ಕನ್ನಡ · ಕೃಪಾಕರ ಸೇನಾನಿ · ಪುಟ್ಟಸ್ವಾಮಿ

‘ಜೀವಜಾಲ’ – ಕೆ. ಪುಟ್ಟಸ್ವಾಮಿ, ಕೃಪಾಕರ, ಸೇನಾನಿ

ನಾನು ಓದಿದ ಪುಸ್ತಕ : #ಜೀವಜಾಲ
ಲೇಖಕರು : ಕೆ.ಪುಟ್ಟಸ್ವಾಮಿ, ಕೃಪಾಕರ, ಸೇನಾನಿ

ಪರಿಸರದಒಂದುಚಿಕ್ಕಭಾಗನಾವು

ನಮಗಾಗಿಯೇ_ಪರಿಸರವಲ್ಲ

ಮನುಷ್ಯ ಎಂಬ ಜೀವಿ ಪರಿಸರದ ಒಂದು ಭಾಗ ನಮ್ಮಂತೆ ಅನೇಕ ಜೀವಿಗಳ ಹಾಗೂ ನಿರ್ಜೀವಿಗಳಿಂದಾದ ಕಣ್ಣಿಗೆ ಕಾಣದ ವ್ಯವಸ್ಥಿತವಾದ ಬಿಡಿಸಲಾಗದ ಕೊಂಡಿಯೇ ಈ #ಜೀವಜಾಲ.

ಈ ಪುಸ್ತಕ ಕನ್ನಡದ ಅಪರೂಪದ ಪರಿಸರ , ಪ್ರಕೃತಿ ಹಾಗೂ ಜೀವ ವೈವಿದ್ಯಗಳ ಸಮೃದ್ಧ ವಿಚಾರಗಳ ಸಂಗ್ರಹ ಇಲ್ಲಿ ಭೂಮಿಯ ಹುಟ್ಟಿನಿಂದ ಇಂದಿನವರೆಗಿನ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಸುಂದರವಾಗಿ ಬರೆದಿದ್ದಾರೆ. ಆಹಾರ ಸರಪಳಿಯಿಂದ ಶುರುವಾಗಿ ಅಣಬೆಗಳ ವೈಶಿಷ್ಟ್ಯ, ಹುಲ್ಲಿ‌ನ ಬೆಳೆಗಳ ವಿಶೇಷತೆ, ಪ್ರಾಣಿಗಳ ಸಾಮ್ರಾಜ್ಯ ಗಡಿಗಳು ಹಾಗೂ ಸಂಸಾರ, ಸಂವಹನ, ಆಕ್ರಮಣ ಶೀಲತೆ ಹಾಗೂ ಪ್ರಾಣಿಗಳ ಪರೋಪಕಾರಿ ಗುಣಗಳು, ಸಾಂಘಿಕ ಪ್ರವೃತ್ತಿ, ಹೀಗೆ ಮುಂದುವರೆದು..

ಪಕ್ಷಿಗಳ ವಿಶ್ವ ಪರ್ಯಟನೆ ಅವುಗಳ ಸ್ವಯಂವರ, ವಂಶಾಭಿವೃದ್ಧಿ ವಿಚಾರಗಳು,ಅವುಗಳ ಗೂಡಿನ ವಿಶೇಷತೆಗಳು,ಸಾಲ್ಮನ್ ಮೀನುಗಳ ಜೀವನ ಯಾತ್ರೆ, ಮಾಂಸಹಾರಿ ಸಸ್ಯಗಳು,ಮರುಭೂಮಿಯ ಜೀವ ವೈವಿಧ್ಯಗಳು, ಛದ್ಮ ವೇಷಧಾರಿಗಳು, ಗೆದ್ದಲು ಹುಳುಗಳ ವಂಶಾಭಿವೃದ್ಧಿ, ಹೀಗೆ ಮುಂದುವರೆದು,

ಸಹಜವಾಗಿ ಹೊಂದುವ #ವಂಶನಾಶಗಳ ಜೋತೆಗೆ ಡೈನೋಸಾರಗಳ ವಂಶನಾಶ, ಡೋ ಡೋ ಹಕ್ಕಿಯ ನಾಶ, ಅಮೆರಿಕದ ಪ್ಯಾಸೆಂಜರ್ ಪಾರಿವಾಳ ಕೆನಾಡದ ಗ್ರೇಟ್ ಆಕ್ ಹೀಗೆ ಅನೇಕ ಮನುಷ್ಯನಿಂದ ಸರ್ವನಾಶ ಹೊಂದಿದ ಪರಿಸರದ ವಿಚಾರಗಳು ಬೇಸರ ತರುತ್ತವೆ.ವಂಶನಾಶ ಎನ್ನುವುದು ವಿಕಾಸದ ಹಾದಿಯಲ್ಲಿ ಎದುರಾಗುವ ಪ್ರಕ್ರೀಯೆ ನಿಜ ಆದರೆ ಅದಕ್ಕೆ ಮನುಷ್ಯನೇ ಕಾರಣ ಎಂಬುವುದೇ ಅತ್ಯಂತ ನೋವಿನ ವಿಷಾದದ ಸಂಗತಿ. #ಅಭಿವೃದ್ಧಿ_ಅನೀವಾರ್ಯ ಆದರೆ #ನಾಶ_ಅನೀವಾರ್ಯವಲ್ಲ, ಒಂದು ಚೌಕಟ್ಟಿನ ಬದುಕು ಮನುಷ್ಯನಿಗೆ ಬೇಕು ಪರಿಸರದ ವ್ಯವಸ್ಥೆಗೆ ಸಮ ಪಾಲುಧಾರರಿದ್ದಾರೆ ಎಂಬ ಅರಿವು ನಮಗಿದ್ದರೆ ಚೆಂದ, ನಾಶವಾದ ಒಂದು ಪ್ರಾಣಿ ಸಂಕುಲ ನಮ್ಮ ಮುಂದಿನ ಪೀಳಿಗೆಯ ಸರ್ವನಾಶದ ಪ್ರತೀಕ ಎಂಬ ತಿಳುವಳಿಕೆಯೇ ನಮಗಿರಬೇಕಾದ ಜವಾಬ್ಧಾರಿ. ಈ ನಿಟ್ಟಿನಲ್ಲಿ ಇಂತಃಹ ಒಳ್ಳೆಯ ಪುಸ್ತಕ ಶಾಲೆಗಳ‌ ಕಾಲೇಜುಗಳ‌ ಮಕ್ಕಳ‌ ಕೈಗೆ ಸಿಗಬೇಕು ಅವರು ಓದುವಂತಾಗಬೇಕು, ಹಾಗೂ ಪರಿಸರದ ಮೇಲೆ ಗೌರವ ಹಾಗೂ ಪ್ರೀತಿ ಮೂಡಬೇಕು ಆಗ ನಾವು ನಮ್ಮ ಜನಾಂಗ ಬದುಕುಳಿದೇವು.

ಸೃಷ್ಟಿಸಲಾಗದಮನುಷ್ಯನಿಗೆನಾಶದ_ಹಕ್ಕಿಲ್ಲ


ಪ್ರಕಾಶಕರು :- ಅಭಿನವ ಪ್ರಕಾಶನ, ಬೆಂಗಳೂರು ಮರು ಮುದ್ರಣದ ವರ್ಷ:- 2014
ಹಣ :- ₹.158/-

ದೀಪಕ್ ಹುಲ್ಕುಳಿ

ಕನ್ನಡ · ಶಿರಂಕಲ್ಲು ಈಶ್ವರ ಭಟ್ಟ

‘ಮುಕ್ತಿನಾಥದ ಪಥದಲ್ಲಿ’ – ಶಿರಂಕಲ್ಲು ಈಶ್ವರ ಭಟ್ಟ

ನಾನು ಓದಿದ ಪುಸ್ತಕ :- #ಮುಕ್ತಿನಾಥದ_ಪಥದಲ್ಲಿ
ಲೇಖಕರು :- ಶಿರಂಕಲ್ಲು ಈಶ್ವರ ಭಟ್ಟ

ಅದ್ಭುತಸಾಹಸದಕಥೆ

ಬಹುಷಃ ಹಿಮಾಲಯ ದರ್ಶನ ಎಂಬ ಹುಚ್ಚಿದ್ದವರಿಗೆ ಸ್ವಾಮಿ ರಾಮರ 'ಹಿಮಾಲಯ ಮಹಾತ್ಮರ ಸನ್ನಿಧಿ' ಎಂಬ ಪುಸ್ತಕ ವೇದಗಳಾದರೆ... ಈ ಪುಸ್ತಕ #ಭಗವದ್ಗೀತೆಯಂತೆ.. ಕನ್ನಡದಲ್ಲಿ...

