ಕನ್ನಡ · ರಾಜಶೇಖರ ಮಠಪತಿ · Uncategorized

‘ಗಾಂಧಿ’ – ರಾಜಶೇಖರ ಮಠಪತಿ

FB_IMG_1582998351109

#ನಾನು_ಓದಿದ_ಪುಸ್ತಕ

#ಗಾಂಧಿ

‌‌‌‌ ಅಂತಿಮದಿನಗಳು
ಮುಗಿಯದ ಅಧ್ಯಾಯ
—————————-
ಕಣ್ವ ಪ್ರಕಾಶನ
ಬೆಂಗಳೂರು
080-23206778

ಬೆಲೆ : ರೂ 350/-
ಪುಟಗಳು: 492
—————————

ಗಾಂಧಿ ಎನ್ನುವ ಮಹಾತ್ಮನಿಗೂ ನೋವಿತ್ತೇ? ಕಷ್ಟಗಳು ಇದ್ದವೇ? ಕಣ್ಣೀರು ಅವರಿಗೂ ಇತ್ತೇ? ಹೀಗೆ ಮನದಲ್ಲಿನ ಹಲವಾರು ಪ್ರಶ್ನಾರ್ಥಕ ವಾಕ್ಯಗಳಿಗೆ ಉತ್ತರ ಸಿಕ್ಕ ಸಂತೃಪ್ತಿ ನನಗಿತ್ತು. ಅದಕ್ಕೆ ಮೊದಲಿಗೆ ರಾಗಂ ಸರ್ ಗೆ ಧನ್ಯವಾದಗಳನ್ನು ಅರ್ಪಿಸುವೆ.

ಪುಸ್ತಕದ ಆರಂಭದ ಅಧ್ಯಾಯ ದಲ್ಲಿ ಲಾರ್ಡ ಬೈರನ್ ರವರ ಸಾಲುಗಳು ಆಕರ್ಷಿಸಿದವು “ಎಲ್ಲ ಕೆಟ್ಟವರಲ್ಲಿ ಒಳ್ಳೆಯವರನ್ನು ಕಂಡಿದ್ದೇನೆ, ಎಲ್ಲ ದೇವಸಂಭೂತರಲ್ಲಿಯೂ ಪಾಪಾತ್ಮರನ್ನು ಕಂಡಿದ್ದೇನೆ. ಹೀಗಾಗಿ ಒಳಿತು ಕೆಡಕಿನ ಮಾನದಂಡವನ್ನು ಕೈಯಲ್ಲಿಟ್ಟುಕೊಂಡು ಮನುಷ್ಯರನ್ನು ವಿಭಜಿಸುವುದೇ ಸಂಕಷ್ಟದ ಮಾತು” ನಿಜಾ ಕೆಡುಕುಗಳನ್ನೆ ಹಿಡಿದು, ಜಗ್ಗಾಡಿ, ಕುಗ್ಗುವ ಬದಲು ಅದರ ಮಧ್ಯದಲ್ಲೂ ಸಣ್ಣ ಸಣ್ಣ ಒಳ್ಳೆಯತನಗಳನ್ನು ಸ್ಮರಿಸಿ, ಅವುಗಳನ್ನ ನಮ್ಮ‌ ಬದುಕಿನಲ್ಲಿ ಅಳವಡಿಸಿಕೊಂಡರೆ ಎಷ್ಟು ಉತ್ತಮವಲ್ಲವೇ?

ಗಾಂಧಿಜಿಯವರನ್ನು ಮೊದಲು ಕಾಡಿದ್ದು ಅವರ ಬದುಕಿನ ದಿವ್ಯಚೇತನವೆನಿಸಿ ಮನಸ್ಸನ್ನೇ ಆಕ್ರಮಿಸಿದ್ದ ಆತ್ಮೀಯ ಗೆಳೆಯ ಮಹಾದೇವ ದೇಸಾಯಿಯ ಸಾವು. ನಿಜಾ ಅಂದು ಗಾಂಧೀಜಿಯವರು ಅನುಭವಿಸಿದ ಯಾತನೆಯನ್ನು, ನೋವನ್ನು ಸಾಮಾನ್ಯ ಮನುಷ್ಯನಾಗಿ ಎಷ್ಟೊಂದು ನೊಂದುಕೊಳ್ಳಬಹುದೋ ಅದಕ್ಕಿಂತಲೂ ಹೆಚ್ಚು ನೋವನ್ನು ಗಾಂಧೀಜಿಯವರು ಅನುಭವಿದ್ದರು. ಓಶೋ ರವರು ಹೇಳುವಂತೆ “ ನಮಗೆ ಸಾವಿನ ನಿಜವಾದ ದರ್ಶನವಾಗುವುದು ನಮ್ಮ ಆತ್ಮಕ್ಕೆ ಹಾಗೂ ಮನಸ್ಸಿಗೆ ಹತ್ತಿರವಾದವರೊಬ್ಬರು ತೀರಿಹೋದಾಗ ಮಾತ್ರ ಅಲ್ಲಿಯವರೆಗೂ ಸಾವು ಸುಮ್ಮನೆ ಸುಳಿಯುವ ತೆಳುಗಾಳಿಯಷ್ಟೇ”. ನಿಜಾ ಗಾಂಧೀಜಿಯವರಿಗೆ ಈ ಸಾವಿನ ಆಘಾತ ಬಹುವಾಗಿ ಕಾಡಿತ್ತು ಕಾರಣ ಅವರು ಸಾಮಾನ್ಯ ಮನುಷ್ಯರಲ್ಲವೇ.. ?

ತದನಂತರ ಮಡದಿ ಕಸ್ತೂರಿಬಾ ಮರಣಹೊಂದಿದಾಗಲೂ ಗಾಂಧಿಜಿಯವರ ಮನಸ್ಸಿನ ಚಿತ್ರಣವನ್ನು ರಾಗಂ ಸರ್ ತುಂಬಾ ಮನಮಿಡಿಯುವಂತೆ ಚಿತ್ರಿಸಿದ್ದಾರೆ. “ಗಾಂಧಿ ಎಂಬ ಗಾಂಧಿಯೂ ಹೆಂಡತಿಯ ಚಿತೆಗೆ ಬೆಂಕಿಯಿಟ್ಟು ೬ ಗಂಟೆಗಳವರೆಗೂ ಉರಿಬಿಸಿಲಿನಲ್ಲಿ ಒಂದು ದೊಣ್ಣೆಯನ್ನುರಿಕೊಂಡು ನಿಂತಿದ್ದನಲ್ಲ!!!! ಆಗ ಅವನು ಮನುಷ್ಯನಾಗಿದ್ದ.” ಸಾವು ಕೂಡ ಗಾಂಧಿಜಿಯವರನ್ನ ತತ್ತರಿಸುವಂತೆ ಮಾಡಿತ್ತು. ಹೃದಯಕ್ಕೆ ಹತ್ತಿರವಾದ ಮಡದಿಯನ್ನು ಕಳೆದುಕೊಂಡಾಗ ಗಾಂಧಿಜಿಯ ಮನಸ್ಸು ಮರುಗಿತ್ತು.

