ಕನ್ನಡ · ಕುವೆಂಪು

ನನ್ನ ದೇವರು ಮತ್ತು ಇತರ ಕಥೆಗಳು – ಕುವೆಂಪು

#ಪುಸ್ತಕ_ಪಯಣ_೨೦೨೧

ಕೃತಿ: ನನ್ನ ದೇವರು ಮತ್ತು ಇತರ ಕಥೆಗಳು

ಲೇಖಕರು: ಕುವೆಂಪು

ಪ್ರಕಾಶಕರು: ಉದಯರವಿ ಪ್ರಕಾಶನ ಮೈಸೂರು

ತೀರಾ ಇತ್ತೀಚಿನವರೆಗೆ ಕುವೆಂಪುರವರು ಸಣ್ಣ ಕಥೆಗಳನ್ನು ಸಹ ಬರೆದಿದ್ದಾರೆ ಎಂಬ ವಿಷಯ ನನಗೆ ತಿಳಿದಿರಲಿಲ್ಲ. ಹಾಗಾಗಿ ಅವರ ‘ನನ್ನ ದೇವರು ಮತ್ತು ಇತರ ಕಥೆಗಳು’ ಹಾಗೂ ‘ಸನ್ಯಾಸಿ ಮತ್ತು ಇತರ ಕಥೆಗಳು’ ಕಥಾಸಂಕಲನಗಳು ಬಗ್ಗೆ ತಿಳಿದಾಗ ಕುತೂಹಲದಿಂದ ಖರೀದಿಸಿದೆ. ಬಹಳ ಸೂಕ್ಷ್ಮವಾಗಿ ಸುತ್ತಮುತ್ತಲಿನ ಪರಿಸರವನ್ನು, ಜನಜೀವನದ ಹಲವು ಮಜಲುಗಳನ್ನು ವಿವರವಾಗಿ ಅವರು ಚಿತ್ರಿಸುವ ಪರಿಗೆ ಬೆರಗಾಗಿದ್ದ ನಾನು ಸಣ್ಣ ಕಥೆಗಳ ಚೌಕಟ್ಟಿನಲ್ಲಿ ತಮ್ಮ ಸೃಜನಶೀಲತೆಯನ್ನು  ಅವರು ಹೇಗೆ ಹಿಡಿದಿಟ್ಟಿರಬಹುದು ಎಂಬುದನ್ನು ಓದಲು ಕಾತರನಾಗಿದ್ದೆ. ಈ ಕಥಾಸಂಕಲವನ್ನು ಓದಿದ ಬಳಿಕ ನನ್ನಲ್ಲಿದ್ದ ಸಂಶಯಗಳೆಲ್ಲವೂ ನಿವಾರಣೆಯಾಗಿ ಅವರೇಕೆ ಮಹಾಕವಿ, ರಸ ಋಷಿ ಎಂದು ಪರಿಗಣಿಸಲ್ಪಟ್ಟಿದ್ದಾರೆ ಎಂದು ಮನವರಿಕೆಯಾಯಿತು. ಇದರಲ್ಲಿ ಒಟ್ಟು ಎಂಟು ಸಣ್ಣ ಕಥೆಗಳಿವೆ.

#ನನ್ನದೇವರು

ಆಕೆಯ ಗಂಡ ಮದುವೆಯಾದ ವರ್ಷದೊಳಗೆ ತೀರಿಕೊಂಡರು. ಗಂಡನ ಅಣ್ಣ ಒಬ್ಬ ಸರಳ ಸಜ್ಜನಿಕೆಯ ವ್ಯಕ್ತಿ. ಅವಿವಾಹಿತ. ಸದಾ ಓದು ಧ್ಯಾನಗಳಲ್ಲಿ ಮಗ್ನ. ಅವನು ಎಲ್ಲರಂತಿಲ್ಲದ ಕಾರಣ ಊರ ಜನರ ಕಣ್ಣಲ್ಲಿ ಒಬ್ಬ ಹುಚ್ಚ. ಕಾಲ ಉರುಳಿದಂತೆ ಆಕೆಗೆ ತನ್ನ ಭಾವನೆ ಮೇಲೆ ಅನುರಾಗ ಅರಳುತ್ತದೆ. ಅವನು ಸಹ ತನ್ನತ್ತ ಆಕರ್ಷಿತನಾಗಿದ್ದಾನೆ ಅನಿಸುತ್ತದೆ. ‌ಒಂದು ದಿನ ಸಂಯಮ ಮೀರಿ ನೋಡು ರಾತ್ರಿಯ ಹೊತ್ತಿಗೆ ಅವನ ಕೋಣೆಗೆ ಹೋಗುತ್ತಾಳೆ.. ಮುಂದೇನಾಯಿತು? 

ಕಥೆಯ ಈ ಸಾಲುಗಳನ್ನು ನೋಡಿ. “ಎಷ್ಟು ಕರಗಿದರೂ ಅದೆಂದೂ ಹಿಮಾಲಯವೇ. ಅಲ್ಲದೆ ಮಂಜು ಕರಗಿದರೂ ಅದು ಪವಿತ್ರವಾದ ಗಂಗಾ ನದಿಯಾಗದೆ ಕೊಳಕು ಕಾಲುವೆಯಾಗುವುದೇ? ಗಂಗೆ ಕೊಳಕು ಕಾಲುವೆಯನ್ನು ತೊಳೆದು ಪುನೀತವನ್ನಾಗಿ ಮಾಡದೆ ತಾನೇ ಎಂದಿಗಾದರೂ ಕೊಳಕಾಗುವುದೇ?” ಎಂತಹಾ ಅರ್ಥಗರ್ಭಿತ ಸಾಲುಗಳು…. ಎಷ್ಟು ಸರಳವಾಗಿ ನಮ್ಮ ವ್ಯಕ್ತಿತ್ವವು ಕೆಟ್ಟದನ್ನು ಸಹ ಪರಿಶುಧ್ಧವಾಗಿ ಮಾರ್ಪಡಿಸಬಹುದು ಎಂಬುದನ್ನು ಹೇಳಿದ್ದಾರೆ. ಆದರೆ ವಿಚಾರಶುಧ್ಧಿ ಇರಬೇಕಷ್ಟೇ…. ತನ್ನ ಜೊತೆಗೆ ಕೆಟ್ಟ ವಿಚಾರಗಳು ಆಲೋಚನೆಗಳನ್ನು ಸಹ ಶುಭ್ರಗೊಳಿಸಿ ನಿವಾರಿಸಬಲ್ಲಂತಹ ವ್ಯಕ್ತಿತ್ವದ ವ್ಯಕ್ತಿ ದೈವತ್ವವನ್ನು ಪಡೆಯಬಹುದು ಅನ್ನುವುದನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಹೇಳಲು ಸಾಧ್ಯ…..

#ಔದಾರ್ಯ

ಯಾವ ವ್ಯಕ್ತಿಗೆ ಎಷ್ಟು ಔದಾರ್ಯ ತೋರಬೇಕು ಎಂಬುದು ಸಹ ಜಾಣತನದ ಲೆಕ್ಕ. ಅಳತೆ ಮೀರಿದ ಔದಾರ್ಯವನ್ನು ಯಾರಿಗೂ ತೋರಬಾರದು. ಅದೇ ನಮಗೆ ಉರುಳಾಗುವ ಸಂಭವಗಳು ಜಾಸ್ತಿ ಎಂದು ಈ ಕಥೆ ಹೇಳುತ್ತದೆ. ತುಂಗಾ ನದಿಯ ರಾಮ ತೀರ್ಥದಲ್ಲಿ ನಿರೂಪಕ ಮತ್ತು ಅವರ ಮೇಷ್ಟರ ನಡುವೆ ನಡೆಯುವ ಸಂಭಾಷಣೆ, ಅಪಾತ್ರರಿಗೆ ಅತಿಯಾದ ಔದಾರ್ಯ ತೋರಿದಾಗ ಉಂಟಾದ ಅವಘಡಗಳನ್ನು ಹೇಳುತ್ತದೆ. ಇಲ್ಲಿ ನಮ್ಮ ಜೀವನದ ಪ್ರಾಮುಖ್ಯತೆ ಮತ್ತು ಔಚಿತ್ಯವನ್ನು ಜಿಜ್ಞಾಸೆಗೆ ಒಳಪಡಿಸುವ ಈ ಉಪಮೆಯನ್ನು ನೋಡಿ.

“ದೂರ ಪಶ್ಚಿಮ ದಿಕ್ಕಿನಿಂದ ಪರ್ವತ ಕಂದರಗಳ ನಡುವೆ ನುಗ್ಗಿ ಬಂದು ಕಾಣಿಸಿಕೊಂಡು ಮತ್ತೆ ಪೂರ್ವದಿಕ್ಕಿನ ಪರ್ವತಗಳ ಇಡುಕಿನಲ್ಲಿ ನುಸಿದು ಕಣ್ಮರೆಯಾಗುವ ತುಂಗೆ ಅನಂತದಿಂದ ಮಿಂಚಿ ಮರಳಿ ಅನಂತದಲ್ಲಿ ಮರೆಯಾಗುವ ದಿವ್ಯ ಭಾವದಂತೆ ಮಂಗಳ ಮನೋಹರವಾಗಿ ತೋರಿದಳು”

ಮನುಜ ಜನ್ಮವೂ ಅಷ್ಟೇ… ಎಲ್ಲಿ ಮೊದಲಾಗಿ ಎಲ್ಲಿಗೆ ಕೊನೆಯಾಗುವುದು ಗೊತ್ತಿಲ್ಲ. ಪ್ರಕಟವಾಗಿ ಹರಿಯುವ ನದಿಗೆ ಇರುವ ಪ್ರಾಮುಖ್ಯತೆ ನಾವು ಸವೆಸುವ ದಿನಗಳಿಗಿರುತ್ತದೆ. ಆದರ್ಶ ಔದಾರ್ಯಗಳಲ್ಲಿ ಕೊಚ್ಚಿ ಹೋಗದೆ ಅಜ್ಞಾತವಾಗಿ ಅನಂತವನ್ನು ಸೇರುವುದು ಉತ್ತಮ ಅಲ್ಲವೇ…. 

#ಆದರ್ಶಸಾಧನೆ

ಪ್ರತಿಯೊಬ್ಬ ವ್ಯಕ್ತಿಗೂ ತಾನು ಬದುಕಿನಲ್ಲಿ ಏನಾದರೂ ಸಾಧಿಸಬೇಕು… ತನ್ನದು ಇತರರಿಗಿಂತ ಹೆಚ್ಚು ಹೆಚ್ಚು ಆದರ್ಶ ಸಾಧನೆಯಾಗಿರಬೇಕು ಎಂಬ ಆಕಾಂಕ್ಷೆ ಇರುತ್ತದೆ. ಆದರೆ ವಾಸ್ತವವು ನಮ್ಮ ಮುಂದೆ ಒಡ್ಡುವ ಸವಾಲುಗಳ ಮುಂದೆ ಆದರ್ಶಗಳು ಒಂದೊಂದಾಗಿ ಕುಸಿಯಲಾರಂಭಿಸುತ್ತವೆ. ಆದರ್ಶ ಸಾಧನೆಗೆ ಉತ್ತಮ ಮಾರ್ಗ ಎಂಬುದು ಇರುವುದೇ ಅಥವಾ ವಾಸ್ತವದಲ್ಲಿ ಸ್ವಾಭಾವಿಕವಾಗಿ ಜೀವಿಸಿಕೊಂಡು,ಲೋಕರೂಢಿಯ ಬದುಕನ್ನು ಬದುಕುತ್ತಾ ಕೆಸರಿನಲ್ಲರುವ ಪದ್ಮದಂತೆ ಯಾವುದಕ್ಕೂ ಅಂಟಿಕೊಳ್ಳದೆ ಸಾಧನೆ ಮಾಡಬಹುದೇ? ಸನ್ಯಾಸ ಬ್ರಹ್ಮಚರ್ಯದಂತಹ ಮಾರ್ಗದಲ್ಲಿ ನಡೆದರೆ ಅದು ಉತ್ತಮವೇ ಅಥವಾ ಸಂಸಾರಿಯಾಗಿ ನಾಲ್ಕು ಜನರಿಗೆ ಹಿತವಾಗುವಂತೆ ಬಾಳುವುದು ಉತ್ತಮವೇ? ನಿರೂಪಕನ ಈ ಮಾತುಗಳನ್ನು ಕೇಳಿ…ನಿರ್ಧಾರ ನಮ್ಮ ವಿವೇಚನೆಗೆ ಬಿಟ್ಟಿದ್ದು….. “ನೀರಿನಲ್ಲಿ ಇರಬೇಕಾದ ಮೀನು ಭೂಮಿಯ ಪ್ರಾಣಿಗಳನ್ನು ನೋಡಿ ನೆಲದ ಮೇಲೆ ಓಡಾಡುವುದೇ ನೀರಿನಲ್ಲಿ ಈಜುವುದಕ್ಕಿಂತ ಉತ್ತಮ ಆದರ್ಶವೆಂದು ತಿಳಿದು ನೆಗೆದರೆ ಆತ್ಮಹತ್ಯೆ ಮಾಡಿಕೊಂಡಂತೆ ಆಗುವುದಿಲ್ಲವೇ? ಅಸ್ವಾಭಾವಿಕವಾದುದೆಲ್ಲವೂ ಅಧರ್ಮವಲ್ಲವೇ?”

