ಕನ್ನಡ · ಜಯಂತ ಕಾಯ್ಕಿಣಿ · Uncategorized

‘ಜಯಂತ್ ಕಾಯ್ಕಿಣಿ ಕತೆಗಳು’ – ಜಯಂತ್ ಕಾಯ್ಕಿಣಿ

FB_IMG_1536509923511.jpg

“ಜಯಂತ್ ಕಾಯ್ಕಿಣಿ ಕತೆಗಳು – “ತೆರೆದಷ್ಟೇ ಬಾಗಿಲು”, “ದಗಡೂ ಪರಬನ ಅಶ್ವಮೇಧ”, “ಅಮೃತಬಳ್ಳಿ ಕಷಾಯ”.
ಲೇಖಕ : ಜಯಂತ್ ಕಾಯ್ಕಿಣಿ
ಪ್ರಕಾಶಕರು : ಅಂಕಿತ ಪುಸ್ತಕ

ಇದು ಜಯಂತ್ ಕಾಯ್ಕಿಣಿಯವರ ಮೂರು ಕತಾ ಸಂಕಲನಗಳ ಮೊತ್ತ. ಮೂರೂ ಸಂಕಲನಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿಕೊಂಡಿವೆ. ಇಲ್ಲಿರುವ ಮೂವತ್ತೊಂದು ಕತೆಗಳು ಸರಿ ಸುಮಾರು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಬರೆಯಲಾಗಿದೆ. ಹಲವು ಕತೆಗಳು ನಾಡಿನ ಅಸಂಖ್ಯಾತ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದಿವೆ. ಇದಿಷ್ಟೂ ಪುಸ್ತಕದ ಮೇಲು ನೋಟ.

ಜಯಂತ್ ಅವರ ಒಂದು ಕತೆ ಓದಿ ಅದರ ಬಗ್ಗೆ ವಿಮರ್ಶೆಯಾಗಲೀ, ಅನಿಸಿಕೆಯಾಗಲೀ ಅಕ್ಷರ ರೂಪದಲ್ಲಿ ಹಿಡಿದಿಡುವುದು ಕಷ್ಟ. ಇನ್ನು ಮೂವತ್ತೊಂದು ಕತೆಗಳನ್ನು ಓದಿ ಅನಿಸಿಕೆ ಬರೆಯಲು ಹೋದರೆ ಅದು ದುಃಸ್ಸಾಹಸವೇ ಸರಿ. ಹೊಟ್ಟೆ ಬೀರಿಯೇ ತಿಂದವನಿಗೆ ಮೊರದಲ್ಲಿ ಕಡುಬಿಟ್ಟಂತೆ. ಹಸಿವಾದಾಗ ಒಂದೆರೆಡು ಕಡುಬನ್ನು ಗುಳುಂ ಮಾಡಬಹುದೇ ಹೊರತು ಒಂದೇ ಬಾರಿ ತಿಂದು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಈ ಮೂವತ್ತೊಂದು ಕತೆಗಳನ್ನು ಹಾಗೆ ಒಂದೇ ಗುಕ್ಕಿನಲ್ಲಿ ಓದಿ ಅರಗಿಸಿಕೊಳ್ಳುವುದೂ ಅಸಾಧ್ಯ. ವೇಗಕ್ಕೆ ಬಿದ್ದು ಓದಿದರೆ ಆದೀತೇನೋ. ಆದರೆ ಅವು ಸಾಮಾನ್ಯ ಕತೆಗಳಲ್ಲ. ಸಾಮಾನ್ಯವನ್ನೇ ಅಸಮಾನ್ಯ ಮಾಡುವ ಅಭೇದ್ಯ ಕತೆಗಳು. ಅಷ್ಟು ಸುಲಭ ಲೆಕ್ಕದಲ್ಲಿ ಅರಗಿಸಿಕೊಳ್ಳುವುದು ಆಗಲಿಕ್ಕಿಲ್ಲ. ಒಂದು ಕತೆಯನ್ನು ಓದಿ ಸವಿದು ಮುನ್ನಡೆಯಬೇಕು. ಅದರ ಗುಂಗಿನಲ್ಲಿ ತೇಲಬೇಕು. ಹಾಗೆ ಲಯಕ್ಕೆ ಬಿದ್ದು ಓದಿದರಷ್ಟೇ ಜಯಂತ್ ಹೆಚ್ಚು ಆಪ್ತರಾಗುತ್ತಾ ಹೋಗುತ್ತಾರೆ. ಆತುರಕ್ಕೆ ಬಿದ್ದೆವೋ ಅದು ಕೇವಲ ಕತೆ ಇಲ್ಲವೇ ಪಠ್ಯ ಆಗಿ ಓದಿಸಿಕೊಳ್ಳುತ್ತವೆ.

