ಕನ್ನಡ · ಕೇಶವ ರಾವ್ ಬಿ ಎಸ್ · Uncategorized

‘ಕ್ರೀಮ್‌ಆಫ್ ಕೈಲಾಸಂ’ – ಬಿ.ಎಸ್.ಕೇಶವ ರಾವ್

FB_IMG_1564080346796.jpg

ಪುಸ್ತಕ: ಕ್ರೀಮ್ ಆಫ್ ಕೈಲಾಸಂ

ಸಂಪಾದಕರು: ಬಿ. ಎಸ್. ಕೇಶವರಾವ್

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

ಕನ್ನಡಕ್ಕೊಬ್ಬನೇ ಕೈಲಾಸಮ್ ಎಂಬ ಮಾತಿದೆ. ಹಾಗೆಯೇ ನಾದಬ್ರಹ್ಮ ಹಂಸಲೇಖ “ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು” ಎಂದಿದ್ದಾರೆ. ಈ ರೀತಿ ಹೇಳುವುದಕ್ಕೆ ಕಾರಣವೇನಿರಬಹುದು? ಅಂತದ್ದೇನಿದೆ ಕೈಲಾಸಂರವರ ಬರಹಗಳಲ್ಲಿ ಎಂಬ ಕುತೂಹಲವಿರುವವರು ಓದಲೇಬೇಕಿರುವ ಕೃತಿ “ಕ್ರೀಮ್ ಆಫ್ ಕೈಲಾಸಂ”.

ಕನ್ನಡದ ನಾಟಕಗಳಿಗೆ ಹೊಸ ಆಯಾಮ ತಂದುಕೊಟ್ಟಿದ್ದು ಇದೇ ಟಿ. ಪಿ. ಕೈಲಾಸಂ. ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಹದವಾಗಿ ಬೆರೆಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಅತ್ಯದ್ಭುತ ಅನ್ನುವ ನಾಟಕಗಳನ್ನು ರಚಿಸಿದವರು ಕೈಲಾಸಂ. ಕೈಲಾಸಂ ಎಂದೂ ಕಾಗದ ಪೆನ್ನು ಹಿಡಿದು ನಾಟಕಗಳನ್ನು ಬರೆದವರಲ್ಲ. ಅವರಿಗೆ ಲಹರಿ ಬಂದಾಗ ನಾಟಕಗಳನ್ನು ಹೇಳಿಕೊಂಡು ಹೋಗುತ್ತಿದ್ದರು, ಅವರ ಶಿಷ್ಯರಾದವರು ಅದನ್ನು ಬರೆದುಕೊಳ್ಳಬೇಕಿತ್ತು. ಹೀಗಾಗಿಯೇ 50 ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದರೂ ಇಂದು ನಮಗೆ ಲಭ್ಯವಿರುವುದು ಸುಮಾರು 17 ನಾಟಕಗಳು ಮಾತ್ರ.

ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದರೂ ಕಡುಬಡವನಂತೆ ಬಾಳಿದವರು ಕೈಲಾಸಂ. ತಂದೆ ಅಂದಿನ ಮೈಸೂರು ಸಂಸ್ಥಾನದಲ್ಲಿ ಹೈಕೋರ್ಟ್ ಚೀಫ್ ಜಸ್ಟೀಸ್ ಆಗಿದ್ದವರು. ಉನ್ನತ ಶಿಕ್ಷಣಕ್ಕಾಗಿ ಸುಮಾರು ಏಳು ವರ್ಷ ಇಂಗ್ಲೆಂಡಿನಲ್ಲಿದ್ದು ಬಂದವರು ಕೈಲಾಸಂ. ಅವರು ಮೂರು ವರ್ಷದ ವಿದ್ಯಾಭ್ಯಾಸವನ್ನು ಬೇಕೆಂದೇ ಆರು ವರ್ಷಕ್ಕೆ ಹಿಗ್ಗಿಸಿಕೊಂಡವರು. ಕೆ. ವಿ. ಅಯ್ಯರ್ ರಂತಹ ದೇಹದಾರ್ಢ್ಯ ಪಟುವನ್ನು ಓದಲು ಪ್ರೇರೇಪಿಸಿ ಶಾಂತಲಾದಂತಹ ಮಹಾನ್ ಕೃತಿಯ ರಚನೆಗೆ ಕಾರಣರಾದವರು ಕೈಲಾಸಂ.

ಇಂತಹ ದಿವ್ಯಪುರುಷ ಕೈಲಾಸಂರಿಗೆ ಸಂಬಂಧಿಸಿದ ಅನೇಕ ಸ್ವಾರಸ್ಯಕರವಾದ ವಿಚಾರಗಳನ್ನು ಆಯ್ದು ಸಂಪಾದಿಸಿದ್ದಾರೆ ಈ ಪುಸ್ತಕದಲ್ಲಿ. ಅಷ್ಟೇ ಅಲ್ಲದೆ, ಕೈಲಾಸಂರವರ ನಾಟಕದಿಂದ ಆಯ್ದ ರಸವತ್ತಾದ ಸಂಭಾಷಣೆಗಳು, ಪ್ರಸಂಗಗಳು ಇವೆ. ಬೇರೆ ಬೇರೆ ಸಂಧರ್ಭದಲ್ಲಿ ಕೈಲಾಸಂ ವರ್ತಿಸಿದ ರೀತಿ, ಪ್ರತಿಕ್ರಿಯಿಸಿದ ರೀತಿಯನ್ನು ಕೂಡ ಪುಸ್ತಕ ಒಳಗೊಂಡಿದೆ. ಕೈಲಾಸಂರವರನ್ನು ಕಂಡವರು, ಬಲ್ಲವರು, ಅವರನ್ನು ಓದಿದವರ ಅನಿಸಿಕೆಗಳು ಹೇರಳವಾಗಿ ದಾಖಲೆಗೊಂಡಿದೆ. ಕೈಲಾಸಂ ಎಂತಹ punಡಿತರಾಗಿದ್ದರೆಂದು ತಿಳಿಯಲು ಇದಕ್ಕಿಂತಲೂ ಬೇರೆ ಕೃತಿ ಬೇಕಿಲ್ಲವೆನ್ನುವುದು ನನ್ನ ಅನಿಸಿಕೆ. ಕರ್ನಾಟಕದ ಪ್ರಹಸನ ಪಿತಾಮಹರೆಂದು ಖ್ಯಾತರಾದ ಕೈಲಾಸಂರ ನಾಟಕಗಳನ್ನು ಓದುವ ಮುನ್ನ ಓದಲೇಬೇಕಾದ ಸೊಗಸಾದ ಕೃತಿಯಿದು. ನೀವೂ ಓದಿ. ನಮಸ್ಕಾರ.

-ರಾಮಪುರ ರಘೋತ್ತಮ

ನಿಮ್ಮ ಟಿಪ್ಪಣಿ ಬರೆಯಿರಿ