ಕನ್ನಡ · ನಾಗೇಶ್ ಕುಮಾರ್. ಸಿ.ಎಸ್ · Uncategorized

‘ರಕ್ತಚಂದನ’ – ನಾಗೇಶ್ ಕುಮಾರ್. ಸಿ.ಎಸ್

FB_IMG_1559235336614.jpg

ಪುಸ್ತಕ #ರಕ್ತಚಂದನ#
ಲೇಖಕರು…#ನಾಗೇಶಕುಮಾರ್_ಸಿ_ಎಸ್
ಪ್ರಕಾಶನ #ಶ್ರೀನಿವಾಸಪುಸ್ತಕಪ್ರಕಾಶನ
ಬೆಲೆ #175ರೂ…

ಕತೆಗಳನ್ನು ಕಟ್ಟುತ್ತೇವಾ, ಹುಟ್ಟಿಸುತ್ತೇವಾ ಎಂದರೆ ಎರಡೂ ಅಲ್ಲ , ಅವುಗಳನ್ನು ಬರೆಯುತ್ತೇವೆ ಎನ್ನುವುದೇ ಸೂಕ್ತ ಎನ್ನುತ್ತೇನೆ ನಾನು. ಕಾರಣ, ಕತೆಗಳು ಈಗಾಗಲೇ ಬದುಕಿನ ಗತಿಯಲ್ಲಿ ಹುದುಗಿಕೊಂಡಿರುತ್ತವೆ, ದಿನ ದಿನಾ ಘಟಿಸುತ್ತಿರುತ್ತವೆ, ಮಣ್ಣೊಳಗೆ ಬಿದ್ದ ಬೀಜದಂತೆ. ಅಂದರೆ, ಕತೆಗಳು ಬದುಕಿನಲ್ಲಿ ಇವೆ ಅಥವಾ ಬದುಕೇ ಒಂದು ಕತೆಗಳ ಭಂಡಾರ…

ಹಾಗಾದರೆ, ಇದ್ಧದ್ದನ್ನೆ ಬರೆಯುವುದಾದರೆ ಲೇಖಕ/ಕಿಯ ಪಾತ್ರ ನಗಣ್ಯವೇ ಎಂದು ಯಾರಾದರೂ ಕೇಳಿದರೆ, ಖಂಡಿತಾ ನಗಣ್ಯವಲ್ಲ, ಗಣ್ಯ ಎಂದೇ ಹೇಳುವೆ. ಕಾರಣ ಸ್ಪಷ್ಠ, ಎಷ್ಟೆಲ್ಲಾ ಕತೆಗಳು ಕಣ್ಣೆದುರೇ ಘಟಿಸಿದರೂ, ಹುದುಗಿದ್ದರೂ ಎಲ್ಲರೂ ಏಕೆ ಬರೆಯುವುದಿಲ್ಲ, ಎಂದು ಪ್ರಶ್ನಿಸಿದರೆ ಇಲ್ಲಿದೆ ಉತ್ತರ.

ಕತೆಗಾರ/ರ್ತಿ ಮಾತ್ರ ಕತೆಯ ಎಳೆಯೆಂಬ ಆ ಬೀಜವನ್ನು ಗುರುತಿಸುತ್ತಾರೆ. ಅದನ್ನು ಎದೆಯೊಳಗೆ ಹುದುಗಿಸಿಕೊಂಡು ಆರೈಕೆ ಮಾಡುತ್ತಾರೆ. ಚಿಂತನೆಯ ಪುಷ್ಠಿ ನೀಡಿ ಹದವಾದ ಹಂದರದಲ್ಲಿ ಹಬ್ಬಿಸುತ್ತಾರೆ. ಹಬ್ಬಿದ ಬಳ್ಳಿ ಕಂಡ ಓದುಗ ಸಹೃದಯರು , ” ಓ ಇದೆಷ್ಟು ಸಹಜವಾಗಿದೆ, ಹೌದಲ್ಲ, ಇಲ್ಲಿರುವುದೆಷ್ಟು ನಿಜ ” ಹೀಗೆಲ್ಲ ರಸಜ್ಞರಾಗುತ್ತಾರೆ. ಆನಂದಿಸುತ್ತಾರೆ… ಇದು ಎಲ್ಲರ ಕಣ್ಣಿಗೆ ಬಿದ್ದರೂ ಎಲ್ಲರೂ ಹೀಗೆ ಮಾಡಲಾರರಾದ್ದರಿಂದಲೇ ಸಮರ್ಥ ಕತೆಗಾರ/ರ್ತಿಯಿಲ್ಲದೆ ಕತೆಗಳು ಕಾಣಲು ಸಿಕ್ಕರೂ ಓದಲು ಸಿಗಲಾರದಲ್ಲವೇ…?