ಅವರ ಕತೆಗಳಲ್ಲಿ ಎಷ್ಟು ತಲ್ಲೀನತೆಯೋ ಅಷ್ಟು ಭಾವಪರವಶತೆ ಇರುತ್ತದೆ. ಎಷ್ಟು ಭಾವಪರವಶತೆಯೋ ಅಷ್ಟು ಸಂತೃಪ್ತಿ. ಆರಂಭಿಕ ಪ್ಯಾರಾ ಒಂದು ನಿಮಗೆ ಪಟ್ಟು ಹಿಡಿದುಬಿಟ್ಟರೆ ಮಿಕ್ಕೆಲ್ಲ ಸಾಲುಗಳು ನಮ್ಮನ್ನು ನಾವೇ ಕಳೆದುಕೊಳ್ಳುವ ಹಾಗೆ ಮಾಡುತ್ತವೆ. ಕತೆಯ ಚೌಕಟ್ಟಿನ ಪರಿಧಿಯ ಆಚೆ ನಿಂತು ತಾವು ಕಂಡದ್ದನ್ನು, ಕೇಳಿದ್ದನ್ನು, ನೋಡಿದ್ದನ್ನು, ಅನುಭವಿಸಿದ್ದನ್ನು, ಸ್ಪುರಣಗೊಂಡಿದ್ದನ್ನು, ಅನಿಸಿದ್ದನ್ನು ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ವ್ಯಕ್ತಿಗಳ ಮೂಲಕ, ಪರಿಸರದ ಮೂಲಕ, ತಾವು ಚಿತ್ರಿಸುವ ಹಲವಾರು ಪಾತ್ರಗಳ ಮೂಲಕ ಅನಿರ್ವಚನೀಯ ಮತ್ತು ಆಪ್ಯಾಯತೆಯ ಸ್ಥಿತಿಯಲ್ಲಿ ಕತೆಯನ್ನು ಹೆಣೆಯುತ್ತಾ ಹೋಗುತ್ತಾರೆ ಜಯಂತ್. ಅಲ್ಲಿ ಅವರ ಬಾಲ್ಯವಿದೆ. ನೆನಪುಗಳಿವೆ. ಕರ್ಮಭೂಮಿಯ ಅಸ್ಖಲಿತ ಘಟನೆಗಳಿವೆ, ಮುಂಬೈ ಮಹಾನಗರವಿದೆ. ಬಡಜನರ, ಸಮಾಜದ ಎಲ್ಲ ಸ್ತರದ ವರ್ಗದವರ ಚಿತ್ರಣವಿದೆ. ಪ್ರಕೃತಿ, ಮುಗಿಲು, ಕಾನನ, ಬೆಟ್ಟ, ಗುಡ್ಡ, ಮಳೆ, ಸಮುದ್ರ, ಗೋಕರ್ಣ.. ಅವರ ಬದುಕಿನ ಅನುಭಾವವೇದ್ಯ ಸರಣಿ ಸಂಗತಿಗಳ ಒಟ್ಟು ಮೊತ್ತವೇ ಇಲ್ಲಿನ ಕತೆಗಳು.