#ಧನ್ವಂತರಿಚಿಕಿತ್ಸೆ

ತಮಗೆ ಆಗಾಗ ಕೇಳಿಬರುವ ಹೃದಯವಿದ್ರಾವಕ ಆರ್ತನಾದದ ಮೂಲವನ್ನು ಹುಡುಕುತ್ತಾ ಋಷಿಗಳಾದ ವಿಶ್ವಾಮಿತ್ರ ಮತ್ತು ಪರಶುರಾಮರು ನಾರದ ಮಹರ್ಷಿಯ ಸಲಹೆಯಂತೆ ನಂದನವನದಿಂದ ಭೂಮಿಗೆ ಬರುತ್ತಾರೆ… ಭೂಮಿಯ ಮೇಲಿರುವ ಹಲವಾರು ಆಧುನಿಕ ಸೌಲಭ್ಯಗಳು ಸೌಕರ್ಯಗಳು ಮತ್ತು ಸಂಸ್ಕೃತಿ ನಾಗರಿಕತೆಯ ಹೆಸರಿನಲ್ಲಿ ಅಳಿಯುತ್ತಿರುವ ಮೌಲ್ಯಗಳನ್ನು ನೋಡಿದಾಗ ದಿಗ್ಭ್ರಾಂತರಾಗುತ್ತಾರೆ. ತಾವು ನಗರದಲ್ಲಿ ಇರುವಷ್ಟು ದಿವಸ ಕೇಳದ ಆರ್ತನಾದ ಅಲ್ಲಿಂದ ಹೊರ ಹೋದಂತೆ ಮತ್ತೆ ಕೇಳಲಾರಂಭಿಸುತ್ತದೆ. ಬೆನ್ನಟ್ಟಿ ಹೋದವರಿಗೆ ಒಂದು ಗುಡಿಸಲಿನಿಂದ ಶಬ್ದವು ಬರುತ್ತಿದೆ ಎಂಬುದು ಮನವರಿಕೆಯಾಗುತ್ತದೆ. ಒಳಗಡೆಗೆ ನೋಡಿದಾಗ ಒಂದು ರೈತ ಕುಟುಂಬವು ದಟ್ಟ ದಾರಿದ್ರ್ಯದಲ್ಲಿ ಬದುಕುತ್ತಿರುತ್ತದೆ. ಹಾಗಾದರೆ ಆರ್ತನಾದ ಏಕೆ ಬರುತ್ತಿತ್ತು? ರೈತನಿಗೆ ಅಂಟಿಕೊಂಡಿದ್ದ ರೋಗವೇನು? ಸ್ವರ್ಗಕ್ಕೆ ಕೇಳುವ ಅವನ ಕೂಗು ನಗರದಲ್ಲಿನ ಅಬ್ಬರದ ನಡುವೆ ಏಕೆ ಮರೆಯಾಯಿತು? ಆ ರೈತನ ರೋಗವು ವಾಸಿಯಾಯಿತೇ?ಕಥೆಯನ್ನು ಓದಿ ನೋಡಿ…. ಈ ಸಂಕಲನದ ಅತ್ಯುತ್ತಮ ಕಥೆ. ಸಂವೇದನಾಶೀಲತೆಯನ್ನು ಕಳೆದುಕೊಂಡ ಸಮಾಜದ ಅಧಃಪತನವನ್ನು ಕುಟುಕುವ ಈ ಕಥೆ ಇಂದಿಗೂ ಪ್ರಸ್ತುತ… ಮತ್ತು ಲೇಖಕರ ಕಾಲಘಟ್ಟಕ್ಕೂ ಇಂದಿಗೂ ಒಂದು ಚೂರು ಸಹ ವ್ಯತ್ಯಾಸ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಏಳೆಂಟು ಪುಟಗಳಿಷ್ಟಿರುವ ಕಥೆಗಳು ಮಲೆನಾಡಿನ ಜೀವನ ಚಿತ್ರದ ಜೊತೆಗೆ ಜೀವನ ಮೌಲ್ಯಗಳ ಕುರಿತಾಗಿ ಒಟ್ಟು ಸಮಾಜವು ಯಾವ ದಿಕ್ಕಿನಲ್ಲಿ ದಾರಿ ತಪ್ಪಿದೆ ಮತ್ತು ಅದು ಹೇಗೆ ನಡೆಯಬೇಕಿತ್ತು ಎಂಬುದನ್ನು ತಿಳಿಸಿ ವಿವೇಚನೆಗೆ ಹಚ್ಚುತ್ತದೆ.

ನಮಸ್ಕಾರ,

ಅಮಿತ್ ಕಾಮತ್

ಕನ್ನಡ · ಕುವೆಂಪು

‘ಕಾನೂರು ಹೆಗ್ಗಡತಿ’ – ಕುವೆಂಪು

ನಾನು ಓದಿದ ಪುಸ್ತಕ :- #ಕಾನೂರುಹೆಗ್ಗಡತಿ

ಲೇಖಕರು :- #ಕುವೆಂ_ಪು.

#ಮಿಥ್ಯೆಯ_ದೃಷ್ಟಿ_ಕ್ಷಣಿಕ #ಸತ್ಯ_ಪಥ_ಎಂದಿಗೂ_ಅಮರ ಕಾದಂಬರಿಯನ್ನು ಒಂದು ಕಾಲಘಟ್ಟದಲ್ಲಿ ದಾಖಲಿಸಬೇಕಾದರೆ ಅದರ ಸಂಪೂರ್ಣ ಅರಿವು.. ಬಹು ದೃಷ್ಟಿಕೋನದ ಅಗತ್ಯ ಹಾಗೇ ಕಥಾ ಪರಿಸರದ ಆಳವಾದ ಜ್ಞಾನ ಲೇಖಕರಿಗೆ ಇರಬೇಕು.. ಎನ್ನುವುದನ್ನು ಸಾರಿ ಹೇಳಿದ ಪುಸ್ತಕವಿದು.. ಇಲ್ಲಿ ಯಾವುದೂ ಒಂದು ವಿಚಾರವನ್ನು.. ಸಿದ್ದಾಂತವನ್ನು.. ವ್ಯವಸ್ಥೆಯನ್ನು.. ನಂಬಿಕೆಯನ್ನು ಅಥವಾ ಜಾತಿಯನ್ನು ವಿಜೃಂಭಿಸಿಲ್ಲ.. ಅಥವಾ ತುಚ್ಛಿಕರಿಸಿಯೂ ಇಲ್ಲ.. ಬಹುತೇಕ ಎಲ್ಲಾ ಅವಕಾಶಗಳು ಇದ್ಯಾಗ್ಯೂ... ಅವುಗಳನ್ನು ಹೊರತು ಪಡಿಸಿ ಯಥಾವತ್ತಾಗಿ ಜನಜೀವನವನ್ನು ದಾಖಲಿಕರಣ ಮಾಡಿದ ರೀತಿಗಾಗಿಯೇ ಕುವೆಂಪು.. #ರಾಷ್ಟ್ರಕವಿ... ಹಾಗಾಗಿ .. ಇವರು #ವಿಶ್ವಮಾನವ_ಸಂದೇಶವನ್ನು ಸಾರಿದ ಕವಿ... ಇದನ್ನು ಈಗೀನ ಪೀಳಿಗೆಯ ಅವರ ಅಭಿಮಾನಿಗಳು ಎನಿಸಿಕೊಂಡವರು ಅರಿಯಬೇಕಾದ ಸತ್ಯ.. ಅದು ಅನೀವಾರ್ಯ... ಸಹ..

ಇಲ್ಲಿ ಜಾತಿಯ ಚಿತ್ರಣವಿದೆ.. ಆದರೆ ವಿಜೃಂಭಿಸಿಲ್ಲ..‌ ಜಾತ್ಯತೀತ ಬೌದ್ಧ ನಿಲುವಿದೆ.. ಆದರೆ ಯಾವುದೂ ಆಚಾರಗಳನ್ನು ಕೀಳಾಗಿಸಿಲ್ಲ.. ಸರಿಯಾದ ಆಚರಣೆಯನ್ನು ಸುಂದರವಾಗಿ ಹಾಗೂ ತಪ್ಪು ನಡೆಗಳನ್ನು ಖಂಡಿಸಿ ಚಿತ್ರಿಸಿದ್ದಾರೆ.. #ಮೌಡ್ಯಗಳನ್ನುತುಚ್ಛಿಕರಿಸಿದರೆ.. #ಮೌಲ್ಯಗಳನ್ನುಉನ್ನತಿಕರಿಸಿದ್ದಾರೆ … ಹಾಗಾಗಿ ಇಷ್ಟು ವರ್ಷಗಳಾದ ಮೇಲೂ ಕನ್ನಡ ಸಾರಸ್ವತ ಲೋಕದಲ್ಲಿ ಶ್ರೇಷ್ಟತೆಯ ಸಾರಿ .. ಗೌರವ ಮೂಡಿಸುತ್ತಿರು ಕೃತಿ ಇದು..

ಕಾದಂಬರಿಯೊಳಗೆ..

ಮಲೆನಾಡು ಎಂಬ ಕೌತುಕದ ಅಭೇದ್ಯ, ಅಗಾಧ ಹಾಗೂ ಶ್ರೀಮಂತವಾದ ಕಾಡಿನ ಜೀವನದಲ್ಲಿ ಆಧುನಿಕತೆ ಎಂಬ ಗಾಳಿ ಬೀಸಲು ಪ್ರಾರಂಭವಾದ ಸಮಯದಲ್ಲಿ ಆ ಜನಜೀವನವನ್ನು ಸುಂದರವಾಗಿ ನೈಜವಾಗಿ ಯಥಾವತ್ತಾಗಿ ದಾಖಲಿಸಿದ ಕೃತಿ ಇದು.. ಹಾಗಾಗಿ ಇದು ಒಂದು #ಮೈಲಿಗಲ್ಲಿನ_ಕೃತಿ.. ಮಲೆನಾಡಿನ ಪ್ರಮುಖ ಜನಾಂಗವಾದ ಒಕ್ಕಲಿಗರ ಜೀವನವನ್ನು ಕೇಂದ್ರಿಕರಿಸಿ ಸುತ್ತಮುತ್ತಲಿನ ಪೂರ್ಣ ಸಮಾಜವನ್ನು ಹಾಗೇ ಇಲ್ಲಿನ ಸುಂದರ ಪರಿಸರವನ್ನು ಹೊರ ಪ್ರಪಂಚಕ್ಕೆ ತೆರೆದಿಟ್ಟ ಕೃತಿ ಇದು... ಹಾಗೇ ಇದು ಪೂರ್ಣ..‌ ಇಲ್ಲಿ ಕೊರತೆಗಳಿಲ್ಲ.. ‌‌ ಮೈಸೂರಿನಿಂದ ಊರಿಗೆ ಬರುವ ಹೊವಯ್ಯ ಹಾಗೂ ರಾಮಯ್ಯನೊಂದಿಗೆ ತೀರ್ಥಹಳ್ಳಿಯ ಕಲ್ಲುಸಾರದೊಂದಿಗೆ ತೆರೆದುಕೊಳ್ಳುವ ಕಥೆ ಸೀತೆಯ ಪ್ರೇಮದೊಂದಿಗೆ ವಿಸ್ತಾರವಾಗುತ್ತದೆ.. ಇಲ್ಲಿ ಈ ಕೃತಿಯನ್ನು ಒಂದು ಸುಂದರ ಪ್ರೇಮ ಕಾವ್ಯವಾಗಿಸಿದ್ದಾರೆ ... ಇಲ್ಲಿ‌ ವಿರಹವಿದೆ... ತ್ಯಾಗವಿದೆ..‌ಆಸೆಯೂ ಇದೆ.. ಅಂತಿಮವಾಗಿ ಪ್ರೀತಿ ದಾಂಪತ್ಯದಲ್ಲಿ ಅಂತ್ಯವಾಗದೇ ಹೋದಾಗ ದೈವಿಕ ಸಂಭಂದಗಳಲ್ಲಿ ಯಶಸ್ವಿಗೊಳಿಸಿದ್ದಾರೆ..

ಪೂರ್ಣ ಕಥೆಯಲ್ಲಿ ಸಾತ್ವಿಕ ಗುಣಗಳನ್ನು ಹೂಂದಿದ, ಮೌಢ್ಯಗಳ ವಿರುದ್ಧ ಸಾಗುತ್ತಾ, ಹೊಸ ಪಥ ಬದಲಾಯಿಸುವ ವಿಚಾರದ, ಕಾಲಕ್ಕೆ ತಕ್ಕಂತೆ ಬದಲಾವಣೆಯ ಹಂತದ ಪ್ರತೀಕವಾಗಿ ಚಿತ್ರಿಸಿದ #ಹೂವಯ್ಯನ ಪಾತ್ರ ಒಂದು ತೂಕವಾದರೆ.. ತನ್ನ ದೌಷ್ಟ್ರ್ಯ , ದಬ್ಬಾಳಿಕೆ, ರಾಕ್ಷಸೀ ಪವೃತ್ತಿಯ ವಿಜೃಂಭಣೆಯ ಅಂದಿನ ಬಹು ಸಂಖ್ಯಾತ ಶ್ರೀಮಂತ ಮೇಲ್ವರ್ಗದ ಪ್ರತೀಕವಾಗಿರುವ #ಚಂದ್ರಯ್ಯಗೌಡರದು ಮತ್ತೂಂದು ತೂಕ..‌ ಇವರಿಬ್ಬರ ನಡುವಿನ ತಾರ್ಕಿಕ ದ್ವಂದ್ವವೇ.. ಕಥಾ ಹಂದರ.. ಒಂದು ಭವಿಷ್ಯದ ಆಶಾಭಾವ.. ಇನ್ನೂಂದು ಸರ್ವನಾಶದ.. ಪ್ರತೀಕ..

ಅನೇಕ ಶ್ರೇಷ್ಠ ಪಾತ್ರಗಳು.. ವಿಧಿಯ ಹಣೆಬರಹದಂತೆ ಪ್ರೀತಿಸಿದವನು ಸಿಗದಿದ್ದರೂ ತನ್ನ ಸ್ವಚ್ಛ ಮುಗ್ಧ ಮನಸ್ಸಿನಿಂದಾಗಿ ಅದೇ ಛಲದಿಂದಾಗಿ ಗೆಲ್ಲುವ ಸೀತೆ ಇಲ್ಲಿ ಬದಲಾಗುತ್ತಿರು ಸ್ತ್ರೀಯ ಪ್ರತಿನಿಧಿಯಾದರೆ.. ನಂಬಿದ ವಿಚಾರಗಳೆಡೆ ವಿಮುಖನಾಗಿ ನಾಶವಾಗುವ ರಾಮಯ್ಯ.. ತನ್ನದೇ ತಪ್ಪುಗಳಿಂದ ಅಧಃಪತನ ಕಾಣುವ ಪಾತ್ರವಾಗಿ ಸುಬ್ಬಮ್ಮ ಹೆಗ್ಗಡತಿಯನ್ನು ಚಿತ್ರಿಸಲಾಗಿದೆ.. ತಾಯಿಯ ನೈಜ ಪ್ರೀತಿಯ ನಾಗಮ್ಮ.. ಸಮಯ ಸಾಧಕತನದ ಸೇರೆಗಾರ ರಂಗಪ್ಪ ಶೆಟ್ಟಿ.. ಹಾಗೇ ಮುತ್ತಳ್ಳಿಯ ಶ್ಯಾಮಯ್ಯ ಗೌಡರು.. ಸೀತೆಮನೆ ಸಿಂಗಪ್ಪ ಗೌಡರು..ಗಂಗೆ.. ಚಿನ್ನಯ್ಯ.. ಪುಟ್ಟಮ್ಮ.. ಬಾಡೂಟದ ಸೋಮ.. ಕಳ್ಳುಗುತ್ತಿನ ತಿಮ್ಮ.. ಕಳ್ಳಿನ ಬೈರ.. ವೆಂಕಪ್ಪಯ್ಯ.. ಕಳ್ಳಿನ ಅಂಗಡಿ ಅಲ್ಲಿನ‌ ಪಾತ್ರಗಳು.. ಹೀಗೆ ಒಂದೇ ಎರಡೇ.. ಎಲ್ಲಾ ಪಾತ್ರಗಳು.. ಮನಸ್ಸಿನ ಒಳಗೆ ಆಳವಾಗಿ ಬೇರೂರುತ್ತವೆ..

