ಕನ್ನಡ · ಜಗದೀಶ್ ಕೊಪ್ಪ.ಎನ್

‘ಬಿಳಿಸಾಹೇಬನ ಭಾರತ’ – ಡಾ.ಜಗದೀಶ್ ಕೊಪ್ಪ

ಬಿಳಿಸಾಹೇಬನ ಭಾರತ – ಡಾ.ಜಗದೀಶ್ ಕೊಪ್ಪ

ಪಲ್ಲವ ಪ್ರಕಾಶನ

ಬೆಲೆ – 120₹

ಜಿಮ್ ಕಾರ್ಬೆಟ್ ಅಂದರೆ ನಮಗೆ ನೆನಪಿಗೆ ಬರುವುದು ಬೇಟೆಯ ಕತೆಗಳು. ರುದ್ರಪ್ರಯಾಗದ ಭಯಾನಕ ನರಭಕ್ಷಕ ಎಂಬ ಅವನ ಕೃತಿಯ ಅನುವಾದದ ಮೂಲಕ ಕನ್ನಡಿಗರ ಚಿತ್ತಭಿತ್ತಿಯಲ್ಲಿ ಅವನ‌ ನೆನಪು ಅಜರಾಮರ.
ಪ್ರಸ್ತುತ ಕೃತಿ ಜಿಮ್ ಕಾರ್ಬೆಟ್ ಬದುಕನ್ನು ನಮ್ಮ ಮುಂದೆ ತೆರೆದಿಡುತ್ತದೆ.‌ಇದಕ್ಕಾಗಿ ನೈನಿತಾಲ್ ಕಡೆ ಸ್ವತಃ ಪ್ರವಾಸ ಹೋಗಿ,ಅನೇಕ ಆಕರ ಗ್ರಂಥಗಳ ಪರಾಮರ್ಶೆ ಮಾಡಿ ಜಗದೀಶ್ ಕೊಪ್ಪ ಅವರು ಇದನ್ನು ಬರೆದಿದ್ದಾರೆ.

ಜಿಮ್ ಕಾರ್ಬೆಟ್ ಭಾರತದಲ್ಲೇ ಹುಟ್ಟಿ ಬೆಳೆದವ. ಇಲ್ಲಿ ಮರು ಮದುವೆಯಾದ ಇಬ್ಬರು ಬ್ರಿಟಿಷ್ ದಂಪತಿಗಳ ಹತ್ತೂ ಪ್ಲಸ್ ಮಕ್ಕಳಲ್ಲಿ ಎಂಟನೆಯವ. ಬಾಲ್ಯದಲ್ಲಿ ಕಷ್ಟ ಅಂತ ಕಾಣದಿದ್ದರೂ ನಂತರ ರೈಲ್ವೆ ಉದ್ಯೋಗಕ್ಕೆ ಸೇರಿ‌ ಕಾರ್ಯದಕ್ಷತೆಯಿಂದ ಮೇಲೆ ಮೇಲೆ ಏರಿದವ. ಜೀವನದುದ್ದಕ್ಕೂ ಅವಿವಾಹಿತನಾಗಿ ಇದ್ದ. ಇದಷ್ಟೇ ಅಲ್ಲದೆ ತಾನಿದ್ದ ಜಾಗದಲ್ಲಿ ಜನರಿಗೆ ಉಪಟಳ ಕೊಡುತ್ತಿದ್ದ ನರಭಕ್ಷಕ ಹುಲಿ,ಚಿರತೆಗಳ ಬೇಟೆಯಾಡಿ ಕೀರ್ತಿ ಗಳಿಸಿದ. ತನ್ನ ಜೊತೆ ಕೆಲಸ ಮಾಡುತ್ತಿದ್ದ ಜನರ ಯೋಗಕ್ಷೇಮ ಚೆನ್ನಾಗಿ ನೋಡಿಕೊಂಡ ಕಾರಣ ಜನ ಮಾನಸದಲ್ಲಿ ನೆಲೆ ನಿಂತವ. ಈ ಕೃತಿ ಅವನ ಮತ್ತು ಭಾರತೀಯರ ಸಂಬಂಧವ ಚೆನ್ನಾಗೇ ತೆರೆದಿಡುತ್ತದೆ.

ಬೇಟೆ ಕತೆಯ ರೋಚಕತೆ ಇಲ್ಲದಿರಬಹುದು.ಆದರೆ ಭಾರತದಲ್ಲಿ ಹುಟ್ಟಿ ಬೆಳೆದ ಬ್ರಿಟಿಷನೊಬ್ಬ ಹೇಗೆ ಜನರ ಮನದಲ್ಲಿ ಅಚ್ಚೊತ್ತಿದಂತೆ ಬೆಳೆದ. ಅಲ್ಲಿನ ದಾರಿಹೋಕರು ಕಾಡು ದಾರಿಯಲ್ಲಿ ಸಾಗುವಾಗ ಅವನ ಪೋಟೋ ಇದ್ದ ಕಾರಣ ತಮ್ಮನ್ನು ಯಾವ ಪ್ರಾಣಿಯೂ ಬೇಟೆಯಾಡಲಾರದು‌ ಎಂಬ ನಂಬಿಕೆ ಬೆಳೆಸಿಕೊಂಡರು ಎಂಬಷ್ಟರ ಮಟ್ಟಿಗೆ ಅವನು ಬೆಳೆದ ರೀತಿ ಶ್ಲಾಘನೀಯ.

ಜಗದೀಶ ಕೊಪ್ಪ ಅವರ ಬರಹಗಳು ಯಾವಾಗಲೂ ಅಧ್ಯಯನಪೂರ್ಣ. ಈ ನೂರು ಚಿಲ್ಲರೆ ಪುಟದ ಪುಸ್ತಕ ಓದುವಾಗ ನಮಗರಿಯದ ಜಿಮ್ ಕಾರ್ಬೆಟ್ ಎಂಬ ಹುಲಿ ಬೇಟೆಗಾರನ ಬಗ್ಗೆ ಇನ್ನಷ್ಟು ಒಳನೋಟಗಳು ಸಿಗುತ್ತವೆ ಅನ್ನುವುದು ತೃಪ್ತಿ.

ಪ್ರಶಾಂತ್ ಭಟ್

ಸಂಗೀತಾ ಶೆಣೈ – ಜಿಮ್ ಕಾರ್ಬೆಟ್ ಸಮಗ್ರ – ಟಿ.ಎಸ್.ವಿವೇಕಾನಂದ ಅವರ ಅನುವಾದ – ರೋಚಕವಾಗಿದೆ. ರುಚಿಯಾಗಿದೆ.

ನಿಮ್ಮ ಟಿಪ್ಪಣಿ ಬರೆಯಿರಿ