ಅನಿಲ್ ಕುಮಾರ್ ಎಚ್ ಎ · ಕನ್ನಡ - ಅನುವಾದಿತ · Uncategorized

‘ನೋಡುವ ಬಗೆ’ – ಎಚ್.ಎ.ಅನಿಲ್ ಕುಮಾರ್

FB_IMG_1559235096852.jpg

ಪುಸ್ತಕ : ‘ನೋಡುವ ಬಗೆ”
ಕತೃ : ಜಾನ್ ಬರ್ಜರ್
ಕನ್ನಡಾನುವಾದ: ಎಚ್. ಎ. ಅನಿಲ್ ಕುಮಾರ್
ಪ್ರಕಾಶಕರು : ಕಡಲು ಪ್ರಕಾಶನ

ನಾವು ಗಮನಿಸಿರಬಹುದು, ಚಿತ್ರಕಲಾಮಂದಿರದಲ್ಲೋ , ಚಿತ್ರಕಲೆಯ ಪ್ರದರ್ಶನದಲ್ಲೋ ಚಿತ್ರಕೃತಿಯೊಂದನ್ನು ಕೆಲವೊಬ್ಬರು ಉಳಿದವರಿಗಿಂತ ದೀರ್ಘಕಾಲ ನೋಡುತ್ತಾ ನಿಂತುಬಿಡುತ್ತಾರೆ. ಇತರರಿಗೆ ಆಕರ್ಶಕವಲ್ಲದ್ದು ಅವರಿಗೆ ಇಷ್ಟವಾಗಿರುವುದು ಒಂದು ದೃಷ್ಟಿಕೋನವಾದರೆ, ಇನ್ನೊಂದು, ಅವರು ಆ ಚಿತ್ರವನ್ನು ಆಳವಾಗಿ ಆಸ್ವಾದಿಸುತ್ತಿದ್ದಾರೆ ಎಂದರ್ಥ. ಅಲ್ಲಿ ಚಿತ್ರಿತವಾಗಿರುವುದಕ್ಕಿಂತ ಹೆಚ್ಚಿದನ್ನು ಕಾಣವುದಕ್ಕೆ ಅವರ ಪ್ರಜ್ಞೆ ಪ್ರಯತ್ನಿಸುತ್ತಿರಬಹುದು. ತಮ್ಮ ಬದುಕಿಗೂ ಆ ಚಿತ್ರಕ್ಕೂ ಯಾವುದೋ ಅವಿನಾಭಾವ ಸಂಬಂಧವೇರ್ಪಟ್ಟಿರಬಹುದು. ಅಥವಾ ಇನ್ನಾವುದೋ ಅವರ್ಣನೀಯ ಭಾವಸಂಪರ್ಕದಲ್ಲಿ ವೀಕ್ಷಕನ ಮನಸ್ಸನ್ನು ಆ ಚಿತ್ರ ಹಿಡಿದಿಟ್ಟುಕೊಂಡು, ಸಂವಾದಕ್ಕಿಳಿದಿರಬಹುದು. ಅಂದರೆ ಇಲ್ಲಿ ಆ ನೋಡುಗನ “ನೋಡುವ ಬಗೆ” ಬೇರೆಯವರಿಗಿಂತ ವಿಭಿನ್ನವಾಗಿದೆ. ಪ್ರತಿಯೊಬ್ಬ ವೀಕ್ಷಕನ ನೋಡುವ ಬಗೆ ಅವರವರ ಸ್ವಭಾವ, ಮನಸ್ಸತ್ವಕ್ಕಣುಗುಣವಾಗಿ ಬೇರೆ ಬೇರೆಯಾಗೇ ಇರುತ್ತದೆ. ಹಾಗೆಯೆ ಕಲಾವಿದನ ಉದ್ದೇಶ, ಗುರಿ, ಮನೋಸ್ಥಿತಿ, ಕಾಲಘಟ್ಟಕ್ಕಗಣುಗುಣವಾಗಿ ಚಿತ್ರಕೃತಿಯ ರೂಪಧಾರಣೆಯಾಗಿರುತ್ತದೆ. ಇಲ್ಲಿ ಪರಿಚಯಿಸುತ್ತಿರುವ ಪುಸ್ತಕ “ನೋಡುವ ಬಗೆ”ಯು ಕೂಡ, ಮುಖ್ಯವಾಗಿ ವಿಶ್ಲೇಷಿಸುವುದು ಸಮಾಜದ ಯಾವ ಯಾವ ಕಾರಣಗಳು, ಚರಿತ್ರೆಯ ಯಾವ ಕಾಲಘಟ್ಟಗಳು, ಹೇಗೆ ಕಲಾಕೃತಿಯೊಂದರ ಅರ್ಥರೂಪಗಳ ಮೇಲೆ ಪ್ರಭಾವವನ್ನು ಬೀರುತ್ತದೆ ಎಂಬುದನ್ನು. ಇದನ್ನು ಬರೆದವರು ‘ಜಾನ್ ಬರ್ಜರ್’ (ಯೂರೋಪಿನ ಪ್ರಸಿದ್ಧ ಚಿತ್ರಕಲಾಕಾರ ಹಾಗು ಚಿತ್ರ ವಿಮರ್ಶಕ). ಕನ್ನಡಕೆ ಇದನ್ನು ಅನುವಾದಿಸಿರುವವರು ಚಿತ್ರಕಲಾವಿದ ಹಾಗು ಅಧ್ಯಾಪಕ ಎ.ಅನಿಲ್ ಕುಮಾರ್.