ಇನ್ನು #ಪುಟ್ಟಣ್ಣನ ಪಾತ್ರ ಹಾಗೂ ಅದನ್ನು ಬಳಸಿದ ಬಗೆ ಬಹಳ ವಿಶೇಷ.. ಅನೇಕ ಶತಮಾನಗಳಿಂದ ಮಲೆನಾಡಿನ #ಕಾಡಿನ_ಬೇಟೆಗೆ ಇತಿಹಾಸಗಳಿದೆ.. ಹಾಗೂ ಅಲ್ಲಿ ಸವಾಲಿದೆ.. ಸಾಹಸವಿದೆ.. ಶೌರ್ಯವಿದೆ..‌ ಶ್ರೇಷ್ಟತೆಯಿದೆ.. ಹಾಗೇ ದುಃಖವಿದೆ.. ವಿಶೇಷವಾಗಿ ಹುಚ್ಚಿದೆ.. ಇವುಗಳೆಲ್ಲಾ ಕೇವಲ‌ ಮಾತುಗಳಲ್ಲಿ ಮಾತ್ರಾ ಹರಿದಾಡುತ್ತಿತ್ತು.. ಬಹುಷಃ ಮೊದಲ ಬಾರಿಗೆ ಪುಸ್ತಕವಾಗಿ ಅಧಿಕೃತ ದಾಖಲಾದ ಪುಸ್ತಕ ಇದಿರಬಹುದು.. ಪುಟ್ಟಣ್ಣನ ಹಾಗೂ ಅವನ ನಾಯಿಗಳ ಮುಖಾಂತರ ಪಾತ್ರದಲ್ಲಿ ಸಂಪೂರ್ಣ ಇನ್ನೂಂದು ಬೇಟೆಯ ಜಗತ್ತನ್ನು ನಮ್ಮೆದುರು ತೆರೆದಿಟ್ಟಿದ್ದಾರೆ..

ಪರಿಸರವನ್ನು ಅಲ್ಲಿನ ಪ್ರಾಣಿ ಪಕ್ಷಿಗಳನ್ನು ಚಿತ್ರಿಸಿರುವ ಬಗೆಗೆ ಈ ಪುಸ್ತಕವನ್ನು ಕಾದಂಬರಿಗಿಂತಲೂ ಕಾವ್ಯವೇನೂ ಅನ್ನಿಸುವಂತೆ ಮಾಡಿದ್ದಾರೆ.. ಹಾಗೇ ಕೇವಲ ಇದು ದೊಡ್ಡವರ ಜಗತ್ತಲ್ಲ.. ಮಕ್ಕಳಿಗೂ ಬಹುಮುಖ್ಯ ಪಾತ್ರವಿದೆ.. #ವಾಸು ಹಾಗೂ #ಲಕ್ಷ್ಮೀಯ ಮುಖಾಂತರ ಮಕ್ಕಳ ಮುಗ್ಧ ಮನಸ್ಸಿನ ಚಿತ್ರಣ.. ಅವರ ಚಟುವಟಿಕೆಗಳು.. ಪ್ರಶ್ನೆಗಳು..‌ಕನಸಿನ ಲೋಕವನ್ನು ಪರಿಚಯಿಸಿದ ಪರಿಗೆ ಲೇಖಕರು ಮಾತ್ರಾ ಸಾಟಿಯೇನೂ…

#ಅಂತಿಮವಾಗಿ…ಕಲ್ಲುಸಾರದೊಂದಿಗೆ ಶುರುವಾಗಿ ಕವಿಶೈಲದ ಪರಿಸದವರೆಗೆ ನಾವು ಕಥೆಯೊಂದಿಗೆ ಚಲಿಸಿ ಓದಿ ಮುಗಿಸಿದ ಮೇಲೆ ಕವಿಶೈಲದಲ್ಲಿ #ಬುದ್ಧನಾಗಿ ಹೂವಯ್ಯನ ಬದಲು ಕು.ವೆಂ.ಪು. ಕಂಡರೆ.. ಅದು ಲೇಖಕರಿಗೆ ನಾವು ನೀಡುವ ಗೌರವ.. ಅಲ್ಲವೇ... ಹಾಗೇ .. ಅದೇ ಈ ಮೇರು ಕೃತಿಯ ಮಾನದಂಡವೂ ಇರಬಹುದೇನೂ...

ಬಹುಷಃ

ಕಾರಂತರಕಾದಂಬರಿಗಳಜೀವನ_ಪ್ರೀತಿ…

ಬೈರಪ್ಪರಕಾದಂಬರಿಗಳಸಾಮಾಜಿಕದೃಷ್ಟಿ.. ಎರಡು ಮಿಶ್ರಿತವಾಗಿ ಈ ಕಾದಂಬರಿಯನ್ನು ಮೊದಲೇ ರಚಿಸಿರುವುದರಿಂದ.. ಕು.ವೆಂ.ಪು #ರಸಋಷಿ..


ಪ್ರಕಾಶಕರು :- ಉದಯರವಿ ಪ್ರಕಾಶನ. ಮೈಸೂರು ಮುದ್ರಣದ ವರ್ಷ:- 2002
ಹಣ :- ₹.200

ದೀಪಕ್ ಹುಲ್ಕುಳಿ

ಕನ್ನಡ · ಕುವೆಂಪು · Uncategorized

‘ಸನ್ಯಾಸಿ ಮತ್ತು ಇತರ ಕಥೆಗಳು’ – ಕುವೆಂಪು

ನಾನು ಓದಿದ ಪುಸ್ತಕ :- #ಸನ್ಯಾಸಿಮತ್ತುಇತರಕಥೆಗಳು ಲೇಖಕರು :- #ಕುವೆಂ_ಪು

ವಿಭಿನ್ನ_ಕಥೆಗಳು

ಎರಡು ಮಹಾ ಕಾದಂಬರಿ ಬರೆದ ಲೇಖಕರು ಸಣ್ಣ ಕಥೆಗಳನ್ನು ಸಹ ಹೇಗೆ ಬರೆದಿದ್ದಾರೆ ಎಂಬ ಕುತೂಹಲದಿಂದ ಈ ಪುಸ್ತಕ ಎತ್ತಿಕೊಂಡೆ.. ಸಹಜವಾಗಿ ಒಂದಷ್ಟು ಕಥೆಗಳು ಖುಷಿ ನೀಡಿದವು.. ಆದರೂ ಕುವೆಂಪುರವರನ್ನು ಇಷ್ಟು ಚಿಕ್ಕದಾಗಿ ಓದುವುದು ಕಷ್ಟ.. ಆದರೂ ಚೆನ್ನಾಗಿದೆ.

#ಸನ್ಯಾಸಿ ಈ ಕಥೆ ಸಂಸಾರ ತೊರೆದು ಬಂದ ಗಂಡನನ್ನು ಮಾರು ವೇಷದಲ್ಲಿ ಒಲಿಸುವ ಹೆಣ್ಣಿನ ಕಥೆಯಿದೆ.. #ಕ್ರಿಸ್ತನಲ್ಲಪಾದ್ರಿಯಮಗಳು ಈ ಕಥೆಯಲ್ಲಿ ಹಿಂದುತ್ವದ ಆದರ್ಶವನ್ನು ಬೆನ್ನು ಹತ್ತಿ ಸೋಲಿನ ಜೀವನದ ಯುವಕನ ಕಥೆ ಈಗೀನ ಮತಾಂತರ ಧರ್ಮಾಂಧತೆಯ ದ್ಯೋತಕವೂ ಆಗಿರುವುದು ಆಶ್ಚರ್ಯ..#ಈಶ್ವರನೂ_ನಕ್ಕಿರಬೇಕು ಇಂದಿನ ಜಾಲತಾಣಗಳ ಮದುವೆಗಳನ್ನೂ.. 'ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂಬ ಗಾದೆಯನ್ನು ನೆನಪಿಸಿದರೆ.. #ಆರಾಣೆ_ಮೂರುಕಾಸು ನವಾಬನ ಸಂಕಷ್ಟಕ್ಕೆ ಸಹಾಯ ಮಾಡಿದ ಕಥೆಯಿದೆ.. #ಹೋಳಿಗೆ_ಪ್ರತಿಜ್ಞೆ ಬಾಲ್ಯದ ಶಾಲೆಯೊಳಗಿನ ಮೋಜಿನ ಪ್ರಸಂಗ ನೆನಪಿಸಿದರೆ.. #ಮಾಯದ_ಮನೆ ಇಂತಃಹ ದೆವ್ವದ ಕಥೆ ಕುವೆಂಪು ಲೇಖನದಿಂದ ಬಂದಿರುವುದು ಅಚ್ಚರಿಯ ವಿಷಯ.. ಹಾಗೇ ಕಥೆ ಚೆನ್ನಾಗಿದೆ. ಇನ್ನು #ದೆವ್ವದ_ಕಥೆ ಮಲೆನಾಡಿನ ಅಂದಿನ ಒಕ್ಕಲು ಮನೆಗಳ ಸಾಮಾನ್ಯ ಆದರೂ ವಿಭಿನ್ನವಾಗಿ ಚಿತ್ರಿಸಿದ್ದಾರೆ..

ಆದರೆ ಪೂರ್ಣ ಪುಸ್ತಕದಲ್ಲಿ ಕುವೆಂಪುರವರು ಕಾಣುವುದೇ #ಯಾರೂಅರಿಯದವೀರ ಕಥೆಯ‌ಲ್ಲಿ.. ಅಸಾಧ್ಯವಾದ ಮಳೆಗೆ ಸಿಲುಕಿ ಮನೆ ಕುಸಿತಕ್ಕೆ ಒಳಗಾಗುವ ಶಿವನೂರು ಸುಬ್ಬಣ್ಣ ಗೌಡರ ಮನೆ.. ಅಲ್ಲಿಂದ ಪಾರಗುವ ಪರಿ.. ಆ ತುಂಬಿದ ಹೊಳೆ..‌ ದೋಣಿ ಭಾರ ತಡೆದುಕೊಳ್ಳದೇ ಇದ್ದಾಗ ಹೊಳೆಗೆ ಯಾರಿಗೂ ತಿಳಿಯದೇ ಹಾರುವ ಅವರ ಕೆಲಸದ ಆಳು ಲಿಂಗ ಅವನ ವ್ಯಕ್ತಿತ್ವ.. ಕಥೆಯಲ್ಲಿನ ಪಾತ್ರಗಳು ಘಟನೆಗಳು ಹಾಗೂ ಸಂಭಾಷಣೆ ಎಲ್ಲವೂ ಲೇಖಕರ ಕಾದಂಬರಿಯನ್ನು ನೆನಪಿಸುತ್ತದೆ..

ಅಂತಿಮವಾಗಿ.. #ಶ್ರೀಮನ್ಮೂಕವಾಗಿತ್ತು ತಾಯಿ ಮಗುವಿನ ಸಂಭಂದವನ್ನು ಒಂದು ಎಮ್ಮೆ ಮತ್ತು ಕರುವಿನ ಮುಖಾಂತರ ಉದಾಹರಿಸಿರುವ ಪರಿಯೇ ಅನನ್ಯ.. ಹಳೇಪೈಕದ ರಂಗನ ಪಾತ್ರದಲ್ಲಿ ಅಂದಿನ ರೈತಾಪಿ ಜೀವನವನ್ನು ಅದರ ಸುತ್ತಮುತ್ತಲಿನ ಜಗತ್ತನ್ನು ತರೆದಿಟ್ಟ ಪರಿ ಪೂರ್ಣ ಪುಸ್ತಕಕ್ಕೆ ಕಳಶಪ್ರಾಯವಾಗಿದೆ.. ಸಣ್ಣ ಕಥೆಯಲ್ಲೂ ಕುವೆಂಪು ಪೂರ್ಣವಾಗಿದ್ದಾರೆ.. ಅದೇ ಅದ್ಭುತ..

ಈ ಪುಸ್ತಕದ ಕೆಲವು ಕಥೆಗಳು ಇಂದಿಗೂ ಪ್ರಸ್ತುತವಾಗಿರುವುದು ಕುವೆಂಪುರವರ ದೃಷ್ಟಿ ಭವಿಷ್ಯದ ಕಡೆ ಚಾಚಿರುವುದು ವಿಶೇಷವಿನಿಸುತ್ತದೆ ಹಾಗೇ ಲೇಖಕರ ಬೃಹತ್ ಕಾದಂಬರಿ ಓದುವ ಮೊದಲು ಈ ರೀತಿಯ ಕಥೆಗಳನ್ನು ಓದಿಕೊಂಡರೆ ಅದರೊಳಗೆ ಪ್ರವೇಶಿಸಲು ಸುಲಭವಾಗುತ್ತದೆ, ಅಥವಾ ಆ ಮಹಾ ಪುಸ್ತಕಗಳನ್ನು ಓದಲು ಕಷ್ಟವಾಗುವ ಓದುಗರಿಗೆ ಇಂತಹಃ ಪುಸ್ತಕಗಳು ಕುವೆಂಪುರವರ ರುಚಿ ಹಚ್ಚಿಸಲು ಸಹಾಯ ಮಾಡಬಹುದು.

ದೀಪಕ್ ಹುಲ್ಕುಳಿ

ಪ್ರಕಾಶಕರು :- ಉದಯರವಿ ಪ್ರಕಾಶನ
ಮುದ್ರಣದ ವರ್ಷ:- 2020
ಹಣ :- ₹.63/-
ದೂರವಾಣಿ :- 0821 2511707

ಕನ್ನಡ · ಕುವೆಂಪು

‘ಸನ್ಯಾಸಿ ಮತ್ತು ಇತರ ಕಥೆಗಳು ಲೇಖಕರು’ – ಕುವೆಂಪು

ನಾನು ಓದಿದ ಪುಸ್ತಕ :- #ಸನ್ಯಾಸಿಮತ್ತುಇತರ ಕಥೆಗಳು ಲೇಖಕರು :- #ಕುವೆಂಪು

ವಿಭಿನ್ನ_ಕಥೆಗಳು

ಎರಡು ಮಹಾ ಕಾದಂಬರಿ ಬರೆದ ಲೇಖಕರು ಸಣ್ಣ ಕಥೆಗಳನ್ನು ಸಹ ಹೇಗೆ ಬರೆದಿದ್ದಾರೆ ಎಂಬ ಕುತೂಹಲದಿಂದ ಈ ಪುಸ್ತಕ ಎತ್ತಿಕೊಂಡೆ.. ಸಹಜವಾಗಿ ಒಂದಷ್ಟು ಕಥೆಗಳು ಖುಷಿ ನೀಡಿದವು.. ಆದರೂ ಕುವೆಂಪುರವರನ್ನು ಇಷ್ಟು ಚಿಕ್ಕದಾಗಿ ಓದುವುದು ಕಷ್ಟ.. ಆದರೂ ಚೆನ್ನಾಗಿದೆ.

