ಕನ್ನಡ · ಶೇಷ ನವರತ್ನ · Uncategorized

‘ಯಜುರ್ವೇದ’ – ಶೇಷ ನವರತ್ನ

FB_IMG_1574739475813.jpg

ಪುಸ್ತಕ: ಯಜುರ್ವೇದ

ಪ್ರಕಾಶನ: ಸಮಾಜ ಪುಸ್ತಕಾಲಯ

ಕರ್ತೃ : ಶೇಷ ನವರತ್ನ

ಶೇಷ ನವರತ್ನರವರು ಬರೆದಿರುವ ನಾಲ್ಕು ವೇದಗಳ ವಾಖ್ಯಾನಗಳಲ್ಲಿ, ಯಜುರ್ವೇದ ಎರೆಡನೆಯ ಗ್ರಂಥ. ಇದರಲ್ಲೂ ಕೂಡ ಯಜುರ್ವೇದದ ಬಗ್ಗೆ ( ಆಂತರ್ಯದಲ್ಲಿ ವೇದಗಳ ಬಗ್ಗೆ) ಇರುವ ಊಹಾಪೋಹಗಳನ್ನು, ಮಿತ್ಯರ್ಥಗಳನ್ನು ದೂರಗೊಳಿಸಿ, ನಿಜಾರ್ಥ ಗುಣಗಳನ್ನು, ಮೂಲ ಅಂತಸತ್ವವನ್ನು ಬೆಳಕಿಗೆ ತರುವುದಕ್ಕೆ ಪ್ರಯತ್ನಿಸಿದ್ದಾರೆ. ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣವೇದ – ಈ ನಾಲ್ಕೂ ವೇದಗಳು ಮೂಲ ಸಂಹಿತೆಗಳೆಂದು ಕರೆಸಿಕೊಂಡಿವೆ. ಈ ವೇದಗಳ ಬೆಂಬಲಕ್ಕಾಗಿ ಮುಂದೆ ವಿಚಾರಶೀಲ ಚಿಂತನಾಕಾರರು ಬ್ರಾಹ್ಮಗಳನ್ನು, ಆಗಮಗಳನ್ನು ಹಾಗು ಉಪನಿಷತ್ತುಗಳನ್ನು ವ್ಯಾಖ್ಯಾನವಾಗಿ/ಭಾಷ್ಯವಾಗಿ ರಚಿಸಿದ್ದಾರೆ. ವೇದಗಳನ್ನು ಅರ್ಥೈಸುವಾಗ ಮೂಲ ಸಂಹಿತೆಗಳನ್ನು, ಬ್ರಾಹ್ಮಣಾದಿ ಆಗಮಗಳಿಂದ ಬೇರ್ಪಡಿಸದಿದ್ದರೆ ನಮಗೆ ವೇದಾರ್ಥ ಅಂತಸ್ಸತ್ವದ ಅನುಭೂತಿಯಲ್ಲಿ ಪರಿಪಕ್ವತೆ ಲಭಿಸುವುದಿಲ್ಲ. ಲೇಖಕರೇ ಹೇಳಿರುವಂತೆ ಸ್ವಾಮಿ ದಯಾನಂದ ಸರಸ್ವತಿಯವರು ಈ ರೀತಿ ಅರ್ಥವಿಷಯಗಳನ್ನು ಬೇರ್ಪಡಿಸಿ “ಸತ್ಯಾರ್ಥ ಪ್ರಕಾಶ” ವೆಂಬ ಉದ್ಗ್ರಂಥವನ್ನು ಪ್ರಕಟಿಸಿದ್ದಾರೆ. ಅದರಂತೆಯೇ ಈ ಪುಸ್ತಕ ಸರಣಿಗಳಲ್ಲೂ ಸನ್ಮಾನ್ಯ ಶೇಷ ನವರತ್ನರವರು ಕೂಡ , ಅಮೂಲಾಗ್ರವಾಗಿ ಗ್ರಂಥಗಳ ಅಧ್ಯಯನಗಳನ್ನು ನೆಡೆಸಿ ವೇದಾರ್ಥದ ಮೇಲಿರಬಹುದಾದ ಅಪನಂಬಿಕೆಗಳನ್ನು ಬಗೆಹರಿಸಲು ವಿಶೇಷ ಶ್ರಮವಹಿಸಿದ್ದಾರೆ. ವೆದೋತ್ತರವಾಗಿ ಸೃಷ್ಟಿಗೊಂಡ ಅನೇಕ ಮತಗಳು, ಆಚಾರ್ಯರುಗಳ ಭಾಷ್ಯಗಳು ವೇದಗಳ ಮೂಲಾರ್ಥವನ್ನು ಹೇಗೆ ಪಲ್ಲಟಗೊಳಿಸಿದೆ ಎಂದು ಅನೇಕ ವಿಶ್ಲೇಷಣೆ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಜೊತೆಗೆ ಬ್ರಾಹ್ಮಣಗಳು, ಆಗಮಗಳು ಹೇಳಿರುವ ಅರ್ಥರೂಪ ಹೇಗೆ ಮೂಲಸ್ಥಾನದಲ್ಲಿ (ವೇದ) ಬೇರೆಯೇ ಅರ್ಥಸ್ವರೂಪವನ್ನು ಹೊಂದಿದೆ ಎಂಬುದನ್ನು ಲೇಖನದ ಅನೇಕ ಘಟ್ಟಗಳಲ್ಲಿ ವಿವರಿಸುತ್ತಾರೆ.