ತಾವು ತೆರಳುವ ಪ್ರವಾಸದ ಸ್ಥಳಗಳ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹಿಸಿ .. ಯೋಜನೆಯೊಂದಿಗೆ, ಸಿದ್ಧತೆಯೊಂದಿಗೆ, ತಯಾರಿಯೊಂದಿಗೆ ಹಾಗೂ ಸಮಾನ ಮನಸ್ಕ ತಂಡದೊಂದಿಗೆ ತೆರಳುವುದು ಸಾಮಾನ್ಯ… ಆದರೆ ಇಲ್ಲಿ ಸಂಪೂರ್ಣ ಭಿನ್ನ.. ಕಾಣದ ದೇಶದ ಒಂದು ಪುಣ್ಯಕ್ಷೇತ್ರಕ್ಕೆ ಸ್ಥಳೀಯವಾಗಿಯೂ ಅತ್ಯಂತ ಕಡಿಮೆ ಮಾಹಿತಿಯುಳ್ಳ ಪ್ರದೇಶಕ್ಕೆ 1980ರಲ್ಲಿ ಜೂನ್ ತಿಂಗಳಲ್ಲಿ #ಏಕಾಂಗಿಯಾಗಿ ತೆರಳಿ ಅಲ್ಲಿನ ಅನೇಕ ಕಷ್ಟಗಳಿಗೆ ಎದೆಯೊಡ್ಡಿ ಜಯಿಸುವುದೇ ಈ ಪುಸ್ತಕದ ಸಾರಂಶ.. ಹಿಂದುಗಳ ಪವಿತ್ರ ಧಾಮವಾದ ತ್ರಿಮೂರ್ತಿಗಳು ನೆಲೆಸಿರುವ #ಮುಕ್ತಿನಾಥನ ದರ್ಶನ ಬಯಸಿ ನೇಪಾಳದ ಕಠ್ಮಂಡುವಿಗೆ ಬಂದು ಅಲ್ಲಿ ಪ್ರಸಿದ್ದ ಯಾತ್ರಾ ಸ್ಥಳಗಳಿಗೆ ಬೇಟಿ ನೀಡಿ ನಂತರ ಮಾಹಿತಿಗಾಗಿ ಮುಖ್ಯ ಆಲಯವಾದ ಪಶುಪತಿನಾಥದ ಮುಖ್ಯ ಪುರೋಹಿತರಾದ ಕನ್ನಡಿಗರಾದ ಪದ್ಮನಾಭ ಅಡಿಗರನ್ನು ಕೇಳಿದಾಗ "ಈ ಯಾತ್ರೆಯ ಹುಚ್ಚನ್ನು ಬಿಟ್ಟುಬಿಡಿ ಹಿಮಾಲಯದ ಹಿಮನದಿಗೆ ಬಿದ್ದು ಶರೀರವನ್ನು ಕಳೆದುಕೊಳ್ಳಬೇಡಿ ..‌ಇದು ಸಾಮಾನ್ಯರಿಗೆ ಕಷ್ಟಕರವಾದ ಕ್ಷೇತ್ರ" ಎಂದಾಗ ನಿರುತ್ಸಾಹಿಗಳಾಗದೆ ಮುಂದುವರೆದು .. ಪೋಖ್ರಾ ಎಂಬ ಊರನ್ನು ತಲುಪಿ ಅಲ್ಲಿಂದ ಸ್ವಲ್ಪ ಸ್ವಲ್ಪ ಮಾಹಿತಿ ಸಂಗ್ರಹಿಸಿ ಕಾಲು ನೆಡಿಗೆಯಲ್ಲಿ ಮುಂದುವರೆಯುತ್ತಾರೆ..

ಒಂದು ಹೊತ್ತಿನ ಊಟ… ಏಕಾಂಗಿಯಾಗಿ ಹಿಮ ಪರ್ವತಗಳಲ್ಲಿ.. ಸಿಕ್ಕ ಹಳ್ಳಿಗಳಲ್ಲಿ ರಾತ್ರಿ ಕಳೆದು.. ನಿರಂತರ ಎಂಟು ದಿವಸಗಳನ್ನು ನೆಡೆದು ಮುಕ್ತಿನಾಥನ ದರ್ಶನ ಮಾಡಿ ಹಾಗೇ ಕಾಲು ನೆಡಿಗೆಯೊಂದಿಗೆ ವಾಪಾಸ್ ಆಗುತ್ತಾರೆ… ಹಿಮಾಲಯದ ವಿಪರೀತ ಹವಾಮಾನ ವೈಪರಿತ್ಯ.. ಒಮ್ಮೆ ಭಯಂಕರ ಸಿಡಿಲು ಸಹಿತವಾದ ಮಳೆ.. ಸಹಿಸಲು ಅಸಾಧ್ಯವಾದ ಹಿಮಚಳಿ… ಆಹಾರದ ಅಭಾವ.. ಬೆಟ್ಟಗಳ ಕುಸಿತ.. ಹಿಮ ನದಿಗಳ ಪ್ರವಾಹ.. ಹೀಗೆ ಕಷ್ಟಗಳನ್ನು ಜಯಿಸಿದ ಪಟ್ಟಿ ಬೆಳೆಯುತ್ತದೆ..

ಹಿಮಾಲಯದ ಪಕೃತಿ ಸೌಂದರ್ಯ. ..ನದಿಗಳು… ಅಲ್ಲಿ‌ನ ಹಳ್ಳಿಗಳು ಅದರ ಆತೀಥ್ಯ ಅಲ್ಲಿನ ಕಷ್ಟ ಜೀವನ.. ವ್ಯಕ್ತಿಗಳು, ವರ್ತಕರು. ಮಹಿಳೆಯರ ಜನಜೀವನ… ಹಾಗೆ ಮುಕ್ತಿನಾಥನಲ್ಲಿ ಬೌದ್ಧ ಆಕ್ರಮಣ.. ಅವ್ಯವಸ್ಥೆ.. ಹೀಗೆ ಎಲ್ಲಾ ಚಿತ್ರಣಗಳನ್ನು ಅತ್ಯದ್ಭುತವಾಗಿ ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ..

ಅಂತಿಮವಾಗಿ,

ಬಹುಷಃ ಸಾಮಾನ್ಯರಾದರೆ ಪ್ರವಾಸದಿಂದ ವಿಮುಖರಾಗಲೇ ಬೇಕು ಅಂತಹಃ ಕಾಲದಲ್ಲಿ‌ ಒಬ್ಬರೇ ಎದೆಗುಂದದೆ ಸಾಗಿ ಯಶಸ್ವಿಯಾಗಿ ಅದನ್ನು ಅಕ್ಷರ ರೂಪಕ್ಕೆ ಇಳಿಸಿದ ಪೂಜ್ಯರು #ವಂದನಾರ್ಹರು..


ಪ್ರಕಾಶಕರು :- ಸಾಧನ ಪ್ರಕಾಶನ, ಬೆಂಗಳೂರು ಮರು ಮುದ್ರಣದ ವರ್ಷ:- 2011
ಹಣ :- ₹.75/-
PH:- 9480088960

ದೀಪಕ್ ಹುಲ್ಕುಳಿ

ಕನ್ನಡ · ಸಚಿನ್ ತೀರ್ಥಹಳ್ಳಿ

‘ನವಿಲು ಕೊಂದ ಹುಡುಗ’- ಸಚಿನ್ ತೀರ್ಥಹಳ್ಳಿ

ನಾನು ಓದಿದ ಪುಸ್ತಕ :- #ನವಿಲುಕೊಂದಹುಡುಗ
ಲೇಖಕರು :- ಸಚಿನ್ ತೀರ್ಥಹಳ್ಳಿ

ಕಥಾಲೋಕದಲ್ಲಿ_ಬೆರಗಿದೆ…

ಈ ಪುಸ್ತಕದ ಮುನ್ನುಡಿಯಲ್ಲೇ #ಜೋಗಿಯವರು ಒಂದು ಮಾತು ಹೇಳಿದ್ದಾರೆ.. ಈ ಲೇಖಕರು ಶ್ರೀ ಕೃಷ್ಣ ಆಲನಹಳ್ಳಿ ಹಾಗೂ ತೇಜಸ್ವಿಯನ್ನು ನೆನಪಿಸುತ್ತಾರೆ.. ಈ ಮಾತು ಅಕ್ಷರಷಃ ಸತ್ಯ.. ಸಾಹಿತ್ಯ ಲೋಕ ಬರಡಲ್ಲ ಹಾಗಂತ ಸಮೃದ್ಧಿಯೂ ಇಲ್ಲ.. ಹೀಗೆ ಯುವ ಲೇಖಕರಿಂದ ನಮ್ಮಂತವರ ಓದಿಗೆ ಆಶಾಭಾವ.. ಆದರೆ ಅವರು ಸಾಹಿತ್ಯ ಕೃಷಿಯಲ್ಲಿ ಉಳಿಯಬೇಕಷ್ಟೆ..ಒಂದಷ್ಟು ಅದ್ಭುತವಾದ ಕಥೆಗಳನ್ನು ಇಲ್ಲಿ ಬರೆದಿದ್ದಾರೆ.‌.. ಒಮ್ಮೊಮ್ಮೆ ಮಲೆನಾಡು ಹೀಗಿದೇಯೇ ಅನ್ನಿಸುವಂತೆ ಮಾಡುತ್ತದೆ.. ಜಾತಿ ಹಾಗೂ ಅದರ ಕಟ್ಟಳೆಗಳು ಅದರೊಳಗಿನ ಮಕ್ಕಳ ಲೋಕ 'ಬಿಡುಗಡೆ'ಯಲ್ಲಿದ್ದರೆ.. ಹೆಣ್ಣು .. ಜೀವನ.. ಬಂಡಾಯ..‌'ಒಂದು ಅಪ್ರಸ್ತು ಪ್ರಸಂಗ'ದಲ್ಲಿದೆ.. ಇನ್ನು 'ಕಾಡುಮಲ್ಲಿಗೆ' ಯಲ್ಲಿ ಶಿಕಾರಿಯಿಂದಾದ ಪೇಚಿನಿಂದ ನಕ್ಸಲ್ ಹುಡುಗಿ ಮಂದಾರ ಸಿಕ್ಕಿ ಮನೆಯಲ್ಲಿ ದೀಪಾವಳಿಯಂದು ಒಂದು ದಿವಸ ಇದ್ದು ಹೋಗುವ ಕಥೆ..ನಕ್ಸಲ್ ವಿಚಾರದಲ್ಲಿ ಮೃದುತ್ವ ಲೇಖಕರಲ್ಲಿ ಈ ಕಥೆಯ ಮೂಲಕ ಕಂಡರೆ... ಪ್ರೀತಿಯನ್ನು ಒಪ್ಪದೇ ಮಗಳನ್ನು ಕೊಂದಾಗ.. ಸೇಡು ತೀರಿಸಿಕೊಳ್ಳಲು ಬರುವ ಪ್ರೀಯಕರನ ಪಾತ್ರ 'ಅತಿಥಿ' ಯಲ್ಲಿದೆ.. ಪೇಚಿನ ಪ್ರಸಂಗ 'ಹಾವು ಮತ್ತು ಹುಡುಗಿ'ಯಲ್ಲಿದ್ದರೆ.. ಅಪ್ಪ ಅಮ್ಮನ ಜಗಳದಲ್ಲಿ ಕೂಸಿನ ಕಥೆ 'ದೀಪಾವಳಿ' ಯದ್ದು.. ಇಂಗ್ಲೀಷ್ ಭಾಷೆಗಳ ಥ್ರಿಲ್ಲರ್ ತರಹ ರಸ್ತೆ ಬದಿಯಲ್ಲಿ ಬೈಕುಗಳ ಮುಖಾಂತರದ ಪ್ರೀತಿ (crush).. ಹೇಳಿ ಅಂತಿಮವಾಗಿ ದುಃಖದಲ್ಲಿ ಮುಗಿಸಿದ ಕಥೆ 'ಕನ್ನಡಿ ಹಿಂದಿನ ಹುಡುಗಿ' ಅಕ್ಷರಗಳನ್ನೇ ಮಾತುಕತೆಯಾಡಿಸಿ ವಿಭಿನ್ನವಾಗಿಸಿ ಗೆದ್ದಿರುವ ಕಥೆ 'ಕತೆಗಾರನ ಕತೆ' ಯಾಗುತ್ತದೆ...

ಆದರೆ ಪೂರ್ಣ ಪುಸ್ತಕದಲ್ಲಿ ವಿಶಿಷ್ಟವೆ‌ನಿಸುವುದು ನವಿಲನ್ನು ಅಚಾನಕ್ ಆಗಿ ಕೊಂದು…‌ನಂತರ ಪ್ರೀತಿಗೆ ಬಿದ್ದು ಹೊರ ಪ್ರಪಂಚಕ್ಕೆ ಬಂದು ಓದಿನಲ್ಲಿ ಅನಾವರಣಗೊಂಡು ಜೀವನಕ್ಕೆ ಮರಳುವ ನಾಯಕ .. ಅವನ ಪ್ರೀತಿಗಾಗಿ ಪರಿತಪಿಸುವ ನಾಯಕಿ ಚಿತ್ರಣದ ‘ನವಿಲು ಕೊಂದ ಹುಡುಗ’ ವಿಶೇಷವಾಗಿದೆ.. ಹಾಗೇ… ಅಪ್ಪನ ಮರು ಮದುವೆಯಾದ ಚಿಕ್ಕಮ್ಮ ಕೆಟ್ಟವಳು ಎಂದು ಭಾವಿಸಿ ಲೋಕವು ಹಾಗೇ ತಿಳಿದು ರಸ್ತೆ ಬದಿಯ ಹುಚ್ಚನಿಂದ ಬದಲಾಗಿ ಮನೆಯಿಂದ ಹೊರ ಪ್ರಪಂಚಕ್ಕೆ ಚಿಕ್ಕಮ್ಮನನ್ನು ತಂದಾಗ ಹುಚ್ಚು ಕೃಷ್ಣಮೂರ್ತಿಯ ಇನ್ನೂಂದು ಮುಖ ದರ್ಶನ ರೀತಿ ..‌ ‘ಯಾವತ್ತು ಹಾಡುತ್ತಿದ್ದ ಹಾಡು’ ಈ ಕಥೆಯಲ್ಲಿ ಅದ್ಭುತವಾಗಿದೆ..

ಅಂತಿಮವಾಗಿ,

ಪೂರ್ಣ ಪುಸ್ತಕದ ಕೆಲವೂಂದು ಕಥೆಗಳು ಮಲೆನಾಡಿನ ಪರಿಸರದ ಸಿದ್ಧ ಸೂತ್ರವೆನಿಸಿದರೂ ಕಥೆಗಳಲ್ಲಿನ ಅನಿರೀಕ್ಷಿತವಾದ ತಿರುವು.. ಪಾತ್ರಗಳ ರಚನೆ.. ವಿಸ್ತಾರ.. ಪೋಷಣೆ.. ಬಹಳ ವಿಶೇಷವಾಗಿದೆ.. ಹಾಗೇ ಇನ್ನಷ್ಟು ಒಳ್ಳೆಯ ಕಥೆಗಳನ್ನು ಕಾದಂಬರಿಗಳನ್ನು ನಿರಂತರವಾಗಿ ಲೇಖಕರಿಂದ ಅಪೇಕ್ಷಿಸುವಂತಿದೆ..


ಪ್ರಕಾಶಕರು :- ಅಂಕಿತ ಪುಸ್ತಕ . ಬೆಂಗಳೂರು ಮುದ್ರಣದ ವರ್ಷ:- 2018
ಹಣ :- ₹.95/-
PH:- 080 26617100

ದೀಪಕ್ ಹುಲ್ಕುಳಿ

ಕನ್ನಡ · ಶಿವರಾಮ ಕಾರಂತ

‘ಗೆದ್ದ ದೊಡ್ಡಸ್ತಿಕೆ’ – ಶಿವರಾಮ‌ ಕಾರಂತ

ನಾನು ಓದಿದ ಪುಸ್ತಕ :- #ಗೆದ್ದ_ದೊಡ್ಡಸ್ತಿಕೆ
ಲೇಖಕರು :- ಶ್ರೀ ಶಿವರಾಮ‌ ಕಾರಂತ

ಜಾತಿಯಹಾಗೂಶ್ರೀಮಂತಿಕೆಯದೊಂಬರಾಟವೇಗೆಲುವಲ್ಲ

ಮನಸ್ಸಿನಶಾಂತಿಯೇಗೆಲವು

ಈ ಪುಸ್ತಕವನ್ನು ಲೇಖಕರು ಬರೆದಿದ್ದು 1979ರಲ್ಲಿ ಅಂದಿನ ಸಾಮಾಜಿಕ ವಿದ್ಯಮಾನಗಳನ್ನು ಆಧರಿಸಿ ಜಾತಿ ರಾಜಕೀಯ ವ್ಯವಹಾರ ಸಾಂಸರಿಕ ವಿಷಯಗಳನ್ನು ತುಂಬಿ ಬರೆದಿರುವ ಪುಸ್ತಕವಿದು. ಆದರೆ ಇಲ್ಲಿ ಪ್ರಸ್ತಾಪಿಸಿರುವ ವಿಷಯ 40 ವರ್ಷಗಳಷ್ಟು ಹಳೆಯದಾಗಿರದೆ ಬಹುತೇಖ ಇಂದಿಗೂ ಪ್ರಸ್ತುತವಾಗಿದೆ.. ಎನ್ನಬಹುದು..

ಕಾದಂಬರಿಯೊಳಗೆ

ಮುದ್ದೂರಿನ #ನಾಗೇಂದ್ರ ತಂದೆಯ ಕ್ರೀಯಾಕರ್ಮಕ್ಕಾಗಿ ಗೋಕರ್ಣದಲ್ಲಿ ಇದ್ದಾಗ ಸಮುದ್ರದಲ್ಲಿ ಮುಳುಗುತ್ತಿದ್ದ ಉಡುಪಿಯ ಪ್ರಸಿದ್ದ ಶ್ರೀಮಂತ ಬೇರೂರು ವಂಶದ #ನಾಗನಂದನನ್ನು ಉಳಿಸಿದಾಗ ನಾಗೇಂದ್ರನನ್ನು ಆತ್ಮೀಯ ಗೆಳೆಯನನ್ನಾಗಿಸಿ ಅವನನ್ನು ಮನೆಯಲ್ಲಿ ಇರಿಸಿಕೊಂಡು ಓದಿಸಿ ತನ್ನ ಹತ್ತಿರವೇ ಕೆಲಸ ಕೊಟ್ಟು ಅವನ ಜೀವನವನ್ನು ಒಂದು ಹಂತಕ್ಕೆ ಬರಲು ಕಾರಣನಾಗುತ್ತಾನೆ..

ಇಲ್ಲಿ ನಾಗನಂದನ ಮನೆ ಎನ್ನುವುದು ಬಡವನಾದ ನಾಗೇಂದ್ರನಿಗೆ ಬಂಗಾರದ ಪಂಜರ.. ಸ್ವಾತಂತ್ರ್ಯದ ಬಯಕೆಯ ಅವನಿಗೆ ಅದೇ ಮನೆಯ #ಮೀನಾಕ್ಷಿ ಬಯಸಿದಾಗ ಅದು ಒಂದಷ್ಟು ತಿರುವು ಮುರುವುಗಳಿಂದ ಸುಖಾಂತ್ಯವಾಗಿ ಕೃಷಿ ಬದುಕಿನೊಂದಿಗೆ ಮುಕ್ತಾಯವಾಗುವುದರೂಂದಿಗೆ ಕಾದಂಬರಿ ಮುಗಿಯುತ್ತದೆ… ಇದರಲ್ಲಿ ಕಥೆ ಬಹಳ ಸಹಜವಾಗಿದೆ.. ಆದರೆ ಪಾತ್ರಗಳ ಮುಖಾಂತರ ವಿಷಯಗಳನ್ನು ಪ್ರಸ್ತಾಪಿಸಿದ ಬಗೆ ವಿಶೇಷ... ನಾಗೇಂದ್ರನ ಬಾಲ್ಯ ಸ್ನೇಹಿತ ಹಾಂಡನ ಮುಖಾಂತರ ಜಾತಿ ವ್ಯವಸ್ಥೆಯ ಸಂಕೀರ್ಣತೆಗಳನ್ನು... ಆ ಜಾತಿ ವ್ಯವಸ್ಥೆ ಭಾಗವಾದ ಸಂಕಣ್ಣನ ಧಾರ್ಷ್ಟ್ರ್ಯ.. ಅಂದಿನಿಂದ ಇಂದಿಗೂ #ಅಯ್ಯ_ಅಣ್ಣ_ಅಪ್ಪಗಳ ಜಾತಿಯ ದೃಷ್ಟಿಕೋನ ಇಂದಿಗೂ ಬದಲಾಗಿಲ್ಲ.. ಎನ್ನುವುದನ್ನು ನಿರೂಪಿಸುತ್ತಾರೆ.

