ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ಕರಾಳ ಗರ್ಭ’ – ನಾಗೇಶ್ ಕುಮಾರ್.ಸಿ.ಎಸ್

FB_IMG_1551346258222.jpg

ಪುಸ್ತಕ……ಕರಾಳ ಗರ್ಭ
ಲೇಖಕರು…ಸಿ.ಎಸ್.ನಾಗೇಶ್ ಕುಮಾರ್
ಪ್ರಕಾಶನ….ತೇಜು ಪಬ್ಲಿಕೇಷನ್ಸ್

ಬಹಳ ಹಿಂದಿನ ವರ್ಷಗಳು, ಮಾಧ್ಯಮಿಕ ಶಾಲೆಯಲ್ಲಿ ಓದುವ ದಿನಗಳು. ಮನೆಯಲ್ಲಿ ನಮ್ಮ ತಂದೆ ಯಾವಾಗ ಓದುತ್ತಿದ್ರೋ ನನಗಂತೂ ನೋಡಿದ ನೆನಪಿಲ್ಲ. ಆದರೆ, ಎಂಥ ಪುಸ್ತಕ ಪ್ರೀತಿಯೆಂದರೆ, ಆ ಕಾಲದಲ್ಲಿ ಆಗಾಗ ಕೆಲಸದ ನಿಮಿತ್ತ ಬೆಂಗಳೂರು, ಶಿವಮೊಗ್ಗೆಗೆಲ್ಲ ಹೋದವರು ತರುತ್ತಿದ್ದ ಸಾಮಾನು ಲಿಸ್ಟಿನಲ್ಲಿ ಸದಾ ಒಂದೆರಡು ಪುಸ್ತಕ, ಕೆಲವೊಮ್ಮೆ ಹದಿನೈದಿಪ್ಪತ್ತು ಹೊಸ ಪುಸ್ತಕಗಳ ಬಂಡಲ್ ಖಾಯಂ. ಬಂದು ಇಳಿಸುತ್ತಿದ್ದ ಹಾಗೆ ಊರವರೆಲ್ಲ, ಓದಿಕೊಡ್ತೀನಿ ಅಂತ ಕೇಳದೇ ತಾವಾಗೇ ಹಂಚಿಕೊಂಡು ಹೋಗುತ್ತಿದ್ದ ದಿನಗಳು. ಎಷ್ಟೋ ವಾಪಸ್ ಬಂದರೆ , ಎಷ್ಟೋ ಬರುತ್ತಿರಲಿಲ್ಲ, ಬಂದವು ಒಂಥರಾ ದೈನ್ಯೇಸಿ ಸ್ಥಿತಿಯಲ್ಲಿರುತ್ತಿದ್ದವು. ನಮಗೋ ಪುಸ್ತಕ ಜೋಪಾನ, ಬೆಲೆ ಗೊತ್ತಿರಲಿಲ್ಲ. ಒಟ್ಟಲ್ಲಿ ನಮ್ಮನೆಯಲ್ಲೊಂದು ಲೈಬ್ರರಿಯೇ…

ಆಗ ನಮ್ಮನೆಯಲ್ಲಿದ್ದ ಹೆಚ್ಚಿನ ಪುಸ್ತಕಗಳು ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು. ಪುರುಷೋತ್ತಮನ ಸಾಹಸಗಳು, ಕಾಳರಾತ್ರಿಯ ಖದೀಮ, ಅಮಾವಾಸ್ಯೆಯ ಅತಿಥಿ ಇತ್ಯಾದಿತ್ಯಾದಿ. ನನಗೆ ಓದುವ ಚಪಲ, ಆದರೆ, ಇವೆಲ್ಲ ಬೇಡ ಎನ್ನುವ ಅಪ್ಪ. ಓದುವ ಮಕ್ಕಳಿಗೆ ಕಾದಂಬರಿ ಹುಚ್ಯಾಕೆ ಅಂತ. ಆದರೂ ಕದ್ದುಮುಚ್ಚಿ ಓದುವ ಈ ಕಾದಂಬರಿಗಳ ಥ್ರಿಲ್ ಅದ್ಯಾಕೊ ನಂತರದಲ್ಲಿ ತಂತಾನೆ ಮಾಯವಾಗಿ ಸಾಮಾಜಿಕ ಕಾದಂಬರಿಗಳ ಒಲವೇ ಹೆಚ್ಚಾಯ್ತು. ಹಾಗೆ ಹೋಗಿದ್ದು ಮತ್ತೆ ಬರಲೇ ಇಲ್ಲ, ಪತ್ತೇದಾರಿಯ ಆಸಕ್ತಿಗೆ ಮಂಗಳವೇ ಆಗ್ಹೋಯ್ತು. …

