ಕನ್ನಡ · ಸಾಯಿಸುತೆ

‘ಸ್ವಪ್ನ ಸಂಭ್ರಮ’ – ಸಾಯಿಸುತೆ

FB_IMG_1549386366793.jpg

ಕಾದಂಬರಿ: ಸ್ವಪ್ನ ಸಂಭ್ರಮ
ಲೇಖಕರು: ಸಾಯಿಸುತೆ
ಪ್ರಕಾಶಕರು: ವಾಸವಾಂಬ ಪ್ರಕಾಶನ

ವರದಕ್ಷಿಣೆಯೆಂಬುದು ಒಂದು ಹೆಣ್ಣಿನ ಮನೆಯಲ್ಲಿ ಮನಸಲ್ಲಿ ಎಷ್ಟು ಕೋಲಾಹಲವೆಬ್ಬಿಸುತ್ತದೋ ಅಷ್ಟೇ ಪ್ರಮಾಣದಲ್ಲಿ ಒಂದು ಗಂಡಿನ ಮನಸ್ಸನ್ನು ತಟ್ಟಬಹುದು. ಅದಕ್ಕೆ ಗಂಡು ಹೆಣ್ಣೆಂಬ ಬೇಧ ಸಲ್ಲದು. ಅಲ್ಲಿ ಕೇವಲ ಸಾತ್ವಿಕ ತಳಹದಿಯ ಮನಸ್ಸೊಂದಿದ್ದರೆ ಸಾಕು…! ಹೆಣ್ಣಿನ ಮನದಲ್ಲಿ ವರದಕ್ಷಿಣೆ ಕೊಡುವುದು ಪಿಡುಗಾಗಿ ನೆಮ್ಮದಿ ಹಿಂಡಬಹುದಾದರೆ… ವರದಕ್ಷಿಣೆ ಪಡೆಯುವುದು ಗಂಡಿನ ಮನದಲ್ಲಿ ಔದಾರ್ಯದ ಉರುಳಾಗಿ ಕೊರಳನ್ನು ಒತ್ತಿ ವ್ಯಕ್ತಿತ್ವವನ್ನೇ ಪ್ರಶ್ನಿಸಬಹುದು. ಆಗ ಉತ್ತರಿಸುವ ಆತ್ಮಸ್ಥೈರ್ಯ ಇರುತ್ತದೆಯೇ..? ಹಣ ಎರಡು ಮನಸ್ಸುಗಳ ನಡುವಿನ ಅಂತರವನ್ನು ಎಂದೂ ಕಡಿಮೆ ಮಾಡುವುದಿಲ್ಲ. ಬದಲಿಗೆ ಸಮಯ ಸಿಕ್ಕಾಗಲೆಲ್ಲ ವ್ಯಕ್ತಿತ್ವಕ್ಕೆ ಸವಾಲೆಸೆಯುತ್ತಾ ಕುಟುಕುವ ಚೇಳಿನಂತೆ ತನ್ನ ಕೆಲಸ ಪ್ರಾರಂಭಿಸಿರುತ್ತದೆ. ಇಲ್ಲಿ ಪ್ರೀತಿ ಪ್ರೇಮ ಸ್ನೇಹ ಸಂಬಂಧಗಳು ಹೊರತಲ್ಲ. ನಂಬಿಕೆಯೂ ಉಳಿಯುವುದಿಲ್ಲ. ಇಂತಹುದರ ನಡುವೆ ಮೂಡುವ ಸಣ್ಣ ಬಿರುಕು ಹಾಗೆ ಉಳಿದರೆ ಅಂತಹ ನಷ್ಟವೇನು ಇಲ್ಲ. ಆದರೆ ಅದು ಬಿಟ್ಟ ಬಿರುಕನ್ನು ಇಂಚಿಂಚಾಗಿ ಜಾಸ್ತಿ ಮಾಡಿ ಮನಸ್ಸುಗಳ ನಡುವೆ ಕಂದಕವನ್ನೇ ಸೃಷ್ಟಿಸುತ್ತದೆ. ಇದರ ನಡುವೆ ನಂಬಿಕೆಯೂ ತನ್ನ ಬಣ್ಣ ಬದಲಿಸಿಬಿಟ್ಟರೇ ಕಡೆಗೆ ಉಳಿಯುವುದಾದರೂ ಏನು..?