ಇಂತಹ ಒಬ್ಬ ಸಮರ್ಥ ಕತೆಗಾರ ನಮ್ಮದೇ ಗುಂಪಿನಲ್ಲಿರುವ ಲೇಖಕರು, ” ಸಿ.ಎಸ್.ನಾಗೇಶ ಕುಮಾರ್” , ಮೊನ್ನೆ ಮೊನ್ನೆಯಷ್ಟೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕೃತರಾದವರು. ಇವರ ಇತ್ತೀಚೆಗಷ್ಟೆ ಬಿಡುಗಡೆಯಾದ ಕಥಾಸಂಕಲನ ” ರಕ್ತ ಚಂದನ” . 17 ಕತೆಗಳನ್ನು ಒಳಗೊಂಡಿರುವ ಈ ಪುಸ್ತಕ ದ ಎಲ್ಲ ಕತೆಗಳೂ ವಿಭಿನ್ನವಾಗಿವೆ…

ಮೂಲತಃ ಲೇಖಕರು ಪತ್ತೇದಾರಿ ಕತೆ, ಕಾದಂಬರಿಯನ್ನು ಬರೆಯುವುದರಲ್ಲಿ ಸಿದ್ಧಹಸ್ತರು ಎನ್ನುವುದನ್ನು , ಈಗಾಗಲೇ ಇಲ್ಲಿ ಬಹಳಷ್ಟು ಮಂದಿ ಅವರ ” ಕರಾಳ ಗರ್ಭ” ” ಸುವರ್ಣ ಕರಾವಳಿ”, ” “ಮುಳುಗುವ ಕೊಳ” ಇತ್ಯಾದಿಗಳನ್ನು ಓದಿಯೇ ತಿಳಿದಿರುವಿರಿ. ಪತ್ತೇದಾರಿ ಕತೆಗಳನ್ನು ಓದದ ನಾನು ” ಸುವರ್ಣ ಕರಾವಳಿ” ಪುಸ್ತಕ ಹಿಡಿದಿದ್ದೊಂದೇ ಗೊತ್ತು, ಅದು ತಾನಾಗೇ ಬಹಳ ಕುತೂಹಲದಿಂದ ಓದಿಸಿಕೊಂಡು ಹೋಯ್ತು. ತುಂಬಾ ಇಷ್ಟವಾಯ್ತು ಕೂಡ…

ಈಗ ಈ ಪುಸ್ತಕದಲ್ಲಿ ಬಹಳಷ್ಟು ಕತೆಗಳು ಅಪರಾಧ, ಕೊಲೆ, ಕಳ್ಳತನ ಇತ್ಯಾದಿ ಪತ್ತೇದಾರಿಕೆಗೆ ಒಳಪಡುವ ಕತೆಗಳೇ ಆಗಿವೆ. ಅಂದಮಾತ್ರಕ್ಕೆ ಅದೇ ವಸ್ತು ಎಂದು ತಿಳಿಯಬೇಡಿ, ಸಾಮಾಜಿಕ, ಯುವ ಪೀಳಿಗೆಯ, ಸಂದೇಶವಿರುವ , ಸನ್ನಡತೆ ಎತ್ತಿ ತೋರುವ ಕತೆಗಳೂ ಇವೆ. ಇದಕ್ಕೆ ಉದಾ, ” ಮಾರುತಿಯ ಟ್ರೀಟ್” ಈ ಕತೆ ಚಿಕ್ಕದು, ಆದರೆ ಉದಾತ್ತ ವಸ್ತುವನ್ನು ಒಳಗೊಂಡದ್ದು. ನನಗಂತೂ ಬಹಳ ಇಷ್ಟವಾಯ್ತು.

” ಪೆದ್ದ ಗೆದ್ದ” ಎನ್ನುವ ಕತೆಯೂ ಅಪರಾಧದ ಕುರಿತಾದರೂ ಹಾಸ್ಯವನ್ನೂ ಬರೆಯಬಲ್ಲೆ ಎಂದು ತೋರಿಸಿದ್ದಾರೆ ಲೇಖಕರು. ಅಪರಾಧಕ್ಕೆ ಹಾಸ್ಯ ಮಿಳಿತವಾಗಿರುವುದು ಇಲ್ಲಿಯ ಸ್ಪೆಷಾಲಿಟಿ. ಅನಿರೀಕ್ಷಿತ ತಿರುವು, ಹಾಸ್ಯದಲ್ಲೇ ಮುಕ್ತಾಯ , ಚೆನ್ನಾಗಿದೆ. ಆದರೆ, ಕೊನೆಗೆ ನನಗನ್ನಿಸಿದ್ದು, * ಕತೆ ಸೂಪರ್, ಬೆಳೆಸಿದ್ದೂ ಸೂಪರ್ ಆದರೆ ಇವರ ಎಂದಿನ ಧಾಟಿ ಪತ್ತೇದಾರಿಕೆ, ಹಾಸ್ಯವಿಲ್ಲದೆ ಗಂಭೀರ, ನಿಗೂಢವಿದ್ದರೆ ಇನ್ನೂ ಚೆನ್ನಾಗಿತ್ತೇನೊ* ಎಂದು. ಆದರೆ, ಇದು ಕೇವಲ ನನ್ನನ್ನಿಸಿಕೆ…

” ಶಾಂತಿ ಸ್ಫೋಟ” ