ಕನ್ನಡ · ಜೋಗಿ · Uncategorized

‘ತಂದೆ ತಾಯಿ ದೇವರಲ್ಲ’ – ಜೋಗಿ

FB_IMG_1564082151474.jpg

“ತಂದೆ ತಾಯಿ ದೇವರಲ್ಲ ! “…. ಜೋಗಿ ಅವರ ನೂತನ ಪುಸ್ತಕ. ತಂದೆ ತಾಯಿಗಳು ಮಕ್ಕಳಲ್ಲಿ ಇಟ್ಟುಕೊಂಡಿರುವ ನಿರೀಕ್ಷೆಗಳು, ಅವರು ಮಾಡುವ ತ್ಯಾಗ ವ ಸಮರ್ಪಣೆಗಳು ಮತ್ತು ಮಕ್ಕಳು ತಮ್ಮದೇ ಜೀವನದ ಪಯಣದಲಿ ತಂದೆ ತಾಯಿಗಳನ್ನು ಹಿಂದೆ ಬಿಟ್ಟು ಮುಂದೆ ಸಾಗುವ ಈ ಕಾಲದ ತಲ್ಲಣಗಳ ಕುರಿತು ಜೋಗಿ ಸೊಗಸಾಗಿ ಬರೆದಿದ್ದಾರೆ.

ಜೋಗಿ ಅವರ ಪುಸ್ತಕವೊಂದನ್ನು ಓದುವುದು ಎಂದರೆ ತತ್ಸಮಾನ ಕಾಲದ ಹೊಸ ತಿರುವುಗಳಿಗೆ ನಾವು ತೆರೆದುಕೊಂಡಂತೆ. ಅವರ ಕೆಲವು ಆಯ್ದ ಪದಪುಂಜವನ್ನು ಪ್ರಸ್ತುತ ಪಡಿಸುತ್ತೇನೆ….

“ತುಂಬ ನೊಂದವರನ್ನಷ್ಟೇ ಬದುಕು ಆರಿಸಿಕೊಳ್ಳುತ್ತದೆ. ಬೇಯುವ ಅಕ್ಕಿಗೆ ಮಾತ್ರ ಹಸಿವಿನ ಅರ್ಥ ಗೊತ್ತಿರುತ್ತದೆ.”

“ಈಗ ಇಂಥ ವೃತ್ತಿಪರತೆಯ ಬದುಕು ನಮ್ಮ ಮುಂದಿಲ್ಲ. ನಾವು ನಮಗೆ ಸಂಬಂಧವಿಲ್ಲನ್ನು ಓದುತ್ತೇವೆ, ಕಲಿಯುತ್ತೇವೆ ಮತ್ತು ಓದಿದ್ದಕ್ಕೆ ಸಂಬಂಧವಿಲ್ಲದ ಕೆಲಸಗಳನ್ನು ಮಾಡುತ್ತಿರುತ್ತೇವೆ.ನಾವು ಮಾಡುವ ಕೆಲಸವನ್ನು ದಿನವೆಲ್ಲ ದೂರುತ್ತಲೇ ಇರುತ್ತೇವೆ. ನಮ್ಮ ಬದುಕು ಮತ್ತೆಲ್ಲೋ ಇದೆ. ನಾವು ಮತ್ತೇನನ್ನೋ ಮಾಡಲು ಶಕ್ತರು. ಆದರೆ ದುರದೃಷ್ಟದಿಂದಾಗಿ ಇಂಥ ಸಣ್ಣ ಕೆಲಸ ಮಾಡಬೇಕಾಗಿ ಬಂದಿದೆ ಎಂದು ಸಂಕಟ ಪಡುತ್ತಿರುತ್ತೇವೆ.

ನಮ್ಮ ಎಲ್ಲಾ ಯಾತನೆಗಳಿಗೂ ಕಷ್ಟಗಳಿಗೂ, ನೋವುಗಳಿಗೂ , ದುಃಖಗಳಿಗೂ ಕಾರಣ ನಮ್ಮ ಮನಸ್ಥಿತಿಯೇ ಹೊರತು, ನಾವು ಮಾಡುತ್ತಿರುವ ಕೆಲಸವಲ್ಲ. ನಮ್ಮನ್ನು, ನಾವು ಮಾಡುತ್ತಿರುವ ಕೆಲಸದ ಮೂಲಕ ಗುರುತಿಸಿಕೊಳ್ಳುವುದೇ ತಪ್ಪು. ಅಂಥದ್ದೊಂದು ಭಾವನೆಯನ್ನು ಮಕ್ಕಳಲ್ಲಿ ಬಿತ್ತುವ ಯಾವ ತಂದೆಯೂ ಗುರುವಲ್ಲ. ಗುರುವಲ್ಲದವನು ದೇವರೂ ಅಲ್ಲ. ”