#ಸನ್ಯಾಸಿ ಈ ಕಥೆ ಸಂಸಾರ ತೊರೆದು ಬಂದ ಗಂಡನನ್ನು ಮಾರು ವೇಷದಲ್ಲಿ ಒಲಿಸುವ ಹೆಣ್ಣಿನ ಕಥೆಯಿದೆ.. #ಕ್ರಿಸ್ತನಲ್ಲಪಾದ್ರಿಯಮಗಳು ಈ ಕಥೆಯಲ್ಲಿ ಹಿಂದುತ್ವದ ಆದರ್ಶವನ್ನು ಬೆನ್ನು ಹತ್ತಿ ಸೋಲಿನ ಜೀವನದ ಯುವಕನ ಕಥೆ ಈಗೀನ ಮತಾಂತರ ಧರ್ಮಾಂಧತೆಯ ದ್ಯೋತಕವೂ ಆಗಿರುವುದು ಆಶ್ಚರ್ಯ..#ಈಶ್ವರನೂ_ನಕ್ಕಿರಬೇಕು ಇಂದಿನ ಜಾಲತಾಣಗಳ ಮದುವೆಗಳನ್ನೂ.. 'ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂಬ ಗಾದೆಯನ್ನು ನೆನಪಿಸಿದರೆ.. #ಆರಾಣೆ_ಮೂರುಕಾಸು ನವಾಬನ ಸಂಕಷ್ಟಕ್ಕೆ ಸಹಾಯ ಮಾಡಿದ ಕಥೆಯಿದೆ.. #ಹೋಳಿಗೆ_ಪ್ರತಿಜ್ಞೆ ಬಾಲ್ಯದ ಶಾಲೆಯೊಳಗಿನ ಮೋಜಿನ ಪ್ರಸಂಗ ನೆನಪಿಸಿದರೆ.. #ಮಾಯದ_ಮನೆ ಇಂತಃಹ ದೆವ್ವದ ಕಥೆ ಕುವೆಂಪು ಲೇಖನದಿಂದ ಬಂದಿರುವುದು ಅಚ್ಚರಿಯ ವಿಷಯ.. ಹಾಗೇ ಕಥೆ ಚೆನ್ನಾಗಿದೆ. ಇನ್ನು #ದೆವ್ವದ_ಕಥೆ ಮಲೆನಾಡಿನ ಅಂದಿನ ಒಕ್ಕಲು ಮನೆಗಳ ಸಾಮಾನ್ಯ ಆದರೂ ವಿಭಿನ್ನವಾಗಿ ಚಿತ್ರಿಸಿದ್ದಾರೆ..

ಆದರೆ ಪೂರ್ಣ ಪುಸ್ತಕದಲ್ಲಿ ಕುವೆಂಪುರವರು ಕಾಣುವುದೇ #ಯಾರೂಅರಿಯದವೀರ ಕಥೆಯ‌ಲ್ಲಿ.. ಅಸಾಧ್ಯವಾದ ಮಳೆಗೆ ಸಿಲುಕಿ ಮನೆ ಕುಸಿತಕ್ಕೆ ಒಳಗಾಗುವ ಶಿವನೂರು ಸುಬ್ಬಣ್ಣ ಗೌಡರ ಮನೆ.. ಅಲ್ಲಿಂದ ಪಾರಗುವ ಪರಿ.. ಆ ತುಂಬಿದ ಹೊಳೆ..‌ ದೋಣಿ ಭಾರ ತಡೆದುಕೊಳ್ಳದೇ ಇದ್ದಾಗ ಹೊಳೆಗೆ ಯಾರಿಗೂ ತಿಳಿಯದೇ ಹಾರುವ ಅವರ ಕೆಲಸದ ಆಳು ಲಿಂಗ ಅವನ ವ್ಯಕ್ತಿತ್ವ.. ಕಥೆಯಲ್ಲಿನ ಪಾತ್ರಗಳು ಘಟನೆಗಳು ಹಾಗೂ ಸಂಭಾಷಣೆ ಎಲ್ಲವೂ ಲೇಖಕರ ಕಾದಂಬರಿಯನ್ನು ನೆನಪಿಸುತ್ತದೆ..

ಅಂತಿಮವಾಗಿ.. #ಶ್ರೀಮನ್ಮೂಕವಾಗಿತ್ತು ತಾಯಿ ಮಗುವಿನ ಸಂಭಂದವನ್ನು ಒಂದು ಎಮ್ಮೆ ಮತ್ತು ಕರುವಿನ ಮುಖಾಂತರ ಉದಾಹರಿಸಿರುವ ಪರಿಯೇ ಅನನ್ಯ.. ಹಳೇಪೈಕದ ರಂಗನ ಪಾತ್ರದಲ್ಲಿ ಅಂದಿನ ರೈತಾಪಿ ಜೀವನವನ್ನು ಅದರ ಸುತ್ತಮುತ್ತಲಿನ ಜಗತ್ತನ್ನು ತರೆದಿಟ್ಟ ಪರಿ ಪೂರ್ಣ ಪುಸ್ತಕಕ್ಕೆ ಕಳಶಪ್ರಾಯವಾಗಿದೆ.. ಸಣ್ಣ ಕಥೆಯಲ್ಲೂ ಕುವೆಂಪು ಪೂರ್ಣವಾಗಿದ್ದಾರೆ.. ಅದೇ ಅದ್ಭುತ..

ಈ ಪುಸ್ತಕದ ಕೆಲವು ಕಥೆಗಳು ಇಂದಿಗೂ ಪ್ರಸ್ತುತವಾಗಿರುವುದು ಕುವೆಂಪುರವರ ದೃಷ್ಟಿ ಭವಿಷ್ಯದ ಕಡೆ ಚಾಚಿರುವುದು ವಿಶೇಷವಿನಿಸುತ್ತದೆ ಹಾಗೇ ಲೇಖಕರ ಬೃಹತ್ ಕಾದಂಬರಿ ಓದುವ ಮೊದಲು ಈ ರೀತಿಯ ಕಥೆಗಳನ್ನು ಓದಿಕೊಂಡರೆ ಅದರೊಳಗೆ ಪ್ರವೇಶಿಸಲು ಸುಲಭವಾಗುತ್ತದೆ, ಅಥವಾ ಆ ಮಹಾ ಪುಸ್ತಕಗಳನ್ನು ಓದಲು ಕಷ್ಟವಾಗುವ ಓದುಗರಿಗೆ ಇಂತಹಃ ಪುಸ್ತಕಗಳು ಕುವೆಂಪುರವರ ರುಚಿ ಹಚ್ಚಿಸಲು ಸಹಾಯ ಮಾಡಬಹುದು.

— ದೀಪಕ್‌ ಹುಲಕುಳಿ

ಪ್ರಕಾಶಕರು :- ಉದಯರವಿ ಪ್ರಕಾಶನ
ಮುದ್ರಣದ ವರ್ಷ:- 2020
ಹಣ :- ₹.63/-
ದೂರವಾಣಿ :- 0821 2511707

ಕನ್ನಡ · ಕುವೆಂಪು · Uncategorized

‘ಕಾನೂರು ಹೆಗ್ಗಡತಿ’ – ಕುವೆಂಪು

FB_IMG_1590935096063

ಕಾನೂರು ಹೆಗ್ಗಡಿತಿ ಒಂದು ಸುದೀರ್ಘವಾದ ಕಾದಂಬರಿ, ಮಲೆನಾಡ ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಾಣಬಹುದು.
ಕಾದಂಬರಿಯಲ್ಲಿ ಬರುವ ಪ್ರತಿಯೊಬ್ಬರ ಪರಿಚಯವೂ ಕೂಡ ಕುವೆಂಪುರವರು ಅದ್ಭುತವಾಗಿ ಮಾಡಿಕೊಟ್ಟಿದ್ದಾರೆ. ಕೆಲವೊಂದು ಸನ್ನಿವೇಶಗಳನ್ನು ಪದ್ಯದ ರೀತಿಯಲ್ಲೇ ವರ್ಣಿಸಿದ್ದಾರೆ.
ಚಂದ್ರಯ್ಯಗೌಡನ ಅಸೂಯೆ, ದ್ವೇಷದಿಂದ ಕಾನೂರು ಕುಟುಂಬವೇ ಸರ್ವನಾಶ ಹೊಂದುತ್ತದೆ.
ಹೂವಯ್ಯ ಎಷ್ಟೇ ಪ್ರಯತ್ನಪಟ್ಟರೂ ಕೂಡ ಏನನ್ನೂ ಕೂಡ ಮಾಡಲಾಗುವುದಿಲ್ಲ. ತುಂಬಾ ಆತ್ಮೀಯ ತಮ್ಮನಾಗಿದ್ದ ರಾಮಯ್ಯನೂ ಕೂಡ ಸನ್ನಿವೇಶಗಳಿಗೆ ಒಳಗಾಗಿ ಬದಲಾಗುತ್ತಾನೆ.
ಸೀತೆ-ಹೂವಯ್ಯರ ಪ್ರೇಮ ಪ್ರಕರಣ ಮಾತ್ರ ಕೊನೆ ಹಂತದವರೆಗೂ ಕುತೂಹಲವಾಗಿಯೇ ಕೊಂಡಯ್ಯುತ್ತದೆ.
ಚಂದ್ರಯ್ಯಗೌಡನಿಗೆ ಮೂರನೇ ಹೆಂಡತಿಯಾಗಿ ಬಂದವಳೇ ಸುಬ್ಬಮ್ಮ ; ಮುಂದೆ ಕಾನೂರು ಹೆಗ್ಗಡಿತಿಯಾಗಿ, ಸೇರೆಗಾರ ರಂಗಪ್ಪ ಸೆಟ್ಟರ ಸಂಬಂಧದಿಂದ ತನ್ನ ಜೀವವನ್ನೇ ಕಳೆದುಕೊಳ್ಳುವುದರ ಜೊತೆಗೆ ರಾಮಯ್ಯನ ಸಾವಿಗೂ ಕಾರಣಳಾಗುತ್ತಾಳೆ.
ಇವುಗಳ ಮದ್ಯೆ ಪುಟ್ಟಮ್ಮ ಹಾಗೂ ಚಿನ್ನಯ್ಯರ ಸಂಸಾರ ಮಾತ್ರ ಅಚ್ಚುಕಟ್ಟಾಗಿ ಸಾಗುವುದು.
ಆ ಬೇರಲ ಬೈರ ಅವನ ಹೆಂಡತಿ ಸೇಸಿ, ಕಳ್ಳು ಸರಬರಾಜು ಮಾಡುವ ಹಳೆ ಪೈಕದ ತಿಮ್ಮ, ಮಾಂಸಪ್ರಿಯ ಡೊಳ್ಳು ಹೊಟ್ಟೆ ಸೋಮ, ಗಾಡಿ ಆಳು ನಿಂಗ, ಅವನ ಮಗ ಪುಟ್ಟ, ಶಿಕಾರಿಯಲ್ಲೇ ಜೀವನ ಕಳೆಯುವ ಪುಟ್ಟಣ್ಣ, ಚಂದ್ರಯ್ಯಗೌಡನ ಮಗ ಪುಟ್ಟ, ಸೀತೆಹಳ್ಳಿ ಸಿಂಗಪ್ಪನಗೌಡ, ಅವನ ಮಗ ಕೃಷ್ಣಪ್ಪ,ಆಳು ಕೀಲಿಸ್ತರ ಜಾಕಿ, ಮುತ್ತಲ್ಲಿ ಶಾಮಯ್ಯಗೌಡ-ಗೌರಮ್ಮರ ಸಂಸಾರ, ಸೀತೆ ತಂಗಿ ಲಕ್ಷ್ಮಿ, ಅಗ್ರಹಾರದ ವೆಂಕಪ್ಪ ಜೋಯಿಸರು, ಸೇರೆಗಾರ ರಂಗಪ್ಪ ಸೆಟ್ಟರ ಪ್ರೇಯಸಿ ಗಂಗೆ, ಅಣ್ಣಯ್ಯಗೌಡರ ಸಂಸಾರ, ಓದು ಮುಗಿದ ಮೇಲೆ ಓದುಗರ ಚಿತ್ತದಿಂದ ಒಂದಿಷ್ಟೂ ಕೂಡ ಮರೆಯಾಗದು.
ಓದುವಾಗ ಆದ ಅನುಭವಗಳನ್ನು ಬರಹದ ಮೂಲಕ ಹೇಳಲಿಕ್ಕಾಗದು; ಅದನ್ನು ಓದಿಯೇ ಅನುಭವಿಸಬೇಕು.

“ಕಾನೂರು ಹೆಗ್ಗಡಿತಿ” ಚಲನಚಿತ್ರವಾಗಿ ಕೂಡ ಮೂಡಿಬಂದಿದೆ.
ಆದರೆ ಒಂದೆರಡು ತಾಸಿನ ಚಲನಚಿತ್ರ ಅದು ಕೇವಲ ಸಿನಿಮಾದ ಟ್ರೇಲರ್ ತರಹ ಅಷ್ಟೇ. ಸಂಪೂರ್ಣ ಸಿನಿಮಾ ಬೇಕೆಂದರೆ ನೀವು ಪುಸ್ತಕವನ್ನೇ ಓದಬೇಕು.