“ಬಾ ಇಲ್ಲದ ಬದುಕನ್ನೇ ನಾನು ಉಹಿಸಿಕೊಳ್ಳಲಾರೆ. ಅವಳು ನನ್ನದೇ ಅಂಗವಾಗಿಬಿಟ್ಟಿದ್ದಳು. ಅವಳ ಸಾವು ನನ್ನ ಬದುಕಿನಲ್ಲಿ ಶಾಶ್ವತವಾಗಿ ಕಂದರವನ್ನು ಬಿಟ್ಟು ಹೋಗಿದೆ” ಎನ್ನುವಾಗ ಗಾಂಧಿ ಮನುಷ್ಯನಾಗಿದ್ದ.
ಬಾ ಬಳಸುತ್ತಿದ್ದ ಬಟ್ಟೆ, ಈ ಗಾಂಧಿಗಾಗಿ ಕಾಯುತ್ತಲೇ ನಿದ್ರೆ ಹೋಗುತ್ತಿದ್ದ ಮೇಜು, ಆಗಾಗ ಕೊಡುತ್ತಿದ್ದ ಎಚ್ಚರಿಕೆಗಳು ಗಾಂಧಿಯನ್ನು ‘ಗಾಂಧಿ’ ಎಂಬ ಮನುಷ್ಯನಾಗಿಸಿಬಿಟ್ಟಿದ್ದವು. ಮಹಾತ್ಮ ಎನ್ನುವ ಗಾಂಧಿಯೂ ಇಷ್ಟು ನೊಂದಿರುವರಲ್ಲ!! ಎಂಬ ಸಂಗತಿಯನ್ನು ಓದುಗರಿಗೆ ರಾಗಂ ಅವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ.

ಶಾಂತಿ, ಅಹಿಂಸೆ, ಸತ್ಯ ವೆಂಬ ಮಂತ್ರಗಳ ಮೂಲಕವೇ ಬದುಕನ್ನು ಸಾಗಿಸಿದ ಗಾಂಧಿಜಿಗೆ ಪ್ರಾರ್ಥನೆಯೂ ಕೂಡ ಬಹುಮುಖ್ಯ ಜೀವನದ ಅಂಗವಾಗಿಯೇ ಹೋಗಿತ್ತು. ರಾಮನಾಮ ಸ್ಮರಣೆಯೊಂದೇ ನಮ್ಮ ಮನದ ಕಶ್ಮಲವನ್ನು ದೂರಗೊಳಿಸುವ ದಿವ್ಯ ಔಷಧವೆಂದು ಬಲವಾಗಿ ನಂಬಿದ್ದರು. ಯಾವ ವೈದ್ಯಕೀಯ ಉಪಚಾರವೂ ಸಲ್ಲದು. ಎಂದು ಹೇಳಿದ ಗಾಂಧಿಜಿಯವರು ತಮ್ಮ ಬದುಕಿನಲ್ಲಿ ಹಲವಾರು ಸಂದರ್ಭಗಳಲ್ಲಿ ಕೆಮ್ಮಿನಿಂದ ನರಳುತ್ತಿರುವಾಗ ವೈದ್ಯರು ಇನ್ಸುಲಿನ್ ತೆಗೆದುಕೊಳ್ಳಲು ತಿಳಿಸಿದಾಗ ಸುತಾರಾಮ ಒಪ್ಪದೇ ರಾಮನಾಮ ಒಂದೇ ನನ್ನನ್ನು ಇಲ್ಲಿಯವರೆಗೂ ಉಸಿರಾಡುವಂತೆ ಮಾಡಿದೆ ಎಂದು ಹೇಳಿ ಪ್ರಾರ್ಥನೆಗೆ ಒತ್ತು ಕೊಟ್ಟು ಹೇಳಿದ್ದರು. ಆತ್ಮದೊಡನೆ ಸೇರಲು ಪ್ರಾರ್ಥನೆಯಿಂದ ಮಾತ್ರ ಸಾಧ್ಯವೆಂದು. “ರಾಮನೇ ನಮ್ಮ‌ ರಕ್ಷಕ, ಶರೀರ ತಾತ್ಕಾಲಿಕ. ಈ ಕ್ಷಣದಲ್ಲಿ ಬದುಕಿರುವ ಈ ದೇಹ ಇನ್ನೊಂದು ಕ್ಷಣದಲ್ಲಿ ಸಾಯುತ್ತದೆ. ಆದರೆ ಶ್ರೀರಾಮನ ಸ್ಮರಣೆಯನ್ನು ನಿರಂತರ ಮಾಡಿದವನ ಆತ್ಮ ಅಮರವಾಗುತ್ತದೆ.” ಎಂದು ಶ್ರೀರಾಮಸ್ಮರಣೆ ಕುರಿತು ಹೇಳಿದರು.

ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಪ್ರತಿಕ್ಷಣವನ್ನು ಸಾರ್ಥಕಪಡಿಸಿಕೊಂಡೇ ಬಂದವರು. ಒಂದು ಕ್ಷಣವೂ ಹೆಚ್ಚುಕಡಿಮೆಯಾಗದಂತೆ ದಿ‌ನನಿತ್ಯದ ಕಾರ್ಯಗಳನ್ನು ಹೊಂದಿಸಿಕೊಂಡು ಬದುಕನ್ನು ಸಾಗಿಸಿದವರು. ಅದರಲ್ಲಿಯೂ ಒಂದು ವಿಶೇಷ ಎಂದರೆ ಪ್ರತಿ ಸೋಮವಾರ ಮೌನವಾಗಿ ಇರೋದು. ಅದರ ಕುರಿತು ಗಾಂಧಿಜಿ ಹೇಳಿದ ಮಾತು “ವಾರದಲ್ಲಿ ಒಂದು ದಿನ ಮೌನವಾಗಿ ಉಳಿಯುವ ನನ್ನ ಆಚರಣೆ‌, ನನ್ನ ಮಾತನ್ನು ಒಂದು ಶಿಸ್ತಿಗೆ ಒಳಪಡಿಸುವುದೇ ಆಗಿದೆ. ಇನ್ನೊಂದು ಅರ್ಥದಲ್ಲಿ ನನ್ನ ಆಲೋಚನೆಗಳಿಗೆ ಅವಕಾಶವನ್ನು ಒದಗಿಸಿಕೊಡುವುದು ಮತ್ತು ಒಳ್ಳೆಯ ಕೆಲಸವನ್ನು ಆದಷ್ಟು ಬೇಗ ಮಾಡುವುದು. ಆಲೋಚನೆ ಮಾತಿಗಿಂತಲೂ ಶಕ್ತಿಶಾಲಿ. ಸತ್ಯದ ಆಳದಲ್ಲಿಯೇ ಕೊನೆಯ ಉಸಿರನ್ನು ಎಳೆಯಬೇಕೆಂದಿರುವ ನನಗೆ ನಾನು ಸಾಧಿಸಬೇಕಾದ ಗುರಿಗಳು ಮುಖ್ಯ ಎಂದೆನಿಸುತ್ತವೆ. ನಿತ್ಯದ ವ್ಯಾವಹಾರಿಕ ಬದುಕಿನಲ್ಲಿ ನಾವು ಎಷ್ಟೊಂದು ಅಪವಿತ್ರವಾಗಿಲ್ಲ? ಇದನ್ನು ತೊಳೆದುಕೊಳ್ಳುವ ಒಂದು ಮಾರ್ಗವೇ ಮೌನ.” ಎಂಥಹ ಅರ್ಥಗರ್ಭಿತ ಸಾಲುಗಳಲ್ಲವೇ..?

ಇನ್ನೊಂದು ಕಡೆ ವೆಸ್ಟ್ ಬೆಂಗಾಲ್ ದ ಗವರ್ನರ ರಾಜಾಜಿ ಬರೆಯುತ್ತಾರೆ. “In these days of terrible depression, there is only one lamp burning and that is the Mahatma. He is the piller of peace in India”. ನಿಜಾ ಗಾಂಧಿಜಿಯವರ ಅಹಿಂಸಾ ಮಾರ್ಗ ಜಗತ್ತಿಗೆ ಬೆಳಕಾಗಿದ್ದಲ್ಲದೇ ನಮ್ಮ ಮನಸ್ಸಿನಲ್ಲಿರುವ ಹಿಂಸಾ ಪ್ರವೃತ್ತಿಯನ್ನು ಕೊನೆಗಾಣಿಸಿಕೊಳ್ಳುವ ಅಸ್ತ್ರವೂ ಆಗಿದೆ.

ನಮ್ಮ ಕಾರ್ಯಗಳನ್ನು ನಾವೇ ಮಾಡಿಕೊಳ್ಳಬೇಕು ಎಂಬುದರ ಕುರಿತು ಗಾಂಧಿಜಿಯವರ ಈ ಸಾಲುಗಳನ್ನು ಗಮನಿಸೋಣ, “ ನಮ್ಮ ನಮ್ಮ ಕೆಲಸಗಳನ್ನು ನಾವು ಮಾಡಿಕೊಂಡರೆ ಸಾಕು. ಎಷ್ಟೊಂದು ತೊಂದರೆಗಳು ಇನ್ನಿಲ್ಲವಾಗುತ್ತವೆ. ಕೆಲಸದಲ್ಲಿ ತೊಡಗಿಕೊಂಡರೆ ನಮ್ಮ‌ ಸಿಟ್ಟು ಶಮನಗೊಳ್ಳುತ್ತದೆ, ಸೇಡಿನ ಮನೋಭಾವ ಸತ್ತು ಹೋಗುತ್ತದೆ. ಕೆಟ್ಟದ್ದನ್ನು ಕೆಟ್ಟದ್ದು ಎಂದು ತಿಳಿದುಕೊಳ್ಳುವುದೇ ಒಳ್ಳೆಯತನ. ಅದನ್ನು ಯಾವುದೇ ಕಳಂಕವಿಲ್ಲದೇ ನೋಡುವುದು ಒಳ್ಳೆಯತನ. ಈ ಒಳಿತಿನಲ್ಲಿ ದೇಶದ ಒಳಿತು ಅಡಗಿದೆ. ನಾವು ಕಷ್ಟಗಳನ್ನು ಎದುರಿಸುತ್ತ ಅನ್ಯರಿಗೆ ಒಳಿತನ್ನು ಮಾಡೋಣ. ಸುಖವಾಗಿರುವುದನ್ನು ನೋಡೋಣ. ಪ್ರಪಂಚ ಭಾರತವನ್ನು ಗಮನಿಸುತ್ತಿದೆ‌ ದೇಶ ಸ್ವತಂತ್ರವಾಗಿದೆ. ಇನ್ನು ಮುಂದೆ ನಾವು ಮಾಡುವುದಾದರೂ ಏನು? ಇದೆ ನಮ್ಮ ನಿಜವಾದ ಪರೀಕ್ಷಾ ಕಾಲ.”
ಅಧ್ಯಾಯ ಮಾತುಗಳೆಲ್ಲ ಮಾರ್ಗವಾಗಿದ್ದರೆ….. ಪುಟ ಸಂಖ್ಯೆ ೨೬೦ ರಲ್ಲಿ ವ್ಯಕ್ತಿಯೊಬ್ಬನ ಪ್ರಶ್ನೆಗೆ ಉತ್ತರಿಸುವ ಪ್ರಶ್ನೋತ್ತರ ಸರಣಿಯಲ್ಲಿಯ ಒಂದು ಪ್ರಶ್ನೆ ಹೀಗಿದೆ.