“ಸುಖವಾಗಿರುವ ತನಕ ಕಥೆಗಳು ಬೇಕಿಲ್ಲ. ನಾವು ಕೊಂಚ ದುರ್ಬಲರಾದಾಗ, ನಡುಗಿದಾಗ, ಶಕ್ತಿ ಉಡುಗಿದೆ ಅನ್ನಿಸಿದಾಗ ನಮ್ಮನ್ನು ಪೊರೆಯುವುದಕ್ಕೆ ಬೇರೆಯವರ ಕಥೆಗಳು ಸಹಾಯ ಮಾಡುತ್ತವೆ. ಕಷ್ಟ ಕಾಲದಲ್ಲಿ ಕೈಹಿಡಿಯುವ ಕಥೆಗಳು ಕೇವಲ ಕಥೆಗಳಷ್ಟೇ ಆಗಿರುವುದಿಲ್ಲ. ಅವು ಊರುಗೋಲು , ಟಾನಿಕ್ಕು , ಸ್ಫೂರ್ತಿ ಮತ್ತು ಅಮೃತಫಲಗಳೂ ಆಗಿರುತ್ತವೆ. ”

“ಆದರ್ಶವಾದಿಯ ಮಕ್ಕಳು ಬಡತನದಲ್ಲಿರುತ್ತಾರೆ. ಬಡತನ, ಪ್ರಾಮಾಣಿಕತೆ ಇವೆಲ್ಲ ಅಂತರಂಗದ ಶ್ರದ್ಧೆಯಾಗದೇ ಹೋದರೆ, ಬದುಕಿನ ವ್ರತವಾಗದೇ ಹೋದರೆ ಮಹಾ ಹಿಂಸೆ. ಯಾವುದೇ ಸದ್ಗುಣಗಳನ್ನು ಅಂಗಿಯ ಥರ ತೊಡಲಿಕ್ಕಾಗುವುದಿಲ್ಲ. ಅದು ಚರ್ಮವೇ ಆಗಬೇಕು. ಹಾಗೆ ಆದಾಗಲೇ ಅದು ಮೈಗೂಡುವುದು. ”

“ಸಿಟ್ಟು ಮೊದಲು ಕಿತ್ತುಕೊಳ್ಳುವುದು ನಮ್ಮ ನೆಮ್ಮದಿಯನ್ನು, ನಂತರ ನಮ್ಮ ಭಾಷೆಯನ್ನು. ಭಾಷೆಯನ್ನು ಕಿತ್ತುಕೊಂಡಾಕ್ಷಣ ಮನುಷ್ಯ ದುರ್ಬಲನಾಗುತ್ತಾನೆ. ಅತ್ಯಂತ ದುರ್ಭರ ಕ್ಷಣದಲ್ಲಿ ಅನಿಸಿದ್ದನ್ನು ಅಭಿವ್ಯಕ್ತಿಸಲು ಭಾಷೆಯೇ ಇಲ್ಲ ಅಂತಿಟ್ಟುಕೊಳ್ಳಿ. ಅದಕ್ಕಿಂತ ದುರಂತ ಮತ್ತೊಂದಿಲ್ಲ. ಆ ಅಸಹಾಯಕತೆಯಿಂದ ಪಾರಾಗುವುದಕ್ಕೆ ಸಿಟ್ಟು ಬೇಕಾಗುತ್ತದೆ. ”

“ನಶ್ವರ ಎನ್ನುವುದು ಒಂದು ಸ್ಥಿತಿಯಲ್ಲ. ಅದೊಂದು ಅರಿವು. ಕ್ಷಣಕ್ಷಣದಲ್ಲಿ ಬದುಕುವವನು ಸುಖಿ ಅಂತ ನಾವು ಭಾವಿಸುವ ಹಾಗೇ , ಅನಂತದಲ್ಲಿ ಬದುಕುವವನೂ ಸುಖಿ. ಬದುಕು ಹೇಗೆ ಬೆಚ್ಚಿ ಬೀಳಿಸುತ್ತದೆ ಅಂದರೆ ನಮ್ಮನ್ನು ಅಸ್ಥಿರತೆ ವಿನಾ ಕಾರಣ ಕಾಡುತ್ತದೆ. ಅದು ವಯಸ್ಸಿನೊಂದಿಗೆ ಬರುತ್ತದಾ, ಸ್ವಾರ್ಥದೊಂದಿಗಾ ಅನ್ನುವುದು ನಿಗೂಢ. ”