ಕುವೆಂಪು ಅವರ ಕಾದಂಬರಿ ಓದುವಾಗ ‘ಕನ್ನಡ ನಿಘಂಟನ್ನು’ ಜೊತೆಯಲ್ಲೇ ಇರಿಸಿಕೊಳ್ಳಿ, ತುಂಬಾ ಉಪಯೋಗವಾಗುತ್ತೆ😊

-✍️ಅರುಣ್ ಕೊಟಿಗೇರ್

ಕನ್ನಡ · ಕುಮಾರವ್ಯಾಸ · ಕುವೆಂಪು · ಮಾಸ್ತಿ ವೆಂಕಟೇಶ ಅಯ್ಯಂಗಾರ್ · Uncategorized

‘ಕರ್ನಾಟ ಭಾರತ ಕಥಾ ಮಂಜರಿ’ – ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್

FB_IMG_1590916041977

ಆತ್ಮೀಯರೇ ಇಂದು ನಾನು ತಮಗೆ ಪರಿಚಯಿಸುತ್ತಿರುವ ಪುಸ್ತಕ
ಕರ್ನಾಟ ಭಾರತ ಕಥಾ ಮಂಜರಿ
ಕವಿ — ಕುಮಾರವ್ಯಾಸ
ಪ್ರಕಾಶಕರು — ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಲೆ — 210 ರೂ ( ಡಿಸ್ಕೌಂಟ್ ಕಳೆದು 140 ರೂ )
ಪುಟಗಳು — 674
ಪುಸ್ತಕ ಸಿಗುವ ಸ್ಥಳ — ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕ ಮಳಿಗೆ.
” ಕುಮಾರವ್ಯಾಸ ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು
ಮಿಂಚಿನ ಹೊಳೆ ತುಳುಕಾಡುವುದು ”
ಕ್ರಿ ಶ 1423 ಕ್ಕಿಂತ ಮುಂಚೆ ಕನ್ನಡ ನಾಡಿನಲ್ಲಿ ಆಗಿ ಹೋದ ಕುಮಾರವ್ಯಾಸ ಗದುಗಿನ ಕವಿ. ಗದುಗಿನ ವೀರನಾರಾಯಣನ ಪರಮಭಕ್ತ. ಒದ್ದೆ ಬಟ್ಟೆಯುಟ್ಟು ವೀರನಾರಾಯಣನ ಮಂದೆ ಕುಳಿತು ಭಕ್ತಿರಸಾವೇಶದಿಂದ ಮೈಮರೆತು ಒದ್ದೆ ಬಟ್ಟೆ ಆರುವವರೆಗೆ ಈ ಕರ್ನಾಟ ಭಾರತ ಕಥಾಮಂಜರಿ ಕಾರ್ಯವನ್ನ ರಚಿಸುತ್ತಿದ್ದನಂತೆ.
ಕನ್ನಡ ಸಾಹಿತ್ಯ ಒಂದು ಸಾವಿರ ವರ್ಷಗಳಿಂದ ಬೆಳೆದು ಬಂದಿದೆ. ಅನೇಕ ಕವಿಕೃತಿಗಳಿಂದ ವೈವಿಧ್ಯ ರಮಣೀಯವಾಗಿದೆ. ಆ ಸಾಹಿತ್ಯ ರಸಗಂಗೆಯಲ್ಲಿ ಪ್ರಭಲವಾದ ಮೂರು ಪರಿವರ್ತನೆಯ ಘಟ್ಟಗಳನ್ನು ಗುರ್ತಿಸಬಹುದು ಅಥವಾ ಅಧುನಿಕ ಕಾಲವನ್ನು ಗಮನಿಸಿ ಹೇಳುವುದಾದರೆ ನಾಲ್ಕು ಘಟ್ಟಗಳನ್ನು ಗುರ್ತಿಸಬಹುದು.
ಪ್ರಥಮ ನವೋದಯದಲ್ಲಿ ಜೈನಧರ್ಮ ರೂಪದಿಂದ ಅವಿರ್ಧೂತವಾದ ಆ ಚೇತನ ಶಕ್ತಿ ಕನ್ನಡಕ್ಕೆ ಆದಿಕವಿಯಾದ ಪಂಪನ ಕೃತಿಗಳಲ್ಲಿ ಕನ್ನಡ ಸಾಹಿತ್ಯ ತನ್ನ ಭವ್ಯಸ್ಮಾರಕ ಸ್ಥೂಪವನ್ನು ನಿರ್ಮಿಸಿಕೊಂಡಿದೆ. ದ್ವಿತೀಯ ಘಟ್ಟದಲ್ಲಿ ಹರಿಹರ ರಾಘವಾಂಕರ ರಗಳೆ ಹಾಗೂ ಅಪ್ಪ ಬಸವಾದಿಶರಣರ ವಚನಗಳಲ್ಲಿ ತನ್ನ ಚಿರಸ್ಮೃತಿಮಂದಿರವನ್ನು ಸ್ಥಾಪಿಸಿಕೊಂಡಿದೆ. ತೃತೀಯ ಪರಿವರ್ತನಾ ಘಟ್ಟ ರಸಸ್ಪೂರ್ತಿ ಕುಮಾರವ್ಯಾಸ ಬಿರುದಿನ ಗದುಗಿನ ನಾರಾಣಪ್ಪನ ಕರ್ನಾಟ ಭಾರತ ಕಥಾಮಂಜರಿ ಮಹಾಕೃತಿಯಲ್ಲಿ ಕನ್ನಡ ಸಾಹಿತ್ಯ ತನ್ನ ವಿಯಚ್ಚುಂಬಿಯಾದ ಬೃಹದ್ ಗೋಪುರವನ್ನು ಕಂಡರಸಿಕೊಂಡಿದೆ. ಈ ಗದುಗಿನ ನಾರಾಣಪ್ಪನ ಕರ್ನಾಟ ಭಾರತ ಕಥಾಮಂಜರಿ ಸದ್ಯ ನಮ್ಮ ಅವಗಾಹನೆಗೆ ಒಳಗಾಗಬೇಕಾಗಿದೆ. ಕನ್ನಡ ಕಾವ್ಯವೃಷ್ಟಿಯ ಕಾಮನ ಬಿಲ್ಲಿನಲ್ಲಿ ಈತನ ನೆಲೆ ನಟ್ಟನಡು. ನೆತ್ತಿಯ ಮುಡಿ. ಹಳೆಯ ಹೊಸಕನ್ನಡದ ತಲೆಯ ಕಿರೀಟ . ಅಂದು ಇಂದೂ ಗಮಕ ಶಿರೋಮಣಿಗಳಿಂದ ನಾಡು ನಾಡೇ ಮೊಳಗಿ ಮೈ ರೋಮಾಂಚನ ಗೊಳ್ಳುವಂತೆ ರಸವನ್ನು , ಇಂಪನ್ನು , ಲಯವನ್ನು , ತಾನವನ್ನ , ಮಾತಿನ ಹರವನ್ನ , ಛಂದಸ್ಸಿನ ಕುಣಿತವನ್ನ ಕರ್ನಾಟ ಭಾರತ ಕಥಾಮಂಜರಿಯಲ್ಲಿ ಕಾಣಬಹುದು.
1) ಆದಿಪರ್ವ
2) ಸಭಾಪರ್ವ
3) ಅರಣ್ಯ ಪರ್ವ
4) ವಿರಾಟಪರ್ವ
5) ಉದ್ಯೋಗ ಪರ್ವ
6) ಭೀಷ್ಮ ಪರ್ವ
7) ದ್ರೋಣ ಪರ್ವ
8) ಕರ್ಣಪರ್ವ
9) ಶಲ್ಯಪರ್ವ
10) ಗದಾಪರ್ವ
ಹೀಗೆ ಹತ್ತು ಪರ್ವಗಳಲ್ಲಿ ಕುಮಾರವ್ಯಾಸನ ಭಾರತ ಕಥಾಮಂಜರಿ ಹರಡಿಕೊಂಡಿದೆ.
ಸಾಮಾನ್ಯವಾಗಿ ಕುಮಾರವ್ಯಾಸನನ್ನು ಭಾಮಿನಿಷಟ್ಪದಿಕಾರ ಎಂದು ಹೇಳುವುದರಿಂದ ಗುರ್ತಿಸುವುದು ಉಂಟು. ಆದರೇ ಇದೇ ಅವನ ರೀತಿಯಲ್ಲ. ಆ ರೀತಿಯ ಕೊನೆಯ ಕೊನೆಯ ಅವಸ್ಥಾ ಮಾತ್ರ ಅದು. ಕುಮಾರವ್ಯಾಸ ಕಾಣುವುದು ರೂಪಕಗಳನ್ನು , ಮಾತನಾಡುವುದು ರೂಪಕಗಳನ್ನು ಅಷ್ಟೇ ಏಕೆ ಅವನ ಸಾಧಾರಣತಮ ಭಾಷೆಯೂ ರೂಪಕದಿಂದ ದೀಪ್ತವಾಗಿರುತ್ತದೆ. ಈ ಭೂಮಿಕೆಯಲ್ಲಿ ಇವನನ್ನು ಸರಿಗಟ್ಟುವ ಕನ್ನಡದಲ್ಲೇ ಇಲ್ಲ. ಆದ್ದರಿಂದ ಇವನನ್ನು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಯುತ್ತಾರೆ. ಉದಾಹರಣೆಗೆ ಒಂದೆರಡು ರೂಪಕಗಳನ್ನು ಓದಿ.
1) ಶಿವನ ಕಾರುಣ್ಯಾಯುಧವೇ ಮಸೆದುದು ಸುರೇಂದ್ರ ಸ್ನೇಹ ಸಾಣೆಯಲಿ
2) ನಮ್ಮ ಭಾಗ್ಯದ ಬಾಣಸಿಗ ವಿಧಿ , ವಿಷವ ಬೆರೆಸಿದರೆ ಯಾರು ಕಾವರು ?
ಹೀಗೆ ರೂಪಕಗಳ ಗುಚ್ಛವೇ ಕಥಾಮಂಜರಿ ಯಲ್ಲಿ ಇದೆ ಓದಿ ಆನಂದಿಸಿ. ಅಮೂಲ್ಯ ಪುಸ್ತಕಗಳನ್ನು ಕನ್ನಡಿಗರಿಗೆ ತಲುಪಿಸುವ ನನ್ನ ಅಳಿಲು ಸೇವೆಗೆ ಸಹಕರಿಸಿ.
ಧನ್ಯವಾದಗಳು

ಲಕ್ಷ್ಮಣ್ ಜಮದಾಡೆ.

ಸವಿತಾ ರಮೇಶ್ – ನನ್ನ ಹತ್ತಿರ ಇದೆ ಈ ಪುಸ್ತಕ ನಾನು ೨೦೦೦ ನಲ್ಲಿ ತೆಗೆದುಕೊಂಡಾಗ ಈ ಪುಸ್ತಕದ ಬೆಲೆ ೯೦ ರೂಪಾಯಿ ಇತ್ತು.

ಉಮಾಶಂಕರ್.ಟಿ.ಆರ್ – Savita Ramesh “ಕನ್ನಡ ಪುಸ್ತಕ ಪ್ರಾಧಿಕಾರ”ದ ಪ್ರಕಟನೆಯ ಪುಸ್ತಕದ ಬೆಲೆ ರೂ.೯೦/- ಇತ್ತು, ಅದಕ್ಕೂ ಹಿಂದಿನ ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ಪ್ರಕಟನೆಯ ಪುಸ್ತಕದ ಬೆಲೆ ರೂ. ೩೦/- ಇತ್ತು….

ಮೇದಿನಿ.ಕೆ.ಎಸ್ – ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲರೂ ಈ ಕಾವ್ಯವನ್ನು ಓದಬೇಕೆಂಬ ಆಶಯದಿಂದ ಮುದ್ರಿಸಿ ಎರಡು ರೂಪಾಯಿಗೆ ಸಿಗುವಂತೆ ಮಾಡಿದ್ದರು. ನನ್ನ ಹತ್ತಿರ ಇರುವುದು ಕನ್ನಡ ಸಂಸ್ಕೃತಿ ಇಲಾಖೆಯ ಮೂವತ್ತು ರೂಪಾಯಿಯ ಪುಸ್ತಕ.

ಉಮಾಶಂಕರ್.ಟಿ.ಆರ್ –ಕುಮಾರವ್ಯಾಸ ಮಹಾಕವಿಯ 

‘ಕರ್ಣಾಟ ಭಾರತ ಕಥಾಮಂಜರಿ’

ಸಂಪಾದಕರು: ಕುವೆಂಪು ಮತ್ತು
ಮಾಸ್ತಿ ವೆಂಕಟೇಶ ಅಯ್ಯಂಗಾರ್.
ಪ್ರಕಾಶಕರು: ನಿರ್ದೇಶಕ,
ಪ್ರಸಾರಾಂಗ,
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು -೫೭೦ ೦೦೬.
ಮೂರನೆಯ ಮುದ್ರಣ : ೧೯೮೮.
ಬೆಲೆ: ರೂ. ೩೦.೦೦

( ೧೯೯೯ ರಲ್ಲಿ ತುಮಕೂರಿನ ಶ್ರೀ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದ ಆ ಸಂದರ್ಭದಲ್ಲಿ ಅಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದಲ್ಲಿ ರೂ. ೩೦.೦೦ ಕೊಟ್ಟು ತೆಗೆದುಕೊಂಡಿದ್ದ ಪುಸ್ತಕ)

ಕನ್ನಡ · ಕುವೆಂಪು · Uncategorized

‘ಕಾನೂರು ಹೆಗ್ಗಡತಿ’ – ಕುವೆಂಪು

FB_IMG_1590418693067

ಅಧ್ಬುತ ಪುಸ್ತಕ. ಓದಿ ಮುಗಿಸಿದಾಗ ‌ಮಲೆನಾಡನ್ನು ಹೊಕ್ಕು ಹೊರಬಂದ ಅನುಭವ. ಇಲ್ಲಿರುವ ಪ್ರತಿಯೊಂದು ಪಾತ್ರವೂ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆದಂತೆ ಭಾಸವಾಗುತ್ತದೆ. ಅಲ್ಲಿ ಉಲ್ಲೇಖಿಸಿರುವ ಊರುಗಳು ನಮ್ಮವೇ ಎಂಬಷ್ಟು, ಅಲ್ಲಿ ಈಗಷ್ಟೇ ಅಡ್ಡಾಡಿ ಬಂದೆವೆನೋ ಎಂಬ ಭಾವನೆಯನ್ನು ಮೂಡಿಸುತ್ತದೆ.

ನನಗೆ ಈಗಲೂ ಕಾಡುವುದು ಪ್ರಕೃತಿಯ ಸೊಬಗಿನ ವಿವರಣೆ. ಮಲೆನಾಡನ್ನು ಕುವೆಂಪು ಅವರು ವರ್ಣಿಸಿರುವಂತೆ ಬಹುಶಃ ಬೇರೆ ಯಾರೂ ವರ್ಣಿಸಿರಲಿಕ್ಕಿಲ್ಲ. ಅಷ್ಟು ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.ಕಾದಂಬರಿಯ ಕೊನೆಯಲ್ಲಿ “ಕಾನೂರಿಗೆ ನಾಗರಿಕತೆ ಕಾಲಿಟ್ಟಿತು” ಎಂಬ ಒಂದು ವಾಕ್ಯವಿದೆ. ನಾಗರಿಕತೆಯ ಪ್ರವೇಶ ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೂ ಮುನ್ನುಡಿ ಬರೆಯಿತು ಎಂಬುದು ಅಷ್ಟೇ ಸತ್ಯ.