ಬೇರೂರು ಕುಟುಂಬ ಅದರ ವ್ಯವಹಾರ.. ಆ ಮೂಲಕ ಮಲೆನಾಡನ್ನು ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣಿಗಳ ಪಾಲುದಾರಿಕೆಯೊಂದಿಗೆ ದೋಚುವ ರಾಜಕೀಯ ವ್ಯವಹಾರಗಳು.. ಅಲ್ಲಿ ರಸ್ತೆ.. ಡ್ಯಾಂ.. ವಿದ್ಯುತ್.. ಸೇತುವೆ.. ಹೀಗೆ ಬಹುಮುಖ ವ್ಯವಸ್ಥೆಯಲ್ಲಿನ ಭ್ರಷ್ಟಚಾರ.. ಅದು ವ್ಯಾಪಿಸಿದ ಪರಿ.. ಸರ್ಕಾರ ಪ್ರಾಯೋಜಿತ ಭ್ರಷ್ಟಾಚಾರ.. ಜಾತಿ ಸಂಕೀರ್ಣಗಳನ್ನು ಕಾರಂತರ ದೃಷ್ಟಿಕೋನದಲ್ಲಿ ನೊಡುವ ಬಗೆ ಬಹಳ ವಿಶಿಷ್ಟವಾಗಿದೆ.. ಅದು ಈ ಕಾದಂಬರಿಯಲ್ಲಿದೆ…

ಅಂತಿಮವಾಗಿ

ಒಟ್ಟಿನಲ್ಲಿ ಜಾತಿಯೇ ಪ್ರಧಾನವಾದ... ರಾಜಕೀಯ ಪ್ರೇರಿತವಾದ ನಮ್ಮ ಜನ ಸಾಮಾನ್ಯರ ಜೀವನ ಕಳೆದ ಹಲವು ದಶಕಗಳಿಂದ ಏನೂ ಬದಲಾಗಿಲ್ಲ ಅನ್ನುವುದನ್ನು ಸಾರುವ ಈ ಪುಸ್ತಕ ಮನಸ್ಸು ಶಾಂತಿಯಿಂದ ಜೀವಿಸುವುದೇ #ಗೆದ್ದ_ದೊಡ್ಡಸ್ತಿಕೆ ಎನ್ನುತ್ತದೆ...

ದೀಪಕ್ ಹುಲ್ಕುಳಿ

ಕನ್ನಡ · ಕುವೆಂಪು

‘ಕಾನೂರು ಹೆಗ್ಗಡತಿ’ – ಕುವೆಂಪು

ನಾನು ಓದಿದ ಪುಸ್ತಕ :- #ಕಾನೂರುಹೆಗ್ಗಡತಿ

ಲೇಖಕರು :- #ಕುವೆಂ_ಪು.

#ಮಿಥ್ಯೆಯ_ದೃಷ್ಟಿ_ಕ್ಷಣಿಕ #ಸತ್ಯ_ಪಥ_ಎಂದಿಗೂ_ಅಮರ ಕಾದಂಬರಿಯನ್ನು ಒಂದು ಕಾಲಘಟ್ಟದಲ್ಲಿ ದಾಖಲಿಸಬೇಕಾದರೆ ಅದರ ಸಂಪೂರ್ಣ ಅರಿವು.. ಬಹು ದೃಷ್ಟಿಕೋನದ ಅಗತ್ಯ ಹಾಗೇ ಕಥಾ ಪರಿಸರದ ಆಳವಾದ ಜ್ಞಾನ ಲೇಖಕರಿಗೆ ಇರಬೇಕು.. ಎನ್ನುವುದನ್ನು ಸಾರಿ ಹೇಳಿದ ಪುಸ್ತಕವಿದು.. ಇಲ್ಲಿ ಯಾವುದೂ ಒಂದು ವಿಚಾರವನ್ನು.. ಸಿದ್ದಾಂತವನ್ನು.. ವ್ಯವಸ್ಥೆಯನ್ನು.. ನಂಬಿಕೆಯನ್ನು ಅಥವಾ ಜಾತಿಯನ್ನು ವಿಜೃಂಭಿಸಿಲ್ಲ.. ಅಥವಾ ತುಚ್ಛಿಕರಿಸಿಯೂ ಇಲ್ಲ.. ಬಹುತೇಕ ಎಲ್ಲಾ ಅವಕಾಶಗಳು ಇದ್ಯಾಗ್ಯೂ... ಅವುಗಳನ್ನು ಹೊರತು ಪಡಿಸಿ ಯಥಾವತ್ತಾಗಿ ಜನಜೀವನವನ್ನು ದಾಖಲಿಕರಣ ಮಾಡಿದ ರೀತಿಗಾಗಿಯೇ ಕುವೆಂಪು.. #ರಾಷ್ಟ್ರಕವಿ... ಹಾಗಾಗಿ .. ಇವರು #ವಿಶ್ವಮಾನವ_ಸಂದೇಶವನ್ನು ಸಾರಿದ ಕವಿ... ಇದನ್ನು ಈಗೀನ ಪೀಳಿಗೆಯ ಅವರ ಅಭಿಮಾನಿಗಳು ಎನಿಸಿಕೊಂಡವರು ಅರಿಯಬೇಕಾದ ಸತ್ಯ.. ಅದು ಅನೀವಾರ್ಯ... ಸಹ..

ಇಲ್ಲಿ ಜಾತಿಯ ಚಿತ್ರಣವಿದೆ.. ಆದರೆ ವಿಜೃಂಭಿಸಿಲ್ಲ..‌ ಜಾತ್ಯತೀತ ಬೌದ್ಧ ನಿಲುವಿದೆ.. ಆದರೆ ಯಾವುದೂ ಆಚಾರಗಳನ್ನು ಕೀಳಾಗಿಸಿಲ್ಲ.. ಸರಿಯಾದ ಆಚರಣೆಯನ್ನು ಸುಂದರವಾಗಿ ಹಾಗೂ ತಪ್ಪು ನಡೆಗಳನ್ನು ಖಂಡಿಸಿ ಚಿತ್ರಿಸಿದ್ದಾರೆ.. #ಮೌಡ್ಯಗಳನ್ನುತುಚ್ಛಿಕರಿಸಿದರೆ.. #ಮೌಲ್ಯಗಳನ್ನುಉನ್ನತಿಕರಿಸಿದ್ದಾರೆ … ಹಾಗಾಗಿ ಇಷ್ಟು ವರ್ಷಗಳಾದ ಮೇಲೂ ಕನ್ನಡ ಸಾರಸ್ವತ ಲೋಕದಲ್ಲಿ ಶ್ರೇಷ್ಟತೆಯ ಸಾರಿ .. ಗೌರವ ಮೂಡಿಸುತ್ತಿರು ಕೃತಿ ಇದು..

ಕಾದಂಬರಿಯೊಳಗೆ..

ಮಲೆನಾಡು ಎಂಬ ಕೌತುಕದ ಅಭೇದ್ಯ, ಅಗಾಧ ಹಾಗೂ ಶ್ರೀಮಂತವಾದ ಕಾಡಿನ ಜೀವನದಲ್ಲಿ ಆಧುನಿಕತೆ ಎಂಬ ಗಾಳಿ ಬೀಸಲು ಪ್ರಾರಂಭವಾದ ಸಮಯದಲ್ಲಿ ಆ ಜನಜೀವನವನ್ನು ಸುಂದರವಾಗಿ ನೈಜವಾಗಿ ಯಥಾವತ್ತಾಗಿ ದಾಖಲಿಸಿದ ಕೃತಿ ಇದು.. ಹಾಗಾಗಿ ಇದು ಒಂದು #ಮೈಲಿಗಲ್ಲಿನ_ಕೃತಿ.. ಮಲೆನಾಡಿನ ಪ್ರಮುಖ ಜನಾಂಗವಾದ ಒಕ್ಕಲಿಗರ ಜೀವನವನ್ನು ಕೇಂದ್ರಿಕರಿಸಿ ಸುತ್ತಮುತ್ತಲಿನ ಪೂರ್ಣ ಸಮಾಜವನ್ನು ಹಾಗೇ ಇಲ್ಲಿನ ಸುಂದರ ಪರಿಸರವನ್ನು ಹೊರ ಪ್ರಪಂಚಕ್ಕೆ ತೆರೆದಿಟ್ಟ ಕೃತಿ ಇದು... ಹಾಗೇ ಇದು ಪೂರ್ಣ..‌ ಇಲ್ಲಿ ಕೊರತೆಗಳಿಲ್ಲ.. ‌‌ ಮೈಸೂರಿನಿಂದ ಊರಿಗೆ ಬರುವ ಹೊವಯ್ಯ ಹಾಗೂ ರಾಮಯ್ಯನೊಂದಿಗೆ ತೀರ್ಥಹಳ್ಳಿಯ ಕಲ್ಲುಸಾರದೊಂದಿಗೆ ತೆರೆದುಕೊಳ್ಳುವ ಕಥೆ ಸೀತೆಯ ಪ್ರೇಮದೊಂದಿಗೆ ವಿಸ್ತಾರವಾಗುತ್ತದೆ.. ಇಲ್ಲಿ ಈ ಕೃತಿಯನ್ನು ಒಂದು ಸುಂದರ ಪ್ರೇಮ ಕಾವ್ಯವಾಗಿಸಿದ್ದಾರೆ ... ಇಲ್ಲಿ‌ ವಿರಹವಿದೆ... ತ್ಯಾಗವಿದೆ..‌ಆಸೆಯೂ ಇದೆ.. ಅಂತಿಮವಾಗಿ ಪ್ರೀತಿ ದಾಂಪತ್ಯದಲ್ಲಿ ಅಂತ್ಯವಾಗದೇ ಹೋದಾಗ ದೈವಿಕ ಸಂಭಂದಗಳಲ್ಲಿ ಯಶಸ್ವಿಗೊಳಿಸಿದ್ದಾರೆ..

ಪೂರ್ಣ ಕಥೆಯಲ್ಲಿ ಸಾತ್ವಿಕ ಗುಣಗಳನ್ನು ಹೂಂದಿದ, ಮೌಢ್ಯಗಳ ವಿರುದ್ಧ ಸಾಗುತ್ತಾ, ಹೊಸ ಪಥ ಬದಲಾಯಿಸುವ ವಿಚಾರದ, ಕಾಲಕ್ಕೆ ತಕ್ಕಂತೆ ಬದಲಾವಣೆಯ ಹಂತದ ಪ್ರತೀಕವಾಗಿ ಚಿತ್ರಿಸಿದ #ಹೂವಯ್ಯನ ಪಾತ್ರ ಒಂದು ತೂಕವಾದರೆ.. ತನ್ನ ದೌಷ್ಟ್ರ್ಯ , ದಬ್ಬಾಳಿಕೆ, ರಾಕ್ಷಸೀ ಪವೃತ್ತಿಯ ವಿಜೃಂಭಣೆಯ ಅಂದಿನ ಬಹು ಸಂಖ್ಯಾತ ಶ್ರೀಮಂತ ಮೇಲ್ವರ್ಗದ ಪ್ರತೀಕವಾಗಿರುವ #ಚಂದ್ರಯ್ಯಗೌಡರದು ಮತ್ತೂಂದು ತೂಕ..‌ ಇವರಿಬ್ಬರ ನಡುವಿನ ತಾರ್ಕಿಕ ದ್ವಂದ್ವವೇ.. ಕಥಾ ಹಂದರ.. ಒಂದು ಭವಿಷ್ಯದ ಆಶಾಭಾವ.. ಇನ್ನೂಂದು ಸರ್ವನಾಶದ.. ಪ್ರತೀಕ..