ಬರ್ಜರ್ ಹೇಳುವುದು, ನಮಗೆ ತಿಳಿದಿರುವಂತೆ ಮನುಷ್ಯ ಮಾತನಾಡುವ ಮೊದಲು ನೋಡುವುದರಲ್ಲೇ ಸಂವಾದಿಸುತ್ತಿದ್ದ. ಅಂದರೆ ಒಂದು ವಸ್ತುವಿನ ಬಗ್ಗೆ ನಾವು ತಿಳಿಯಬೇಕಾದದ್ದನ್ನು, ನೋಡುವ ಪ್ರಕ್ರಿಯೆ ವೀಕ್ಷಕನ ಮನಸ್ಸಿನ್ನಲ್ಲಿ ಭಾವತರಂಗವನ್ನು ಸೃಷ್ಟಿಸಿ ತಿಳಿಸಲು ಪ್ರಯತ್ನಿಸುತ್ತದೆ. ಇಲ್ಲಿ ಉದ್ಭವಗೊಂಡ ಭಾವನೆಗಳೂ ಎಲ್ಲರಿಗೂ ಏಕರೀತಿಯಾಗಿರುವುದಿಲ್ಲ. ಬದುಕಿನ ಅನುಭವಗಳಿಗೆ ತಕ್ಕಂತೆ ವೈವಿಧ್ಯತೆಯನ್ನು ಕಾಪಾಡಿಕೊಂಡಿರುತ್ತದೆ. ಹಾಗೆಯೇ ಒಂದು ಕಲಾಕೃತಿಯನ್ನು ನೋಡುವಾಗ (ಅನುಭವಿಸುವಾಗ) ಒಬ್ಬ ಮನುಷ್ಯನ ಸ್ವಂತ ಜಿವನಾನುಭವದ ವ್ಯಾಪ್ತಿ, ನಂಬಿಕೆ, ಪ್ರೇರ್‍ಅಣೆ, ಅಂತರ್ಬಹಿರ್ಪ್ರಭಾವ ಇವುಗಳೆಲ್ಲದರ ಮೊತ್ತ ಅರ್ಥನಿರ್ಧಾರವನ್ನು ಕೈಗೊಳ್ಳುತ್ತದೆ. ಪ್ರ್‍ಆಚೀನ ಕಲಾಕೃತಿಗಳಲ್ಲಿ ಚಿತ್ರಗಳ ಅರ್ಥರೂಪಗಳು ಇಂದಿನ ವೀಕ್ಷಕರಿಗೂ ಪ್ರಸ್ತುತವೆ? ಹಾಗಾದರೆ ಆ ಚಿತ್ರಗಳು ಅಂದು ಯಾವ ಭಾವಾರ್ಥವನ್ನು ಹೊರಸೂಸುತ್ತಿತ್ತೋ, ಇಂದಿಗೂ ಅದೇ ಅರ್ಥವೈಶಿಷ್ಟ್ಯತೆಯನ್ನು ಕೊಡುತ್ತಿದೆಯೇ? ಎಂಬುದಕ್ಕೆ ವಿವರಣೆ ಕೊಡುತ್ತಾ, ಯೂರೋಪಿನ ಅನೇಕ ಪ್ರಾಚೀನ ಕಲಾಕೃತಿಗಳ ಉದಾಹರಣೆ ಕೊಡುತ್ತಾರೆ. ಜೊತೆಗೆ ಎರೆಡೂ ಕಾಲಘಟ್ಟಗಳು ರೂಪಿಸಿರಬಹುದಾದ ಚಿತ್ರದ ಅರ್ಥರೂಪಗಳನ್ನು ತೌಲನಿಕವಾಗಿ ವಿಶ್ಲೇಷಿಸುತ್ತಾರೆ.