ಮಾತಿನ ಬದಲು ಮೌನವೇ ತನ್ನ ಸಾಮ್ರಾಜ್ಯ ಸ್ಥಾಪಿಸಿಬಿಡುತ್ತದೆ. ಅದರ ಅಧಿಪತ್ಯಕ್ಕೆ ಒಡೆಯರು ಯಾರು…? ಹೇಗೆ..? ಅನುಮಾನ ಹೆಚ್ಚಾಗಿ ಸ್ವಾರ್ಥದ ಮೊಳಕೆಯೊಂದು ಚಿಗುರಿಬಿಟ್ಟರಂತೂ ಅಲ್ಲಿಗೆ ಮುಗಿದೇ ಹೋಯಿತು. ಅದು ಕೊಂಡೊಯ್ಯುವ ದಾರಿಯಲ್ಲಿ ಬರೀ ಕಲ್ಲು ಮುಳ್ಳೇ… ಇಂತಹುದೇ ಒಂದು ಪ್ರಸಂಗವನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ “ಸ್ವಪ್ನ ಸಂಭ್ರಮ”.

ನಾಯಕನ ಪಟ್ಟ ಕಟ್ಟಬಹುದಾದ ಶ್ರೀವಾಸ್ತವರು ಚಾರುಲತಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಅನ್ಯಾಯ ಮಾಡಿದರೆಂದು ಒಂದು ಕ್ಷಣ ಅನ್ನಿಸಿದರೂ ಮರುಕ್ಷಣವೇ ಅದನ್ನು ಮನ ಒಪ್ಪುವುದಿಲ್ಲ. ಅದನ್ನು ಓದುವ ನಾವು ಓಪ್ಪದೇ ಇರುವುದೇನು ಸ್ವತಃ ಅನ್ಯಾಯಕ್ಕೆ ಒಳಗಾದ ಚಾರುಲತ ಭಾಸ್ಕರ್ ರವರೇ ಒಪ್ಪುವುದಿಲ್ಲ ಅಥವಾ ಅದನ್ನು ತೋರ್ಪಡಿಸಿಕೊಳ್ಳದಂತಹ ಸರಳತೆ… ಮೃದುಸ್ವಭಾವ. ಇದು ಎಷ್ಟರಮಟ್ಟಿಗೆ ಸರಿ..? ನಮಗೇ ಆದ ಅನ್ಯಾಯವನ್ನು ಎತ್ತಿ ಆಡದಂತಹ ಸಾತ್ವಿಕತೆ..! ಸಜ್ಜನಿಕೆ…! ಇದು ಸ್ವಲ್ಪಮಟ್ಟಿಗೆ ಹೆಚ್ಚೆ ಅನಿಸಿತು. ನಮ್ಮ ಹಕ್ಕನ್ನು ನಾವು ಏಕೆ ಬಿಟ್ಟುಕೊಡಬೇಕೆಂದೂ ಅನ್ನಿಸಿತು.