ಯಜುರ್ವೇದದ ಸಂಹಿತೆಗಳೆಂದರೆ ನಂತರಕಾಲೀನ ಬ್ರಾಹ್ಮಣಗಳಲ್ಲಿ ಉಲ್ಲೇಖಿಸಿರುವಂತೆ ಕೇವಲ ಯಜ್ಞಾಚಾರಕ್ಕೆ ಸಂಬಂಧಿಸುದದ್ದಲ್ಲಾ, ಬದಲಾಗಿ ಜೀವನದ ಸಂವೃದ್ಧಿಗೆ, ಅದರ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಆಧ್ಯಾತ್ಮಿಕವೂ ತಾತ್ವಿಕವೂ ಆದ ಗಾಢ ವಿಷಯಗಳನ್ನು ಹೊಂದಿದೆ. ಯಜ್ಞವೆಂದರೆ ಕೇವಲ ಸಾಂಪ್ರದಾಯಿಕ ಕಾರ್ಯಕ್ಷೇತ್ರಕ್ಕೆ ಸೀಮಿತವಾದ ಲೌಕಿಕಾರ್ಥವಲ್ಲ, ಬದಲಾಗಿ ಸಮಸ್ತ ವಿಶ್ವ ಸೃಷ್ಟಿಯ ಸಂಕೇತವಾಗಿ, ಅತಿಗಹನ ಚಿಂತನೆಗಳ ಪ್ರತೀಕವಾಗಿ, ವಿಶೇಷಾರ್ಥಗಳನ್ನು ಹೊಂದಿ ಶ್ರುತಿಗಳಲ್ಲಿ ಪ್ರಜ್ವಲಿಸಿದೆ.

ವೇದಗಳು ಕೇವಲ ಈಶ್ವರೀಯ ಚಿಂತನ ಮಂಥನಗಳಿಗಷ್ಟೇ ಸೀಮಿತವಾಗಿಲ್ಲ. ಬ್ರಾಹ್ಮಣಗಳ, ಆಗಮ, ಉಪನಿಷತ್ ಗಳಲ್ಲಿ ಹಲವಾರು ಕಡೆ ಉಪದೇಶಿಸಿರುವಂತೆ ಬದುಕಿನ ಸರ್ವವನ್ನೂ ತ್ಯಜಿಸಿ ಸಾಕ್ಷಾತ್ಕಾರವನ್ನು ಪಡೆಯುವಂತೆ ಹೇಳುವ ಬೋಧನೆಗಳು ಅದರಲ್ಲಿಲ್ಲ. ಅಲ್ಲಿನ ಮಂತ್ರಗಳು ಜೀವನವಿರೋಧಿಯಲ್ಲ ಜೀವನೋತ್ಸಾಹವನ್ನು ಗೌರವಿಸುವ ಸಂದೇಶಗಳು. ಬದುಕು ವ್ಯರ್ಥ ಎಂದು ಪಲಾನವಾದಿಯನ್ನು ಪಾಲಿಸುವುದಿಲ್ಲ, ಬದುಕನ್ನು ಸಮರ್ಥವಾಗಿ ಸಮುಲ್ಲಾಸಯುಕ್ತವಾಗಿ ನಡೆಸುವುದನ್ನು ಪ್ರೋತ್ಸಾಹಿಸುತ್ತವೆ. ಬದುಕಿಗಾಗಿ ಧರ್ಮವೇ ಹೊರತು, ಧರ್ಮಕ್ಕಾಗಿ ಬದುಕಲ್ಲವೆಂಬುದನು ಸಂಹಿತೆಗಳ ತತ್ವಸಾರ. ಇಂತಹ ಅನೇಕ ವಿಚಾರಗಳನ್ನು ಲೇಖಕರು ಪುಸ್ತಕದ ಅನೇಕ ಅಧ್ಯಾಯಗಳಲ್ಲಿ ಚಿಂತಿಸಿದ್ದಾರೆ. ಯಜುರ್ವೇದದೊಳಗಿನ ಭೇದಗಳು, ಅಂಗ ಉಪಾಂಗಗಳು, ಯಜ್ಞತತ್ವದ ಮಹತ್ವ, ಕ್ಷಾತ್ರಧರ್ಮ, ಜೀವನತತ್ವ ಮೀಮಾಂಸೆ ಮತ್ತು ಹಲವು ವಿಚಾರಗಳು ಪುಸ್ತಕದ ಅನೇಕ ಅಧ್ಯಾಯಗಳಲ್ಲಿ ಚರ್ಚಿಸಲ್ಪಟ್ಟಿವೆ. ನಾಲ್ಕೂ ವೇದಗಳ ಅರ್ಥರೂಪ ಹಾಗು ಅವುಗಳ ಅಂತಸ್ಸತ್ವದ ಸೂಕ್ಷ್ಮ ಪರಿಚಯಕ್ಕೆ ಶೇಷ ನವರತ್ನರ ಗ್ರಂಥಗಳು ಅಧ್ಯಯನಯೋಗ್ಯ.

ಚಂದ್ರಶೇಖರ್.ಬಿ.ಸಿ

ನಿಮ್ಮ ಟಿಪ್ಪಣಿ ಬರೆಯಿರಿ