ವ್ಯಕ್ತಿ- ಅಳುತ್ತಾ ಗಾಂಧಿಯ ಸಮೀಪ ಬಂದ ವ್ಯಕ್ತಿಯೊಬ್ಬ ತನಗಿನ್ನು ಈ ಸಂಸಾರ ಸಾಕು, ತಾನು ಸನ್ಯಾಸಿಯಾಗಬೇಕಿದೆ. ಕೊಲೆ, ಮೋಸದ ಈ ಸಮಾಜವನ್ನು ತೊರೆದು ದೂರ ಹೋಗಬೇಕಿದೆ. ದಾರಿ ತೋರಿಸಿ ಎಂದ.
ಗಾಂಧಿ- ಸ್ವಯಂ ನಿಯಂತ್ರಣವೆನ್ನುವುದು ಹೃದಯದಲ್ಲಿ ಆಸೀನವಾದರೆ ಸಾಕು ಬಂಧು, ಕ್ಯಾವಿ ತೊಡಬೇಕಿಲ್ಲ, ಗಡ್ಡ ಬಿಡಬೇಕಿಲ್ಲ, ಬೆಟ್ಟ-ಗುಡ್ಡ ಅಲೆದಾಡುವ ಪ್ರಮೇಯವಿಲ್ಲ. ಮನಸ್ಸು ದೃಢವಾಗಿಲ್ಲದಿದ್ದಾಗ ಈ ಮೇಲಿನ ಮೂರನ್ನು ಅನುಸರಿಸಿಯೂ ಸನ್ಯಾಸಿಯಾಗಲು ಎಂದಿಗೂ ಸಾಧ್ಯವಿಲ್ಲ. ಈ ಪ್ರಪಂಚ ಸಂಸಾರಗಳ ಮಧ್ಯೆ ಇದ್ದುಕೊಂಡೆ ಸನ್ಯಾಸ ಸಾಧನೆಯಾಗಬೇಕು. ವಸ್ತುಗಳ ಆಕರ್ಷಣೆ ನಮ್ಮನ್ನು ಬಾಧಿಸಬಾರದು‌ ಎಲ್ಲಿಯೂ ಹೋಗದೆ, ಇಲ್ಲಿದ್ದೂ ಇಲ್ಲದಂತಿರುವುದೇ ನನ್ನ ದೃಷ್ಟಿಯಲ್ಲಿ ಮಹಾನ್ ಸನ್ಯಾಸ‌.
ನಿಜಾ ಸನ್ಯಾಸದ ನಿಜವಾದ ಅರ್ಥವನ್ನು ಬದುಕಿಗೆ ಅನ್ವಯಿಸಿ ಹೇಳಿದ್ದು ಸರ್ವರಿಗೂ… ಸರ್ವಕಾಲಕ್ಕೂ ಅನ್ವಯಿಸುವಂತಿದೆ.