ಯಾಕೀ ಪುರಾಣವೆಂದರೆ, ಈ ಗುಂಪಿನ ಸಜ್ಜನ, ಸ್ನೇಹಪರ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮೊನ್ನೆಯಷ್ಟೆ ಪುರಸ್ಕೃತರಾದ ಸಿ.ಎಸ್.ನಾಗೇಶ್ ಕುಮಾರ್ ಅವರ ಪುಸ್ತಕಗಳ ಕುರಿತು ನೋಡುತ್ತಿದ್ದೆ, ಆದರೆ, ಪತ್ತೇದಾರಿ ಕಾದಂಬರಿಗಳಾದ್ದರಿಂದ ಮನಸ್ಸು ಮಾಡಿರಲಿಲ್ಲ. ಕ್ರಮೇಣ, ಸ್ನೇಹಿತರ ಒಂದಾದರೂ ಪುಸ್ತಕ ಓದಬೇಕೆನ್ನಿಸಿ ” ಕರಾಳ ಗರ್ಭ” ಕೊಂಡುತಂದೆ.
ಇದರಲ್ಲಿನ ” ಸುವರ್ಣ ಕರಾವಳಿ ” ಕತೆ ನಿನ್ನೆಯಷ್ಟೆ ಮುಗಿಸಿದೆ. ನಿಜಕ್ಕೂ ಬಹಳ ಇಷ್ಟವಾಯ್ತು ಕಾದಂಬರಿ. ಅವರ ಬರೆಯುವ ನಿರಾಳ ಶೈಲಿ ಬಹಳವೇ ಹಿಡಿಸಿತು.

ಆಫ್ರಿಕಾದ ಅಕ್ರಮ ಚಿನ್ನ ಸಾಗಾಣಿಕೆ, ಇಲ್ಲಿಯ ದುರಾಸೆಯ ಮಾಫಿಯಾ ಗ್ಯಾಂಗಿನ ಜಾಲದ ನಡುವೆ ಅಡಗಿಕೊಂಡ ಅಪಾರ ಚಿನ್ನ, ಅದನ್ನು ಕೈಗೂಡಿಸಿಕೊಳ್ಳುವ ಅವರ ಯತ್ನಗಳು ಒಂದೆಡೆಯಾದರೆ, ಈ ಸುಳಿವು ಹೇಗೋ ಸಣ್ಣ ತೂತಿನಲ್ಲಿ ಸೋರಿಹೋಗಿ ಸರ್ಕಾರದ ಗಮನಕ್ಕೆ ಬಂದಿದೆ. ಈ ಅಕ್ರಮವನ್ನು ಮಟ್ಟು ಹಾಕಲೇಬೇಕಾದ್ದು ಅದರ ಅನಿವಾರ್ಯತೆ, ಇದಕ್ಕೆ ನೇವಿಯ ಸಹಾಯವೂ ಅತ್ಯಗತ್ಯ. ಇದಕ್ಕೆ ತಯ್ಯಾರಾಗಿ ಬಂದ ಸಬ್‍ಮೆರೀನ್ ನೌಕಾತಜ್ಞ ಸಾತ್ವಿಕ್‍ಗೆ ದೇಶದ ಕಾಳಜಿಯ ಜೊತೆಗೆ ವೈಯ್ಯಕ್ತಿಕ ಕಾರಣವೂ ತಳುಕು ಹಾಕಿಕೊಂಡಿದ್ದು ಕತೆಯ ಗಟ್ಟಿತನಕ್ಕೊಂದು ಭಾವನಾತ್ಮಕ ನೆಲೆಯನ್ನೂ ಒದಗಿಸಿತು. ಕಡೆಯಲ್ಲಿ ಸೋಲು ಯಾರದ್ದು, ಗೆಲುವು ಯಾರಿಗೆ ಎಂದು ನಾವು ಒಂದು ಸಿದ್ಧ ನೆಲೆಯಲ್ಲಿ ಊಹಿಸುತ್ತೇವಾದರೂ , ಹಾಗಾಗದಿರುವ ಸಾಧ್ಯತೆಯನ್ನೂ ಅಲ್ಲಗೆಳೆವಂತಿಲ್ಲ. ಕತೆಯನ್ನು ಕತೆಗಾರ ಮಾತ್ರ ತನ್ನಿಷ್ಟದ ಅಂತ್ಯಕ್ಕೆ ಮುಟ್ಟಿಸುವ ತವಕದಲ್ಲಿರುತ್ತಾನೆ, ಕಾರಣ ಅದು ಅವನು ಹುಟ್ಟಿಸಿದ ಕೂಸು. ಇರಲಿ , ಆದಿಯ ಪರಿಚಯ ಇಲ್ಲಾದರೂ ಮಧ್ಯ, ಅಂತ್ಯಗಳನ್ನು ಓದಿದರೇ ಸ್ವಾರಸ್ಯ…