ಅನೇಕ ಶ್ರೇಷ್ಠ ಪಾತ್ರಗಳು.. ವಿಧಿಯ ಹಣೆಬರಹದಂತೆ ಪ್ರೀತಿಸಿದವನು ಸಿಗದಿದ್ದರೂ ತನ್ನ ಸ್ವಚ್ಛ ಮುಗ್ಧ ಮನಸ್ಸಿನಿಂದಾಗಿ ಅದೇ ಛಲದಿಂದಾಗಿ ಗೆಲ್ಲುವ ಸೀತೆ ಇಲ್ಲಿ ಬದಲಾಗುತ್ತಿರು ಸ್ತ್ರೀಯ ಪ್ರತಿನಿಧಿಯಾದರೆ.. ನಂಬಿದ ವಿಚಾರಗಳೆಡೆ ವಿಮುಖನಾಗಿ ನಾಶವಾಗುವ ರಾಮಯ್ಯ.. ತನ್ನದೇ ತಪ್ಪುಗಳಿಂದ ಅಧಃಪತನ ಕಾಣುವ ಪಾತ್ರವಾಗಿ ಸುಬ್ಬಮ್ಮ ಹೆಗ್ಗಡತಿಯನ್ನು ಚಿತ್ರಿಸಲಾಗಿದೆ.. ತಾಯಿಯ ನೈಜ ಪ್ರೀತಿಯ ನಾಗಮ್ಮ.. ಸಮಯ ಸಾಧಕತನದ ಸೇರೆಗಾರ ರಂಗಪ್ಪ ಶೆಟ್ಟಿ.. ಹಾಗೇ ಮುತ್ತಳ್ಳಿಯ ಶ್ಯಾಮಯ್ಯ ಗೌಡರು.. ಸೀತೆಮನೆ ಸಿಂಗಪ್ಪ ಗೌಡರು..ಗಂಗೆ.. ಚಿನ್ನಯ್ಯ.. ಪುಟ್ಟಮ್ಮ.. ಬಾಡೂಟದ ಸೋಮ.. ಕಳ್ಳುಗುತ್ತಿನ ತಿಮ್ಮ.. ಕಳ್ಳಿನ ಬೈರ.. ವೆಂಕಪ್ಪಯ್ಯ.. ಕಳ್ಳಿನ ಅಂಗಡಿ ಅಲ್ಲಿನ‌ ಪಾತ್ರಗಳು.. ಹೀಗೆ ಒಂದೇ ಎರಡೇ.. ಎಲ್ಲಾ ಪಾತ್ರಗಳು.. ಮನಸ್ಸಿನ ಒಳಗೆ ಆಳವಾಗಿ ಬೇರೂರುತ್ತವೆ..

ಇನ್ನು #ಪುಟ್ಟಣ್ಣನ ಪಾತ್ರ ಹಾಗೂ ಅದನ್ನು ಬಳಸಿದ ಬಗೆ ಬಹಳ ವಿಶೇಷ.. ಅನೇಕ ಶತಮಾನಗಳಿಂದ ಮಲೆನಾಡಿನ #ಕಾಡಿನ_ಬೇಟೆಗೆ ಇತಿಹಾಸಗಳಿದೆ.. ಹಾಗೂ ಅಲ್ಲಿ ಸವಾಲಿದೆ.. ಸಾಹಸವಿದೆ.. ಶೌರ್ಯವಿದೆ..‌ ಶ್ರೇಷ್ಟತೆಯಿದೆ.. ಹಾಗೇ ದುಃಖವಿದೆ.. ವಿಶೇಷವಾಗಿ ಹುಚ್ಚಿದೆ.. ಇವುಗಳೆಲ್ಲಾ ಕೇವಲ‌ ಮಾತುಗಳಲ್ಲಿ ಮಾತ್ರಾ ಹರಿದಾಡುತ್ತಿತ್ತು.. ಬಹುಷಃ ಮೊದಲ ಬಾರಿಗೆ ಪುಸ್ತಕವಾಗಿ ಅಧಿಕೃತ ದಾಖಲಾದ ಪುಸ್ತಕ ಇದಿರಬಹುದು.. ಪುಟ್ಟಣ್ಣನ ಹಾಗೂ ಅವನ ನಾಯಿಗಳ ಮುಖಾಂತರ ಪಾತ್ರದಲ್ಲಿ ಸಂಪೂರ್ಣ ಇನ್ನೂಂದು ಬೇಟೆಯ ಜಗತ್ತನ್ನು ನಮ್ಮೆದುರು ತೆರೆದಿಟ್ಟಿದ್ದಾರೆ..

ಪರಿಸರವನ್ನು ಅಲ್ಲಿನ ಪ್ರಾಣಿ ಪಕ್ಷಿಗಳನ್ನು ಚಿತ್ರಿಸಿರುವ ಬಗೆಗೆ ಈ ಪುಸ್ತಕವನ್ನು ಕಾದಂಬರಿಗಿಂತಲೂ ಕಾವ್ಯವೇನೂ ಅನ್ನಿಸುವಂತೆ ಮಾಡಿದ್ದಾರೆ.. ಹಾಗೇ ಕೇವಲ ಇದು ದೊಡ್ಡವರ ಜಗತ್ತಲ್ಲ.. ಮಕ್ಕಳಿಗೂ ಬಹುಮುಖ್ಯ ಪಾತ್ರವಿದೆ.. #ವಾಸು ಹಾಗೂ #ಲಕ್ಷ್ಮೀಯ ಮುಖಾಂತರ ಮಕ್ಕಳ ಮುಗ್ಧ ಮನಸ್ಸಿನ ಚಿತ್ರಣ.. ಅವರ ಚಟುವಟಿಕೆಗಳು.. ಪ್ರಶ್ನೆಗಳು..‌ಕನಸಿನ ಲೋಕವನ್ನು ಪರಿಚಯಿಸಿದ ಪರಿಗೆ ಲೇಖಕರು ಮಾತ್ರಾ ಸಾಟಿಯೇನೂ…

#ಅಂತಿಮವಾಗಿ…ಕಲ್ಲುಸಾರದೊಂದಿಗೆ ಶುರುವಾಗಿ ಕವಿಶೈಲದ ಪರಿಸದವರೆಗೆ ನಾವು ಕಥೆಯೊಂದಿಗೆ ಚಲಿಸಿ ಓದಿ ಮುಗಿಸಿದ ಮೇಲೆ ಕವಿಶೈಲದಲ್ಲಿ #ಬುದ್ಧನಾಗಿ ಹೂವಯ್ಯನ ಬದಲು ಕು.ವೆಂ.ಪು. ಕಂಡರೆ.. ಅದು ಲೇಖಕರಿಗೆ ನಾವು ನೀಡುವ ಗೌರವ.. ಅಲ್ಲವೇ... ಹಾಗೇ .. ಅದೇ ಈ ಮೇರು ಕೃತಿಯ ಮಾನದಂಡವೂ ಇರಬಹುದೇನೂ...

ಬಹುಷಃ

ಕಾರಂತರಕಾದಂಬರಿಗಳಜೀವನ_ಪ್ರೀತಿ…

ಬೈರಪ್ಪರಕಾದಂಬರಿಗಳಸಾಮಾಜಿಕದೃಷ್ಟಿ.. ಎರಡು ಮಿಶ್ರಿತವಾಗಿ ಈ ಕಾದಂಬರಿಯನ್ನು ಮೊದಲೇ ರಚಿಸಿರುವುದರಿಂದ.. ಕು.ವೆಂ.ಪು #ರಸಋಷಿ..


ಪ್ರಕಾಶಕರು :- ಉದಯರವಿ ಪ್ರಕಾಶನ. ಮೈಸೂರು ಮುದ್ರಣದ ವರ್ಷ:- 2002
ಹಣ :- ₹.200

ದೀಪಕ್ ಹುಲ್ಕುಳಿ

ಕನ್ನಡ · ಸೂರಿ ಹಾರ್ದಳ್ಳಿ

‘ಚೆಂಬೇಶನೊಂದಿಗೆ ಸಂದರ್ಶನ’- ಸೂರಿ ಹಾರ್ದಳ್ಳಿ

ನಾನು ಓದಿದ ಪುಸ್ತಕ :- #ಚೆಂಬೇಶನೊಂದಿಗೆ_ಸಂದರ್ಶನ
ಲೇಖಕರು:- ಸೂರಿ ಹಾರ್ದಳ್ಳಿ

ಕೆಲವೂಂದು ಸರ್ಪೈಸ್ ಹೀಗೆ ಇರುತ್ತವೆ.. ಹಾಸ್ಯ ಬರಹಗಳು ಎಂಬ ದಪ್ಪ ಅಕ್ಷಗಳಲ್ಲಿ ಬರೆದ ಪುಸ್ತಕವಿರುತ್ತದೆ.. ಆಮೇಲೆ ತಿಳಿಯುವುದು ನಾವು ಇಂತಹಃ ಪುಸ್ತಕ ಓದುವುದೇ ಹಾಸ್ಯವೆಂದು.. ಕೆಲವು ಕದ್ದ ಮಾಲುಗಳು.. ಹಾಗೇ ಹಾಸ್ಯ ಎಂದರೆ ವಯಸ್ಕರ ಹಳಸಲು ಜೋಕ್ಗಳು ..ಹೀಗೆ ಯೋಚಿಸಿ ಪುಸ್ತಕ ಬಿಚ್ಚಿದರೆ #ಒಂದಷ್ಟು_ಆಶ್ಚರ್ಯ ಇದರಲ್ಲಿದೆ..