ಕಲಾಧರ ಎಂಬ ಕಲಾತಪಸ್ವಿಯ ಮಗ ಗಂಗಾಧರ ಮತ್ತು ಆತನ ಮಗ ವಿದ್ಯಾಧರರು ಕಲೆಯಲ್ಲೂ ಮತ್ತು ತಮ್ಮ ತಂದೆ ತಾಯಿಗಳಲ್ಲಿ ಪರಿಪೂರ್ಣತೆ ವ ದೈವತ್ವವನ್ನು ಅರಸುವ ಕಥೆಯನ್ನು ತುಂಬಾ ಮನೋಜ್ಞವಾಗಿ ಜೋಗಿ ಚಿತ್ರಿಸಿದ್ದಾರೆ.

ಕಲಾತಪಸ್ವಿ ಕಲಾಧರ ತಮ್ಮ ಮೊಮ್ಮಗ ವಿದ್ಯಾಧರನಿಗೆ ಹೇಳುತ್ತಾರೆ,…

“ನೀನು ನಿನ್ನ ಅಪ್ಪ ಅಮ್ಮನ ಮೂರ್ತಿ ಕೆತ್ತುವುದಕ್ಕೆ ಹೊರಟಿದ್ದೀಯ ಅಲ್ಲವೇ ? ಅವರು ಯಾರು? ನಿನ್ನ ಹಾಗೆ , ನಿನ್ನ ಸುತ್ತಲೂ ಇರುವ ಅನೇಕರ ಹಾಗೆ ಅವರೂ ಮನುಷ್ಯರೇ ? ಮನುಷ್ಯನ ಪರಿಪೂರ್ಣ ಮೂರ್ತಿಯನ್ನು ಯಾರಿಂದಲೂ ಕೆತ್ತಲು ಸಾಧ್ಯವಿಲ್ಲ…

ಯಾಕೆ, ಮನುಷ್ಯರು ದೇವರಿಗಿಂತ ದೊಡ್ಡವರೇ ? ಅಲ್ಲ, ಮನುಷ್ಯರು ದೇವರಷ್ಟು ಸರಳ ಅಲ್ಲ.

ಅಂದರೆ ?

ದೇವರನ್ನು ನಾವ್ಯಾರೂ ಕಂಡಿಲ್ಲ. ಹೀಗಾಗಿ ನಾವೇನು ಕೆತ್ತುತ್ತೇವೆಯೋ ಅದೇ ದೇವರು. ದೇವರು ನಮ್ಮ ಮನಸ್ಸಿನಲ್ಲಿ ಹುಟ್ಟುತ್ತಾನೆ. ನಮ್ಮ ಕಲ್ಪನೆಯಲ್ಲಿ ಹುಟ್ಟುತ್ತಾನೆ. ಆದರೆ ಮನುಷ್ಯರು ಹಾಗಲ್ಲ. ಅವರು ನಮ್ಮ ಎದುರೇ ವಾಸ ಮಾಡಿರುತ್ತಾರೆ. ನಮ್ಮ ಜೊತೆ ಮಾತಾಡಿರುತ್ತಾರೆ. ಅವರನ್ನು ಒಬ್ಬೊಬ್ಬರೂ ಒಂದು ದಿಕ್ಕಿನಿಂದ ನೋಡಿರುತ್ತಾರೆ. ಹಾಗೆ ನೋಡುವಾಗ ಒಬ್ಬೊಬ್ಬರಿಗೆ ಒಂದೊಂದು ಥರ ಅವರು ಕಂಡಿರುತ್ತಾರೆ. ಅವರ ಕೊರತೆಗಳು ಕಂಡಿರುತ್ತವೆ. ನಿನ್ನ ಮೂರ್ತಿಯಲ್ಲೂ ಅದೇ ಕೊರತೆಗಳು ಕಾಣಿಸುತ್ತಿವೆ. ”

ಎಲ್ಲರೂ ಒಪ್ಪುವಂಥ ಮನುಷ್ಯ ಇರಲಿಕ್ಕೆ ಸಾಧ್ಯವಿಲ್ಲವೇ ?