ಪುಸ್ತಕ ಹಿಡಿದಮೇಲೆ ಮುಗಿಸದಿರಲು ಸಾಧ್ಯವಿಲ್ಲ, ಹಾಗೆ ಒಳಗೊಳ್ಳಿಸುತ್ತದೆ ಬರೆದ ಶೈಲಿ. ಒಂದೊಂದು ಪುಟವೂ ಆಸಕ್ತಿಯಿಂದ ಓದಿಸಿಕೊಳ್ಳುತ್ತದೆ. ನನಗಂತೂ ಒಂದು ಥ್ರಿಲ್ಲಿಂಗ್ ಸಿನಿಮಾ ನೋಡುತ್ತಿದ್ದೀನಾ ಎನ್ನಿಸುವಂತೆ ಮನದಕಣ್ಣಲ್ಲಿ ದೃಷ್ಯಗಳಾಗಿ ಕುಣಿದವು. ಜಲಬಿಂದು ಎನ್ನುವ ಸಬ್‍ಮೆರೀನ್ ಸಾವಿರಾರು ಅಡಿ ಸಮುದ್ರದಾಳಕ್ಕೆ ಇಳಿದಾಗ ಮೈ ಜುಂ ಎಂದಿತು, ಕಾರಣ, ಆಸ್ಟ್ರೇಲಿಯಾದಲ್ಲಿ ಹೋಗಿದ್ದ ಮಿನಿ ಸಬ್ಮೆರೀನ್ ಯಾನ, ಕ್ರೂಸ್ ನಲ್ಲಿ ಎಂಟು ದಿನಗಳು ಸಮುದ್ರಯಾನ, ರಾತ್ರಿ ಮಲಗಿದಾಗ ಅದರ ಏರಿಳಿತ ತರುತ್ತಿದ್ದ ಭಯ, ಕಗ್ಗತ್ತಲ ಕಪ್ಪುನೀರು …..ಇವೆಲ್ಲ ಅನುಭವದ ಕಾರಣ, ಇಲ್ಲಿನ ಕತೆ ಓದುತ್ತ ನಡೆದಂತೇ ಅನ್ನಿಸಿಕೆಯಾಗುತ್ತಿತ್ತು. ಸಾತ್ವಿಕ್, ಹಮೀದ್, ಸುಮನಾ ಪಾತ್ರಗಳು, ವಿರೋಧಗಳ ತಂತ್ರಗಳು, ಎಲ್ಲಕ್ಕಿಂತ ಸಮುದ್ರದ ಒಡಲಿನೊಳಗೆ ಕತೆ , ವಿವರಗಳು ಬಹಳವೇ ಹಿಡಿಸಿತು…ಇಷ್ಟಪಟ್ಟು ಓದಿಸಿಕೊಳ್ಳುವ ಕಾದಂಬರಿ…

ಅದರಲ್ಲೆ ಇರುವ ಇನ್ನೊಂದು ಕತೆ ಓದಬೇಕು. ಲೇಖಕರು ವಿಶ್ವಾಸವಿಟ್ಟು ಕಳಿಸಿದ “ನಾಳೆಯನ್ನು ಗೆದ್ದವನು” ಪುಸ್ತಕವನ್ನೂ ಓದಬೇಕು. ನಾಗೇಶ್ ಕುಮಾರ್ ಸರ್, ನಿಮ್ಮ ಬರವಣಿಗೆಗೆ 👌🙏 …
ಕಡಿಮೆ ಸಮಯದಲ್ಲಿ ಜನಕ್ಕೆ ತಲುಪಿದ್ದೀರಿ. ಇನ್ನೂ ತಲುಪುವ ಕೃತಿಗಳು ನಿಮ್ಮಿಂದ ಬರಲಿ. ಶುಭಹಾರೈಕೆಗಳು…😊

-ಎಸ್.ಪಿ.ವಿಜಯಲಕ್ಷ್ಮಿ

ನಿಮ್ಮ ಟಿಪ್ಪಣಿ ಬರೆಯಿರಿ