ಆಧುನಿಕ ಜಗತ್ತಿನ ಸಾಮಾನ್ಯ ಸಂಗತಿಗಳಲ್ಲಿ‌ ಹಾಸ್ಯ ಹುಡುಕಿದ್ದಾರೆ…ನಾನು ಕಾರಿನ ಮಾಲಿಕನಾಗಿದ್ದೆ.. ಇದು ಭಾಗ್ಯ.. ಇದು ಭಾಗ್ಯ.. ಇದು ಭಾಗ್ಯವಯ್ಯ.. ಕಥೆಗಳು ಖುಷಿ ನೀಡುತ್ತವೆ.. ವಿಕೆಂಡ್ ವಿತ್ ಕಾಶಿ ಕಥೆಯಂತೂ ಒಂದು ಒಳ್ಳೆಯ ಹಾಸ್ಯ ಪ್ರಹಸನಕ್ಕೆ ಉದಾಹರಣೆ… ದೂರದರ್ಶನ ಮತ್ತು ನಾನು ಬದಲಾದ ಕಾಲ ಘಟ್ಟವನ್ನು ತಿಳಿಸಿದರೆ ಚೆಂಬೇಶನೂಂದಿಗೆ ಸಂದರ್ಶನ ಒಂದು ಚೆಂಬಿನ ಸ್ವಗತದ ಹಾಸ್ಯವನ್ನು ಅತ್ಯುತ್ತಮವಾಗಿ ತಿಳಿಸಲಾಗಿದೆ… ಅಂದಿನ ಗ್ರಂಥಾಲಯಗಳ ಕಥೆ ..ಗೋಲಿ ಸೊವಡಾದ ಕಥೆ.. ಮಂಗಗಳ ಕಾಟದ ಕಥೆ.. ಲಾಯರನೂಂದಿಗೆ ಪರಿಹಾರದ ಕಥೆ.. ನಿವೃತ್ತಿಯ ನಂತರದ ಕಥೆ.. ಹೀಗೆ ಎಲ್ಲವೂ ಹಾಸ್ಯಕ್ಕೆ ಒತ್ತು ನೀಡಿ ಬರೆಯಲಾಗಿದೆ.. ಐಟಿ ಬಿಟಿ ಎಂಬ ಮಾನವ ಪ್ರಕಾರ ಕಥೆಯಲ್ಲಿ ಬದಲಾದ ಜೀವನ ಶೈಲಿಯ ಅನೇಕ ಸತ್ಯಗಳನ್ನು ನೇರವಾಗಿ ಹೇಳುವ ಧೈರ್ಯ ಮಾಡಿದ್ದಾರೆ.. ಒಟ್ಟಿನಲ್ಲಿ ಪೂರ್ಣ ಪುಸ್ತಕ ಚೆನ್ನಾಗಿದೆ..

ಹಾಸ್ಯಕ್ಕೆ ಓತ್ತು ನೀಡಿ ಚೆಂದದ ಬರಹಗಳನ ಪುಸ್ತಕವಾಗಿಸಿದ ಲೇಖಕರ ಶ್ರಮಕ್ಕೆ ಅಭಿನಂದನೆಗಳು..

ಪ್ರಕಾಶಕರು :- ಅಕ್ಷಯ ಪ್ರಕಾಶನ. ಬೆಂಗಳೂರು ಮುದ್ರಣದ ವರ್ಷ:- 2016
ಹಣ :- ₹.125-

ದೀಪಕ್ ಹುಲ್ಕುಳಿ

ಕನ್ನಡ · ಕೆದಂಬಾಡಿ ಜತ್ತಪ್ಪ ರೈ

‘ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ’ – ಕೆದಂಬಾಡಿ ಜತ್ತಪ್ಪ ರೈ

ನಾನು ಓದಿದ ಪುಸ್ತಕ :- #ಬೆಟ್ಟದತಪ್ಪಲಿನಿಂದಕಡಲ_ತಡೆಗೆ
ಲೇಖಕರು:- ಕೆದಂಬಾಡಿ ಜತ್ತಪ್ಪ ರೈ

ಹುಟ್ಟುಗುಣಸುಟ್ಟರೂ_ಹೋಗಲ್ಲ

ಒಂದು ಜೊಡಿ ಹುಲಿ ಶಿಕಾರಿ.. ಅದರ ಜೊತೆಗೆ ಸಿಕ್ಕ ಮರಿಗಳನ್ನು ಕೆರಳದಲ್ಲಿ ಸಾಕಿ ಅದರಲ್ಲಿ ಒಂದು ಬದುಕಿ ಅದರಿಂದಾಗುವ ಅನಾಹುತ ಅಂತಿಮವಾಗಿ ಲೇಖಕರಾದ ಜತ್ತಪ್ಪ ರೈಗಳೇ ಹೋಗಿ ಕೊಲ್ಲುವುದರೊಂದಿಗೆ ಮುಕ್ತಾಯವಾಗುತ್ತದೆ.. ಜತ್ತಪ್ಪ ರೈಗಳ ಉಳಿದ ಪುಸ್ತಕಗಳಂತೆ ಇದಿಲ್ಲ.. ಸ್ವಲ್ಪ ಭಿನ್ನ..#ಪ್ರವೇಶ ಎಂಬ ಭಾಗದಲ್ಲಿ ಅಂದಿನ ಬದುಕಿನ ಚಿತ್ರಣಕ್ಕೆ ಜಾತಿ.. ಸಂಪ್ರದಾಯದ ವ್ಯವಸ್ಥೆಯನ್ನು ದಾಖಲಿಸಲು ಮಹತ್ವ ನೀಡಿದ್ದಾರೆ.. ನಂತರ ಕೇರಳದ ಪನತ್ತಡಿ ಎಂಬ ಊರಿನಲ್ಲಿ ನೆಡೆಯುವ ಬೇಟೆಯ ಚಿತ್ರಣಗಳಿವೆ..

ನಂತರ #ಮಲೆಯಮಾರಿಮನೆಗೆ _ನುಗ್ಗಿದಾಗ ಈ ಅಧ್ಯಯದಲ್ಲಿ ಸಾಕಿದ ಹುಲಿ ಹೇಗೆ ನರ ಭಕ್ಷಕವಾಗಿ ಬದಲಾಗಿ ನಂತರ ಸಾಕಿದವರ ಎದುರೇ ಹತ್ಯೆಯಾದ ಕಥೆಯಿದೆ..

ಪೂರ್ಣ ಪುಸ್ತಕದಲ್ಲಿ ಅಂದಿನ ಬೇಟೆಯ ವಿವರಗಳಿವೆ.. ಲೇಖಕರ ಕೆಲವೂಂದು ವಿವರಗಳು ಸ್ವಪ್ರಶಂಸೆ ಎನ್ನಿಸಿದರೂ ಓದಿಗೆ ಖುಷಿ ನೀಡುತ್ತದೆ.. ಲೇಖಕರ ಉಳಿದ ಪುಸ್ತಕದ ಸಾಲಿಗೆ ಸೇರಿಸುವುದು ಸ್ವಲ್ಪ ಕಷ್ಟವೆನಿಸಿದರೂ ಚೆನ್ನಾಗಿದೆ..


ಪ್ರಕಾಶಕರು :- ಸಾಹಿತ್ಯ ಪ್ರಕಾಶನ. ಹುಬ್ಬಳ್ಳಿ ಮುದ್ರಣದ ವರ್ಷ:- 2015
ಹಣ :- ₹.80/-
PH:- 0836 2367676

ದೀಪಕ್ ಹುಲ್ಕುಳಿ

ಕನ್ನಡ · ಕೆದಂಬಾಡಿ ಜತ್ತಪ್ಪ ರೈ

‘ಈಡೊಂದು ಹುಲಿಯೆರಡು’- ಕೆದಂಬಾಡಿ ಜತ್ತಪ್ಪ ರೈ

ನಾನು ಓದಿದ ಪುಸ್ತಕ :- #ಈಡೊಂದು_ಹುಲಿಯೆರಡು
ಲೇಖಕರು :- ಕೆದಂಬಾಡಿ ಜತ್ತಪ್ಪ ರೈ

ಕೊಲ್ಲುವುದುಕೆಲವೊಮ್ಮೆಹಿಂಸೆಯಲ್ಲ_ರಕ್ಷಣೆ

ಶಿಕಾರಿ ಎನ್ನುವುದು ಒಂದು ಕಾಲದಲ್ಲಿ ಅನಿವಾರ್ಯತೆ… ನಂತರ ಶೋಕಿ… ಈಗ ಕನಸು… ಮುಂದೆ ಅದು ಕಥೆ… ಈ ಪುಸ್ತಕ ಅದರ ಅಗಾಧ ಅನುಭವಗಳ ಆಗರ… ಸುತ್ತಮುತ್ತಲಿನ ಸಮಾಜದ ನಡುವೆ ಪ್ರತಿಷ್ಠಿತ ವ್ಯಕ್ತಿ… ತನ್ನ ಶಿಕಾರಿ ಗುರಿಯಿಂದ ಪ್ರಸಿದ್ದಿಯಾದ ಕಥೆ…

ಬೆಳ್ತಂಗಡಿ… ಕುದುರೆಮುಖದ ತಪ್ಪಲಿನ ಪ್ರದೇಶದಲ್ಲಿ.. ಸ್ವಾತಂತ್ರ್ಯ ಪೂರ್ವದ ಅನೇಕ ಅನುಭವಗಳನ್ನು ಇಲ್ಲಿ ಹಂಚಿದ್ದಾರೆ.. ಹುಲಿ ಶಿಕಾರಿ ಮಾಡುವುದು ಕೆಲವೂಮ್ಮೆ ಅನಿವಾರ್ಯ.. ಹಾಗೆ ಅಚಾನಕ್…‌ಬ್ರಿಟಿಷ್ ಕುಟುಂಬದೊಡನೆ ಕರಡಿ ಬೇಟೆ.. ಎರಡು ಗುಂಪಿನ ನಡುವೆ ಪೈಪೋಟಿ.. ಗುರಿ ತಪ್ಪಿ ಊರೆಮ್ಮೆಗೆ ಹೊಡೆದ ಗುರಿ.. 20 ಜನರೂ ಹೊರಲು ಅಸಾಧ್ಯವಾದ ಹಂದಿ… ಜಾದೂಗಾರನಿಗೆ ಕಲಿಸಿದ ಪಾಠ…. ಮನುಷ್ಯನನ್ನು ಕೊಂದ ಹುಲಿಯ ಶಿಕಾರಿ… ಆನೆ ಶಿಕಾರಿಯಂತೂ ಮೈ ರೋಮಾಚಂನಗೊಳಿಸಿ… ಆಶ್ಚರ್ಯ ಹುಟ್ಟಿಸುತ್ತದೆ.. ಒಟ್ಟಿನಲ್ಲಿ ಕುವೆಂಪುರವರ ವರ್ಣಿತ ಶಿಕಾರಿಗಳಿಗೆ.. ಪ್ರತ್ಯಕ್ಷದರ್ಶಿಯೊಬ್ಬರು ವಿಶೇಷಣಗಳನ್ನು ವಿವರಿಸದೇ ಬರೆದ ಲೇಖನವಾಗಿದೆ…

