ಕನ್ನಡ · ಸದ್ಯೋಜಾತ ಭಟ್ಟ

‘ಮಿಹಿರಕುಲಿ’ – ಸದ್ಯೋಜಾತ ಭಟ್ಟ

ಪುಸ್ತಕ: ಮಿಹಿರಕುಲಿ

ಲೇಖಕ: ಸದ್ಯೋಜಾತ ಭಟ್ಟ

ಸಮನ್ವಿತ ರೂ. 250/- ~~


ಇದೊಂದು ಸಂಶೋಧನಾತ್ಮಕ ಅಧ್ಯಯನ ಗ್ರಂಥದ ರೂಪದಲ್ಲಿ ಹೊರಬಂದಿರುವ ಹಲವಾರು ಬೆರಗಾಗಿಸುವಂತಹ ನಾವು ಓದಿರದ ಕೇಳಿರದ ದಾಖಲೆ ಮಾಹಿತಿಗಳನ್ನು ಒದಗಿಸುವ ಅಪೂರ್ವ ಪ್ರಕಟನೆ. ಸುಮಾರು ಒಂದು ವಾರ ಬಿಡದೇ ಓದಿ ಜೀರ್ಣಿಸಿಕೊಳ್ಳಬೇಕಾಯಿತು; ಗಹನವಾದ ವಿಚಾರಧಾರೆ!.
ಮಿಹಿರಕುಲಿ- ಸದ್ಯೋಜಾತರ ನಾಲ್ಕನೆ ಪುಸ್ತಕ. ಇದರ ಮುಖ್ಯ ವಿಷಯ ನಾವು ಓದುತ್ತಾ ಬಂದಿರುವ ಜನಪ್ರಿಯ ಇತಿಹಾಸದ ಪರದೆ ಸರಿಸಿ, ದೆಹಲಿಯ ಕುತುಬ್ ಮಿನಾರ್ ಮತ್ತು ಪಕ್ಕದ ಮಸೀದಿ ಕಟ್ಟಡಗಳು- ಏಕೆ ಕುತುಬುದ್ದೀನ್ ಐಬಕ್ ಎಂಬ ಗುಲಾಮ ಮನೆತನದ ಮುಸ್ಲಿಮ್ ದೊರೆಯ ಸಾಧನೆಯಲ್ಲ, ಆದರೆ ರಾಜಾ ವಿಕ್ರಮಾದಿತ್ಯನ ಕಾಲದಲ್ಲಿ ಮಹಾನ್ ಜ್ಯೋತಿಷ್ಯ ತಜ್ಞ ವರಾಹಮಿಹಿರನ ಕಾಲದಲ್ಲೇ ಕಟ್ಟಿದ ಖಗೋಲ ವೀಕ್ಷಣಾ ಮತ್ತು ಅಧ್ಯಯನ ಕೇಂದ್ರವಾಗಿತ್ತು ಎಂಬುದು.


ಮಿಹಿರ+ ಆವಲಿ ಎಂಬ ಆತನ ಹೆಸರಿನ ಮೇಲೆ ಇದ್ದ ಪ್ರದೇಶ ಇಂದಿನ ಕುತುಬ್ ಮಿನಾರ್ ಇರುವ ದೆಹಲಿಯ ಮೆಹ್ರೌಲಿ ಬಡಾವಣೆ ಆಗಿದೆ,


ಅದರ ಕಟ್ಟಡದ ಮೇಲ್ಮೈಯಲ್ಲಿ ಮಾತ್ರ ಪರ್ಶಿಯನ್ ಬರಹ ಕೆತ್ತಿಸಿದ್ದು, ಮಿಕ್ಕ ಕಟ್ಟಡವೆಲ್ಲಾ ಸನಾತನ ಸಂಸ್ಕೃತಿಯ 27 ವಿಷ್ಣು ದೇವಾಲಯಗಳ ಅವಶೇಷಗಳಿಂದ ಕೂಡಿದೆಯಂತೆ. ಸುತ್ತಲೂ ಉತ್ಖನನ ಮಾಡಿದಾಗ ಸಂಸ್ಕೃತ, ಪ್ರಾಕೃತ ಶಿಲಾ ಶಾಸನಗಳೂ ದೊರೆತು ಕೇವಲ ನಾಲ್ಕು ವರ್ಷದಲ್ಲಿ ಐಬಕ್ ಇದನ್ನು ಕಟ್ಟಿದ ಎಂಬ ವಾದವನ್ನು ಹುಸಿ ಮಾಡುತ್ತದೆ ಎನ್ನುತ್ತಾರೆ ಲೇಖಕರು.
27 ದೇವಳ ಮತ್ತು ಕೆರೆಗಳನ್ನೂ ದ್ವಂಸ ಮಾಡಿ, ನಾಶ ಮಾಡಿ ತಾನು ಕುವ್ವತ್ ಉಲ್ ಮಸೀದಿಯೆಂದು ಕಟ್ಟಿದ್ದಾಗಿ ಸ್ವತಃ ಕುತ್ಬುದ್ದೀನ್ ಐಬಕ್ ಹೇಳಿರುವುದೇ ದಾಖಲೆಯಿದೆಯೆನ್ನುತ್ತಾರೆ.
ಆಗಿನ ಮುಸ್ಲಿಮ್ ಅರಸರ ದಾಳಿಯಲ್ಲಿ ನಾಶವಾಗಿ ವಿರೂಪವಾದ ನೂರಾರು ಹಿಂದೂ ದೇವಸ್ಥಾನಗಳು ಎಂತಹಾ ಮತೀಯ ಅಸಹನೆಯ ಮಾತ್ಸರ್ಯದ ಜ್ವಲಂತ ಕುರುಹುಗಳು ಎಂಬುದೂ ನಮಗೆ ಹೊಸದೇನಲ್ಲ. ಹಲವು ಬಾರಿ ಈ ಬಗ್ಗೆ ನಾವು ಅನ್ಯ ಪುಸ್ತಕಗಳಲ್ಲಿ ಓದಿಯೂ ಇರುತ್ತೇವೆ. ವಿಕ್ರಮಾದಿತ್ಯನ ಕಾಲದಲ್ಲಿ 27 ನಕ್ಷತ್ರಗಳ ಆಧರಿತ ಸೌರಮಾನ ಜ್ಯೋತಿಷ್ಯದ ಲೆಕ್ಕದಲ್ಲಿ ಕಟ್ಟಿದ್ದರಂತೆ ಇದನ್ನು.