ಜಯಂತ್ ಅವರ ಕತೆಗಳಲ್ಲಿ ನನಗೆ ಹಿಡಿಸಿದ ಅಂಶವೆಂದರೆ ಅವರು ತಾವು ಹೇಳುವ, ಬರೆಯುವ ಕತೆಗಳಿಗೆ ಕನ್ಕ್ಲೂಶನ್ ಕೊಡದೇ ಇರುವುದು. ಅಂದರೆ ಒಂಥರ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ. ದೀಪ ಬೆಳಗಬಹುದು ಯಾ ಆರಬಹುದು. ಅದು ಓದುಗನ ಭಾವ ಕಲ್ಪನೆ ಮತ್ತು ಮನಸ್ಥಿತಿ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ನಾವು ಇನ್ನಿತರ ಯಾವುದೇ ಕತೆಗಳಲ್ಲಿ ಕಾಣಬಹುದಾದ ನಿರ್ಧಿಷ್ಟತೆ ಅವರ ಕತೆಗಳಲ್ಲಿ ಕಂಡುಬರುವುದಿಲ್ಲ. ಎಂದರೇ ಒಂದು ಕತೆ ಓದುತ್ತಿರುತ್ತೇವೆ. ಓದುತ್ತಾ ಓದುತ್ತಾ ಕೊನೆಯ ಹಂತಕ್ಕೆ ಬರುವಾಗ ಮುಂದೇನು ಘಟಿಸಲಿದೆ ಎನ್ನುವ ತಾರ್ಕಿಕ ಅಂಶ ತಿಳಿಯುತ್ತಾ ಹೋಗುತ್ತದೆ ಅಥವಾ ಓದುಗರಾಗಿ ನಾವು ಅದನ್ನು ಊಹಿಸಬಹುದು. ಅದು ಒಳ್ಳೆಯದಿರಬಹುದು, ಕೆಟ್ಟದ್ದಿರಬಹುದು. ಸುಖಾಂತ್ಯವಿರಬಹುದು, ದುಃಖಾಂತ್ಯವಿರಬಹುದು. ಅಂದುಕೊಂಡದ್ದು ಇನ್ನೊಂದು ರೀತಿ ಬೇರೆಯೇ ಆಗಿರಬಹುದು. ಒಟ್ಟಿನಲ್ಲಿ ಹಲವು ಆಯಾಮಗಳಲ್ಲಿ ಆ ಕತೆ ಇನ್ಯಾವುದೋ ಬೇರೆಯ ಆಯಾಮ ಸೂಚಿಸಬಹುದು. ಆ ಆಯಾಮಗಳು ನಾವು ಕಲ್ಪಿಸಿಕೊಂಡಿದ್ದಕ್ಕಿಂತ ಇಲ್ಲವೇ ಓದುತ್ತಿರುವ ಕತೆಯು ಏನು ಹೇಳುತ್ತಿದೆ, ಎತ್ತ ವಾಲುತ್ತಿದೆ ಎನ್ನುವುದಕ್ಕಿಂತ ಭಿನ್ನವಾಗಿರುವುದಿಲ್ಲ. ಹೀಗಾಗಿ ಹಲವು ಕತೆಗಳು ಓದಲು ವಿಭಿನ್ನವಾಗಿದ್ದರೂ ಅಂತ್ಯ ಕೂಡ ನಮಗೆ ತಿಳಿದ, ನಮ್ಮದೇ ಜೀವನದಲ್ಲಿ ನಾವು ಕಂಡುಕೊಂಡ, ಅನುಭವಕ್ಕೆ ಈಡಾದ ಸಂಗತಿಯೇ ಆಗಿರುತ್ತದೆ.