ಅದೇ ಅಧ್ಯಾಯದ ರೂಪ ರೂಪಗಳನು ದಾಟಿ ಯ ಪುಟ ಸಂಖ್ಯೆ ೨೭೪,೨೭೫ ರಲ್ಲಿ

ಗಾಂಧಿಜಿಯು ಒಮ್ಮೆ ತಮ್ಮ ಬಳಿ ಇದ್ದ ಟೋಪಿಯನ್ನು ಹಾಕಿಕೊಂಡು ಪಾಣಿಪತ್ತಿಗೆ ಹೊರಟಾಗ ಮೊಮ್ಮಗಳು ಮನು ಅಜ್ಜನ ಟೋಪಿ ನೋಡಿ ನಗಲಾರಂಭಿಸಿದಳು…
ಗಾಂಧಿಗೆ ಗೊತ್ತು ಆಕೆಯ ನಗೆಯ ಅರ್ಥ. ಮೊಮ್ಮಗಳಿಗೆ ಬುದ್ದಿ ಹೇಳಲು ಇಂತಹ ಸಂದರ್ಭವನ್ನು ಬಳಿಸಿಕೊಳ್ಳುತ್ತಾರೆ ಗಾಂಧಿ. ಆಕೆಯ ನಗೆಗೆ ಬ್ರೇಕ್ ಹಾಕಿ ಆತ ಹೇಳುತ್ತಾನೆ. “ಅನ್ಯರಿಗೆ ನಾವು ಹೇಗೆ ಕಾಣಿಸುತ್ತೇವೆ ಎನ್ನುವುದನ್ನು ಮರೆತು ನಮಗೆ ನಮ್ಮ ವಸ್ತುವಿನಿಂದ ಲಾಭ ಏನಿದೆ ಎಂದು ಆಲೋಚಿಸುವುದನ್ನು ಕಲಿತರೆ ನಾವು ಯಾವುದೇ ಬಾಧೆಗಳಿಲ್ಲದೆ ಬದುಕಬಹುದು. ಮನು ಬೇರೆಯವರಿಗೆ ಒಳ್ಳೆಯವರಾಗಿ, ಸುಂದರವಾಗಿ, ಕಾಣಿಸುವುದಕ್ಕಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಮಗೆ ಹೊಂದದ ಅನೇಕ ಅಸ್ವಾಭಾವಿಕ ರೀತಿ ನೀತಿಗಳನ್ನು ನಾವು ಅನುಸರಿಸುತ್ತೇವೆ. ಆಗ ನಮ್ಮ ಸ್ಥಿತಿ ಬಹಳ ದಯನೀಯವಾಗುತ್ತದೆ. ಇವುಗಳನ್ನು ಮೀರುವುದಕ್ಕಾಗಿ ನಾನು ಈ ಟೋಪಿಯನ್ನು ಹಾಕಿಕೊಳ್ಳುತ್ತೇನೆ. ಬೇರೆಯವರಿಗೆ ಹೇಗೆ ಕಾಣುತ್ತೇನೆ ಅಥವಾ ಅಸಹ್ಯ ಕಾಣಿಸುತ್ತೇನೆ ಎಂದು ಭಾವಿಸಿ ಇದನ್ನು ಬಿಟ್ಟರೆ ರೋಗಗಳಿಗೆ ಬಲಿಯಾಗುತ್ತೇನೆ. ನಿನಗೆ ಇಷ್ಟು ತಿಳಿದರೆ ಸಾಕು. ಒಂದು ಕ್ಷಣ ನನ್ನ ಇಂದಿನ ಈ ಪಾಠವನ್ನು ಗಂಭೀರವಾಗಿ ಅಲೋಚಿಸು. ಭಾರತ ಇಂದು ಕೋಮಿನ ಹೆಸರಿನಲ್ಲಿ ಕಡಿದಾಡಿ ಸಾಯುತ್ತಿರುವುದೂ ಇಂತಹ ಒಂದು ಮನಸ್ಥಿತಿಯಿಂದಾಗಿಯೇ…. ಎನ್ನುವುದು ನಿನಗೆ ತಿಳಿಯುತ್ತದೆ. ಒಬ್ಬರು ಇನ್ನೊಬ್ಬರನ್ನು ಕೊಲ್ಲುತ್ತಿದ್ದಾರೆ. ಪ್ರದರ್ಶನಕ್ಕಾಗಿ, ಶಕ್ತಿಪ್ರದರ್ಶನಕ್ಕಾಗಿ, ಮತ್ತೊಬ್ಬರಿಗೆ ತೋರಿಸಿಕೊಳ್ಳುವುದಕ್ಕಾಗಿ ಮನುಷ್ಯನ ಪ್ರದರ್ಶನಾಬುದ್ಧಿ ಪ್ರಪಂಚವನ್ನು ವಿನಾಶಕ್ಕೆ ತಳ್ಳುತ್ತದೆ.”
ಎಷ್ಟೋ ರಕ್ತಪಾತಗಳನ್ನು ನೋಡಿ ನೊಂದ ಗಾಂಧಿಜಿ ಮುಕ್ತಿ ಯಾವಾಗ… ? ಎಂದು ಕಾಯುತ್ತಿರುವಾಗ ಮೊಮ್ಮಗಳಿಗೆ ಟೋಪಿಯ ಮೂಲಕ ಪರರಿಗೋಸ್ಕರ ಪ್ರದರ್ಶನಕ್ಕೊಸ್ಕರ ಏನನ್ನಾದರೂ ಕಾರ್ಯ ಮಾಡಿದರೆ ಅದು ನಮ್ಮ ವಿನಾಶಕ್ಕೆ ತಳ್ಳುತ್ತದೆ ಎಂದು ಹೇಳಿದ್ದು ಸಾರ್ವಕಾಲಿಕ ಸತ್ಯ.
ಪುಟ ಸಂಖ್ಯೆ ೩೦೫ ರಲ್ಲಿ ಸಾಯಂಕಾಲದ ಪ್ರಾರ್ಥನಾ ಸಭೆಯಲ್ಲಿ ಒಂದು ದೃಷ್ಟಾಂತವನ್ನು ವಿವರಿಸುತ್ತಾರೆ.
ಪ್ರಶ್ನೆ- ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದಾಗ ಹಿಂಸೆಯ ಮೂಲಕ ಅದಕ್ಕೆ ಉತ್ತರಿಸಬಹುದೇ?
ಗಾಂಧಿಯ ಉತ್ತರ: ಹಿಂಸೆಯ ಮೂಲಕ ಯಾರೂ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಹಕ್ಕುಗಳನ್ನಲ್ಲ….. ಪ್ರಪಂಚದಲ್ಲಿ ಏನನ್ನೂ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಬಲಪ್ರಯೋಗದಿಂದ ನಾವು ಏನನ್ನೂ ಗೆಲ್ಲಬಹುದು ಎನ್ನುವ ಭ್ರಮೆ ಕೆಲವೊಮ್ಮೆ ಬದುಕಿನಲ್ಲಿ ಸೃಷ್ಟಿಯಾಗುತ್ತದೆ. ಉದಾಹರಣೆಗೆ, ಒಂದು ಮಗುವಿನ ಹತ್ತಿರ ಒಂದು ರೂಪಾಯಿ ಇದೆ. ನಾನು ಅದರ ಕೆನ್ನೆಗೆ ಬಾರಿಸಿ; ಬಲ, ಭಯ ಪ್ರಯೋಗಿಸಿ ಅದನ್ನು ಕಸಿದುಕೊಳ್ಳುತ್ತೇನೆ. ನಾನು ಅದನ್ನು ಕಸಿದುಕೊಂಡೆ ಎನ್ನುವ ಸಾಮಾಧಾನವೇನೋ ಸಿಗುತ್ತದೆ, ಆದರೆ ಮಗುವನ್ನು ಹಿಂಸಿಸುವ ಆ ಕ್ಷಣದಲ್ಲಿ ಎಷ್ಟೆಲ್ಲವನ್ನು ಕಳೆದುಕೊಂಡೆವು ಎನ್ನುವುದನ್ನು ಒಂದು ಕ್ಷಣ ಆಲೋಚಿಸಿ.. ಪ್ರತಿಯಾಗಿ ಮಗು ನಮ್ಮ ಮೇಲೆ ಏನೂ ಮಾಡುವ ಸ್ಥಿತಿಯಲ್ಲಿರಲಿಕ್ಕಿಲ್ಲ. ಆದರೆ ಮಗುವನ್ನು ಹಿಂಸಿಸಿ ನಾನದನ್ನು ಪಡೆದೆ ಎನ್ನುವ ನೋವೇ ನಮಗೆ ನಿರಂತರವಾಗಿ ಹಿಂಸಿಸುತ್ತದೆ. ಹಿಂಸೆ ಯಾವಾಗಲೂ ಹೀಗೆಯೇ‌ ಅದು ಯಾವಾಗಲೂ ಕೆಟ್ಟ ಫಲಶೃತಿಯನ್ನೇ ನೀಡುತ್ತದೆ. ಅದಕ್ಕಾಗಿ ಹಿಂಸೆಯನ್ನು ಕೈಗೆತ್ತಿಕೊಳ್ಳಬೇಡ ಎನ್ನುವುದೇ ನಿಮ್ಮ ಬಗೆಗಿನ ನನ್ನ ಕಾಳಜಿ.
ಹಿಂಸೆಯ ಪರಿಣಾಮ ಮನುಷ್ಯನ ಮೇಲೆ ಸದಾ ಕೆಟ್ಟ ಪರಿಣಾಮವನ್ನೇ ಬೀರುವುದು. ಆದ್ದರಿಂದ ಹಿಂಸೆಯನ್ನು ತೊರೆಯಿರಿ ಎಂದು ಸಾರಿ ಸಾರಿ ಹೇಳಿದ ಗಾಂಧಿ ನಮಗೆಲ್ಲ ಆದರ್ಶ.

‌ ‌‌‌‌‌ ಯಾವುದು ಬೇಡ ಎಂದು ಗಾಂಧಿಜಿ ಜೀವನದುದ್ದಕ್ಕೂ ಬಡಿದಾಡಿದರೋ ಕೊನೆಗೆ ಅದೇ ಅವರ ಮರಣವನ್ನು ತಂದಿತು.