ಮಿನಾರ್ ಪಕ್ಕದಲ್ಲಿರುವ ಇನ್ನೊಂದು ವೈಜ್ಞಾನಿಕ ವಿಸ್ಮಯವೆಂದರೆ ವಿಷ್ಣು ಧ್ವಜ ಅಥವಾ ಸ್ಥಂಭ. ಅದು ಧೂಳು ಹತ್ತುವುದಿಲ್ಲ, ತುಕ್ಕುಹಿಡಿಯದ ವಿಶೇಷ ಮಾಪನೆಯ ಅಲಾಯ್ ಲೋಹವಂತೆ. ಇದನ್ನೆಲ್ಲಾ ಕೇವಲ ನಾಲ್ಕೇ ವರ್ಷದಲ್ಲಿ ಲಾಹೋರಿನಲ್ಲಿ ಪಟ್ಟವೇರಿದ ಅಂಗವಿಕಲ ಗುಲಾಮ ದೊರೆ ಕುತ್ಬುದ್ದೀನ್ ಕಟ್ಟಿದ್ದಕ್ಕೆ ಯಾವುದೇ ಪುರಾವೆಯೂ ಇಲ್ಲ, ಸಕಾರಣವೂ ಅಲ್ಲ ಎನ್ನುತ್ತಾರೆ ಸದ್ಯೋಜಾತರು.


ಈ ಪುಸ್ತಕದಲ್ಲಿ ನಮಗೆ ಲೇಖಕರ ವೇದ ಪಾಂಡಿತ್ಯ, ಸಂಸ್ಕೃತದ ಬಗೆಯ ಅಧ್ಯಯನಶೀಲತೆ ಮತ್ತು ಮುಖ್ಯಧಾರೆಯ ಜತೆಗೆ ಮಹಾಭಾರತ, ಪೌರಾಣಿಕ ಕಾಲದ ರಾಜ ಮಹಾರಾಜರ ಕಥೆಗಳು ಮತ್ತು ಉಪಕಥೆಗಳು ವಿವರವಾಗಿ ಸಿಗುತ್ತದೆ. ಕೆಲವೊಮ್ಮೆ ಎಷ್ಟೆಂದರೆ- ಮುಖ್ಯ ವಿಷಯವಾದ ಮಿಹಿರಕುಲಿ/ ಕುತುಬ್ ಮಿನಾರ್ ಬಿಟ್ಟು ಬಹಳ ದೂರ ವಿಷಯಾಂತರವಾದೀತೋ ಎಂಬಂತೆ. ಸ್ವಲ್ಪ ಅಲ್ಲಿ ಇಲ್ಲಿ ಫೋಕಸ್ ಕಳೆದುಕೊಂಡರೂ ಕೊನೆಗೆ ಎಲ್ಲವೂ ತಂತಮ್ಮ ಜಾಗಗಳಲ್ಲಿ ಬೀಳುವ ಪಜ಼ಲ್ ತರಹ ಹೊಂದಾಣಿಕೆಯಾಗುತ್ತದೆ.


ನನಗೆ ಬಹಳ ಮೆಚ್ಚುಗೆಯಾಯಿತು. ಮತ್ತೆ ಮತ್ತೆ ಕೆಲವು ಅಧ್ಯಾಯಗಳನ್ನು ಮೆಲುಕು ಹಾಕಬೇಕಾದೀತು.
ಉತ್ತಮ ನಾನ್-ಫಿಕ್ಷನ್ ವರ್ಗದ ಮಾಹಿತಿಭರಿತ ಚಾರಿತ್ರಿಕ ಗ್ರಂಥ. ಅಂತಹಾ ಸನಾತನ ಧರ್ಮದ ಶ್ರೇಷ್ಟತೆ ಮತ್ತು ಕೀರ್ತಿಯ ಬಗ್ಗೆಯ ವಿಚಾರಗಳನ್ನು ಕೌತುಕತೆಯಿಂದ ಆಸಕ್ತಿಯಿಂದ ನೀವು ಓದುವವರಾಗಿದ್ದರೆ ಈ ಪುಸ್ತಕವನ್ನು ಕೊಂಡು ಓದಿ.

ನಾಗೇಶ್ ಕುಮಾರ್ ಸಿ. ಎಸ್.

ಕನ್ನಡ · ಸದ್ಯೋಜಾತ ಭಟ್ಟ

“ಮಿಹಿರಕುಲಿ” – ಸದ್ಯೋಜಾತ ಭಟ್ಟ

#ಪುಸ್ತಕ_ಪಯಣ_೨೦೨೧

ಕೃತಿ: ಮಿಹಿರಕುಲಿ

ಲೇಖಕರು: ಸದ್ಯೋಜಾತ ಭಟ್ಟ

ಪ್ರಕಾಶಕರು: ಸಮನ್ವಿತ ಪ್ರಕಾಶನ ಬೆಂಗಳೂರು

ಭಾರತದ ಇತಿಹಾಸದಲ್ಲಿ ಜನಸಾಮಾನ್ಯರಿಗೆ ಮಂಕುಬೂದಿ ಎರಚಿದ, ತಮಗೆ ಬೇಕು ಬೇಕಾದ ಹಾಗೆ ಇತಿಹಾಸವನ್ನು ತಿರುಚಿದ, ಇದುವರೆಗೂ ಸರಿಯಾದ ಸರಿಯಾದ ಸಾಕ್ಷ್ಯಗಳಿದ್ದರೂ ಮುಚ್ಚಿಟ್ಟ ಸತ್ಯಗಳ ಅನಾವರಣಗೊಳಿಸಿದ ಘನವಾದ ಕೃತಿ “ಮಿಹಿರಕುಲಿ”. ಭಾರತೀಯ ಕ್ಷಾತ್ರ ಪರಂಪರೆ ಎಂಬ ಆರ್.ಗಣೇಶ್ ಅವರ ಕೃತಿಯನ್ನು ಬಿಟ್ಟರೆ ನನ್ನನ್ನು ಬಹುವಾಗಿ ಕಾಡಿದ ಮತ್ತು ಅಲುಗಾಡಿಸಿದ ಕೃತಿ.

ನಮ್ಮಲ್ಲಿ ಸುಳ್ಳುಗಳನ್ನು ಎಷ್ಟು ವ್ಯವಸ್ಥಿತವಾಗಿ ಜನಮಾನಸದಲ್ಲಿ ಬಿತ್ತಲಾಗಿದೆ ಎಂದರೆ ಪುಸ್ತಕ ಓದಬೇಕಾದರೆ ಅರೆ ಈ ರೀತಿ ಇದ್ದಿರಬಹುದೇ? ಅಥವಾ ಇಲ್ಲಿರುವ ವಿಚಾರಗಳು ಕಪೋಲಕಲ್ಪಿತವಾಗಿರಬಹುದೇ ಎನ್ನುವಷ್ಟು….. ಸಾಮಾನ್ಯವಾಗಿ ಊಹಿಸಲು ಸಹ ಸಾಧ್ಯವಾಗದ ಕಾಲಮಾನದ ವಿವರಗಳನ್ನು ಇಲ್ಲಿ ಎಳೆಎಳೆಯಾಗಿ ತೆರೆದಿಡುವ ಲೇಖಕರ ಪಾಂಡಿತ್ಯ ಸ್ತುತ್ಯರ್ಹ. ವೇದ ಕಾಲದಿಂದ ಮೊದಲಾಗಿ ತೀರಾ ಇತ್ತೀಚಿನ ದಿನಮಾನಗಳವರೆಗಿನ ಗ್ರಂಥಗಳು,ಶಾಸನಗಳು ಮತ್ತು ಸಂಶೋಧನೆಯ ವಿವರಗಳನ್ನು ಸಾವಧಾನವಾಗಿ ಓದುತ್ತಾ ಹೋದಂತೆ ನಮ್ಮನ್ನಾವರಿಸಿರುವ ಮಿಥ್ಯಾಪೊರೆ ನಿಧಾನವಾಗಿ ಕಳಚಲಾರಂಭಿಸುತ್ತದೆ. 