ಆದರೆ ಜಯಂತ್ ಅವರ ಕತೆಗಳು ಹಾಗಲ್ಲ. ಒಂದು ಮಗು ತನ್ನ ತಂದೆಯೊಡನೆ ಸಂತೆಯಲ್ಲಿ ತಪ್ಪಿಸಿಕೊಂಡು ಎಲ್ಲ ಕಡೆ ಅಮಾಯಕವಾಗಿ ಅಲೆಯುವ, ಗೊತ್ತುಗುರಿಯಿಲ್ಲದೆ ಸಿಕ್ಕಸಿಕ್ಕಲ್ಲಿಗೆ ಹೋಗುವ ಮುಗ್ದ ಕಂದಮ್ಮನಂತಿರುತ್ತವೆ. ಆಗ ಆ ಮಗುವಿನಲ್ಲಿ ತನಗರಿವಿಲ್ಲದೆಯೇ ತನ್ನೊಳಗೆ ಅಡಗಿರುವ ತಿಳಿ ಭಯವಿದೆಯೆಲ್ಲಾ? ಎಲ್ಲಿಗೆ ಹೋಗಬೇಕು, ಮುಂದೇನು ಮಾಡಬೇಕು ಎನ್ನುವ ನಿರ್ವಾತವಿದೆಯೆಲ್ಲಾ? ಕಂಗೆಟ್ಟ ಆ ದೀನ ಸ್ಥಿತಿಯಲ್ಲೂ ವಿಕಸಿತವಾಗಿ ಮನದಾಳದಿಂದೇಳುವ ತುಂಟತನವಿದೆಯೆಲ್ಲಾ? ಹೇಯದಲ್ಲೂ ಹೀನನಾಗದೆ ವಿಕ್ಷಿಪ್ತ ತಟಸ್ಥತೆಯನ್ನು ಕಳೆದುಕೊಳ್ಳದಿರುವ ನಿರ್ಭಾವುಕ ಸಮತೋಲತೆ ಇದೆಯೆಲ್ಲಾ? ಕತ್ತಲಿನಲ್ಲೂ ನೆರೆ ಮಿಂಚನ್ನು ಕಂಡು ತನ್ನ ಕಣ್ಣಲ್ಲಿ ಬೆಳಕನ್ನು ಒಳಗೆಳೆದುಕೊಳ್ಳುವ ಆ ಮಗುವಿನ ನಿರಾಡಂಬರ ವಿಶ್ವಾಸವಿದೆಯೆಲ್ಲಾ? ಎಕ್ಸಾಕ್ಟ್ಲಿ ಜಯಂತ್ ರ ಕತೆಗಳೂ ಹೀಗೆಯೇ ಇರುತ್ತವೆ. ಅಲ್ಲೊಂದು ನಿರ್ಧಿಷ್ಟತೆ ಇರುವುದಿಲ್ಲ ಅಥವಾ ಇದ್ದರೂ ಅದನ್ನು ಹೇಳಲು ಅವರೂ ಹಾತೊರೆಯುವುದಿಲ್ಲ. ಕತೆಯ ದಿಕ್ಕು, ಪಾತ್ರಗಳ ವಹಿವಾಟು, ಯಾವುದೇ ಒಂದು ಸನ್ನಿವೇಶವನ್ನು ಕೊನೆಗಾಣಿಸುವ ರೀತಿ..ಎಲ್ಲವನ್ನೂ ಜಯಂತ್ ಓದುಗರ ಕ್ಷಿತಿಜಕ್ಕೇ ಬಿಡುತ್ತಾರೆ. ಸಾವಕಾಶ ನೀಲಿ ವಿಸ್ತಾರದಲ್ಲಿ ಬಳಿದುಕೊಂಡದ್ದೇ ರಂಗು. ಮೂಡಿದ್ದೇ ಬೆರಗು. ಕಣ್ಣಿಗೆ ಕಂಡದ್ದೇ ಚಿತ್ರ. ಇದನ್ನು ಅವರು ಕತೆ ಹೆಣೆಯುವ ತಂತ್ರಗಾರಿಕೆ ಅಂತನ್ನಲೂಬಹುದು.

ಇನ್ನು ಅವರ ಗದ್ಯವೂ ಕಾವ್ಯ ಶ್ರೀಮಂತಿಕೆಯಿಂದ ಕೂಡಿರುತ್ತದೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಅವರು ಏನು ಬರೆದರೂ ಕಾವ್ಯವೇ ಸೃಷ್ಟಿಯಾಗುತ್ತದೆ. ಗದ್ಯಕ್ಕೆ ಕಾವ್ಯದ ಮಾಂತ್ರಿಕತೆ ಕೊಡುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ಹೀಗಾಗಿ ಕಾವ್ಯದಷ್ಟೇ ಸಲೀಸಾಗಿ ಅವರ ಕತೆಗಳು ಓದಿಸಿಕೊಂಡು ಹೋಗುತ್ತವೆ. ಅಥವಾ ಅವರು ಗದ್ಯ ಬರೆದರೂ ಕಾವ್ಯದಂತೆ ಭಾಸವಾಗುತ್ತವೆ. ಮನಸ್ಸು ಬೆಚ್ಚಗಾದಾಗ, ವೇದನೆಗಳಿಂದ ತುಂಬಿ ಹೋದಾಗ ಯಾವುದೋ ಪುಟದಲ್ಲಿರುವ ಯಾವುದೋ ಕತೆಯನ್ನು ಹೆಕ್ಕಿ ತಗೆದು ಓದಲಡ್ಡಿಯಿಲ್ಲ. ಎಲ್ಲಿಂದ ಓದಿದರೂ ಕಳೆದು ಹೋದ ಮನಸ್ಸಿಗೆ ನೆಮ್ಮದಿ, ಸಾಂತ್ವಾನ ನೀಡಬಲ್ಲ ಕತೆಗಳಿವೆ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ

ನಿಮ್ಮ ಟಿಪ್ಪಣಿ ಬರೆಯಿರಿ