ಅಂತಿಮವಾಗಿ ಒಬ್ಬ ಶ್ರೇಷ್ಠ ಗುರಿಕಾರ… ಸರಿಯಾದ ಗುರುವಿನ ಹತ್ತಿರ ಹಿಂಸೆಯ ಅರಿವು ಮೂಡಿಸಿಕೊಂಡು.. ಶಸ್ತ್ರ ತ್ಯಜಿಸುವ ಪರಿ ಅನನ್ಯ… #ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರ ಸೂಚನೆಗೆ ಬದ್ಧರಾಗಿ ಜತ್ತಪ್ಪ ರೈಗಳು ಈ ಶಿಕಾರಿ ಹುಚ್ಚನ್ನು ತ್ಯಜಿಸುತ್ತಾರೆ… ಹೆಗ್ಗಡೆಯವರ ಮಾತು ಹಾಗೂ ಕ್ಷೇತ್ರದೆಡೆಗಿನ ಭಕ್ತಿಗೆ ಲೇಖಕರು ವಿಶೇಷವೆನಿಸುತ್ತಾರೆ..ಬಹುಷಃ ಶತಶತಮಾನಗಳಿಂದ ಈ ಶಿಕಾರಿ ಎನ್ನುವ ಪದ್ಧತಿ ನಮ್ಮ ಕಾಡಿನ ಜನ ಜೀವನದಲ್ಲಿ ಹಾಸು ಹೊಕ್ಕಾಗಿತ್ತು.. ಅದೆಷ್ಟು ಬದಲಾವಣೆಗಳು..‌ ವಿಶೇಷತೆಗಳು.. ರಸವತ್ತಾದ ಪ್ರಸಂಗಗಳು.. ವೈವಿಧ್ಯಮಯ ಪ್ರಾಣಿ ಸಂಕುಲಗಳು.. ಕಾಡಿನ ಜೀವನ..‌ ಹಾಗೇ ಇವುಗಳನ್ನು ತಿಳಿದ ಸುತ್ತಮತ್ತಲಿನ ಜೀವನ ಪದ್ಧತಿ‌ ಇವುಗಳ‌ನ್ನು ಅಕ್ಷರ ರೂಪಕ್ಕೆ ಇಳಿಸಲು ತಿಳಿಯದ ವ್ಯಕ್ತಿಗಳಿಂದ ಮಾಹಿತಿ ಕಣಜಗಳು ಸಂಗ್ರಹವಾಗದೇ ನಾಶವಾಗಿದೆ.. ಎಲ್ಲೂ ಕುವೆಂಪು.. ತೇಜಸ್ವಿ.. ಹೀಗೆ ಒಂದಷ್ಟು ‌ಬರಹಗಾರರು ಈ ವಿಚಾರ ದಾಖಲಿಸಿದ್ದರು..‌ಆದರೆ ಅದೇ ಪ್ರಾಧಾನ್ಯತೆಯಿಂದಲ್ಲ.. ಬರಹದ ಒಂದು ಭಾಗ ಅಷ್ಟೇ.. ಈ ದೃಷ್ಟಿಯಲ್ಲಿ ಲೇಖಕರು ಅಭಿನಂದನೀಯರು.. ತಮ್ಮ‌ ಅನುಭವಗಳನ್ನು ಲೇಖನ ಮಾಲೆಯಾಗಿಸಿ.. ತಮ್ಮ‌ ನೆನಪಿನ‌ ಪಟಕ್ಕೆ ಹಾಕಿಕೊಂಡು.. ಉಳಿದವರಿಗೂ ದರ್ಶನವಾಗಿಸಿದ್ದಾರೆ.. ಆಸಕ್ತಿಯಿಂದ ಓದಲೇಬೇಕಾದ ಪ್ರಾಕಾರವಾಗಿಸಿದ್ದಾರೆ.. ಹಾಗೇ ಈ ಅನುಭವಗಳು‌ ಈಗಿನ ತಲೆಮಾರಿಗೆ ದುರ್ಲಭ ಹಾಗೂ ಕಷ್ಟ ಸಾಧ್ಯ ಎಂದು ಸತ್ಯ ತಿಳಿದ ಮೇಲೆ ಈ #ಪುಸ್ತಕದ_ಪ್ರಾಮುಖ್ಯತೆ ನಮಗೆ ಅರಿವಾಗುತ್ತದೆ..


ಪ್ರಕಾಶಕರು :- ಸಾಹಿತ್ಯ ಪ್ರಕಾಶನ. ಹುಬ್ಬಳ್ಳಿ ಮುದ್ರಣದ ವರ್ಷ:- 2015
ಹಣ :- ₹.150/-
PH:- 0836 2367676

ದೀಪಕ್ ಹುಲ್ಕುಳಿ

ಕನ್ನಡ

‘ಎಣಿಸಲಾರದ ಭಾಗ್ಯ ಎಣಿಸುವ ಭಾಗ್ಯ’

ನಾನು ಓದಿದ ಪುಸ್ತಕ :- #ಎಣಿಸಲಾರದಭಾಗ್ಯಎಣಿಸುವ_ಭಾಗ್ಯ
ಲೇಖಕರು :- Adekhandi Venkataramanaiah Madhava Rao #ಹಿಮಾಲಯದ_ಅನುಭವಗಳು

ಸಾಮಾನ್ಯವಾಗಿ ಮನುಷ್ಯ ಪ್ರವಾಸ ಪ್ರೀಯ, ಇರುವ ಸ್ಥಳವನ್ನು ಬಿಟ್ಟು ಉಳಿದ ಸ್ಥಳಗಳ ಕಡೆಗೆ ಸೆಳೆತ ... ಸಹಜ.. ಬಹುಷಃ ಸಂಸ್ಕಾರ ಸಂಸ್ಕೃತಿ ಬದಲಾದರೂ ಮನಃಸ್ಥಿತಿಯಲ್ಲಿ ಶಿಲಾಯುಗಕ್ಕೂ ಹಿಂದಿನ ಮಾನಸಿಕ ಸ್ಥಿತಿಯಲ್ಲಿ ಇದು ಒಂದು ಉಳಿದಿರಬಹುದು.. ಹಾಗೇ ದೂರದ ಊರಿನ ಪ್ರಯಾಣ ಎಂದರೆ ಒಂದು ಸಿದ್ಧತೆ.. ಅದಕ್ಕೂಂದು ವ್ಯವಸ್ಥೆ.. ಬೇಕು ಅದೆಲ್ಲಾ ಮುಗಿದ ನಂತರ ಸೃತಿಪಟಲದಿಂದ ಪುಸ್ತಕವಾಗಿಸಿದ ಶ್ರಮಕ್ಕೆ ಲೇಖಕರು ಅಭಿನಂದನೀಯರು.. ಹಿಮಾಲಯದ ಪ್ರವಾಸ ಮುಗಿದರೆ ಅದೂಂದು ಸಾಧನೆಯೇ ಸರಿ.. ಇದು ನನ್ನ ಸ್ವಂತ ಅನುಭವ.. ಒಂದು ಪ್ರವಾಸ ಕಥನ ಎಂದರೆ ಸವೆಸಿದ ದಾರಿಯಲ್ಲಿನ ಎಲ್ಲಾ ಅನುಭಗಳನ್ನು ಬರೆಯುವುದು.. ಬರಹಗಾರರಿಗೆ ಅದು ಸ್ವಂತದ್ದು.. ಆದರೆ ಓದುಗರಿಗೆ ಕೆಲವೊಮ್ಮೆ ಉತ್ಪ್ರೇಕ್ಷೆ.. ಮತ್ತೂಮ್ಮೆ ನೀರಸ... ಮಗದೊಮ್ಮೆ ಅದು ಸಹಜವೆಂಬ ಭಾವ.. ಹಾಗಾಗಿ ಪ್ರವಾಸ ಕಥನಗಳು ವಿಶೇಷವಾಗುವುದು ಕಷ್ಟ.. ಅಪರೂಪ ... ಆದರೆ ಇಲ್ಲಿ ಲೇಖಕರು ಪ್ರಥಮ ಯತ್ನದಲ್ಲಿ ವಿಭಿನ್ನವಾಗಿಸಿದ್ದಾರೆ.. ಪೂರ್ಣ ಪುಸ್ತಕದಲ್ಲಿ ಉತ್ಪ್ರೇಕ್ಷೆ ಗಳಿಲ್ಲ.. ಎಲ್ಲಾ ರೀತಿಯ ಅನುಭವಗಳನ್ನು ಯಥಾವತ್ತಾಗಿ ನೀಡಿ ಈ ಪುಸ್ತಕವನ್ನು ಮುಂದಿನ ಪ್ರವಾಸಿಗಳಿಗೆ ಮಾಹಿತಿ ಕೈಪಿಡಿಯಾಗಿಸಿದ್ದಾರೆ.. ಪ್ರಾರಂಭ ಅಧ್ಯಾಯ.. ಮಾನಸ ಸರೋವರ ಹಾಗೂ ಕೈಲಾಸ ಪರ್ವತದ ಪ್ರವಾಸದ ಅನುಭವಗಳಿವೆ... ಪ್ರಾರಂಭದ ಯೊಜನೆ.. ಅಲ್ಲಿನ ಪಕೃತಿ ತೊಂದರೆಗಳು.. ಪ್ರವಾಸದ ಆಯೋಜಕರ ಅವ್ಯವಸ್ಥೆಗಳು.. ಜೋತೆಗೆ... ಅಲ್ಲಿನ ಸಮೃದ್ಧ ಅನುಭಗಳಿವೆ.. ಕೈಲಾಸದ ಪರಿಕ್ರಮದ ಪ್ರಯತ್ನವಂತೂ ವಿಶೇಷವೆನಿಸುತ್ತದೆ.. ನಂತರ ಚಾರ್ ಧಾಮ್... ಯಾತ್ರೆ.. ಇತ್ತಿಚೀನ ಸುಲಭವಾಗಿರುವ ಯಾತ್ರೆ ಅನ್ನಿಸಿದರೂ ಮಾಹಿತಿ ಅಗತ್ಯ.. ಅನಿವಾರ್ಯ... ಚೆನ್ನಾಗಿದೆ.. ಅಂತಿಮ ಭಾಗ್ಯ ಪರಕಾಮಣಿ ಸೇವೆ ತಿರುಪತಿಯಲ್ಲಿನ ವಿಶೇಷ ಸೇವೆ.. ಕಾಣಿಕೆಹುಂಡಿ ಎಣಿಸುವ ಸೇವೆಯ ಬಗ್ಗೆ ವಿವರಗಳಿವೆ.. ಆಸಕ್ತಿಯಿಂದ ಕೊಡಿ.. ವಿಶೇಷವೆನಿಸುತ್ತದೆ.. ಹಿಮಾಲಯದ ಕಡೆಗೆ ಪ್ರವಾಸ ಮಾಡುವವರೆಲ್ಲರದೂ ವಿಶಿಷ್ಟ ಅನುಭವಗಳಿರುತ್ತವೆ.. ಎಷ್ಟೇ ಅನುಭವಿಗಳು ಒಮ್ಮೊಮ್ಮೆ ಇಂಗು ತಿಂದ...ವರೇ ಆಗಿರುತ್ತಾರೆ.. ಆದರೂ ಮತ್ತೆ ಮತ್ತೆ ಮನಸ್ಸು ಆ ಕಡೆಗೆ ಸೆಳೆಯುತ್ತದೆ.. packaged toursಗಿಂತ ಸ್ವಂತವಾಗಿ ತೆರಳುವಾಗ ಅನೇಕ ಅದ್ಭುತ ಅನುಭಗಳಾಗುತ್ತವೆ.. ಇಂತಹಃ ಪುಸ್ತಕಗಳಿಂದ ಪೂರ್ವ ನಿಗಧಿತ ಎಚ್ಚರಿಕೆಗೆ ಸಹಾಯವಾಗುತ್ತದೆ.. ಆ ದೃಷ್ಠಿಯಲ್ಲಿ ಮಾಹಿತಿಯಂತಹಃ ಕೈಪಿಡಿ ನೀಡಿದ ಲೇಖಕರು ಗೌರವಾರ್ಹರು... ಅಭಿನಂದನಾರ್ಹರು...

