ಕನ್ನಡ · ಕೃಪಾಕರ ಸೇನಾನಿ · ಪುಟ್ಟಸ್ವಾಮಿ

‘ಜೀವಜಾಲ’ – ಕೆ. ಪುಟ್ಟಸ್ವಾಮಿ, ಕೃಪಾಕರ, ಸೇನಾನಿ

ನಾನು ಓದಿದ ಪುಸ್ತಕ : #ಜೀವಜಾಲ
ಲೇಖಕರು : ಕೆ.ಪುಟ್ಟಸ್ವಾಮಿ, ಕೃಪಾಕರ, ಸೇನಾನಿ

ಪರಿಸರದಒಂದುಚಿಕ್ಕಭಾಗನಾವು

ನಮಗಾಗಿಯೇ_ಪರಿಸರವಲ್ಲ

ಮನುಷ್ಯ ಎಂಬ ಜೀವಿ ಪರಿಸರದ ಒಂದು ಭಾಗ ನಮ್ಮಂತೆ ಅನೇಕ ಜೀವಿಗಳ ಹಾಗೂ ನಿರ್ಜೀವಿಗಳಿಂದಾದ ಕಣ್ಣಿಗೆ ಕಾಣದ ವ್ಯವಸ್ಥಿತವಾದ ಬಿಡಿಸಲಾಗದ ಕೊಂಡಿಯೇ ಈ #ಜೀವಜಾಲ.

ಈ ಪುಸ್ತಕ ಕನ್ನಡದ ಅಪರೂಪದ ಪರಿಸರ , ಪ್ರಕೃತಿ ಹಾಗೂ ಜೀವ ವೈವಿದ್ಯಗಳ ಸಮೃದ್ಧ ವಿಚಾರಗಳ ಸಂಗ್ರಹ ಇಲ್ಲಿ ಭೂಮಿಯ ಹುಟ್ಟಿನಿಂದ ಇಂದಿನವರೆಗಿನ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಸುಂದರವಾಗಿ ಬರೆದಿದ್ದಾರೆ. ಆಹಾರ ಸರಪಳಿಯಿಂದ ಶುರುವಾಗಿ ಅಣಬೆಗಳ ವೈಶಿಷ್ಟ್ಯ, ಹುಲ್ಲಿ‌ನ ಬೆಳೆಗಳ ವಿಶೇಷತೆ, ಪ್ರಾಣಿಗಳ ಸಾಮ್ರಾಜ್ಯ ಗಡಿಗಳು ಹಾಗೂ ಸಂಸಾರ, ಸಂವಹನ, ಆಕ್ರಮಣ ಶೀಲತೆ ಹಾಗೂ ಪ್ರಾಣಿಗಳ ಪರೋಪಕಾರಿ ಗುಣಗಳು, ಸಾಂಘಿಕ ಪ್ರವೃತ್ತಿ, ಹೀಗೆ ಮುಂದುವರೆದು..

ಪಕ್ಷಿಗಳ ವಿಶ್ವ ಪರ್ಯಟನೆ ಅವುಗಳ ಸ್ವಯಂವರ, ವಂಶಾಭಿವೃದ್ಧಿ ವಿಚಾರಗಳು,ಅವುಗಳ ಗೂಡಿನ ವಿಶೇಷತೆಗಳು,ಸಾಲ್ಮನ್ ಮೀನುಗಳ ಜೀವನ ಯಾತ್ರೆ, ಮಾಂಸಹಾರಿ ಸಸ್ಯಗಳು,ಮರುಭೂಮಿಯ ಜೀವ ವೈವಿಧ್ಯಗಳು, ಛದ್ಮ ವೇಷಧಾರಿಗಳು, ಗೆದ್ದಲು ಹುಳುಗಳ ವಂಶಾಭಿವೃದ್ಧಿ, ಹೀಗೆ ಮುಂದುವರೆದು,

ಸಹಜವಾಗಿ ಹೊಂದುವ #ವಂಶನಾಶಗಳ ಜೋತೆಗೆ ಡೈನೋಸಾರಗಳ ವಂಶನಾಶ, ಡೋ ಡೋ ಹಕ್ಕಿಯ ನಾಶ, ಅಮೆರಿಕದ ಪ್ಯಾಸೆಂಜರ್ ಪಾರಿವಾಳ ಕೆನಾಡದ ಗ್ರೇಟ್ ಆಕ್ ಹೀಗೆ ಅನೇಕ ಮನುಷ್ಯನಿಂದ ಸರ್ವನಾಶ ಹೊಂದಿದ ಪರಿಸರದ ವಿಚಾರಗಳು ಬೇಸರ ತರುತ್ತವೆ.ವಂಶನಾಶ ಎನ್ನುವುದು ವಿಕಾಸದ ಹಾದಿಯಲ್ಲಿ ಎದುರಾಗುವ ಪ್ರಕ್ರೀಯೆ ನಿಜ ಆದರೆ ಅದಕ್ಕೆ ಮನುಷ್ಯನೇ ಕಾರಣ ಎಂಬುವುದೇ ಅತ್ಯಂತ ನೋವಿನ ವಿಷಾದದ ಸಂಗತಿ. #ಅಭಿವೃದ್ಧಿ_ಅನೀವಾರ್ಯ ಆದರೆ #ನಾಶ_ಅನೀವಾರ್ಯವಲ್ಲ, ಒಂದು ಚೌಕಟ್ಟಿನ ಬದುಕು ಮನುಷ್ಯನಿಗೆ ಬೇಕು ಪರಿಸರದ ವ್ಯವಸ್ಥೆಗೆ ಸಮ ಪಾಲುಧಾರರಿದ್ದಾರೆ ಎಂಬ ಅರಿವು ನಮಗಿದ್ದರೆ ಚೆಂದ, ನಾಶವಾದ ಒಂದು ಪ್ರಾಣಿ ಸಂಕುಲ ನಮ್ಮ ಮುಂದಿನ ಪೀಳಿಗೆಯ ಸರ್ವನಾಶದ ಪ್ರತೀಕ ಎಂಬ ತಿಳುವಳಿಕೆಯೇ ನಮಗಿರಬೇಕಾದ ಜವಾಬ್ಧಾರಿ. ಈ ನಿಟ್ಟಿನಲ್ಲಿ ಇಂತಃಹ ಒಳ್ಳೆಯ ಪುಸ್ತಕ ಶಾಲೆಗಳ‌ ಕಾಲೇಜುಗಳ‌ ಮಕ್ಕಳ‌ ಕೈಗೆ ಸಿಗಬೇಕು ಅವರು ಓದುವಂತಾಗಬೇಕು, ಹಾಗೂ ಪರಿಸರದ ಮೇಲೆ ಗೌರವ ಹಾಗೂ ಪ್ರೀತಿ ಮೂಡಬೇಕು ಆಗ ನಾವು ನಮ್ಮ ಜನಾಂಗ ಬದುಕುಳಿದೇವು.

ಸೃಷ್ಟಿಸಲಾಗದಮನುಷ್ಯನಿಗೆನಾಶದ_ಹಕ್ಕಿಲ್ಲ


ಪ್ರಕಾಶಕರು :- ಅಭಿನವ ಪ್ರಕಾಶನ, ಬೆಂಗಳೂರು ಮರು ಮುದ್ರಣದ ವರ್ಷ:- 2014
ಹಣ :- ₹.158/-

ದೀಪಕ್ ಹುಲ್ಕುಳಿ

ಕನ್ನಡ · ಕೃಪಾಕರ ಸೇನಾನಿ · ಪುಟ್ಟಸ್ವಾಮಿ · Uncategorized

‘ಜೀವಜಾಲ’ – ಕೆ. ಪುಟ್ಟಸ್ವಾಮಿ, ಕೃಪಾಕರ, ಸೇನಾನಿ

FB_IMG_1579867516373

“ಜೀವಜಾಲ”
ಲೇಖಕರು : ಕೆ. ಪುಟ್ಟಸ್ವಾಮಿ, ಕೃಪಾಕರ, ಸೇನಾನಿ
ಪ್ರಕಾಶನ : ಅಭಿನವ

ಇದೊಂದು ಇಂಟರೆಸ್ಟಿಂಗ್ ಪುಸ್ತಕ. ಓದುತ್ತಿದ್ದರೆ ತೇಜಸ್ವಿಯವರ ಮಿಲೇನಿಯಂ ಸರಣಿ ಓದಿದ ಅನುಭವವಾಗುತ್ತದೆ. ಅದರಲ್ಲೂ ಮಕ್ಕಳು ಓದಬೇಕು ಇದನ್ನ. ಎಷ್ಟೊಂದು ವಿಷಯಗಳನ್ನು ಸರಳವಾಗಿ ಒಂದೇ ಗುಕ್ಕಿಗೆ ಅರ್ಥವಾಗುವಂತೆ ಬರೆದಿದ್ದಾರೆ ಗೊತ್ತಾ? ಎಳೆಯ ಮನಸ್ಸುಗಳಿಗೆ ಒಳ್ಳೆಯ ಪಠ್ಯೇತರ ಕೃತಿಯಿದು.

ಇದರಲ್ಲಿನ ಬರಹಗಳು ಬೆರಗು ಮೂಡಿಸುತ್ತವೆ. ನಮ್ಮ ಸುತ್ತಲ ಪರಿಸರದಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವೆ ಇರುವ ಮೂಲ ಸಂಬಂಧ ಯಾವುದು? ಜೀವ ವಿಕಸನಗೊಳ್ಳುವುದು ಹೇಗೆ? ಜೀವಿಗಳ ಆಹಾರ ಸರಪಳಿ ಹೇಗಿರುತ್ತದೆ? ಜೀವ ಜಗತ್ತಿನ ಸಾಮ್ರಾಜ್ಯವಾದ, ಪರಸ್ಪರ ಸಂಹವನ, ವಂಶಾಭಿವೃದ್ಧಿ, ಉಳಿವಿಗಾಗಿ ಪ್ರತಿ ಜೀವಿ ನಡೆಸುವ ಹೋರಾಟ..ಓದುತ್ತಿದ್ದರೆ ಥೇಟ್ ನಮ್ಮ ಬಗ್ಗೆಯೇ ಬರೆದಿರುವಂತಿದೆ.

ಆಫ್’ಕೋರ್ಸ್, ಮನುಷ್ಯನ ಉಗಮಕ್ಕೂ ಮುಂಚಿನಿಂದಲೂ ನೆಲೆಸಿರುವ ಜೀವ ಜಗತ್ತು ನಮ್ಮೆಲ್ಲ ಕಲಾಪಕ್ಕೆ ಮೂಲ. ಅದನ್ನು ನಾವು ಅನುಸರಿಸಿದ್ದೇವೆ. ನಮ್ಮ ಅನೂಕೂಲಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡಿದ್ದೇವೆ. ನಮ್ಮಿಂದ ಪ್ರಕೃತಿ ಕಲಿಯಬೇಕಾದ್ದು ಏನಿಲ್ಲ. ಅದು ಇದ್ದಂತೆಯೇ ಇರುತ್ತದೆ. ಹೀಗಾಗಿ ನಮ್ಮ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಸಾಧನೆ ಜೀವ ಜಗತ್ತಿಗೆ ನಗಣ್ಯವಾದುದು.

ಇಲ್ಲಿರುವುದೆಲ್ಲ ಸಣ್ಣ ಸಣ್ಣ ಸಂಗತಿಗಳೇ. ಹಕ್ಕಿಗಳು ಹೇಗೆ ವಲಸೆ ಹೋಗುತ್ತವೆ? ಹೇಗೆ ವಾಪಾಸ್ ಬರುತ್ತವೆ? ಪ್ರಾಣಿಗಳು ಸ್ನಾನ ಮಾಡುತ್ತವಾ ಇಲ್ಲವಾ? ಸ್ವಜಾತಿ ಭಕ್ಷಕರು ಯಾರು? ಜೀವಿಗಳ ಆತ್ಮ ಸಂರಕ್ಷಣೆ ಹೇಗೆ ನಡೆಯುತ್ತವೆ? ಅವುಗಳ ಸಾಂಘಿಕ ಬದುಕು, ಸಹಜೀವನ ಸಂಬಂಧಗಳು, ಕೀಟ ಪ್ರಪಂಚ, ಸಸ್ಯ ಪ್ರಪಂಚ (ಬಿ.ಜಿ.ಎಲ್ ಸ್ವಾಮಿಯವರ ಹಸಿರು ಹೊನ್ನು ಓದಬೇಕಿದೆ), ಜೀವಿಗಳಲ್ಲಿ ನಡೆಯುವ ಛದ್ಮ ವೇಷಧಾರಿತ್ವ, ಗೂಡು ಕಟ್ಟುವಿಕೆ, ಹಕ್ಕಿಗಳ ಸ್ವಯಂವರ, ಪರಾಗಸ್ಪರ್ಶ, ಜೇನ್ನೊಣ, ಇರುವೆಗಳ ಗುಲಾಮ ಪದ್ಧತಿ..ವಾಹ್! ಓದುತ್ತಿದ್ದರೆ ನಿತ್ಯ ಹರಿದ್ವರ್ಣ ಕಾಡಿನಲ್ಲಿರುವಂತಾಗುತ್ತದೆ.

ಅನುಭವಕ್ಕೆ ಬಾರದ ಹಲವು ಸಂಗತಿಗಳು ಪ್ರಾತ್ಯಕ್ಷಿಕೆಯಾಗುವ ತನಕ ಅದರ ಅರಿವು ನಮಗಾಗುವುದಿಲ್ಲ. ಹಾಗೆ ಈ ಪುಸ್ತಕವನ್ನೋದುವಾಗ ಸರಳ ಸಂಗತಿಗಳು ನಮ್ಮ ಕಣ್ಣೆದುರು ನಡೆದಿರುತ್ತವಾದರೂ ಅತ್ತ ಕಡೆ ನಾವು ಕಣ್ಣೆತ್ತಿಯೂ ನೋಡಿರುವುದಿಲ್ಲ. ಸಣ್ಣ ಸಂಗತಿಗಳಿಗಿರುವ ತಾಕತ್ತು ಅಂಥದ್ದು. 1999ರ ಕರ್ಣಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ ಇದು. ನಿಮ್ಮ ಮನೆಯ ಮಕ್ಕಳಿಗೆ ಕೊಡಿ. ಅವರ ಜ್ಞಾನದ ಎಲ್ಲೆ ವಿಸ್ತರಿಸೀತು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್