ಪ್ರಸ್ತುತ ಪುಸ್ತಕದಲ್ಲಿ ಕುತುಬ್ ಮಿನಾರ್ ಎಂದು ಗುರುತಿಸಲ್ಪಡುವ ಸ್ತಂಭ ನಿಜವಾಗಿಯೂ ಯಾವ ಉದ್ದೇಶಕ್ಕಾಗಿ ಕಟ್ಟಲ್ಪಟ್ಟಿದೆ? ಅದರ ನಿರ್ಮಾತೃ ಯಾರು? ಅದನ್ನು ಕಟ್ಟಿದ ಉದ್ದೇಶ ಏನಿತ್ತು? ಈಗ ಮಸೀದಿ ಎಂದು ಕರೆಯಲ್ಪಡುವ ಸ್ಥಳವು ಈ ಹಿಂದೆ ಯಾವ ದೇಗುಲದ ಸಮುಚ್ಛಯವಾಗಿತ್ತು? ಅನೇಕಾನೇಕ ಶತಮಾನಗಳಿಂದ ಸ್ಥಿರವಾಗಿ ನಿಂತು ಐತಿಹಾಸಿಕ ಪಲ್ಲಟಗಳಿಗೆ ಸಾಕ್ಷಿಯಾಗಿರುವ ಉಕ್ಕಿನ ಸ್ಥಂಭ ವಾಸ್ತವದಲ್ಲಿ ಏನಾಗಿತ್ತು? ರಾಜಾ ವಿಕ್ರಮಾದಿತ್ಯ,ಸಮುದ್ರಗುಪ್ತ, ವರಾಹಮಿಹಿರಾಚಾರ್ಯರ ಈ ದೇಶದ ಸಂಸ್ಕೃತಿಯ ಉಳಿವಿಗಾಗಿ ನೀಡಿದ ಕೊಡುಗೆಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಈ ಪುಸ್ತಕವನ್ನು ಓದಬೇಕು. 

ಪುಸ್ತಕವನ್ನು ಓದಿ ಮುಗಿಸಿದಾಗ ನಮ್ಮಲ್ಲಿ ಒಂದು ದಟ್ಟ ವಿಷಾದ ಮಾತ್ರ ಉಳಿಯುವುದು. ಕಾರಣ ಇಷ್ಟೇ,ನಾವು ಇಷ್ಟು ವರ್ಷಗಳ ಕಾಲ ಯಾವುದು ನಿಜ ಎಂದುಕೊಂಡು ಅದನ್ನೇ ನಂಬಿದ್ದೇವೆಯೋ ಆ ಮುಗ್ಧತೆಯನ್ನು ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯ…..

ನಮಸ್ಕಾರ,

ಅಮಿತ್ ಕಾಮತ್

ಕನ್ನಡ · ಸದ್ಯೋಜಾತ ಭಟ್ಟ

‘ನಾಸತ್ಯ’ – ಸದ್ಯೋಜಾತ ಭಟ್

ನಾನು ಓದಿದ ಪುಸ್ತಕ :- #ನಾಸತ್ಯ
ಲೇಖಕರು :- ಸದ್ಯೋಜಾತ ಭಟ್

ನಾಸತ್ಯವೆಂದರೆಬೆಳಕನ್ನುಸೃಜಿಸಿದ_ಸತ್ಯ

ನಾಸತ್ಯ ಅಂದರೆ ಸುಳ್ಳನ್ನು ನುಡಿಯದವರು.. ಅಂದರೆ #ಅಶ್ವಿನಿ_ದೇವತೆಗಳು.. ಹಾಗೇ ಸುಳ್ಳಲ್ಲದೇ ಇರುವುದು..‌ ಸತ್ಯವೂ ಹೌದು.... ಇದು ಪುಸ್ತಕ ಹೆಸರಿನ ಅರ್ಥ.. ಪುಸ್ತಕದ ಒಳಗಿರುವ ಹೂರಣವೂ ಸಹ...‌ಸಾಮಾನ್ಯವಾಗಿ ವೇದಗಳೆಂದರೆ ಜನ ಸಾಮಾನ್ಯರ ಬುದ್ಧಿಗೆ ನಿಲುಕದ್ದು.. ಅದು ಕೈಗೆಟುಕದ ಸಂಪತ್ತು ಎನ್ನುವ ಸಾಮಾನ್ಯ ಪ್ರಜ್ಞೆಯಿಂದ ಹೊರ ತರುವ ಪ್ರಯತ್ನ ಈ ಪುಸ್ತಕದಲ್ಲಿ ಲೇಖಕರಿಂದ ಆಗಿದೆ.. ವೇದಗಳಲ್ಲಿನ ಕಥೆಗಳನ್ನು ಸಂಗ್ರಹಿಸಿದ ಪುಸ್ತಕವಿದು.. ವಿಶೇಷವಾಗಿದೆ... ಇಲ್ಲಿ ಅನೇಕ ಇತಿಹಾಸದ ಪ್ರಶ್ನೆಗಳಿಗೆ ಉತ್ತರವಿದೆ.. ಉಲ್ಲೇಖಗಳಿವೆ.. ಗಣಾನಾಂ ತ್ವಾ ಗಣಪತಿಂ.. ಈ ಮಂತ್ರದ ಬಗ್ಗೆ.. ಸೂರ್ಯನ ಚಿಕೆತ್ಸೆಗಳ ಬಗ್ಗೆ.. ಜಮದಗ್ನಿ ಮಹರ್ಷಿ..ಮಂಧಾತೃವಿನ ಬಗ್ಗೆ.. ವಿಶ್ವಾಮಿತ್ರ.. ವಸಿಷ್ಠರ ಬಗ್ಗೆ..ಸಕ್ಕರೆಯ ಬಗ್ಗೆ.. ಗಾಯತ್ರಿ ಛಂಧಸ್ಸುಗಳ ಬಗ್ಗೆ.. ರಾಷ್ಟ್ರಂಧಾರಯತಾ ಧ್ರುವಂ.. ರಾಜಧರ್ಮದ ಬಗ್ಗೆ.. ವಾತಾಪಿ ಜೀರ್ಣೋ ಭವದ ಬಗ್ಗೆ ಜಿಜ್ಞಾಸೆ.. ಸರಸ್ವತಿ ನದಿಯ ಬಗ್ಗೆ... ಮುದ್ಗಲ ಮಹರ್ಷಿಯ ಬಗ್ಗೆ ಅಂತಿಮವಾಗಿ ಬ್ರಾಹ್ಮಣೋsಸ್ಯಮುಖಮಾಸೀತ್ ಈ ಶ್ಲೋಕದ ಬಗ್ಗೆ ಸವಿಸ್ತಾರವಾದ ವಿವರಣೆಯಿದೆ..