‘ಸಾಧ್ಯವಿದೆಯೇ?’

ನಾನು ಕೆತ್ತಲು ಹೊರಟಿದ್ದು ನನ್ನ ತಂದೆ ತಾಯಿಯ ಮೂರ್ತಿಯನ್ನು….

‘ತಂದೆ ತಾಯಿ ದೇವರಲ್ಲವಲ್ಲ ! ಅವರಲ್ಲೂ ಕೊರತೆಗಳಿರುತ್ತವೆ. ಅವರೂ ಬೇರೆ ಯಾರೊಂದಿಗೋ ಜಗಳ ಆಡಿರುತ್ತಾರೆ. ಅವರನ್ನೂ ನೀನು ಎಷ್ಟೋ ಸಲ ಸಿಟ್ಟಿನಿಂದ ಕಂಡಿರುತ್ತಿ. ಜಗಳ ಆಡಿರುತ್ತಿ. ನಿನ್ನ ಕಣ್ಣಲ್ಲಿ ಅವರು ಪರಿಪೂರ್ಣರಾಗಿದ್ದಾರೆಯೇ? ಇಲ್ಲ, ನಿನಗೇ ಅವರಲ್ಲಿ ಕೊರತೆಗಳು ಕಾಣಿಸುತ್ತವೆ. ಅಂದ ಮೇಲೆ ಬೇರೆಯವರಿಗೆ ಕೊರತೆಗಳು ಕಾಣಿಸದೇ ಇರಲು ಹೇಗೆ ಸಾಧ್ಯ ? ‘

ತಂದೆ ತಾಯಿ ಯಾಕೆ ಹಾಗಿರುತ್ತಾರೆ ?

‘ಅವರು ಹಾಗೇ ಇರಬೇಕು. ಅದು ಅವರ ಬದುಕು. ಅವರ ಸಂತೋಷ. ಅವರಿಗೆ ಕೂಡ ತಾವು ದೇವರಲ್ಲ ಎಂಬುದು ಗೊತ್ತಿರುತ್ತದೆ. ಹೀಗಾಗಿ ತಮ್ಮ ಮಕ್ಕಳಿಗೆ ತಾವೇನು ಕೊಡಬಲ್ಲೆವು ಎಂಬ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯೂ ಇರುತ್ತದೆ. ಆದರೆ ಮಕ್ಕಳು ಮಾತ್ರ ಅವರು ದೇವರು ಎಂದು ಭಾವಿಸಿ ಕೇಳಬಾರದ್ದೆಲ್ಲ ಕೇಳುತ್ತಾರೆ. ಆದರೆ, ಅರ್ಥ ಮಾಡಿಕೋ, ಹೆತ್ತವರು ದೇವರಲ್ಲ. ಅವರು ನಿನ್ನಂತೆಯೇ ಮನುಷ್ಯರು. ನಿನ್ನ ಹೊರತಾಗಿಯೂ ಅವರಿಗೆ ಬದುಕೊಂದಿದೆ. ಅವರಿಗೆ ಅವರದೇ ಆದ ಸಂತೋಷಗಳಿವೆ. ಅದನ್ನು ಅವರು ನಿನಗೋಸ್ಕರ ತ್ಯಾಗ ಮಾಡಿದ್ದನ್ನು ನೆನೆದು ಸಂತೋಷಪಡು. ತಾನು ತಿನ್ನದೇ ಮಗುವಿಗೆ ಸಿಹಿ ತಿಂಡಿ ತರುವ ತಾಯಿ, ಮಗನನ್ನು ಹೆಗಲ ಮೇಲೆ ಹೊತ್ತು ಸಂತೆ ಸುತ್ತುವ ತಂದೆ, ನೀನು ಅಮ್ಮಾ ಹೊಟ್ಟೆ ನೋವು ಅಂದಾಗ ಅದನ್ನು ನಾನಾದರೂ ತೆಗೆದುಕೊಳ್ಳುವಂತಿರಬಾರದಿತ್ತೇ ಎಂದು ಕಣ್ಣೀರಿಟ್ಟ ಅಮ್ಮ….”