ಉಳಿದಂತೆ ಕಾದಂಬರಿಯು ಗಾತ್ರದಲ್ಲಿ ಬಹು ವಿಸ್ತಾರವಾಗಿದ್ದರೂ ಎಲ್ಲೂ ಅತೀ ಎನಿಸುವ ವಿವರಣೆಯಿಲ್ಲದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ

ಅಮಿತ್ ಕಾಮತ್

ಕನ್ನಡ · ಕುವೆಂಪು · Uncategorized

‘ಕಾನೂರು ಹೆಗ್ಗಡತಿ’ – ಕುವೆಂಪು

FB_IMG_1575047076411.jpg

ಪುಸ್ತಕ ವಿಮರ್ಶೆ
**************
ಕೃತಿ- ಕಾನೂರು ಹೆಗ್ಗಡತಿ
*******************
ಲೇಖಕರು -ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು)
*******************************************

ಕುವೆಂಪು ಎಂದರೆ ಸಾಕು ಮೈನವಿರೇಳುತ್ತದೆ.ಅದಮ್ಯ ಮಹಾನ್ ಚೇತನದ ಮುಗುಳುನಗೆಯ ಮುಖ ಕಣ್ಮುಂದೆ ಬರುತ್ತದೆ.ಆ ಅಬೋಧ ಮುಗ್ಧ ನಗೆಯ ಅಮಾಯಕರೇ ನಿಜವಾಗಲೂ ಈ ಪುಸ್ತಕವನ್ನು ಬರೆದಿದ್ದು ಎಂದು ಚೋದ್ಯವೆನಿಸುತ್ತದೆ. ಈ ಕೃತಿಯು ಮಲೆನಾಡ ಪರಿಸರದಲ್ಲಿ ಬೆಳೆದ ಬೃಹತಾದ ಒಂದು ಆಲದ ವೃಕ್ಷ.ಓದುತ್ತಾ ಓದುತ್ತಾ ಪಾತ್ರಗಳು ನಾವೇ ಆಗಿ ಸೂತ್ರದ ಗೊಂಬೆಗಳಂತೆ ಭಾಸವಾಗುತ್ತೇವೆ.

ಈ ಪುಸ್ತಕವನ್ನು ನಾನು ಓದಿದ್ದು ಕೇವಲ 3 ವರ್ಷಗಳ ಹಿಂದೆ.ಅಲ್ಲಿಯವರೆಗೂ ಈ ಪುಸ್ತಕವನ್ನು ನೋಡಿದರೂ ಸಹ ಕೊಳ್ಳುವ ಧೈರ್ಯವಾಗಿರಲಿಲ್ಲ.
ರಾಮಾಯಣದರ್ಶನಂ ನಂತಹ ಮಹಾಕಾವ್ಯವನ್ನು ಬರೆದ ಮಹಾಕವಿಯ ಕಾದಂಬರಿಗಳು ಕಬ್ಬಿಣದಕಡಲೆ ಇರಬಹುದುಎಂದು ನೆನೆದಿದ್ದೆ.ಆದರೆ ನನಗೆ ಮಲೆಗಳಲ್ಲಿ ಮದುಮಗಳು ಉಡುಗೊರೆಯಾಗಿ ಬಂದು ಅದನ್ನು ಓದಿದ ನಂತರನಾನು ಕಾನೂರು ಹೆಗ್ಗಡತಿಯನ್ನು ಕೊಂಡು ಓದಿದೆ..

ನಿಜಕ್ಕೂ ಅದು ಎಂತಹ ಸುಂದರ ಅನುಭೂತಿ. “ನೀನು ಬಿಡಮ್ಮಮಲೆನಾಡಿನ ಕಥೆಗಳು ಅಂದರೆ ಮೂಗೇ ಏನು ಕಿವಿಯನ್ನು ಕೊಯ್ದು ಕೊಳ್ಳುತ್ತಿ” ಅನ್ನುತ್ತಿದ್ದ ಗೆಳತಿಯರ ಮಾತಿನಂತೆ ಚಂದದ ಮಲೆನಾಡಿನ ಪರಿಸರ ನನಗೆ ಬಹಳ ಸೊಗಸುವಂತೆ ಇದರಲ್ಲಿ ಹಾಸುಹೊಕ್ಕಾಗಿದೆ. ಅದೊಂದು ರಸಮಯ ಪಯಣ ಬಿಡಿ.ಆ ಭಾಷೆಯ ಸೊಗಡು,ಸೊಗಸು ಅವರೇಕಾಳಿನ ಮೆಲ್ಲೋಗರ ಸವಿದಂತೆ.ಎಳೆ ಎಳೆಯಾಗಿ ಹೆಣೆದ ಶಾವಿಗೆ, ಕಾಯಿ ಹಾಲು, ಕರಿಎಳ್ಳಿನ ಪುಡಿ ಸೇರಿಸಿ ಸವಿದಂತೆ. ಆ ಸವಿಯ ಸೊಗಸ ಬಲ್ಲವರೇ ಬಲ್ಲರು.

ಹೆಗ್ಗಡತಿಯ ಕಥೆಯು ಬರೀ ಕಥೆಯಾಗದೆ ಜೀವಿಸುವ ಜೀವನವೇ ಆಗಿದೆ.ಸ್ವಾತಂತ್ರ್ಯಪೂರ್ವದ ಕಥೆಯಾದರೂ ಸಹ ಕುವೆಂಪುರವರೇ ಹೇಳಿದಂತೆ ಇದು ಮಲೆನಾಡ ಜೀವನದ ಕಡಲಿನ ಒಂದು ಹನಿ. ಈ ಕಾದಂಬರಿಯು ಅಂಗೈಯ ಮೇಲಿನ ನಾಟಕ ಶಾಲೆ. ನಮ್ಮ ಬಯಲು ಸೀಮೆಯವರಿಗೆ ಮಲೆನಾಡಿನ ಸ್ಥಳ ಮತ್ತು ವ್ಯಕ್ತಿ ಚಿತ್ರಗಳು ತೀರಾ ಹೊಸದು.ಆದರೂ ರಸವತ್ತಾಗಿ ಮನ ಸೆಳೆಯುವಂತೆ ಸಾಗುತ್ತಾ ಹೋಗುತ್ತದೆ.

ಚಂದ್ರಯ್ಯ ಗೌಡರು ಕಾನೂರು ಮನೆತನದ ಯಜಮಾನರು. ಅಣ್ಣ ಸುಬ್ಬಯ್ಯ ಗೌಡರ ಮರಣಾನಂತರ ಅವರೇ ಮನೆ ಯಜಮಾನ ರಾಗುತ್ತಾರೆ .ಸುಬ್ಬಯ್ಯ ಗೌಡರು ಸಾಯುವಾಗ ಅವರಿಗೂ ಚಂದ್ರಯ್ಯ ಗೌಡರಿಗೂ ಮನಸ್ತಾಪ ವಿತ್ತು. ಹಾಗಾಗಿ ಅಣ್ಣನ ಹೆಂಡತಿ ನಾಗಮ್ಮ ಮತ್ತು ಅವರ ಮಗ ಹೂವಯ್ಯನ ಮೇಲೆ ತೀರದ ಅನಾದರವಿತ್ತು.
ಇಬ್ಬರು ಹೆಂಡತಿಯರು ತೀರಿಹೋದ ಮೇಲೆ ನೆಲ್ಲು ಹಳ್ಳಿಯ ಸುಬ್ಬಮ್ಮ ನನ್ನು ಹೆಂಡತಿಯಾಗಿ ತರುತ್ತಾರೆ.ಪಾಪ ಸುಬ್ಬಮ್ಮನೋ ವರ ಹೂವಯ್ಯನೇ ಎಂದು ತಿಳಿದಿರುತ್ತಾಳೆ. ಅವಳಿಗೆ ತನ್ನ ಗಂಡ ವಯಸ್ಸಾದ ಚಂದ್ರೇಗೌಡರು ಎಂದು ತಿಳಿದಾಗ ತುಂಬಾ ನಿರಾಸೆಯಾಗುತ್ತದೆ.

ತನ್ನ ಅಸೂಯೆ ವಿಷಯಲಂಪಟ ತನದಿಂದ ಇಡೀ ಕಾನೂರು ಮನೆತನದ ಅಲ್ಲೋಲಕಲ್ಲೋಲ ಗಳಿಗೆ ಚಂದ್ರಗೌಡರೇ ನೇರ ಕಾರಣವಾಗುತ್ತಾರೆ. ಮದ್ಯವ್ಯಸನಿಯಾಗಿದ್ದ ಚಂದ್ರಯ್ಯ ಗೌಡ ಸಾಯುವ ಮುನ್ನ ಹೂವಯ್ಯನ ಪ್ರಭಾವಕ್ಕೆ ಸಿಲುಕಿ ಪಶ್ಚಾತ್ತಾಪ ಪಡುತ್ತಾನೆ.ಸುಬ್ಬಮ್ಮನು ಮೂರನೇ ಹೆಂಡತಿಯಾದರೂ ಹೊಂದಿಕೊಂಡು ಸಮರಸದ ಜೀವನ ಮಾಡುವುದಿಲ್ಲ .ತನ್ನ ಓರಗಿತ್ತಿ ಜೊತೆಗಾಗಲೀ, ಹೂವಯ್ಯನ ಜೊತೆಗಾಗಲೀ ಅವಳದು ತೀರದ ವಿರಸ. ಓರಗಿತ್ತಿಯ ಮಗಳ ಜೊತೆಗೆ ಕೂಡ ಹೊಂದಿಕೊಂಡು ಹೋಗುವ ಬುದ್ಧಿ ಇರುವುದಿಲ್ಲ .
ಗಂಡನ ಜೊತೆಗೆ ಕೂಡ ಅವಳದು ಸವಿ ಇಲ್ಲದ ಸಂಸಾರ.ತನ್ನ ದಾಂಪತ್ಯದ ನಿರಾಸೆಯನ್ನು ಹೊಸದಾಗಿ ದಕ್ಕಿದ ಶ್ರೀಮಂತಿಕೆಯಲ್ಲಿ ತುಂಬಿಕೊಳ್ಳಲು ಪ್ರಯತ್ನಿಸುತ್ತಾಳೆ. ಎದುರಿಸುವ ಪರಿಸ್ಥಿತಿಗಳು ಅವಳನ್ನು ಒರಟಾಗಿಸುತ್ತದೆ .

ಗೌಡರ ಮಗ ಹೂವಯ್ಯ ಹೆಸರಿಗೆ ತಕ್ಕಂತೆ ಹೂವಿನಂತಹ ಮನುಷ್ಯ .ಮೈಸೂರಿನಲ್ಲಿ ಓದುತ್ತಿದ್ದ ಹೂವಯ್ಯ ಬೇಸಿಗೆ ರಜೆಗೆ ಕಾನೂನಿಗೆ ಬಂದ ನಂತರ ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಓದನ್ನು ಅರ್ಧಕ್ಕೆ ನಿಲ್ಲಿಸಿ ಕಾನೂರಿನಲ್ಲಿ ನಿಲ್ಲಬೇಕಾಗುತ್ತದೆ .ಚಿಕ್ಕಪ್ಪನ ಕಾಟ ತಾಳಲಾರದೆ ಪಾಲು ತೆಗೆದುಕೊಂಡು ಕೆಳ ಕಾನೂರಿನಲ್ಲಿ ನೆಲೆಸುತ್ತಾನೆ. ತನ್ನ ಸುಶಿಕ್ಷಿತತೆ, ಆಧ್ಯಾತ್ಮಿಕತೆ ಮತ್ತು ಕ್ರಿಯಾಶೀಲತೆಯಿಂದ ಸುತ್ತಲಿನವರ ಬದುಕನ್ನು ಉತ್ತಮಗೊಳಿಸಲು ಪ್ರಭಾವ ಬೀರುತ್ತಾನೆ. ಅವನ ಜೀವನಪ್ರೀತಿ ಅವನನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆಳುಗಳ ನಾಗರಿಕ ಜೀವನವನ್ನು ಕೂಡ ನಾಗರಿಕ ಬದುಕಿನೆಡೆಗೆ ಮುನ್ನಡೆಸಲು ಪ್ರಯತ್ನಿಸುತ್ತಾನೆ. ನಾಯಕನೆಂದರೆ ಹೀಗೆಯೇ ಇರಬೇಕು ಎಂಬ ಘನತೆ ಇದೆ. ಹೂವಯ್ಯ ಅಂತಹ ನಾಯಕ . ಸೀತೆಯನ್ನು ಮದುವೆಯಾಗಬೇಖೆಂದು ಬಯಸಿದರು ಆಸೆ ನೆರವೇರದೇ ನಿರಾಸೆಯಾಗುತ್ತದೆ.ಸಾಲದು ಎಂಬಂತೆ ಅವಳನ್ನು ತನ್ನ ತಮ್ಮನ ಹೆಂಡತಿ ಯಾಗಿಯೇ ನೋಡಬೇಕಾಗುತ್ತದೆ . ದಿಟ್ಟವಾಗಿ ಸಹೃದಯತೆಯಿಂದ ಆ ಪರಿಸ್ಥಿತಿ ಎದುರಿಸುತ್ತಾನೆ.ಆದರೂ ಸೀತೆ ಹೂವಯ್ಯನೇ ಪತಿ ಎಂದು ನಂಬಿದ್ದರಿಂದ ಅವಳು ಜೀವದ ಮೇಲಿನ ಆಸೆ ಕಳೆದುಕೊಳ್ಳುತ್ತಾಳೆ. ಚಂದ್ರೇಗೌಡನ ಕುತಂತ್ರದಿಂದ ಮೆಲ್ಲಗೆ ಅರಳುತ್ತಿದ್ದ ಎರಡು ಜೀವಗಳಿಗೆ ತೀರದ ಸಂಕಟವಾಗುತ್ತದೆ .ಅವರ ಪರಿಣಯಕ್ಕೆ ಚಂದ್ರೇಗೌಡನು ಕಲ್ಲು ಹಾಕುತ್ತಾನೆ .

