ಆರತಿ ವೆಂಕಟೇಶ್ · ಕನ್ನಡ · Uncategorized

‘ಮಂಥನ’ – ಡಾ. ಆರತಿ ವೆಂಕಟೇಶ್

FB_IMG_1549386814647.jpg

ಪುಸ್ತಕದ ಹೆಸರು: ಮಂಥನ
ಲೇಖಕಿ: ಡಾ. ಆರತಿ ವೆಂಕಟೇಶ್
ಪ್ರಕಾಶನ: ಸಿವಿಜಿ ಪ್ರಕಾಶನ
ಬೆಲೆ: ೮೦ ರೂಪಾಯಿ

ಸಂಸಾರ ಆನಂದ ಸಾಗರವಾಗಲು, ದಂಪತಿಗಳ ನಡುವೆ ನಂಬಿಕೆ, ವಿಶ್ವಾಸ, ಹೊಂದಾಣಿಕೆ, ಸಾಮರಸ್ಯ ಮುಖ್ಯ. ಬೇರೆ ಬೇರೆ ವಾತಾವರಣದಿಂದ ಬಂದ ಎರಡು ವ್ಯಕ್ತಿಗಳು ಒಟ್ಟಾಗಿ ಸಾಮರಸ್ಯದಿಂದ ಬಾಳಬೇಕಾದರೆ ಕೆಲವೊಂದು ತ್ಯಾಗಕ್ಕೂ ತಯಾರಿರಬೇಕು. ಪತಿಪತ್ನಿಯರ ವೈಮನಸ್ಸಿನ ನೇರ ಪರಿಣಾಮ ಬೀರುವುದು ಮಕ್ಕಳ ಮೇಲೆ, “ಗಂಡಹೆಂಡಿರ ಜಗಳದಲಿ ಕೂಸು ಬಡವಾಯಿತು” ಎಂಬ ಗಾದೆಯೇ ಇದೆಯಲ್ಲ.

ಇನ್ನು ಪತಿ ಪತ್ನಿಯರಿಬ್ಬರೂ ಉದ್ಯೋಗಸ್ಥರಾದರೆ, ಈ ಹೊಂದಾಣಿಕೆ, ತ್ಯಾಗಗಳ ಅಗತ್ಯ ಇನ್ನೂ ಜಾಸ್ತಿ ಇರುತ್ತದೆ.
ಪತ್ನಿಯಾದವಳು ಹೊರಗೆ ಕೆಲಸಕ್ಕೂ ಹೋಗಬೇಕಾಗಿರುವುದರಿಂದ ಮನೆಯ ಕೆಲಸಗಳಲ್ಲಿ ಪತಿಯ ನೆರವಿನ ಅಗತ್ಯ ಅವಳಿಗಿರುತ್ತದೆ. ಇನ್ನು ಮಗುವಾದ ಮೇಲಂತೂ ಮಗುವಿನ ಪಾಲನೆ-ಪೋಷಣೆ, ಮನೆ ಕೆಲಸ, ತನ್ನ ಉದ್ಯೋಗ ಎಲ್ಲವನ್ನೂ ಸಮತೋಲಿಸುವಲ್ಲಿ ಹೆಣ್ಣು ಬಸವಳಿದು ಹೋಗುತ್ತಾಳೆ. ಅಂತಹ ಸಮಯದಲ್ಲಿ ಪತಿ ಪತ್ನಿಯರಲ್ಲಿ ಹೊಂದಾಣಿಕೆ ಇದ್ದರೆ ಈ ಎಲ್ಲಾ ಕೆಲಸಗಳು ಸರಾಗವಾಗಿ ನಡೆದು ಹೋಗುತ್ತವೆ. ಇಲ್ಲಿ ಪರಸ್ಪರರ ಮನಸ್ಸನ್ನು ಅರಿತು ನಡೆಯುವುದು ಮುಖ್ಯವಾಗುತ್ತದೆ.

ಈ ಕತೆಯಲ್ಲಿ ಲೇಖಕಿ ಉದ್ಯೋಗಸ್ಥ ದಂಪತಿಗಳ ನಡುವಿನ ಸಮಸ್ಯೆಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಕಥಾನಾಯಕಿ ಮನೆಕೆಲಸ, ಮಗುವಿನ ಕೆಲಸ ನಿಭಾಯಿಸಲು ಪಡುವ ಪಾಡು, ಗಂಡನ ಸಹಕಾರವಿಲ್ಲದೇ ಬೇಸತ್ತ ಆಕೆ ಕೆಲಸದವರ ಮೊರೆ ಹೋಗುವುದು, ಕೆಲಸಗಾರರೊಡನೆ ಹೊಂದಾಣಿಕೆಯ ಸಮಸ್ಯೆ, ಆಗಾಗ ಬದಲಾಗುವ ಕೆಲಸಗಾರರು, ಅವರೊಡನೆ ಹೊಂದಿಕೊಂಡು ಹೋಗುವ ಸಮಸ್ಯೆ. ಇವರ ಗೈರುಹಾಜರಿಯಲ್ಲಿ ಕೆಲಸಗಾರರ ಕೆಟ್ಟ ನಡವಳಿಕೆ, ಅದರಿಂದ ಗಾಬರಿಯಾಗುವ ಮಗು.

ಈ ಕತೆ ಈಗಿನ ಉದ್ಯೋಗಸ್ಥ ದಂಪತಿಗಳ ಜೀವನ ಸಮಸ್ಯೆಗಳಿಗೆ ಕನ್ನಡಿ‌ ಹಿಡಿದಂತಿದೆ. ಸರಳ ಬರವಣಿಗೆ, ಆಪ್ತವೆನಿಸುವ, ಸರಾಗವಾಗಿ ಓದಿಸಿಕೊಂಡು ಹೋಗುವ ಶೈಲಿ ಇಷ್ಟವಾಯಿತು.

ಧನ್ಯವಾದಗಳು

ಅನಿತಾ ಪೈ

ನಿಮ್ಮ ಟಿಪ್ಪಣಿ ಬರೆಯಿರಿ