ವೇದದ ಕಥೆಗಳು ಅಂತಾಕ್ಷಣ ನಾವೇನೂ ರಸವತ್ತಾದ ವಿಶೇಷಗಳನ್ನು ಕಾಣಬೇಕಿಲ್ಲ.. ಬಹುಷಃ ಲೇಖಕರು ಗೌರವಕ್ಕೆ ಪಾತ್ರರಾಗುವುದೇ ಇಲ್ಲಿ .. ಪುಸ್ತಕಕ್ಕೆ ಅನ್ವರ್ಥವಾಗುವಂತೆ ವೇದಗಳಲ್ಲಿ ಇರುವುದಷ್ಟೇ ಹೇಳಿದ್ದಾರೆ ಅದಕ್ಕೆ ತಮ್ಮ ಕಲ್ಪನೆಯನ್ನು ತಲೆ ಬಾಲಗಳನ್ನು ಜೊಡಿಸಿಲ್ಲ.. ಓದುಗರಿಗೆ ನಿರಾಸೆ ಎನ್ನಿಸಿದರೂ ಸತ್ಯದ ನೆಲೆ ಇಷ್ಟವಾಗುತ್ತದೆ..

ಹಾಗೇ ಮುನ್ನುಡಿಯಲ್ಲಿ ಹಿರಿಯರಾದ #ಸೇತುರಾಮ್ ಹೇಳಿರುವಂತೆ ವೇದಗಳ ಉಲ್ಲೇಖ ಎನ್ನುವುದು ತಿಳಿದು ವಿವರಿಸಿದವರು ವಿರಳ ಎನ್ನುವಂತೆ ವೇದಗಳು ಎನ್ನುವುದು ಕುರುಡು ಪ್ರಪಂಚದಲ್ಲಿ ಬೆಳಕಿನ ಕಿಡಿ.. ಎನ್ನುವುದು ಇಂತಹಃ ಪುಸ್ತಕಗಳಿಂದ ಮಾತ್ರಾ ಸುಳ್ಳಾಗಿಸಲು ಸಾಧ್ಯ.. ಹಾಗೂ ಅದು ಎಲ್ಲಾರನ್ನೂ ಸುಲಭವಾಗಿ ಗೌರವ ಮೂಡುವಂತೆ ತಲುಪಿಸಬೇಕು.. ಅದು ತುರ್ತು ಜವಾಬ್ಧಾರಿ ಸಹ.. ಅದಕ್ಕಾಗಿ ಲೇಖಕರು ಸದಾ ವಂದನಾರ್ಹರು… ಯಾಕೆಂದರೆ ವೇದಗಳು ಜನ ಸಾಮಾನ್ಯವಾಗಲು ಇಂತಹಃ ಪುಸ್ತಕದ ಸದಾ ಅಗತ್ಯವಿದೆ..

ವೇದಗಳುದೇಶದಅಸ್ಮಿತೆಎಂಬಅರಿವು_ಬೇಕು

ಅದನ್ನುಮೂಡಿಸುವುದುನಮ್ಮ_ಕರ್ತವ್ಯ


ಪ್ರಕಾಶಕರು :- ಸಮನ್ವಿತ ಪ್ರಕಾಶನ ಬೆಂಗಳೂರು ಮುದ್ರಣದ ವರ್ಷ:- 2019
ಹಣ :- ₹.150/-
PH:-9480709038