ಗಾಂಧಿ ಪುಸ್ತಕ ಓದಿದ ನಂತರ ನನ್ನ ಅದೆಷ್ಟೋ ಮನಸ್ಸಿನ ಜಟಿಲ ಪ್ರಶ್ನೆಗಳಿಗೆ *ನನ್ನೊಳಗೊಬ್ಬ ಗಾಂಧಿ ಉದಯಿಸಿ* ಆ ಪ್ರಶ್ನೆಗಳಿಗೆ ಸರಳ ರೀತಿಯಿಂದಲೇ ಉತ್ತರಿಸುತ್ತಿದ್ದಾನೆ ಎಂದು ಹೇಳಲು ಸಂತಸವೆನಿಸುತ್ತಿದೆ. ಅದಕ್ಕೆ ಕಾರಣ ಈ ಗಾಂಧಿ ಪುಸ್ತಕ.

ಗಾಂಧಿಜಿಯವರ ಬದುಕಿನ ನಿಯಮಗಳು ನಮ್ಮೆಲ್ಲರ ಬದುಕಿನ ನಿಯಮಗಳಾದರೆ.. ಎಷ್ಟೊಂದು ಸುಂದರ ಅಲ್ಲವೇ..? ನಿಜಕ್ಕೂ ಆ ಸಂತೋಷಕ್ಕೆ ಪಾರವೇ ಇಲ್ಲ ಎಂದೆನಿಸುತ್ತೆ.
ಒಟ್ಟಿನಲ್ಲಿ ಈ ಪುಸ್ತಕದಲ್ಲಿ ಗಾಂಧಿಜಿಯವರ ಬದುಕಿನ ಚಿತ್ರಣ ತುಂಬಾ ಸೊಗಸಾಗಿದೆ. ಎಲ್ಲೂ ಬೇಸರಿಸದೇ ನಮ್ಮನ್ನು ಓದಿಸಿಕೊಂಡ ಹೋಗುವ ಪುಸ್ತಕ ಮುಗಿದಾಗ ಅನಿಸಿದ್ದು ಇಷ್ಟೆ.. ಗಾಂಧಿಜಿಯವರು ೧೨೫ ವರುಷ ಬಾಳಬೇಕಾಗಿತ್ತು… ಎಂಬ ಆಸೆಯನ್ನು ಅದೆಷ್ಟೋ ಸಂದರ್ಭದಲ್ಲಿ ನೆನೆಸಿದ್ದುಂಟು.. ಆದರೆ ಅದು ಈಡೇರದ ಕನಸಾಗಿಯೇ ಉಳಿಯಿತು. ಆದರೆ ಗಾಂಧಿ ಪುಸ್ತಕದಲ್ಲಿ ಗಾಂಧಿ ಬದುಕಿನ ಕೊನೆಯ ತಿಂಗಳು ಅಂದರೆ ಜನೇವರಿ ಅದೂ… ೩೦ ದಿನಗಳ ಬದಲಾಗಿ ೩೬೫ ದಿನಗಳಿದ್ದರೆ ಇನ್ನೂ ಗಾಂಧಿಜಿಯವರ ಬದುಕಿನ ಸುಂದರ ಚಿತ್ರಣವನ್ನು ತಿಳಿಯಬಹುದಿತ್ತೇನೋ ಎಂದು ಅನಿಸುತ್ತದೆ. ಓದು ಮುಗಿದಾಗ ಗಾಂಧಿಯ ಬದುಕು ಅಂತ್ಯವಾಯಿತೇ….? ಮುಂದೆ ಗಾಂಧಿಯ ಬದುಕಿನ ಪುಟಗಳಿಲ್ಲ! ಎಂದು ಬೇಸರ. ಆದರೆ ಅವರು ಹಾಕಿಕೊಟ್ಟ ಮಾರ್ಗವನ್ನು ಮರೆಯಲು ಸಾಧ್ಯವಿಲ್ಲ.

ರಾಗಂ ಸರ್ ರವರ ಸುಂದರ ಬರವಣಿಗೆಯಲ್ಲಿ ಒಡಮೂಡಿದ ಗಾಂಧಿ ಪುಸ್ತಕ ನನ್ನ ಅಂತರಂಗದ ಕಣ್ಣನ್ನು ತೆರೆಸಿತು. ನನ್ನ ಬದುಕಿನಲ್ಲಿ ಹಲವಾರು ಬದಲಾವಣೆಗಳಿಗೆ ನಾಂದಿಯಾಯಿತು ಉತ್ತಮ ಮೌಲ್ಯಾಧಾರಿತ ಗಾಂಧಿಜಿಯ ಬದುಕಿನ ಚಿತ್ರಣವನ್ನು….. ಅಂತಿಮ ದಿನಗಳು ಹಾಗೂ ಮುಗಿಯದ ಅಧ್ಯಾಯ ಎಂದು ಎರಡು ಭಾಗಗಳಾಗಿದ್ದರೂ ಎಲ್ಲೂ ಓದಲು ಬೇಸರವಾಗಲಿಲ್ಲ. ಓದಿನ ಹಸಿವು ನೀಗಿಸಿಕೊಳ್ಳುವ ನನಗೆ ನನ್ನ ಸ್ಮೃತಿಪಟಲದಲ್ಲಿ ಅಚ್ಚುಹಾಕಿದ ಪುಸ್ತಕ ಎಂದರೆ ಗಾಂಧಿ.
‌ಮತ್ತೊಮ್ಮೆ ನನ್ನ ಹೃನ್ಮನಗಳಿಂದ ರಾಗಂ ರವರಿಗೆ ಅನಂತಾನಂತ ಧನ್ಯವಾದಗಳು ರಾಜಶೇಖರ ಮಠಪತಿ ಸರ್(ರಾಗಂ)

——————-
✍ರಾಜು ಹಗ್ಗದ
ಇಣಚಗಲ್
——————

ಪುಸ್ತಕದಲ್ಲಿ ಕಾಣಸಿಗುವ ಅಮೂಲ್ಯ ಗಾಂಧೀಜಿಯವರ ಹಿತನುಡಿಗಳು

* “I do not even want a public prayer, thought I may have it, as prayer is part of my life”

* ಕ್ಷಣ ಮಾತ್ರಕ್ಕೆ ಅಬ್ಬರಿಸಿ ಇಳಿದು ಹೋಗುವ ತೆರೆಗಳಾಗಬಾರದು ನಮ್ಮ ಒಳ್ಳೆಯ ಭಾವನೆಗಳು. ಅವು ನಿರಂತರವಾಗಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಸಕಾರಾತ್ಮಕವಾಗಿ ಆಲೋಚಿಸುವ ಜನರನ್ನು ಮಾತ್ರ ನಮ್ಮೊಂದಿಗೆ ಇಟ್ಟುಕೊಳ್ಳಬೇಕಾಗುತ್ತದೆ.

* ‘ಮೃಗಗಳ ನಿಯಮ ಹಿಂಸೆ’ ಮನುಷ್ಯನ ನಿಯಮ ಅಹಿಂಸೆ. ಮೃಗಗಳಲ್ಲಿ ಆತ್ಮ ಸುಪ್ತ ಸ್ಥಿತಿಯಲ್ಲಿರುತ್ತದೆ. ಅದಕ್ಕೆ ದೇಹಬಲ ಮಾತ್ರ ಗೊತ್ತು. ಮನುಕುಲವನ್ನು ಆಳಬೇಕಾದುದು ಅಹಿಂಸೆ ಮತ್ತು ಪ್ರೀತಿ.

* “The times have changed, but I have not. I believe that Prayer has a deep effect on those who listen to it in good faith.”

* ಅಹಿಂಸೆಯೆನ್ನುವುದು ಸಾವಿನ ಎದುರೂ ಕೂಡ ಒಂದು ಪಲಾಯನವಲ್ಲ ಅಥವಾ ಹಿಂಸಿಸಿದವನ ಮೇಲೆ ಆಕ್ರಮಣವೂ ಅಲ್ಲ.

* ಯಾವಾಗ ವ್ಯಕ್ತಿಗೆ ತಾನು ತಪ್ಪು ಮಾಡಿದ್ದೇನೆ ಎನ್ನುವುದರ ಅರಿವಾಗುತ್ತದೆಯೋ, ಇನ್ನು ತಾನು ಖಂಡಿತ ಬದಲಾಗಬೇಕು ಎನ್ನುವ ಆಸೆ ಹುಟ್ಟಿಕೊಳ್ಳುತ್ತದೆಯೋ ಅಲ್ಲಿಯೇ ಆತನಿಗೆ ಮಹಾಶಕ್ತಿ ಪ್ರಾಪ್ತವಾಗುತ್ತದೆ. ಆದರೆ ಎಲ್ಲಿಯವರೆಗೆ ತನ್ನ ತಪ್ಪನ್ನು ಆತನಲ್ಲಿ ಬಚ್ಚಿಡುವ ಪ್ರಯತ್ನವಿರುತ್ತದೆಯೋ ಅಲ್ಲಿಯವರೆಗೂ ಆತ ತನ್ನನ್ನು ತಾನು ದಿಕ್ಕರಿಸಿಕೊಳ್ಳುತ್ತಲೇ ಇರುತ್ತಾನೆ. ವ್ಯಕ್ತಿಧರ್ಮವನ್ನೇ ಕೊಲ್ಲುತ್ತಿರುತ್ತಾನೆ. ಅದಕ್ಕಿಂತಲೂ ದೊಡ್ಡ ಅಪರಾಧವಿಲ್ಲ ಈ ಜಗತ್ತಿನಲ್ಲಿ.

* ತಲೆತಲಾಂತರದಿಂದ ನಮ್ಮ ಹಿರಿಯರು ನಮಗೆ ರಾಮಾಯಣವನ್ನು ಬೋಧಿಸುತ್ತಿರುವುದು ನಾವು ದುಷ್ಟತನವನ್ನು ಅನುಕರಿಸಬೇಕೆಂದು ಅಲ್ಲ, ಬದಲಾಗಿ ಮೌಲ್ಯಗಳ ಪರಿಪಾಲನೆ ಮಾಡಬೇಕೆಂದು.”

* ನಿದ್ದೆಯಿಂದ ಏಳುವ ಪ್ರತಿ ಮನುಷ್ಯನೂ ಹೊಸ ಬದುಕಿನ ಖುಷಿಯನ್ನು ಅನುಭವಿಸುವಂತೆ ನಾನು ರಾಮನಾಮ ಉಚ್ಚರಣೆಯಿಂದ ಪುಳಕಿತನಾಗುತ್ತೇನೆ. ಕಳೆದುಹೋದ ಹಳೆಯದನ್ನು ಮರೆತು ಬಿಡಿ. ಬೆಳಕಿನೆಡೆಗೆ, ಕರ್ತವ್ಯದೆಡೆಗೆ ಮುಖ ಮಾಡಿ.”

* “ಭಗವಂತನನ್ನು ಕಾಣುವುದೇ ಮಾನವ ಬದುಕಿನ ಅಂತಿಮ ಗುರಿಯಾಗಬೇಕ. ದೇವಾಲಯಗಳಲ್ಲಿಲ್ಲದ ಅಥವಾ ನೀವು ಪ್ರಾರ್ಥಿಸುವ ಯಾವ ಸ್ಥಳಗಳಲ್ಲಿಯೂ ಇಲ್ಲದ, ನೀವು ಆಚರಿಸುವ ಉಪವಾಸ-ಪ್ರತಿಜ್ಞೆಗಳಿಗೆ ಒಲಿಯದ ಭಗವಂತ, ನಮ್ಮ ಪ್ರೀತಿಗೆ ಮಾತ್ರ ಒಲಿಯುತ್ತಾನೆ. ಪ್ರೀತಿಸುವ ಜನರ ನೋವಿಗೆ ನುಲಿಯುತ್ತಾನೆ. ಆದರೆ ನಮ್ಮ ಈ ಪ್ರೀತಿ ವ್ಯಾವಹಾರಿಕವಾಗಿರದೆ ದೈವಪ್ರೇರಣೆಯಿಂದ ಕೂಡಿರಬೇಕು”.

* “Life become lovable only death is treated as a friend”.

* ಉತ್ತಮವಾದ ಅಧ್ಯಯನ ಮಾಡಬೇಕೆನ್ನುವವರು, ಓದಿದ್ದನ್ನು ಸರಿಯಾಗಿ ಮನನ ಮಾಡಬೇಕೆನ್ನುವವರು ಮೊದಲು ಆರೋಗ್ಯವನ್ನು ಯಾವಾಗಲೂ ಸರಿಯಾಗಿಟ್ಟುಕೊಳ್ಳಬೇಕು.

* ಅನಾರೋಗ್ಯದಿಂದ ಬಳಲಿ ಫಸ್ಟಕ್ಲಾಸ್ ಭೋಗಿಗಳಲ್ಲಿ ಪಯಣಿಸುವುದಕ್ಕಿಂತ ಆರೋಗ್ಯವಂತರಾಗಿ, ಜನಸಾಮಾನ್ಯರೊಂದಿಗೆ ಸಾಮಾನ್ಯ ಬೋಗಿಗಳಲ್ಲಿ ಪಯಣಿಸುವುದೇ ಎಷ್ಟೊಂದ ಸಂತಸದ ಸಂಗತಿಯಲ್ಲವೇ?

* ಪ್ರಾರ್ಥನೆ ಪ್ರತಿಯೊಬ್ಬ ಮನುಷ್ಯನ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಬೇಕು. ಯಾಕೆಂದರೆ ಪ್ರಾರ್ಥನೆ ಆತ್ಮದ ಆಹಾರ. ಮನಸ್ಸಿನ ಪರಿಹಾರವನ್ನು ಕಳೆಯಲು ಪ್ರಾರ್ಥನೆಯೇ ದಿವ್ಯ ಪರಿಹಾರ.

* ಅಹಿಂಸೆ, ಪ್ರಾರ್ಥನೆ ಮತ್ತು ಉಪವಾಸಗಳ ಮುಂದೆ ಜಗತ್ತಿನ ಎಲ್ಲ ಅನ್ಯಾಯಗಳೂ ಸೋಲುತ್ತವೆ.

* My mother is my mother. Shall I choose for my mother, another woman more beautiful than she? In the same way we should not get beautiful cloth from outside”.

* ಕಾಲದ ಪರಿಜ್ಞಾನವಿಲ್ಲದೆ ಬದುಕುವವರಿಗೆ ಆಯುಷ್ಯವೇ ಒಂದು ಹೊರೆ.

* ‘ಪ್ರಪಂಚದ ಉದ್ಯಾನಗಳಿಗೆ ಪ್ರತಿ ವರ್ಷವೂ ವಸಂತ ಬರುತ್ತದೆ, ಆದರೆ ಕೆಲವೇ ಕೆಲವು ದಿನಗಳಿಗಾಗಿ ಮಾತ್ರ. ಒಂದು ಕ್ಷಣ ಸೃಷ್ಟಿಯ ಈ ವಿಚಿತ್ರ ಆಟವನ್ನು ಕಣ್ತುಂಬಿಸಿಕೊಂಡುಬಿಡು. ಕೇಳಿದರೆ ಮತ್ತೆ ಇಲ್ಲ, ಮಗದೊಮ್ಮೆ..? ಸಾಧ್ಯವೇ ಇಲ್ಲಾ’.

*ಗಾಂಧಿ ಪುಸ್ತಕದಲ್ಲಿ ಇಷ್ಟವಾದ ಪ್ರಮುಖ ವ್ಯಕ್ತಿಗಳ, ಹಾಗೂ ಗ್ರಂಥಗಳ ಸಾಲುಗಳು.*

* “ನಂಬಿಗಸ್ತರೆ, ಯಾವಾಗಲೂ ನ್ಯಾತಪರವಾಗಿರಿ, ದೈವಸಾಕ್ಷಿಗಳಾಗಿ ಅದು ನಿಮಗೆ ತಂದೆ ತಾಯಂದಿರಿಗೆ ಮಾತ್ತು ಬಂಧುಗಳಿಗೆ ವಿರುದ್ಧವಾದರೂ ಸರಿಯೆ.”
-ಖುರಾನ

* ನಮಗೆ ಸರಿ ಯಾವುದೆಂದು ಚೆನ್ನಾಗಿ ಗೊತ್ತು. ಆದರೆ ಅದನ್ನು ಅನುಸರಿಸದಿರುವುದೇ ಹೇಡಿತನ. ನಮ್ಮ ತಿಳುವಳಿಕೆಗೂ ಮಾರಕ
‌-ಕನ್ಫೂಷಿಯಸ್

* ಅನುಕಂಪವೇ ಧರ್ಮ, ದುರಹಂಕಾರವೇ ಅದರ ವೈರಿ
ನೀನಿರುವವರೆಗೂ ನಿನ್ನೊಳಗಿನ ಅನುಕಂಪವ ದೂರಬೇಡ.
-ತುಳಸಿದಾಸರ ಭಜನಾ ಸಾಲುಗಳು.

* ತೊಟ್ಟು ನೀರು ಕೇಳಿದವನಿಗೆ ಹೊಟ್ಟೆ ತುಂಬ ಊಟ ಕೊಡು.
ಒಂದು ದುಡ್ಡು ಕೊಟ್ಟವನಿಗೆ ಬಂಗಾರವೇ ಇಟ್ಟುಬಿಡು
ಮುಖ ಸಿಂಡರಿಸಿದ ಮೂರ್ಖನಿಗೆ ಮುಗುಳ್ನಗೆಯ ಒಲವ ಕೊಡು
ನಿನ್ನ ಬಳಿ ಕೊಡಲೇನೂ ಇಲ್ಲದಿರೆ ನಿನ್ನನ್ನೇ ಕೊಟ್ಟು ಬಿಡು
-ಶಾಮಲಾ ಭಟ್ಟರ ಭಜನೆಯ ಸಾಲುಗಳು

* ‘ಹೊಗಳುವವರು ಹೊಗಳಲಿ, ಹೊಗಳದವರು ಬೆಂಕಿಯನ್ನೇ ಉಗುಳಲಿ, ಎಲ್ಲವೂ ಮಲ್ಲಿಗೆಯೆ ನನ್ನ ಮಡಿಲಿಗೆ’.
-ಶ್ರೀರಾಮನ ಭಜನೆಯ ಸಾಲುಗಳು

* “ಗಾಂಧಿ ಕೆಸರಿನಲ್ಲಿ ಕಾಲಿಟ್ಟರೂ ಹೇಗೆ ಶುಚಿಗೊಳಿಸಬಹುದೆಂದು ತೋರಿಸಿದರು. ಸ್ವತಃ ಅದರಲ್ಲಿ ಕಾಲಿಟ್ಟರೂ ತಾವು ಕೆಸರು ಸೋಂಕದಂತೆ ಉಳಿದರು”.
-ಆರ್ನಲ್ಡ್ ಟಾಯ್ನಾಬಿ

ಇಂದ
ರಾಜು ಹಗ್ಗದ

ನಿಮ್ಮ ಟಿಪ್ಪಣಿ ಬರೆಯಿರಿ