ರಾಮಯ್ಯ ಚಂದ್ರೇಗೌಡರ ಮೊದಲ ಹೆಂಡತಿಯ ಮಗ. ಹೂವಯ್ಯನ ಜೊತೆಯೆ ವಿದ್ಯಾಭ್ಯಾಸ ಮಾಡುತ್ತಿದ್ದವನು ತಂದೆಯ ಮಾತಿನಂತೆ ವಿದ್ಯಾಭ್ಯಾಸವನ್ನು ಬಿಡುತ್ತಾನೆ .ಹೂವಯ್ಯ ಎಂದರೆ ಸೋದರ ಎಂಬ ಪ್ರೀತಿ ಇದ್ದವನಿಗೆ ತಂದೆಯ ಕುತಂತ್ರದಿಂದ ಕ್ರಮೇಣ ಹೂವಯ್ಯನನ್ನು ಮೂರ್ಖನಾಗಿ ದ್ವೇಷಿಸುವ ಪರಿಸ್ಥಿತಿ ಬರುತ್ತದೆ. ತಂದೆಯ ಕುಚೇಷ್ಟೆಯಿಂದ ಸೀತೆಯನ್ನು ಮದುವೆಯಾಗುತ್ತಾನೆ. ಆದರೆ ಮದುವೆ ತರುವ ಕಷ್ಟಗಳಿಂದ ಜರ್ಜರಿತನಾಗುತ್ತಾನೆ .ಕಾನೂರು ಮನೆತನದ ಪತನವನ್ನು ಕಂಡು ದುರ್ಬಲ ಮನಸ್ಸಿನ ರಾಮಯ್ಯ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ .ಸೀತೆ ಕಡೆಗೂ ಅವನ ಹೆಂಡತಿಯಾಗಿ ಬಾಳುವುದಿಲ್ಲ.

ಸುಬ್ಬಮ್ಮ ಹೊಸಬಗೆಯ ಬದುಕಿಗೆ ಹೊಂದಿ ಕೊಳ್ಳಲು ಕಾದಂಬರಿಯುದ್ದಕ್ಕೂ ಚಡಪಡಿಸುತ್ತಲೇ ಇರುತ್ತಾಳೆ.ಅವಳನ್ನು ಕೀಳರಿಮೆ ಕಾಡುತ್ತಲೇ ಹೋಗುತ್ತದೆ.ತನ್ನ ತವರುಮನೆಯಿಂದ ಇಂತಹ ಉತ್ತಮ ಸ್ಥಿತಿಗೆ ಬಂದರೂ ಹೊಂದಿಕೊಳ್ಳಲಾಗದೆ ತಳಮಳದಿಂದ ತೀರಿಸಲಾಗದ ಆಸೆಗಳಿಂದ ಬಳಲುತ್ತಾಳೆ. ಸದಾ ಗಂಡನಿಂದ ಸಂಸಾರದ ಸುಖವು ಅವಳಿಗೆ ಸಿಗುವುದಿಲ್ಲ . ಹೆಗ್ಗಡತಿ ಯಾದರೂ ಅವಳ ಬದುಕು ಹೂವಿನ ಹಾಸಿಗೆಯಾಗುವುದಿಲ್ಲ .ಗಂಡನ ಸಂಶಯಕ್ಕೆ ಕ್ರೌರ್ಯಕ್ಕೆ ಬಲಿಯಾಗಬೇಕಾಗುತ್ತದೆ.

ಅದನ್ನು ತಾಳಲಾರದೆ ತಾಯಿಯ ಮನೆಗೆ ಓಡಿ ಬರುತ್ತಾಳೆ . ಹತಾಶೆಯಿಂದ ದಕ್ಕಿದ ಒಡವೆಗಳನ್ನು ತೆಗೆದುಕೊಂಡು ಹೋಗುತ್ತಾಳೆ.ಅಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾಳೆ .ನಂತರ ಗಂಡನ ಅನಾರೋಗ್ಯದ ನಂತರ ಊರಿಗೆ ಮರಳುತ್ತಾಳೆ. ಗಂಡನ ಸಾವಿನ ನಂತರ ನಿಜವಾದ ಹೆಗ್ಗಡತಿಯಾಗಿ ಅಧಿಕಾರ ತೆಗೆದುಕೊಂಡು ತೋಟ ತುಡಿಕೆ, ವ್ಯವಹಾರ, ಗದ್ದೆ ಎಲ್ಲವನ್ನು ದಕ್ಷತೆಯಿಂದ ನಿಭಾಯಿಸುತ್ತಾ ನಿಜವಾದ ನಾಯಕಿಯಾಗುತ್ತಾಳೆ.

ಹಾಗೆಯೇ ಇದ್ದಿದ್ದರೆ ಕಾಣುವವರಿಗೆ ನಿಜವಾದ ಹೆಗ್ಗಡತಿ ಎಂದು ಹೆಸರು ತೆಗೆದುಕೊಳ್ಳುತ್ತಿದ್ದಳು. ಮುದುಕ ಗಂಡನ ಕೈ ಹಿಡಿದು ಸಾಂಸಾರಿಕ ಜೀವನದಲ್ಲಿ ಅತೃಪ್ತಳಾಗಿದ್ದವಳು ಸುಲಭವಾಗಿ ಸೇರೆಗಾರ ರಂಗಪ್ಪ ಶೆಟ್ಟಿಯ ಬಲೆಯಲ್ಲಿ ಬೀಳುತ್ತಾಳೆ.ಅವಳ ವ್ಯಾಮೋಹದ ಕಾರಣ ಅವನು ಧೂರ್ತನೆಂದು ತಿಳಿದೂ ಸಹ ಅವನ ಮೋಹ ಜಾಲದಿಂದ ತಪ್ಪಿಸಿಕೊಳ್ಳಲು ಅವಳಿಗೆ ಸಾಧ್ಯವಾಗುವುದಿಲ್ಲ .ಅವನು ನೀಡುತ್ತಿದ್ದ ಸುಖಕ್ಕೆ ಅವಳಿಗೆ ಸಾಮಾಜಿಕ ಕಟ್ಟುಪಾಡುಗಳು ಎಲ್ಲೆಗಳ ಅರಿವನ್ನೂ ಮೀರಿ ಹೋಗುತ್ತಾಳೆ. ಗಂಡನಿಲ್ಲವಾದರೂ ಬೇಕಾದಷ್ಟು ಆಸ್ತಿ ಇದ್ದುದರಿಂದ ಸುಖವಾಗಿ ಉತ್ತಮ ದರ್ಜೆಯಿಂದ ಬಾಳಿ ಬದುಕಬಹುದಾದ ಕಾಲದಲ್ಲಿ ರಂಗಪ್ಪನ ಕುತಂತ್ರಕ್ಕೆ ಬಲಿಯಾಗಿ ಹೋಗುತ್ತಾಳೆ.

ಗರ್ಭಿಣಿಯಾಗಿ ಮರ್ಯಾದೆಗೆ ಅಂಜಿ ಭಯಭೀತಳಾಗಿ ಗರ್ಭಪಾತವನ್ನು ಮಾಡಿಸಿಕೊಳ್ಳಲು ಯೋಚಿಸುತ್ತಾಳೆ. ಅದಕ್ಕಾಗಿ ರಂಗಪ್ಪನ ಮೊರೆ ಹೋದಾಗ ಅವನು ಗಂಗೆಯಿಂದ ಗರ್ಭಪಾತದ ಔಷಧಿಯನ್ನು ತಂದುಕೊಡುತ್ತಾನೆ. ಅದು ಅವಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿ ಸಾಯಬಾರದ ಸಾವನ್ನು ಸಾಯುತ್ತಾಳೆ .

ಕುವೆಂಪುರವರು ಸೀತೆಯ ಸದ್ಗುಣಗಳನ್ನು ಹೇಳಿದಷ್ಟೇ ತಣ್ಣಗೆ ಸುಬ್ಬಮ್ಮನ ಅವಗುಣಗಳನ್ನು ,
ಅಸಹಾಯಕತೆಯನ್ನು ಯಾವುದೇ ತೀರ್ಮಾನ ಕೊಡದೆ ಹೇಳುತ್ತಾ ಹೋಗುತ್ತಾರೆ. ಗುಣಾವಗುಣಗಳ ತೀರ್ಮಾನವನ್ನು ಓದುಗರಿಗೇ ಬಿಡುತ್ತಾರೆ.ಸುಬ್ಬಮ್ಮನ ನಡೆಗೆ ನಮಗೆ ಕೋಪ ಬರದೇ ಪಾಪದ ಜೀವ
ಎನ್ನಿಸಿಬಿಡುತ್ತಾಳೆ.ಅದಕ್ಕೆ ಕುವೆಂಪುರವರಿಗೆ ಮಹಾನ್ ಸ್ತ್ರೀವಾದಿ ಎಂಬ ಹಣೆಪಟ್ಟಿಯನ್ನು ಹಚ್ಚಿ ಬಿಟ್ಟಿದ್ದಾರೆ. ಅವರ ಕೃತಿಗಳಲ್ಲಿ ಎಲ್ಲೂ ಹೆಣ್ಣನ್ನು ಕೀಳಾಗಿ ಚಿತ್ರಿಸಿಲ್ಲ. ಅವಳ ನಿಸ್ಸಹಾಯಕತೆಯನ್ನು ಜಾರತೆ ಎಂದು ಪ್ರತಿಬಿಂಬಿಸಿಲ್ಲ .ಬದಲಿಗೆ ಗಂಡಿನ ಸಮಯಸಾಧಕತನವನ್ನು ಚಿತ್ರಿಸುತ್ತ ಹೋಗುತ್ತಾರೆ.

ರಂಗಪ್ಪ ಶೆಟ್ಟಿಯೂ ಹೆಣ್ಣನ್ನು ಭೋಗದ ವಸ್ತುವಂತೆ ಬಳಸಿಕೊಳ್ಳುವ ಗಂಡಸರ ಪ್ರತೀಕ ವಾಗುತ್ತಾನೆ .ಅತ್ತ ಗಂಗೆಯನ್ನು ಇತ್ತ ಸುಬ್ಬಮ್ಮನ ನ್ನು ಮೋಸ ಗೊಳಿಸುತ್ತಾ ಬೆಂದ ಮನೆಯಲ್ಲಿ ಗಳ ಹಿರಿಯತ್ತಾನೆ. ಸುಬ್ಬಮ್ಮನು ಈ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯ ದುರಂತ ನಾಯಕಿಯಾಗಿ ವಿಷಾದ ಮೂಡಿಸುತ್ತಾಳೆ.ಈ ಕಾದಂಬರಿ ಓದಿದ ಬಳಿಕ ನನ್ನಲ್ಲೊಂದು ಸದ್ದಿಲ್ಲದ ಶೂನ್ಯ ಮೂಡಿದಂತಾಯಿತು. ದಿಟ್ಟತನದ ಪ್ರತೀಕವಾಗಿದ್ದರೂ ಸಹ ಸಮಾಜದ ಕಟ್ಟಳೆಗಳಿಗೆ ತಲೆಬಾಗಿ ಸುಬ್ಬಮ್ಮ ಜೀವ ನೀಗುವುದು ನಮ್ಮ ಕನಿಕರಕ್ಕೆ ಪಾತ್ರವಾಗುತ್ತದೆ .ಖಂಡಿತಾ ಅವಳು ಪಾಪಿಯಲ್ಲ , ವ್ಯವಸ್ಥೆಯ ಬಲಿಪಶು ಅಷ್ಟೇ.

ಕಾದಂಬರಿಯಲ್ಲಿ ಅಣ್ಣಯ್ಯ ಗೌಡರು, ಓಬಯ್ಯ ಗೌಡ, ಗಂಗೆ, ಚಿನ್ನಯ್ಯ ,ನಾಗಮ್ಮ ,ಪುಟ್ಟಮ್ಮ, ಬೈರ ,ಲಕ್ಷ್ಮಿ, ಸಿಂಗಪ್ಪ ಗೌಡ ,ಹಳೆಪೈಕದ ತಿಮ್ಮ ,ಶಾಮಯ್ಯ ಗೌಡರು, ವೆಂಕಯ್ಯ ಜೋಯಿಸ ಕಥೆಗೆ ಪೂರಕವಲ್ಲದೆ ಕತೆಯ ಪಾತ್ರಗಳೇ ಮುಖ್ಯ ಆಗಿಬಿಡುವುದು ಈ ಕಾದಂಬರಿಯ ವೈಶಿಷ್ಟ್ಯ.

ಈ ಕೃತಿಯ ರಸಾಸ್ವಾದನೆಗೆ ರಸಿಕ ಮನಸ್ಸು ಬೇಕು. ಲೇಖಕರೇ ಹೇಳಿದಂತೆ ಇದನ್ನು ಕುತೂಹಲಕ್ಕಾಗಿ ಓದಬೇಡಿ .ನಿಧಾನವಾಗಿ ಸಾವಧಾನವಾಗಿ ಓದಿ. ಒಂದು ಸಂಪೂರ್ಣ ಹೊಸ ಪ್ರಪಂಚದ ,ಸಂತಸದ ತತ್ಪರತೆಯ ರಸಾಸ್ವಾದನೆಯ ಓದು ನಿಮ್ಮದಾಗಲಿ.

ಮಮತ ವೆಂಕಟೇಶ್

ವೀಣಾ ಶಾನುಭೊಗ್ – ವಾವ್..ಮೆಚ್ಚತಕ್ಕ ವಿಮರ್ಶೆ..
ನಾನು ಕಾದಂಬರಿಯನ್ನು ಎರಡು ಮೂರುಸಲ ಓದಿರಬಹುದು. ಪ್ರತಿಸಲವೂ ಒಂದೊಂದು ರೀತಿಯ ಅನಿಸಿಕೆಗಳು ಭಾವನೆಗಳು ಬಂದಿವೆ. ಚಲನಚಿತ್ರವನ್ನೂ ನೋಡಿದ್ದೇನೆ.
ಧನ್ಯವಾದಗಳು.. ಮತ್ತೊಮ್ಮೆ ಎಲ್ಲವೂ ಕಣ್ಣಿನ ಮುಂದೆ ಬಂದಂತಾಯಿತು.
ಯಾವುದೇ ಕಾದಂಬರಿಯನ್ನು ಸಿನಿಮಾ ಮಾಡಿದಾಗ ಕಾದಂಬರಿ ಓದದವರಿಗೆ ಅಥವಾ ಓದುವ ಹವ್ಯಾಸ ಇರುವವರಿಗೆ ಯಾವತ್ತೂ ಇಷ್ಟವಾಗುವುದಿಲ್ಲ. ಕಥೆ ಓದುವ ಗುಂಗೇ ಬೇರೆ.. ಮೂರು ನಾಲ್ಕು ದಿನ ಓದಬಹುದಾದ ಕಾದಂಬರಿ ಎರಡುವರೆ ಮೂರು ಗಂಟೆಯಲ್ಲಿ ಮುಗಿಸಲೇ ಬೇಕಾದ ಅನಿವಾರ್ಯತೆ ಇರುವುದಲ್ಲವೇ..ಹಾಗಾಗಿ ಇರಬಹುದು.
ಹಾಗೆಂದು ಸಣ್ಣ ಕತೆಗಳು ಕೆಲವೊಮ್ಮೆ ಶಾರ್ಟ್ ಫಿಲ್ಮ್ ಎಂದು ಮಾಡುತ್ತಾರಲ್ಲ…ಅವು ಸಾಮಾನ್ಯವಾಗಿ ಇಷ್ಟ ಆಗುತ್ತವೆ..ಎಂದು ನನ್ನ ಅನಿಸಿಕೆ..