ದೀಪಕ್ ಹುಲ್ಕುಳಿ

ಕನ್ನಡ · ಸದ್ಯೋಜಾತ ಭಟ್ಟ

‘ಶಿಲೆಗಳಲ್ಲಡಗಿದ ಸತ್ಯ’ – ಸದ್ಯೋಜಾತ ಭಟ್ಟ

ನಾನು ಓದಿದ ಪುಸ್ತಕ :- #ಶಿಲೆಗಳಲ್ಲಡಗಿದ_ಸತ್ಯ
ಲೇಖಕರು :- ಸದ್ಯೋಜಾತ ಭಟ್ಟ

ಪುರಾಣಗಳುನಮ್ಮಇತಿಹಾಸ

ಅರ್ಥೈಸಿಕೋಳ್ಳುವದೃಷ್ಠಿಇರಬೇಕು

ಬಹುಷಃ ಈ ಪುಸ್ತಕವನ್ನು ಕೇವಲ ಪರಿಚಯಸಬಹುದೇ ಹೊರತು .. ವಿಮರ್ಶಿಸಲು ಹಾಗೂ ಅಭಿಪ್ರಾಯ ಮಂಡಿಸಲು ನಮ್ಮ ಕನ್ನಡ ನಾಡಿನಲ್ಲಿ ಶ್ರೇಷ್ಠರಾದ #ಶತವಾಧಾನಿ_ಗಣೇಶ ಹಿರಿಯರಾದ #ಹೀರೇಮಗಳೂರು_ಕಣ್ಣನ್, ಹಾಗೇ ಪಂಡಿತರಾದ #ಸೂರಾಲು_ತಂತ್ರಿಗಳು ಹೀಗೆ ಬೆರಳಿಣಿಕೆಯ ವ್ಯಕ್ತಿಗಳಿಂದ ಮಾತ್ರಾ ಸಾಧ್ಯವೇನೂ... ಅಷ್ಟು ಪಾಂಡಿತ್ಯ ಪೂರ್ಣವಾಗಿದೆ. ಕೆಲವೊಂದು ಇತಿಹಾಸದ ಸಂಶೋಧನಾ ಪುಸ್ತಕಗಳೇ ಹಾಗೇ ಕ್ಲಿಷ್ಟಕರ ಶಬ್ಧ ಭಂಡಾರಗಳಿಂದ ಕಬ್ಬಿಣದ ಕಡಲೆಗಳಾಗಿ ಓದಲು ಕಷ್ಟಪಡಬೇಕಾಗುತ್ತದೆ ಆದರೆ ಈ ಪುಸ್ತಕ ಈ ಎಲ್ಲಾ ಅಭಿಪ್ರಾಯಗಳಿಗೆ ವಿರುದ್ಧವಾಗಿದೆ ಅತ್ಯಂತ ಜಿಗುಟಿನ ನಮ್ಮ ಪುರಾಣದಲ್ಲಿರುವ ಐತಿಹಾಸಿಕತೆಯನ್ನು ಹಾಗೇ ನಮ್ಮ ಗೊಂದಲ ಇತಿಹಾಸವನ್ನು ಅತ್ಯಂತ ಸರಳ ಭಾಷೆಯಲ್ಲಿ ಆದಷ್ಟು ನಮ್ಮಂತಹಃ ಸಾಮಾನ್ಯರಿಗೆ ಅರ್ಥವಾಗಿಸಲು ಲೇಖಕರು ಪ್ರಯತ್ನಿಸಿದ್ದಾರೆ. ಹಾಗೇ ನಮಗೆ ಎಷ್ಟು ಅರ್ಥವಾಗುತ್ತದೆ ಎನ್ನುವುದಕ್ಕಿಂತ ಓದಲೇಬೇಕು ಎನ್ನುವ ಮನಸ್ಸು ಹಾಗೂ ಅದರಡೆಗೆ ಒಂದು #ಗೌರವದ_ಭಾವನೆ ಮೂಡುವಂತೆ ನಿರೂಪಿಸಿದ್ದಾರೆ. ಪೂರ್ಣ ಪುಸ್ತಕದಲ್ಲಿ ಪುರಾಣಗಳು ಇತಿಹಾಸಗಳ ಅನೇಕ ವ್ಯಕ್ತಿಗಳು, ಘಟನೆಗಳು ಹಾಗೂ ಸ್ಥಳಗಳು ಅದರ ಕಾಲಗಳ ಬಗ್ಗೆ ಲಭ್ಯವಿರುವ ಆಕರ ಗ್ರಂಥಗಳು ಶಿಲಾಶಾಸನಗಳು ಹಾಗೂ ಅನೇಕ ಶ್ಲೋಕಗಳ ರೂಪದ ಸಾಕ್ಷಿಗಳ ಮುಖಾಂತರ ನಮಗೆ ತಿಳಿಯದ ಅಥವಾ ತಿಳಿಸದ ಹೊಸ ಇತಿಹಾಸವನ್ನು ಪರಿಚಯಿಸಲಿಕ್ಕೆ ಪ್ರಯತ್ನಿಸಿದ್ದಾರೆ. ಮೆಗಸ್ತನೀಸನ ಇಂಡಿಕಾದಿಂದ ಪ್ರಾರಂಭಿಸಿ ಅನೇಕ ಗ್ರಂಥಗಳನ್ನು ಉಲ್ಲೇಖಿಸಿದ ವಿಮರ್ಶೆಯಿದೆ ಹಾಗೇ ವೇದಗಳು ಅದಕ್ಕೆ ಪೂರಕವಾದ ನದಿಗಳು ಅದರಲ್ಲಿನ ರಾಜರುಗಳು ಅವರ ವಂಶಗಳು ಅಂದಿನ ನಾಗರೀಕತೆ ಅದರಲ್ಲಿನ ಪಾತ್ರಗಳು ಉದಾಹರಣೆಗೆ ವಾಮದೇವ ಋಷಿ..‌ ಪುರುಕುತ್ಸನ ಬಗ್ಗೆ... ಮನುಷ್ಯ ಹಾಗೂ ತೋರಣ ಎಂಬ ಪದದ ಉತ್ಪತ್ತಿ ಬಗ್ಗೆ ಹೀಗೆ ಅನೇಕ ವಿವರಣೆಗಳಿವೆ. ಇನ್ನು ಇತಿಹಾಸದ ಬಗ್ಗೆ ವಿಕ್ರಾಮಾದಿತ್ಯನೆಂಬ ರಾಜನ ಬಗ್ಗೆ ಕಾಳಿದಾಸನ ಹಾಗೂ ಅನೇಕ ಕವಿಗಳ ಕಾಲಗಳ ಬಗ್ಗೆ ಅನೇಕ ಗೊಂದಲ ವಿಚಾರಗಳಿಗೆ ಸಾಕ್ಷಾಧಾರ ಸಮೇತ ಅಭಿಪ್ರಾಯ ಮಂಡಿಸಿದ್ದಾರೆ. ಹಾಗೇ ಭಾಷಾ ಲಿಪಿಯ ಬೆಳವಣಿಗೆಗಳ ಬಗ್ಗೆ, ಕೆಲವೊಂದು ವಿಶಿಷ್ಟ ವ್ಯಕ್ತಿಗಳಾದ ಜಯದೇವ ಕವಿಯ ಬಗ್ಗೆ, ಕೋಲಿವಾಲದ ಭೋಜಕ ಬಟ್ಟ ಶರ್ಮ ಬಗ್ಗೆ, ಭಾಣಾ ಎಂಬ ಜನಾಂಗದ ಬಗ್ಗೆ ಹೀಗೆ ಪುಸ್ತಕದ ತುಂಬಾ ವಿಶೇಷತೆಗಳನ್ನು ತುಂಬಿಸಿದ್ದಾರೆ.

#ಸೇತೂರಾಮ್ಎಸ್ಎನ್ ಇವರ ವಿಶೇಷವಾದ ಮುನ್ನುಡಿ ಇರುವ ಈ ಪುಸ್ತಕ ಕನ್ನಡದಲ್ಲೇ ವಿಶಿಷ್ಟವೆನೆಸುವ ಲೇಖನಗಳಿಂದ ತುಂಬಿದೆ.. ಹಾಗೇ ಲೇಖಕರು ನಾಡಿನ #ಶ್ರೇಷ್ಠಪಾಂಡಿತ್ಯವುಳ್ಳ ವ್ಯಕ್ತಿಗಳ ಪಂಕ್ತಿಯಲ್ಲಿ ನಿರ್ವಿವಾದ ವ್ಯಕ್ತಿಯಾಗಿರುವುದು ಸಹ ಸತ್ಯ.. ಇಂತವರಿಂದ ಮಾತ್ರಾ ನಮ್ಮ #ಪೂರ್ವಜರಬದುಕಿನಬಗ್ಗೆನಿರಂತರವಾಗಿಗೌರವವಾದಬೆಳಕುಚೆಲ್ಲಲುಸಾಧ್ಯ… ಹಾಗೇ ಆಗಲಿ ಎಂಬ ಪ್ರಾರ್ಥನೆ ಸಹ…

ದೀಪಕ್ ಹುಲ್ಕುಳಿ

+++++++++++±+++++++++++++++++++

ಪ್ರಕಾಶಕರು :- ಸಮನ್ವಿತ ಪ್ರಕಾಶನ. ಬೆಂಗಳೂರು
ವರ್ಷ:- 2018
ಹಣ :- ₹.250/-
ಲಭ್ಯತೆ :- ಬಹುತೇಕ ಎಲ್ಲಾ ಕಡೆ ಸಿಗುತ್ತದೆ.

