಿ ಕೇಳುಗರ ಮನದಲ್ಲಿ ಇನ್ನೆಂದೂ ಆ ಸ್ಥಳಕ್ಕೆ ಹೋಗಬಾರದೆನ್ನುವ ಹಾಗೆ ಭಯ ಹುಟ್ಟಿಸಿಬಿಡುತ್ತಾರೆ. ಊರಿನ ಜನಗಳಿಗೆ ಅಂತಹ ಪ್ರದೇಶದ ಬಗ್ಗೆ ಅವ್ಯಕ್ತವಾದ ಭಯವೊಂದು ಇದ್ದೇ ಇರುತ್ತದೆ. ಈ ರೀತಿಯ ಒಂದು ನಿಗೂಢ ಪ್ರದೇಶವೇ ಕಳ್ಬೆಟ್ಟ.

ಇಡೀ ಕಥೆ ನಡೆಯುವುದು ಹುಣಸೂರಿನಿಂದ ಹದಿನಾರು ಕಿಲೋಮೀಟರ್ ದೂರದ, ನಾಗರಹೊಳೆ ಕಾಡಂಚಿನ ಪುಟ್ಟ ಹಳ್ಳಿ ಹನಗೋಡಿನಲ್ಲಿ. ಹನಗೋಡಿನ ಒಂದು ಬದಿಗೆ ನಾಗರಹೊಳೆ ಅರಣ್ಯವಿದ್ದರೆ, ಇನ್ನೊಂದು ಬದಿಗೆ ಕಳ್ಬೆಟ್ಟವಿದೆ. ಈ ಕಳ್ಬೆಟ್ಟದ ಸುತ್ತ ಯಾರೂ ಸುಳಿಯದಿರಲು ಮುಖ್ಯಕಾರಣಗಳು ಎರಡು. ಒಂದು ಕಾಡುಪ್ರಾಣಿಗಳ ಭಯ, ಎರಡನೆಯದು ಈ ಬೆಟ್ಟದಲ್ಲಿ ದರೋಡೆಕೋರರ ಗುಂಪೊಂದು ಇದೆ ಎಂಬ ಭಯ.

ಹನಗೋಡಿನಲ್ಲಿ ಎರಡು ಮುಖ್ಯ ಬೀದಿಗಳು. ಆನೆಸಾಲು ಬೀದಿ ಮತ್ತು ಕೋಟೆಬೀದಿ. ಎರಡು ಬೀದಿಗಳಲ್ಲೂ ಒಂದೊಂದು ಹುಡುಗರ ಗುಂಪು. ಆನೆಸಾಲು ಬೀದಿಗೆ ವೆಂಕಿ ನಾಯಕನಾದರೆ, ಕೋಟೆಬೀದಿಗೆ ನಾಗ. ಎರಡು ಗುಂಪುಗಳ ನಡುವೆ ಏನಾದರೊಂದು ಕಾರಣಕ್ಕೆ ಯಾವಾಗಲೂ ಜಗಳ. ಹೀಗಿರುವಾಗ ಗಣೇಶಹಬ್ಬದ ನೆಪದಲ್ಲಿ ಎರಡು ಗುಂಪುಗಳ ನಡುವೆ ತಿಕ್ಕಾಟಗಳಾಗುತ್ತವೆ. ಕಾದಂಬರಿಯಲ್ಲಿ ಬಳಸಿರುವ ಮೈಸೂರು ಭಾಗದ ಹಳ್ಳಿಯ ಆಡುಭಾಷೆ ತುಂಬ ಆಪ್ತವಾಗುತ್ತದೆ. ಪ್ರತಿ ಅಧ್ಯಾಯದಲ್ಲೂ ದರೋಡೆಕೋರರ ಬಗ್ಗೆ ಒಂದಿಷ್ಟಿಷ್ಟು ಮಾಹಿತಿ ನೀಡಿ ಕೊನೆಯ ಅಧ್ಯಾಯದಲ್ಲಿ ರಹಸ್ಯಬಯಲು ಮಾಡಿರುವ ಬಗೆ ತುಂಬ ಕುತೂಹಲಕಾರಿಯಾಗಿದೆ. ದೊಡ್ಡಜ್ಜನ ಪಾತ್ರದ ಮೂಲಕ ಇಡೀ ಊರಿನ ಮನಸ್ಥಿತಿ ಹೇಳುವ ಲೇಖಕರು, ದೊಡ್ಡಜ್ಜನ ಅಂತ್ಯದೊಂದಿಗೆ ಕಥೆಯನ್ನು ಮುಗಿಸುತ್ತಾರೆ. ಈ ಮಧ್ಯೆ ಪಾತ್ರಗಳಾದ ಸಿದ್ಧರಾಜು, ಮುಸ್ತಫ, ಚೀಕು, ಕಮಲಿ, ಪಟೇಲರು, ಶ್ಯಾಮಣ್ಣ, ಕಾಳಪ್ಪ ಇವು
ತುಂಬ ಚೆನ್ನಾಗಿವೆ. ಪುಸ್ತಕ ಓದಿ ಮುಗಿಸುವ ಹೊತ್ತಿಗೆ ಹನಗೋಡಿನ ಜನರಲ್ಲಿ ನೀವೂ ಒಬ್ಬರಾಗಿರುತ್ತೀರಿ. ಒಂದೆರಡು ಗಂಟೆಗಳಲ್ಲಿ ಓದಿಮುಗಿಸಬಹುದಾದ ಪುಟ್ಟ ಪುಸ್ತಕ. ನೀವೂ ಓದಿ. ನಮಸ್ಕಾರ

ರಾಮಪುರ ರಘೋತ್ತಮ

ನಿಮ್ಮ ಟಿಪ್ಪಣಿ ಬರೆಯಿರಿ