ಅಂದಿನ ಜನರ ಪೂರ್ವಾಗ್ರಹಗಳು ಒಂದು ಚಿತ್ರಕೃತಿಯ ವೀಕ್ಷಣೆಯನ್ನು ಹೇಗೆ ಪ್ರಭಾವಿಸಿದ್ದವು ( ಉದಾ: ಊಳಿಗಪದ್ದತಿ, ಸಾಂರಾಜ್ಯಶಾಹಿ ಯುಗ, ರೆನೈಸ್ಸಾನ್ಸ್ ಸಾಹಿತ್ಯ ಪರಂಪರೆ, ಕ್ರಾಂತಿಯುಗ …ಇತ್ಯಾದಿ ), ಮತ್ತು ಇಂದಿನ ಆಧುನಿಕ ಕಾಲದ ಪೂರ್ವಾಗ್ರಗಳ ಹಿನ್ನಲೆಯಲ್ಲಿ ಅದೇ ಚಿತ್ರಕೃತಿ ಯಾವರೀತಿಯ ಅರ್ಥರೂಪವನ್ನು ನೀಡಬಲ್ಲದು (ನೀಡುತ್ತಿದೆ) ಎಂಬುದನ್ನು ತರ್ಕಬದ್ಧವಾಗಿ ಬರ್ಜರ್ ವಿವರಿಸುತ್ತಾರೆ. ಈ ರೀತಿ ಹೊಸ ಕಾಲ ಹಾಗು ಸಮಾಜದ ಮನಸ್ಸು, ಹಳೆಯ ಸ್ಥಿತಿಯನ್ನು ತುಂಡರಿಸಿಕೊಂಡು ಬಂದ ಸಂದರ್ಭದಲ್ಲಿ (ವಿಸ್ಮೃತಿಯಲ್ಲಿ) , ಚಾರಿತ್ರ್ಯಕವಾಗಿ ಹಳೆಯದಾದ ಚಿತ್ರಕೃತಿಗಳನ್ನು ಆಸ್ವಾದಿಸುವಾಗ ಜರುಗಬಹುದಾದ ೨ ನಷ್ಟಗಳನ್ನು ಹೀಗೆ ಗುರುತಿಸುತ್ತಾರೆ. [೧] ಕಲಾಕೃತಿಗಳು ಪರಕೀಯಭಾವನೆಯನ್ನು ಸೃಷ್ಟಿಸಿ, ನಿಜಾರ್ಥವು ಮಸುಕಾಗುವುದು. [೨]”ಹಿಂದಿನ ಯುಗ/ಕಾಲ” ನಮ್ಮ ಇಂದಿನ ನಿರ್ಧಾರಗಳ ಮೇಲೆ ಪ್ರಭಾವ ಬೀರದ ಕಾರಣ, ಚಿತ್ರದ ಒಟ್ಟಾರೆ ಮೊತ್ತದ ಅರ್ಥಮೌಲ್ಯ ಕಡಿಮೆಯಾಗುವುದು.
ಇಂತಹ ಮಹತ್ವ ವಿಶ್ಲೇಷಣೆಗಳ ಮೂಲಕ ಬರ್ಜರ್, ಕಾಲ ಕಾಲಕ್ಕೆ ಹೇಗೆ ಚಿತ್ರಕಲೆಯ ತಂತ್ರ, ಅರ್ಥರೂಪ, ಉದ್ದೇಶ, ಕಲಾವಿದನ ಪರಿಕಲ್ಪನೆ, ರೂಪದರ್ಶಿಗಳ ಅನಿಸಿಕೆ, ವ್ಯಕ್ತಿತ್ವ, ವೀಕ್ಷಕನ ಪ್ರತಿಕ್ರಿಯೆ ಪಲ್ಲಟಗೊಳ್ಳುತ್ತ ಹೋಯಿತು ಎಂಬುದನ್ನು ವಿವರಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ವಿವಸ್ತ್ರತೆ-ನಗ್ನತೆಗಳ ಚಿತ್ರ ಸ್ವರೂಪಗಳ ವ್ಯತ್ಯಾಸವನ್ನು ಗುರುತಿಸುವ ಬಗೆ. ಬೈಬಲ್ಲಿನ ಆಡಮ್-ಈವ್ ಚಿತ್ರದಲ್ಲಿ ವಿವಸ್ತ್ರತೆಯಿದ್ದರೆ, ಹೆಣ್ಣಿನ ನಗ್ನತೆಯನ್ನು ದೃಷ್ಟಿಸಂತುಷ್ಟಕ್ಕೆ ಬಳಸಿಕೊಂಡ ಚಿತ್ರ ಪರಂಪರೆಯನ್ನು ಗಮನಿಸುತ್ತಾರೆ. (ಭಾರತದ ಇನ್ನಿತರ ಯೂರೂಪೇತರ ದೇಶಗಳ ದೇವಸ್ಥಾನಗಳ ಶಿಲ್ಪಕಲಾಕೃತಿಗಳಲ್ಲೂ ನಗ್ನತೆ ಹಾಗು ವಿವಸ್ತ್ರತೆಯಿರುವುದನ್ನು ಉಲ್ಲೇಖಿಸುತ್ತಾರೆ). ರೂಪದರ್ಶಿ-ಕಲಾವಿದ-ವೀಕ್ಷಕರ ಮನಸ್ಥಿತಿಯ ತ್ರಿಕೋನ ಸಂಭಂಧವನ್ನೂ ಇದೇ ಹಿನ್ನಲೆಯಲ್ಲಿ ವಿಶ್ಲೇಷಿಸಲಾಗಿದೆ. ಬರ್ಜರ್‌ರ ಇನ್ನೊಂದು ಪ್ರತಿಭಾನ್ವಿತ ವಿಮರ್ಶೆ ತೈಲಚಿತ್ರ ಹಾಗು ಅಧುನಿಕ ಜಾಹಿರಾತುಗಳ ಸಂಭಂಧವನ್ನು ಅವಲೋಕಿಸುತ್ತದೆ. ಯೂರೋಪಿನಲ್ಲಿ ಹದಿನೈದನೇ ಶತಮಾನದಲ್ಲಿ ಹುಟಿಕೊಂಡ ತೈಲಚಿತ್ರ ಸ್ವರೂಪ, ಮೊದಲು ಒಂದು ತಂತ್ರದಂತೆ ಸೃಷ್ಟಿಗೊಂಡರೂ, ಮುಂದೆ ಅದೇ ಒಂದು ಪರಂಪರೆಯಾಗಿ ಮೂಡಿಬಂದಿತು ಎಂಬುದನ್ನು, ಅದು ಬದಲಾವಣೆಗೊಂಡ ಪರ್ವಕಾಲದ ಸಮಾಜ ಸ್ಥಿತಿಯನ್ನು ವಿವರಿಸುತ್ತಾರೆ. ಮುಂದೆ ಹೇಗೆ ಇದೇ ಪರಂಪರೆ ಆಧುನಿಕ ಜಾಹಿರಾತುವಿನ ಮೇಲು ತನ್ನ ಪ್ರಭಾವನ್ನು ಬೀರಿತು ಎಂಬುದನ್ನು, ಅನೇಕ ಚಿತ್ರಗಳ ಉದಾಹರಣೆಯೊಂದಿಗೆ ನಿರೂಪಿಸುತ್ತಾರೆ.
ಇಂದಿನ ಅವಸರದ ಜಗತ್ತಿನಲ್ಲಿ ಕಲೆಯನ್ನು ಉದಾಸೀನವಾಗಿ ನೋಡುವ ಕಾಲದಲ್ಲಿ, ಚಿತ್ರಕಲೆಯ ಮಹತ್ವವನ್ನು ಹಾಗು ಅದು ಹೇಗೆ ಒಂದು ಯುಗವನ್ನೇ ಆಳವಾಗಿ ಪ್ರಭಾವಿಸಿತ್ತು? ಮತ್ತು ಸಮಾಜವನ್ನು ಪ್ರಭಾವಿಸುತ್ತಾ ತಾನು ಕೂಡ ಬದಲಾವಣೆಗೊಳ್ಳುತ್ತಿದ್ದ ಸಮಾಜದೊಂದಿಗೆ ಪಲ್ಲಟಹೊಂದುತ್ತಿತ್ತು, ಎಂಬುದನ್ನು ಜಾನ್ ಬರ್ಜರ್ ತಮ್ಮ ಈ ಪ್ರಸಿದ್ಧ ಕೃತಿಯಲ್ಲಿ ಯಶಸ್ವಿಯಾಗಿ ವಿಶ್ಲೇಷಿಸಿದ್ದಾರೆ. ಚಿತ್ರಕಲೆಯ ಬಗ್ಗೆ ಇಲ್ಲಿ ಬರೆದಿರುವುದಾದರು, ಇದನ್ನು ಓದಿದ ಓದುಗನ ವಿಮರ್ಶಾತ್ಮಕ ಮನಸ್ಸು, ಕಲೆಯ ಇನ್ನಿತರ ವಿಭಾಗಳನ್ನು ಗಮನಿಸಲು ಪುಸ್ತಕ ಪ್ರೇರೇಪಿಸುತ್ತದೆ.

ಚಂದ್ರಹಾಸ

ನಿಮ್ಮ ಟಿಪ್ಪಣಿ ಬರೆಯಿರಿ