ಇಂತಹಃ ಒಳ್ಳೆ ಪುಸ್ತಕವನ್ನು ಓದಲು ಕಳುಹಿಸಿದ ಹಿರಿಯರಾದ ಶ್ರೀ Avl Rao ಅವರಿಗೆ ಧನ್ಯವಾದಗಳು…


ಪ್ರಕಾಶಕರು :- ಕಾಲ ಪ್ರಕಾಶನ.ಬೆಂಗಳೂರು ಮುದ್ರಣದ ವರ್ಷ:- 2019
ಹಣ :- ₹.140/-
PH:- 080 23206778

ಕನ್ನಡ · ಸದ್ಯೋಜಾತ ಭಟ್ಟ

‘ನಾಸತ್ಯ’ – ಸದ್ಯೋಜಾತ ಭಟ್

ನಾನು ಓದಿದ ಪುಸ್ತಕ :- #ನಾಸತ್ಯ
ಲೇಖಕರು :- ಸದ್ಯೋಜಾತ ಭಟ್

ನಾಸತ್ಯವೆಂದರೆಬೆಳಕನ್ನುಸೃಜಿಸಿದ_ಸತ್ಯ

ನಾಸತ್ಯ ಅಂದರೆ ಸುಳ್ಳನ್ನು ನುಡಿಯದವರು.. ಅಂದರೆ #ಅಶ್ವಿನಿ_ದೇವತೆಗಳು.. ಹಾಗೇ ಸುಳ್ಳಲ್ಲದೇ ಇರುವುದು..‌ ಸತ್ಯವೂ ಹೌದು.... ಇದು ಪುಸ್ತಕ ಹೆಸರಿನ ಅರ್ಥ.. ಪುಸ್ತಕದ ಒಳಗಿರುವ ಹೂರಣವೂ ಸಹ...‌ಸಾಮಾನ್ಯವಾಗಿ ವೇದಗಳೆಂದರೆ ಜನ ಸಾಮಾನ್ಯರ ಬುದ್ಧಿಗೆ ನಿಲುಕದ್ದು.. ಅದು ಕೈಗೆಟುಕದ ಸಂಪತ್ತು ಎನ್ನುವ ಸಾಮಾನ್ಯ ಪ್ರಜ್ಞೆಯಿಂದ ಹೊರ ತರುವ ಪ್ರಯತ್ನ ಈ ಪುಸ್ತಕದಲ್ಲಿ ಲೇಖಕರಿಂದ ಆಗಿದೆ.. ವೇದಗಳಲ್ಲಿನ ಕಥೆಗಳನ್ನು ಸಂಗ್ರಹಿಸಿದ ಪುಸ್ತಕವಿದು.. ವಿಶೇಷವಾಗಿದೆ... ಇಲ್ಲಿ ಅನೇಕ ಇತಿಹಾಸದ ಪ್ರಶ್ನೆಗಳಿಗೆ ಉತ್ತರವಿದೆ.. ಉಲ್ಲೇಖಗಳಿವೆ.. ಗಣಾನಾಂ ತ್ವಾ ಗಣಪತಿಂ.. ಈ ಮಂತ್ರದ ಬಗ್ಗೆ.. ಸೂರ್ಯನ ಚಿಕೆತ್ಸೆಗಳ ಬಗ್ಗೆ.. ಜಮದಗ್ನಿ ಮಹರ್ಷಿ..ಮಂಧಾತೃವಿನ ಬಗ್ಗೆ.. ವಿಶ್ವಾಮಿತ್ರ.. ವಸಿಷ್ಠರ ಬಗ್ಗೆ..ಸಕ್ಕರೆಯ ಬಗ್ಗೆ.. ಗಾಯತ್ರಿ ಛಂಧಸ್ಸುಗಳ ಬಗ್ಗೆ.. ರಾಷ್ಟ್ರಂಧಾರಯತಾ ಧ್ರುವಂ.. ರಾಜಧರ್ಮದ ಬಗ್ಗೆ.. ವಾತಾಪಿ ಜೀರ್ಣೋ ಭವದ ಬಗ್ಗೆ ಜಿಜ್ಞಾಸೆ.. ಸರಸ್ವತಿ ನದಿಯ ಬಗ್ಗೆ... ಮುದ್ಗಲ ಮಹರ್ಷಿಯ ಬಗ್ಗೆ ಅಂತಿಮವಾಗಿ ಬ್ರಾಹ್ಮಣೋsಸ್ಯಮುಖಮಾಸೀತ್ ಈ ಶ್ಲೋಕದ ಬಗ್ಗೆ ಸವಿಸ್ತಾರವಾದ ವಿವರಣೆಯಿದೆ..

ವೇದದ ಕಥೆಗಳು ಅಂತಾಕ್ಷಣ ನಾವೇನೂ ರಸವತ್ತಾದ ವಿಶೇಷಗಳನ್ನು ಕಾಣಬೇಕಿಲ್ಲ.. ಬಹುಷಃ ಲೇಖಕರು ಗೌರವಕ್ಕೆ ಪಾತ್ರರಾಗುವುದೇ ಇಲ್ಲಿ .. ಪುಸ್ತಕಕ್ಕೆ ಅನ್ವರ್ಥವಾಗುವಂತೆ ವೇದಗಳಲ್ಲಿ ಇರುವುದಷ್ಟೇ ಹೇಳಿದ್ದಾರೆ ಅದಕ್ಕೆ ತಮ್ಮ ಕಲ್ಪನೆಯನ್ನು ತಲೆ ಬಾಲಗಳನ್ನು ಜೊಡಿಸಿಲ್ಲ.. ಓದುಗರಿಗೆ ನಿರಾಸೆ ಎನ್ನಿಸಿದರೂ ಸತ್ಯದ ನೆಲೆ ಇಷ್ಟವಾಗುತ್ತದೆ..

ಹಾಗೇ ಮುನ್ನುಡಿಯಲ್ಲಿ ಹಿರಿಯರಾದ #ಸೇತುರಾಮ್ ಹೇಳಿರುವಂತೆ ವೇದಗಳ ಉಲ್ಲೇಖ ಎನ್ನುವುದು ತಿಳಿದು ವಿವರಿಸಿದವರು ವಿರಳ ಎನ್ನುವಂತೆ ವೇದಗಳು ಎನ್ನುವುದು ಕುರುಡು ಪ್ರಪಂಚದಲ್ಲಿ ಬೆಳಕಿನ ಕಿಡಿ.. ಎನ್ನುವುದು ಇಂತಹಃ ಪುಸ್ತಕಗಳಿಂದ ಮಾತ್ರಾ ಸುಳ್ಳಾಗಿಸಲು ಸಾಧ್ಯ.. ಹಾಗೂ ಅದು ಎಲ್ಲಾರನ್ನೂ ಸುಲಭವಾಗಿ ಗೌರವ ಮೂಡುವಂತೆ ತಲುಪಿಸಬೇಕು.. ಅದು ತುರ್ತು ಜವಾಬ್ಧಾರಿ ಸಹ.. ಅದಕ್ಕಾಗಿ ಲೇಖಕರು ಸದಾ ವಂದನಾರ್ಹರು… ಯಾಕೆಂದರೆ ವೇದಗಳು ಜನ ಸಾಮಾನ್ಯವಾಗಲು ಇಂತಹಃ ಪುಸ್ತಕದ ಸದಾ ಅಗತ್ಯವಿದೆ..

ವೇದಗಳುದೇಶದಅಸ್ಮಿತೆಎಂಬಅರಿವು_ಬೇಕು

ಅದನ್ನುಮೂಡಿಸುವುದುನಮ್ಮ_ಕರ್ತವ್ಯ


ಪ್ರಕಾಶಕರು :- ಸಮನ್ವಿತ ಪ್ರಕಾಶನ ಬೆಂಗಳೂರು ಮುದ್ರಣದ ವರ್ಷ:- 2019
ಹಣ :- ₹.150/-
PH:-9480709038

ದೀಪಕ್ ಹುಲ್ಕುಳಿ