ಹೀಗೆ ಬರೆಯುತ್ತಾ ಬರೆಯುತ್ತಾ ಜೋಗಿಯವರು ತಂದೆ ತಾಯಿ ದೇವರಲ್ಲ, ಅವರನ್ನು ಪೂಜಿಸಬೇಡಿ ಬದಲಾಗಿ ಅವರನ್ನು ಪ್ರೀತಿಸಿ ಎಂದು ಬದುಕಿನ ಪಾಠವನ್ನು ಅದೆಷ್ಟು ತಿಳಿಯಾಗಿ ತಿಳಿಸುತ್ತಾರೆ.

*ನಾಗರಾಜ್ ಎಸ್ ರಂಗಣ್ಣವರ*

ನಾಗೇಶ್ ಕುಮಾರ್. ಸಿ.ಎಸ್ – ಪುಸ್ತಕ ಚೆನ್ನಾಗಿರಬಹುದು, ಇಲ್ಲದಿರಬಹುದು. ಆದರೆ ಈ ಲೇಖಕರು ಈಗೀಗ ಶಾಕಿಂಗ್ ಟೈಟಲ್ಸ್ ಇಡುವ ಉದ್ದೇಶದಿಂದ ತಮ್ಮ ತತ್ವವನ್ನು ಪ್ರದರ್ಶಿಸಲು ಯತ್ನಿಸುತ್ತಾರೆ. ಇನ್ನೊಂದು ಪುಸ್ತಕದಲ್ಲಿ ಪ್ರೀತಿಸುವರನ್ನು ಕೊಂದು ಬಿಡಿ ಎಂತೆಲ್ಲಾ ಸೆನ್ಸೇಷನಲ್
ಶೀರ್ಷಿಕೆ ಇಟ್ಟಿದ್ದಾರೆ. ಗಹನ ವಿಷಯಗಳನ್ನು ಪಾಪ್ಯುಲರ್ ಟೈಟಲ್ಸ್ ಮೂಲಕ್ಕ ಮಾರಾಟ ಮಾಡುವ ತಂತ್ರ ಇದು, ಇದನ್ನು ನೀವು ಓದಲು ನನ್ನ ಅಭ್ಯಂತರವೇನಿಲ್ಲ…ನನ್ನ ಅಭಿಪ್ರಾಯ ಮಂಡಿಸಿದೆ ಅಷ್ಟೇ

ಕಿರಣ್ ಸೂರ್ಯ – Nagesh Kumar C S ಸರ್, ಜೋಗಿಯವರ ಸ್ಥಿತ್ಯಂತರವನ್ನು ಕನ್ನಡ ಸಾಹಿತ್ಯವನ್ನು ಆರಾಧಿಸಿ ಓದುವ ಓದುಗರೆಲ್ಲರೂ ಕಂಡಿದ್ದಾರೆ. ಜಾನಕಿ ಕಾಲಂನಿಂದ ಈಗಿನವರೆಗೆ ಅಂತಹ ಬದಲಾವಣೆ ಆಗಿಲ್ಲ. ಸೀಮಿತ ಸರಕನ್ನು ಮಗುಚಿ ಮಗುಚಿ ಮಾರಾಟಕ್ಕೆ ಇಡುವ ಜಾಣ ವ್ಯಾಪಾರಿಯಂತೆ ಕಾಣುತ್ತಾರೆ. ಹೊಸದಾಗಿ ಅವರನ್ನು ಓದುವವರಿಗೆ ಒಮ್ಮೊಮ್ಮೆ ವ್ಹಾವ್ ಎನಿಸಬಹುದು. ಅವರನ್ನು ಬಹುಕಾಲದಿಂದ ಓದಿದವರಿಗೆ ಅವರ ಪ್ರತೀ ವಾಕ್ಯದ ಪುನರುಕ್ತಿ ಸುಲಭವಾಗಿ ಗ್ರಾಹ್ಯವಾಗುತ್ತದೆ. ಜೋಗಿಯವರು ಹೊಸ ಚಿಂತನೆ ಕಳೆದುಕೊಂಡು ಬಹಳ ಕಾಲವಾಯಿತು. ಅಲ್ಲದೇ “ಅಂದರಿಕೀ ಮಂಚಿವಾಡು” ಇಮೇಜ್ ಅನ್ನು ನಿರ್ವಹಿಸುವ ಭರದಲ್ಲಿ ತಮ್ಮ ನೈಜ ವ್ಯಕ್ತಿತ್ವವನ್ನೇ ಕಳೆದುಕೊಂಡರೇನೂ ಅನಿಸುತ್ತದೆ. ಒಟ್ಟಾರೆ, ನೀವು ಗಮನಿಸಿರುವ ಮಾತು ಅಪ್ಪಟ ಸತ್ಯ – ಒಳಗೆ ಕಂಟೆಂಟ್ ನಲ್ಲಿ ಹೊಸತನವಿಲ್ಲದ ಕೃತಿಗೆ ಶೀರ್ಷಿಕೆಯ ಗಿಮಿಕ್ ಒಂದೇ ಬಂಡವಾಳ!