ಕನ್ನಡ · ಕುವೆಂಪು · Uncategorized

‘ಕಾನೂರು ಹೆಗ್ಗಡತಿ’ – ಕುವೆಂಪು

fb_img_1571749602072.jpg

ತುಂಬಾ ದಿನದಿಂದ ಓದಲೇ ಬೇಕು ಎಂಬ ಮಹದಾಸೆಯಿಂದ ಓದಿದ ಪುಸ್ತಕ ಇದು… ಚಲನಚಿತ್ರಕ್ಕೆ ಪುಸ್ತಕಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಚಲನಚಿತ್ರ ನೋಡಿದವರು ಇನ್ನೇನು ಕತೆ ಇಷ್ಟೇ ಓದುವ ಅವಶ್ಯಕತೆ ಇಲ್ಲಾ ಎನ್ನುವ ಬಾವನೆ ಬೇಡವೇ ಬೇಡ..
ಮಲೆನಾಡ ಸೊಬಗು, ಅಂದಿನ ಜನ ಜ್ಜೀವನ ಅರಿಯ ಬೇಕೆಂದರೆ ಈ ಪುಸ್ತಕವನ್ನು ಓದಲೇ ಬೇಕು…
ಪುಸ್ತಕದ ಬಗ್ಗೆ ಅಭಿಪ್ರಾಯ ಹೇಳುವಷ್ಟು ದೊಡ್ಡವಳು ನಾನಲ್ಲ, ಸಾಹಸವನ್ನು ಮಾಡಲ್ಲ. ಮನೆಯಲ್ಲಿ ಪುಟ್ಟ ಗ್ರಂಥಾಲಯದಲ್ಲಿ ಇರಲೇ ಬೇಕಾದ ಪುಸ್ತಕ ಇದು…

-ಅಶ್ವಿನಿ ಚಂದನ್

ಕನ್ನಡ · ಕುವೆಂಪು · Uncategorized

‘ಮಲೆಗಳಲ್ಲಿ ಮದುಮಗಳು’ – ಕುವೆಂಪು

FB_IMG_1571748706362.jpg

:ನಾನು ಓದಿದ ಪುಸ್ತಕ :
#ಮಲೆಗಳಲ್ಲಿ_ಮಧುಮಗಳು#
ಕು.ವೆಂ.ಪು
ಮಲೆನಾಡು ಅಂದರೆ ಹಾಗೇ, ಬೆಟ್ಟಗಳು ಕಾಡುಗಳು ಪ್ರಾಣಿಗಳು ಹಾಗೂ ಹಳ್ಳ ಕೆರೆಗಳು ಸಮೃದ್ಧವಾಗಿ ಹಬ್ಬಿರುವ ಹಾಗೇ ಅಲ್ಲಿನ ಜೀವನ ಸಹ… ಒಕ್ಕಲಿಗರಿಂದ ಹಿಡಿದು ಅನೇಕ ಜಾತಿಗಳು ಕೃಷಿಗೆ ಸಂಭಂದ ಪಟ್ಟ ಕೆಲಸದಿಂದ ಹಿಡಿದು ಅನೇಕ ವೃತ್ತಿಗಳು.. ಎಲ್ಲದರ ಜೊತೆಗೆ ಶಿಕಾರಿ… ಇದರ ಸಮೃದ್ಧ ಭೋಜನವೇ ಈ ಕಾದಂಬರಿ
ಈ ಶತಮಾನದ ಆದಿಯ ಭಾಗದಲ್ಲಿ ಮಲೆನಾಡಿನ ಪ್ರತಿಷ್ಠಿತ ಒಕ್ಕಲಿಗ ಮನೆತನಗಳ ನಡುವೆ ನೆಡೆಯುವ ಕಾರ್ಯಚಟುವಟಿಕೆಗಳೇ ಇಲ್ಲಿನ ಕಥಾಹಂದಾರ.. ಇಲ್ಲಿ ನಾಯಿ ಗುತ್ತಿಯಷ್ಟೇ ಮಹತ್ವ ನಾಯಿಯಾದ ಹುಲಿಯನಿಗೂ ಇದೆ..ಅಲ್ಲಿ ನೆಡೆಯುವ ಶಿಕಾರಿಗಳಿಗೂ ಇದೆ.. ಪ್ರತಿಯೊಂದು ಚಟುವಟಿಕೆಗಳಿಗೂ ಇದೆ…
ಮೇಗರವಳ್ಳಿಯ ಆಸುಪಾಸಿನ ಕೋಣೂರು,ಹೂವಳ್ಳಿ,ಸಿಂಬಾವಿ,ಬೆಟ್ಟಳ್ಳಿ ಹಾಗೂ ಹಳೇಮನೆಗಳ ಅಂದರೆ ಊರುಗಳ ನಡುವಿನ ಇಲ್ಲಿನ ಮನೆತನಗಳ ನಡುವೆ ಇರುವ ಸಂಭಂದಗಳನ್ನು ಅರ್ಥ ಮಾಡಿಕೋಳ್ಳಬೇಕಾದರೆ ನಾವು ಮಲೆನಾಡಿಗರೇ ಆಗಬೇಕು.. ಆ ಮನೆಗಳು ಅಲ್ಲಿನ ಸಮಾಜವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವುದು ಅವರಿಂದ ತುಳಿತಕ್ಕೆ ಒಳಾಗದ ದಲಿತ ಸಮಾಜ.. ಹಾಗೂ ಅದರಳೋಗೆ ಇರುವ ಅವರ ಪರಿಸರ ಕೇಂದ್ರಿತ ಬದುಕು …
ಪಾತ್ರಗಳಿಗಿಂತಲೂ ಇಡೀ ಪುಸ್ತಕ ದಟ್ಟ ಮಲೆನಾಡಿನ ಚಿತ್ರಣವನ್ನು ಹಾಗೂ ಅಲ್ಲಿನ ಜೀವನ ಪದ್ಧತಿಯನ್ನು ಕಟ್ಟಿಕೂಡುತ್ತದೆ.. ಇಲ್ಲಿ ಮುಕುಂದಯ್ಯ ಹಾಗೂ ಚಿನ್ನಮ್ಮರ ಪ್ರೀತಿ ಅಂದಿನ ಸಮಾಜದ ಕಣ್ಣಲ್ಲಿ ಕ್ರಾಂತಿಕಾರಕ ವಿಚಾರ ಆದರೇ ಗುತ್ತಿ ಪ್ರಿತಿ ಮಾಡಿ ತಿಮ್ಮಿಯನ್ನು ಹಾರಿಸಿಕೊಂಡು ಹೂಗುವುದು ಸಾಮಾನ್ಯವಾದ ಸಂಗತಿಯಾಗುತ್ತದೆ.. ಹಾಗೂ ಸಹಜವೂ ಆ ಕಾಲದಲ್ಲಿ ಆಗಿತ್ತೇನೂ…
ಇಲ್ಲಿ ಪಾತ್ರ ಪೊಷಣೆಗಿಂತಲೂ ಶ್ರೀಮಂತ ದುಕನ್ನು ಕಟ್ಟಿಕೊಟ್ಟಿದ್ದಾರೆ…ನಾಗಮ್ಮನ ದುರಂತ ಒಂದು ಕಡೆ ಆದರೆ… ಶಂಕರ ಹೆಗ್ಗಡೆಯ ಮೂಢ ಬದುಕು ಒಂದು ಕಡೆ.. ಐತಲೂ..ಪಿಂಚಲೂ ಸರಸಮಯ ದಾಂಪತ್ಯ… ಅದನ್ನು ವಿವರಿಸದ ಪರಿ ಅಚ್ಚರಿಯೆನಿಸುತ್ತದೆ… ರಂಗಮ್ಮ ಹೆಗ್ಗಡತಿಯ ಬದುಕಿನ ಪರಿ ಆ ಪಾತ್ರವನ್ನು ಮುಕ್ತಾಯ ಮಾಡಿದ ರೀತಿ… ನಿಜಕ್ಕೂ ಪಾತ್ರದ ಸೃಷ್ಠಿಕರ್ತರ ಮೇಲೆ ಇಮ್ಮಡಿ ಗೌರವ ಭಾವನೆ ಮೂಡದೇ ಇರದು.. ಹಾಗೇ ಇಡೀ ಕಾದಂಬರಿಯ ಜೋತೆಗೆ ಸಾಗುವ ಪರಮಹಹಂಸರೆಡೆಗೆ ವಿವೇಕನಂದರೆಡೆಗೆ ಇರುವ ಭಕ್ತಿಭಾವ ನಮಗೂ ತಟ್ಟದೇ ಇರದು…
ಹಾಗೇ ಆ ಕಾಲದಲ್ಲೇ ಕ್ರಿಶ್ಚಿಯನ್ ಮತಾಂತರ ಮಲೆನಾಡಿಗೂ ಸೇವೆಯ ಹೆಸರಲ್ಲಿ ವ್ಯಾಪಿಸಿದ ಪರಿ .ಪಾದ್ರಿ ಜೀವರತ್ನಯ್ಯನ ಪಾತ್ರದ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.. ದೇವಯ್ಯನ ಪಾತ್ರ… ಹಾಗೂ ಅದಕ್ಕೆ ಪೂರಕವಾಗಿ ಹೆಂಡತಿ ದೇವಮ್ಮನ ತೊಳಲಾಟ.. ಅದನ್ನು ಕ್ರಾಂತಿಕಾರಕವಾಗಿ ಮುಗಿಸಿದ ರೀತಿಗೆ ಕುವೆಂಪು ಮಾತ್ರಾ ಸಾಟಿ… ಹಾಗೇ ಕೀಳು ಮಟ್ಟದ ಕೆಲಸಕ್ಕೆ ಆಗಿನ ಕಾಲಕ್ಕೆ ಹೆಸರಾದ ಸಾಬರ ತಂಡಗಳು ಅವರ ಕೀಳು ಅಭಿರುಚಿಯ ಕಾರ್ಯಗಳನ್ನು ನಾವು ಈ ಕಾದಂಬರಿಯಲ್ಲಿ ನೊಡಬಹುದು.. ಗುತ್ತಿಯ ಗಬ್ಬದ ಕುರಿಯನ್ನು ಕದ್ದಿದ್ದಾಗಲಿ.. ಮೇಗರವಳ್ಳಿಯ ಅಂತಕ್ಕನ ಮಗಳು ಕಾವೇರಿಯ ದುರಂತ ಅಂತ್ಯದಲ್ಲಿ ಸಾಬರ ಪಾತ್ರ.. ಇಲ್ಲಿ ಉದಾಹರಿಸಬಹುದು…
ಆದರೆ ಇಡೀ ಕಾದಂಬರಿಗೆ ಕಳಶ ಪ್ರಾಯ ಮುಕುಂದಯ್ಯ ಹಾಗೂ ಚಿನ್ನಮ್ಮನ ಪ್ರೇಮ…ಮದುವೆ ದಿವಸವೇ ಪಿಂಚಲು ಜೋತೆಗೋಡಿ ಹುಲಿಕಲ್ಲು ದಿಬ್ಬದ ಮೇಲೆ ಮಳೆಗಾಲದಲ್ಲಿ ತನ್ನ ಮುಕುಂದಯ್ಯನಿಗಾಗಿ ಓಡಿ ಬರುವ .. ನಂತರ ತಂದೆಯನ್ನು ಕಳೆದುಕೊಂಡು ಸಮಾಜದಲ್ಲಿ ತಳಮಳಗೊಂಡು ಬದುಕುವ … ಪಾತ್ರವಾಗಿ ಚಿನ್ನಮ್ಮನನ್ನು ಚಿತ್ರಿಸಿದರೆ… ಅದಕ್ಕೆ ಪೂರಕವಾಗಿ ಅಷ್ಟೆ ಗಟ್ಟಿ ವ್ಯಕ್ತಿತ್ವದ .. ಆಗಿನ ಸಮಾಜಕ್ಕೆ ಒಂದು ರೊಲ್ ಮಾಡೆಲ್ ಎನ್ನಬಹುದಾದ ವ್ಯಕ್ತಿತ್ವದ ಪಾತ್ರವಾಗಿ ಮುಕುಂದಯ್ಯನನ್ನು ಚಿತ್ರಿಸಿರುವುದು … ಅದಕ್ಕೊಂದಷ್ಟು ಪೊರಕ ಅನೇಕ ಪಾತ್ರಗಳು.. ಒಟ್ಟಾರೆ ಒಂದು ಅದ್ಭುತ ಮಲೆನಾಡಿನ ಚಿತ್ರವನ್ನು ತಮ್ಮ ಮುಂದೆ ನಿಲ್ಲಿಸುತ್ತಾರೆ…
ಹಾಗೇ ಕಾದಂಬರಿಯ ಪ್ರಾರಂಭದಲ್ಲೇ ಹೇಳಿದಂತೆ #ಯಾರು_ಮಖ್ಯರಲ್ಲ_ಯಾರೂ_ಅಮುಖ್ಯರೂ_ಅಲ್ಲ_ಯಾರೂ_ಯಃಕಶ್ಚಿತವಲ್ಲ!!# ಎಂಬ ಮಾತು ಮತ್ತೆ ಮತ್ತೆ ನೆನಪಾಗದೇ ಇರದು.. ಹಾಗೇ ಎಲ್ಲವಕ್ಕೂ ಅರ್ಥವೂ ಇದೆ…..
ಎಲ್ಲಾ ಓದಿದ ಮೇಲೆ ಇಂದಿನ ಮಲೆನಾಡನ್ನು ಪರಿಗಣಿಸಿದಾಗ ಯಾವುದನ್ನು ನಾವು ಕಳೆದುಕೊಳ್ಳುತ್ತಾ ಇದ್ದೇವೆ ಎನ್ನುವುದು ನಮಗೆ ತಿಳಿಯದ್ದಿದ್ದರೆ…ನಾವು ಮಲೆನಾಡಿನಲ್ಲಿ ಬದುಕಿದ್ದು… ಕಾದಂಬರಿ …ಓದಿದ್ದು.. ವ್ಯರ್ಥ….

-ದೀಪು ಹುಲ್ಕುಲಿ