ಕನ್ನಡ · ಸದ್ಯೋಜಾತ ಭಟ್ಟ

‘ಕಾಲಯಾನ’ – ಸದ್ಯೋಜಾತ ಭಟ್ಟ

‘ಕಾಲ’ ಎಂಬುದು ನನ್ನರಿವಿನಲ್ಲಿ ಕೇವಲ ಭೌತಿಕವಾದ ಅಳತೆಗೋಲು. ಮಾನವ ಜೀವಿ ಭುವಿಗೆ ಬಿದ್ದ ಮೇಲೆ , ತನ್ನೆಲ್ಲಾ ಲೌಕಿಕ ವ್ಯಾಪಾರಗಳನ್ನು, ವಿಕಸನ(?) ದ ವಿವಿಧ ಮಜಲುಗಳನ್ನು ವ್ಯಷ್ಟಿಯಾಗಿಯೂ, ಸಮಷ್ಟಿಯಾಗಿಯೂ ದಾಖಲಿಸಲು ತನಗೆ ತಾನೇ ಸೃಷ್ಟಿಸಿಕೊಂಡಿರುವ ತರ್ಕಬದ್ಧವಾದ ವಿಭಾಗವಷ್ಟೆ…!
ಕಾಲದ ಕುರಿತು ಅಧಿಭೌತಿಕವಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಓದಿದ್ದ ನನಗೆ, ಅಲ್ಲಿ ಇಲ್ಲಿ ಅಷ್ಟಿಷ್ಟು ಕೇಳಿ ತಿಳಿದಿದ್ದ ಪೌರಾಣಿಕ ಕಾಲಗಣನೆಗಳು ತರ್ಕಕ್ಕೆ ನಿಲುಕದ ಕೇವಲ ಮಾಹಿತುಗಳಷ್ಟೆ…ಹೀಗಿತ್ತು ಕಾಲದೆಡೆಗಿನ ನನ್ನ ಸೀಮಿತ ಜ್ಞಾನ. “ಕಾಲಯಾನ” ಕ್ಕೆ ತೊಡಗುವ ಮುನ್ನ….

ಹಾಗಾದರೆ ‘ಯಾನ’ ಮಾಡುವಷ್ಟು ‘ಕಾಲ’ ದಲ್ಲಿ ಏನಿದ್ದೀತು? ಎಂಬ ಸಹಜ ಕುತೂಹಲದಿಂದಲೇ ಶುರುವಾದ ಓದಿಗೆ ಗೋಚರವಾದ ಕಾಲ ಮಾತ್ರ ಅನಂತ…! ಅಪಾರ…! ಅಗಾಧ…! ಅನೂಹ್ಯ…! ಸಮಾನ್ಯವಾದ ಕಾಣ್ಕೆಗೆ ನಿಲುಕದ ಅಕೂಪಾರ..!!
ಕಾಲ ಎನ್ನುವುದು ಕೇವಲ ಶುಷ್ಕವಾದ ಭೌತಿಕ ಗಣನೆಯಲ್ಲ. ಮಾನವ ಜಿಜ್ಞಾಸೆಯ ಜಾಡು. ಆತನ ಅಂತರ್ಬಹಿರಿಂದ್ರಿಯಗಳ ನಿರಂತರ ಅನ್ವೇಷಣೆ.

ಕಾಲದ ಕುರಿತು ನಮ್ಮ ಪೂರ್ವಜರು ಇಷ್ಟೆಲ್ಲಾ ಚಿಂತಿಸಿದ್ದರಾ…? ಅದೂ ಕೇವಲ ಘಳಿಗೆಯಷ್ಟಲ್ಲ.ಸಂತತವಾಗಿ.ಬಹುಮುಖವಾಗಿ..ಬಹುಶಃ ಕಾಲವನ್ನು ಕುರಿತು ಈ ರೀತಿ ಓತಪ್ರೋತವಾಗಿ ಚಿಂತಿಸಿದ ಮತ್ತೊಂದು ನಾಗರಿಕತೆ ಇರಲಾರದು. ಅತಿಸೂಕ್ಷ್ಮ ಅಣುವಿನಿಂದ ಮಹತ್ತಾದ ಬ್ರಹ್ಮಾಂಡದ ವರೆಗೆ…ಅದಕ್ಕೂ ಮೀರಿ “ಅತ್ಯತಿಷ್ಠದ್ದಶಾಂಗುಲಂ” ಎಂದೇ ವ್ಯಾಖ್ಯಾನಿಸಲ್ಪಟ್ಟ ಬ್ರಹ್ಮ ವಸ್ತು ವಿನೆಡೆಗೆ… ಅದೆಷ್ಟು ಆಯಾಮ ಈ ಕಾಲದ್ದು!!

ವೇದ, ವೇದಾಂತ, ವೇದಾಂಗ( ಜ್ಯೌತಿಷ), ಪುರಾಣೇತಿಹಾಸ, ಕಾವ್ಯ ಶಾಸ್ತ್ರ ಗ್ರಂಥಗಳಲ್ಲಿ ಅಪಾರವಾಗಿ ಹರವಿಕೊಂಡಿರುವ ಕಾಲ ಪ್ರವಾಹವನ್ನು, ಶ್ರೀ ಸದ್ಯೋಜಾತ ಭಟ್ಟರು ತಮ್ಮ “ಕಾಲಯಾನ” ದಲ್ಲಿ ಹಿಡಿದಿಟ್ಟ ರೀತಿ ಸೋಜಿಗ..!

ಪ್ರತಿದಿನವೂ ಯಾಂತ್ರಿಕವಾಗಿಯೇ ಪಠಿಸಲ್ಪಡುತ್ತಿದ್ದ “ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ” , ” ನಾಸದಾಸೀನ್ನೋ ಸದಸೀತ್ತದಾನೀಂ” ಎಂಬ ಸಂಕಲ್ಪ,ನಾಸದೀಯ ಸೂಕ್ತಗಳಲ್ಲಿದ್ದ ಕಾಲದ ಅನ್ವಯ, ಪಿತೃಗಳು, ಸೂರ್ಯ-ಚಂದ್ರರೊಳಗಂಡ ಗ್ರಹ,ನಿಹಾರಿಕೆಗಳು, ಪ್ರಕೃತಿಯೊಂದಿಗೆ ಅವುಗಳ ಸಂಬಂಧವನ್ನು ನಮ್ಮವರು ಕಂಡು, ಅರ್ಥೈಸಿದ ಬಗೆ…ಹೀಗೆ ಕಾಲವನ್ನು ಕುರಿತ ಸನಾತನ ಜ್ಞಾನದ ಹರಿವು ಯಥೇಚ್ಛವಾಗಿ ಇಲ್ಲಿ ಹರಿದಿದೆ.