ಕವಿತಾ ಭಟ್ –ಜೋಗಿಯವರ ಲೇಖನಗಳನ್ನು, ಸಣ್ಣ ಕಥೆಗಳನ್ನು (ಲೈಫ್ ಈಸ್ ಬ್ಯುಟೀಫುಲ್ ಸೀರೀಸ್ ಮೊದಲಾಗಿ ಹಿಂದಿನ ಕೆಲವು ಪುಸ್ತಕಗಳು) ಓದುವುದೆಂದರೆ ಮಹಾ ಬೋರ್.. ನಾನು ಒಂದೇ ಕಥೆಯನ್ನ ಎರಡು ಮೂರು ಪುಸ್ತಕಗಳಲ್ಲಿ ಓದಿದ್ದೇನೆ.. ಅಪ್ಕೊರ್ಸ್ ಅವರು ಮೊದಲ ಓದುಗರಿಗೇ ಬರೆದಿರಲಿ, ಹೊಸಬರು ಹಳೆಯವರಾದ ಮೇಲೆ ಓದಿದ್ದನ್ನೇ ಓದಿ ಬೇಸರವಾಗದಿರುತ್ತದೆಯೇ? 

ಅದೇ ಜೋಗಿಯವರ ಕಾದಂಬರಿಗಳು ಮಾತ್ರ ನಂಗೆ ಸಿಕ್ಕಾಪಟ್ಟೆ ಇಷ್ಟ.. ಒಂದೇ ಕಂತಿನಲ್ಲಿ ಓದಿ ಮುಗಿಸಬಹುದಾದ ಪುಟ್ಟ, ವಿಭಿನ್ನ ಕಥಾವಸ್ತುಗಳಿರುತ್ತವೆ..

ನಾಗೇಶ್ ಕುಮಾರ್ ಸರ್ ಹೇಳುವಂತೆ ಈ ಪುಸ್ತಕ ಕೊಳ್ಳದೇ ಇರಬಾರದು ಎನ್ನುವ ಮಟ್ಟಿಗೆ ಪುಸ್ತಕದ ಮುಖಪುಟ, ಟೈಟಲ್ ಆಕರ್ಷಕವಾಗಿರುತ್ತವೆ..

ಮೊದಲ ಓದುಗರಿಗೆ, ಆಗ ತಾನೇ ಓದು ಆರಂಭಿಸಿರುವ ಮಕ್ಕಳಿಗೆ ಉಡುಗೊರೆಯಾಗಿ ಕೊಡಲು ಉತ್ತಮ ಪುಸ್ತಕಗಳು..
ಸುಲಭವಾಗಿ ಓದಿಸಿಕೊಂಡು ಹೋಗುತ್ತಾರೆ.. ಅದೇ ಜೋಗಿಯವರ ಹೆಗ್ಗಳಿಕೆ.

ಹಿಂದೆ ನನ್ನದೊಂದು ಪುಸ್ತಕ ಪರಿಚಯದಲ್ಲಿ ಇದನ್ನೇ ಹೇಳಿದ್ದಾಗ ಈ ಗುಂಪಿನ ಸದಸ್ಯರೊಬ್ಬರು ಜೋಗಿಯವರಿಗೆ ದಾಟಿಸಿದ್ದರು.. ಆಗ ಜೋಗಿಯವರು ಮೊದಲ ಓದುಗರಿಗೆ ಬರಹಗಳ ಮರುಬಳಕೆ ಮಾಡಲಾಗಿದೆ ಅಂತಂದಿದ್ದರು..

ಅದರ ಲಾಗಾಯ್ತು.. ಅವರ ಸಣ್ಣಕಥೆಗಳನ್ನು, ಲೇಖನಗಳನ್ನು ಓದುವುದನ್ನು ನಿಲ್ಲಿಸಿದ್ದೇನೆ..

ನಿಮ್ಮ ಟಿಪ್ಪಣಿ ಬರೆಯಿರಿ