ಇಲ್ಲಿನ ಕಥೆ ಹೇಳಿ ಅದರ ಹಂದರ ಬಿಚ್ಚಿಡುವುದಿಲ್ಲ. ಆದರೆ ಮನಸ್ಸಿನ ತಳಮಳಗಳು… ತುಮುಲಗಳು… ಹೇಳಿಕೊಳ್ಳಲಾರದ ವಿಷಯಗಳ ಒತ್ತಡವನ್ನು ಶ್ರೀವಾಸ್ತವ ಅನುಭವಿಸಿದರೆ, ಸಂಬಂಧಗಳು ಅದರ ಮೌಲ್ಯಗಳಿಗಿಂತ ಸ್ನೇಹಕ್ಕೆ ಹೆಚ್ಚು ಒತ್ತು ಕೊಡುವ.. ಅಂತೆಯೇ ಯಾವುದೇ ಸಂದರ್ಭದಲ್ಲೂ ಮನಸ್ಸನ್ನು ಶಾಂತ ರೀತಿಯಲ್ಲಿ ಕಾಪಿಟ್ಟುಕೊಳ್ಳುವ ಭಾಸ್ಕರ್ ಮನಸ್ಸಿಗೆ ಹತ್ತಿರವಾಗುತ್ತಾರೆ. ಅವರ ಪತ್ನಿ ಸುಕನ್ಯಾ ಈ ವಿಚಾರದಲ್ಲಿ ಮಾತ್ರ ಭಾಸ್ಕರ್ ಗೆ ವಿರುದ್ಧವಾದರೂ ಚಾರುಲತ ರವಿಯ ವಿಚಾರದಲ್ಲಿ ತೋರುವ ಆದರ… ವಾತ್ಸಲ್ಯಗಳಿಂದ ಹೆಣ್ಣಿನ ಮನಸ್ಸು ಪ್ರೀತಿ ಸಂಬಂಧಗಳಿಗೆ ಅವಳು ಕೊಡುವ ಮಹತ್ವವನ್ನು ತಿಳಿಸುತ್ತದೆ. ಇನ್ನು ಹುಡುಗಾಟಿಕೆಯ ರೋಹಿತ್, ಗಂಭೀರ ಸ್ವಭಾವದ ರವಿ ತಮ್ಮ ತಮ್ಮ ಪಾತ್ರಗಳಲ್ಲಿ ಇಷ್ಟವಾದರೂ ಹೆಚ್ಚಾಗಿ ಕಾಡುವುದು ಚಾರುಲತ. ತನಗಾದ ನೋವನ್ನು ಮಿತಿಮೀರಿ ಸಹಿಸದೇ ವಿರೋಧಿಸಬಹುದಿತ್ತು. ಹಾಗೆ ಮಾಡದೇ ಇದ್ದುದರ ಫಲ ಇಪ್ಪತ್ತು ವರ್ಷಗಳ ನಂತರ ಅಚಲಾ ರೂಪದಲ್ಲಿ ಬೃಹತ್ತಾಗಿ ಬೆಳೆದು ನಿಂತಿತ್ತು. ಅಚಲಾರ ಸ್ವಾರ್ಥ… ಹಠವೇ ಹೆಮ್ಮರವಾಗಿ ಕಡೆಗೆ ಆಕೆ ಪಡೆದದ್ದಾರೂ ಏನು..? ಅಚಲಾಗೆ ಮದುವೆಯಾದ ಇಪ್ಪತ್ತು ವರ್ಷಗಳ ನಂತರದಲ್ಲಿ ಬದುಕು ಖಾಲಿಯೆನಿಸಿದರೇ ಶ್ರೀವಾಸ್ತವ ಇಪ್ಪತ್ತು ವರ್ಷದ ದಾಂಪತ್ಯದಲ್ಲಿ ಕಂಡುಕೊಂಡ ನೆಮ್ಮದಿಯೇನು? ಒಟ್ಟಾರೆ ಸಂಬಂಧಗಳ ಸುತ್ತಲೂ ಸ್ವಾರ್ಥ ತನ್ನ ಅಹಮಿಕೆಯನ್ನು ಪರಿಧಿಯಾಗಿಸಿದಾಗ ಬದುಕು ಬಣ್ಣದ ಜೊತೆಗೆ ಅರ್ಥವನ್ನೂ ಕಳೆದುಕೊಳ್ಳುತ್ತದೆ. ಸಂಬಂಧಗಳು ವ್ಯಾವಹಾರಿಕವಾಗುತ್ತದೆ. ಇಲ್ಲಿ ನಡೆದದ್ದೂ ಅದೆ. ಅಚಲಾ, ರೋಹಿತ್ ಶ್ರೀ ಎಲೆಕ್ಟ್ರಾನಿಕ್ಸ್, ಬಂಗಲೆ, ಶೇರ್ ಗಳಿಗೆ ಒತ್ತುಕೊಟ್ಟು ಶ್ರೀಮಂತ ಹೃದಯದ ಶ್ರೀವಾಸ್ತವರನ್ನು ಕಳೆದುಕೊಂಡರೆ… ಬರಿಗೈಯ್ಯಲ್ಲಿ ಬಂದ ಅವರನ್ನು ತುಂಬು ಹೃದಯದಿಂದ ಬರಮಾಡಿಕೊಂಡದ್ದು ರವಿ, ಚಾರುಲತಾ… ಕಥೆಯ ಅಂತ್ಯ ಇಷ್ಟವಾಯಿತು.

ಧನ್ಯವಾದಗಳು
ಸಪ್ನವಂಶಿ.

ನಿಮ್ಮ ಟಿಪ್ಪಣಿ ಬರೆಯಿರಿ