“ಜ್ಞಾತ್ವಾ ಕರ್ಮಾಣಿ ಕುರ್ವೀತ” ಎಂಬ ಪರಂಪರೆಯ ನುಡಿಯನ್ನು ನಿತ್ಯಾನುಷ್ಠಾನಕ್ಕೆ ತರುವಲ್ಲಿ ಹಾಗೂ ಸನಾತನ ಪರಂಪರೆಯ ಜ್ಞಾನ, ವಿಜ್ಞಾನ ಹಾಗೂ ತತ್ವಜ್ಞಾನದೆಡೆಗೆ ಕುತೂಹಲವನ್ನು ಕೆರಳಿಸುವಲ್ಲಿ “ಕಾಲಯಾನ” ವೊಂದು ಕೈಪಿಡಿ.

ಕೈಪಿಡಿಗೊಂದು ಮುನ್ನುಡಿ ಸೇತುರಾಮರ ನುಡಿ. ಎಂದಿನಂತೆ ಮಾರ್ಮಿಕ…!

ಒಟ್ಟಿನಲ್ಲಿ “ಕಾಲಯಾನ” ಕಾಲದರಿವಿಲ್ಲದೆಯೇ ಕಾಲದರಿವನ್ನು ಮೂಡಿಸುವ ಉದ್ಬೋಧಕ ಹೊತ್ತಿಗೆ.

ಧನ್ಯವಾದಗಳು ಗುರುಗಳೇ ” ಕಾಲಯಾನ” ವನ್ನು ಕುಳಿತಲ್ಲಿಯೇ ಮಾಡಿಸಿದ್ದಕ್ಕೆ…. 🙏🙏🙏 #ಕಾಲಯಾನ

ರವಿ ಭಟ್

ಕನ್ನಡ · ಸದ್ಯೋಜಾತ ಭಟ್ಟ · Uncategorized

‘ನಾಸತ್ಯಾ’ – ಶ್ರೀ ಸದ್ಯೋಜಾತ ಭಟ್ಟ

FB_IMG_1551084630522.jpg

ವೇದಗಳಲ್ಲಿನ ಆಯ್ದ ೫೦ ಚಿಕ್ಕ ಕಥೆಗಳ ಗುಚ್ಛ ಶ್ರೀ ಸದ್ಯೋಜಾತ ಭಟ್ಟರು ಬರೆದಿರುವ ‘ ನಾಸತ್ಯಾ ‘ ಪುಸ್ತಕ .ಲೇಖಕರು ವೇದಗಳ ಕಥೆ ಹೇಳುತ್ತಾ ಕೆಲವು ತಪ್ಪು ಗ್ರಹಿಕೆಗಳನ್ನು ತಾರ್ಕಿಕವಾಗಿ ಸರಳಗನ್ನಡದಲ್ಲಿ ಅರ್ಥೈಸುವ ಪ್ರಯತ್ನವನ್ನು ಮಾಡಿದ್ದಾರೆ .

ಮಕ್ಕಳು ಸಿಹಿ ತಿನಿಸನ್ನು ನಿಧಾನವಾಗಿ ಸವಿಯುತ್ತಾರೆ . ನಾನು ಶ್ರೀ ಸದ್ಯೋಜಾತ ಭಟ್ಟರ ‘ ನಾಸತ್ಯಾ ‘ ಪುಸ್ತಕದಲ್ಲಿರುವ ನಾಲ್ಕೈದು ಕಥೆಗಳನ್ನು ಮಲಗುವ ಮುನ್ನ ಓದುತಿದ್ದೆ , ಆ ಕಥೆಗಳ ಬಗ್ಗೆ ಚಿಂತಿಸುತ್ತ ಮಲಗುತ್ತಿದ್ದೆ . ಪುಸ್ತಕದಲ್ಲಿನ ೫೦ ಕಥೆಗಳು ಮುಗಿದವು ಬೇಸರವಾಯಿತು ನಾಳೆ ಏನು ಓದಿ ಮಲಗುವುದೆಂದು, ಇದು ನಿರಂತರವಾಗಿದ್ದರೆ ಚಂದ ಎನಿಸಿತು. ‘ನಾಸತ್ಯಾ’ ಹೆಸರಿನಲ್ಲಿ ಪ್ರತಿ ತಿಂಗಳು ನೂರಾರು ವೇದಗಳ ಕಥೆಗಳು ನಮ್ಮನ್ನು ತಲುಪಲಿ ಎಂದು ಆಶಿಸುವೆ . ಗುರುಗಳು ಈಗಷ್ಟೇ ಪಾಠ ಮಾಡಲು ಶುರುಮಾಡಿದ್ದಾರೆ , ಅಂದಿನ ಪಾಠವನ್ನು ಅಂದೇ ಓದಿ ವಿಧೇಯ ವಿಧ್ಯಾರ್ಥಿಗಳಾಗೋಣ (ನಾನು ಅವರ ಎರಡು ಕೃತಿಗಳನ್ನು ಓದಿರುವೆ ) .

ಪುಸ್ತಕ ; ನಾಸತ್ಯಾ
ಲೇಖಕರು ;ಶ್ರೀ ಸದ್ಯೋಜಾತ ಭಟ್ಟ
ಮೊಬೈಲ್ ; 9480709038
ಬೆಲೆ ; 150

ಶುಕ್ರಾಚಾರ್ಯ

ಕನ್ನಡ · ಸದ್ಯೋಜಾತ ಭಟ್ಟ · Uncategorized

‘ಶಿಲೆಗಳಲ್ಲಡಗಿದ ಸತ್ಯ’ – ಸದ್ಯೋಜಾತ ಭಟ್ಟ

ಶಿಲೆಗಳಲ್ಲಡಗಿದ ಸತ್ಯ

ಇತ್ತೀಚೆಗೆ ಇತಿಹಾಸ ಆಸಕ್ತರಲ್ಲಿ kgf ಸಿನಿಮಾರೀತಿ ಸದ್ದು ಮಾಡಿದ ಪುಸ್ತಕ ಶ್ರೀಯುತ ಸದ್ಯೋಜಾತ ಭಟ್ಟರು ಬರೆದ ‘ಶಿಲೆಗಳಲ್ಲಡಗಿದ ಸತ್ಯ’ .

ಪಾಶ್ಚಾತ್ಯ ಇತಿಹಾಸಕಾರರನ್ನು ತಾರ್ಕಿಕವಾಗಿ ಬಗ್ಗುಬಡಿದು ಸತ್ಯವನ್ನು ನಮ್ಮ ಮುಂದಿರಿಸಿ ಪ್ರಾರಂಭವಾಗುವುದು. ಆರ್ಯರ ವಲಸೆ ಸುಳ್ಳೆಂದು ನಿರೂಪಿಸಿ , ಸಿಂಧು ನಾಗರಿಕತೆಯಲ್ಲಿ ವೈಧಿಕ ಧರ್ಮದ ಕುರುಹನ್ನು ತೋರಿಸಿ , ಅಶೋಕ ಚಕ್ರವರ್ತಿಯ ನಿಜರೂಪವನ್ನು ತಿಳಿಸಿ , ಶಾಸನಗಳ ಪಿತಾಮಹ ಚಪಡನನ್ನು ಪರಿಚಯಿಸಿದ್ದಾರೆ.ವೇದ ಪುರಾಣಗಳ ಸಾರವನ್ನು ಶ್ಲೋಕಗಳನ್ನು ಸರಳವಾಗಿ ವಿವರಿಸಿ,ತಪ್ಪು ಗ್ರಹಿಕೆಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ .

ಪ್ರಮುಖ ಸ್ತ೦ಭ , ತಾಮ್ರ ,ನಾಣ್ಯ , ಬಂಡೆ ಶಾಸನಗಳಲ್ಲಿನ ಸತ್ಯವನ್ನು ವಿವರಿಸುತ್ತಾ ಬ್ರಾಹ್ಮೀ ,ಪ್ರಾಕೃತ , ಕನ್ನಡ, ಅರಾಮಿಕ್ ಲಿಪಿಗಳ ಕಾಲಮಾನವನ್ನು ಬದಲಾವಣೆಗಳನ್ನು ರೋಚಕವಾಗಿ ವಿವರಿಸಿದ್ದಾರೆ.ವ್ಯವಹಾರ ನೀತಿ , ಕಶ್ಯಪರು ಪ್ರಹ್ಲಾದನಿಗೆ ಭೋದಿಸಿದ ನ್ಯಾಯದ ಮಹತ್ವ ,ಮತ್ತು ಯಜುರ್ವೇದದಲ್ಲಿನ ರಾಜಧರ್ಮ ಹಲವು ಉಪದೇಶಗಳು ಈ ಪುಸ್ತಕದಲ್ಲಿ ಅಡಗಿದೆ .

ಸಂಕ್ಷಿಪ್ತವಾಗಿ ನನ್ನ ಅನಿಸಿಕೆ ಹಂಚಿಕೊಂಡಿದ್ದೀನಿ , ಅಪ್ರಬುದ್ಧ ಓದುಗನಾದ ನನ್ನನ್ನು ೨ ದಿನ ಕಟ್ಟಿ ಹಾಕಿದ ಪುಸ್ತಕ ‘ಶಿಲೆಗಳಲ್ಲಡಗಿದ ಸತ್ಯ’. ಇತಿಹಾಸದ ಆಸಕ್ತಿ , ನಾಡು ನುಡಿ ಬಗ್ಗೆ ತಿಳುದುಕೊಳ್ಳುವ ಹಂಬಲ ಇರುವವರು ಓದಲೇಬೇಕಾದ ಪುಸ್ತಕ .

ಶುಕ್ರಾಚಾರ್ಯ

ಕನ್ನಡ · ಸದ್ಯೋಜಾತ ಭಟ್ಟ · Uncategorized

‘ಶಿಲೆಗಳಲ್ಲಿ ಅಡಗಿದ ಸತ್ಯ’ – ಸದ್ಯೋಜಾತ ಭಟ್ಟ

#ಶಿಲೆಗಳಲ್ಲಿ ಅಡಗಿದ ಸತ್ಯ#
“ಸತ್ಯ” ಸೂರ್ಯನಷ್ಟೇ ಪ್ರಾಕಾಶಮಾನ ಆದರೆ ಸತ್ಯಕ್ಕೆ ತಾತ್ಕಾಲಿಕವಾಗಿ ಮೋಡಮುಚ್ಚಿದೆ.‌…
ದುರಂತವೆಂದರೆ ಆ “ತಾತ್ಕಾಲ” ವೆನ್ನುವುದೇ “ಶಾಶ್ವತ”ವಾಗಿರುವ ಕಾಲದಲ್ಲಿದ್ದೇವೆ.
‘ಆವರಣ’ದ ‘ಅನಾವರಣ’ವಾದರೂ …. ಅಲ್ರಯ್ಯ ಇದು ಸತ್ಯ ಅಲ್ವ, ಸತ್ಯ ಒಪ್ಪಿಕೊಳ್ಳಿ. ಇತಿಹಾಸದ ಸುಳ್ಳು ಚಿತ್ರಣದ ಮೇಲೆ “ರಾಷ್ಟ್ರೀಯತೆ” ಯ ಭುವನ ಬೇಡವೆಂದರೆ “ಅಸಹಿಷ್ಣು”ಗಳೆಂಬ ಬಿರುದು…..
” ಸತ್ಯ” ವು “ದೋರಸಮುದ್ರ”ದ ಶಿಲೆಗಳಲ್ಲಿ “ಹಳೇಬೀಡಾ”ಗಿ, ಪಾಳಾದ ರಾಮನಾಲದಲ್ಲಿ, ಪುರಾತನ ಬುನಾದಿಯ ಮೇಲೆ ಭವ್ಯ ಮಂದಿರವಾಗಿ,
“ವೇದ”ಗಳಲ್ಲಿ ಋಕ್ಕು/ಮಂತ್ರ ಗಳಾಗಿ ಭಂದಿಯಾಗಿರುವದನ್ನು ಬಿಡಿಸುವ ಪ್ರಯತ್ನ ಮಾಡಿದ್ದಾರೆ….ಸದ್ಯೋಜಾತ ಭಟ್ಟರು.
ಸಂಗ್ರಹಯೋಗ್ಯ ಪುಸ್ತಕ. ಪುರಾಣ, ವೇದ, ಶಿಲಾಶಾಸನಗಳ ಮೇಲೆ ಬೆಳಕುಚೆಲ್ಲುವ ಪುಸ್ತಕ. ಓದುಗರು ಕೊಂಡು ಓದಿದರೆ(ಸತ್ಯಕ್ಕೂ ಬೆಲೆಯಿದೆ) ಮುಂದ ಹಲಾವಾರು ಭಾಗಗಳು ಪ್ರಕಟವಾಗುತ್ತವೆ….
ಅಂದಹಾಗೆ ” ಈ ಸತ್ಯ” ದ “ಪ್ರಕಾಶಕ”ರೂ ಸದ್ಯೋಜಾತ ಭಟ್ಟರೇ….

ಪುಸ್ತಕ ಕೊಳ್ಳಲು –

ಸದ್ಯೋಜಾತ ಭಟ್ಟ – 9480709038

ನರಹರಿ ಶಾಸ್ತ್ರಿ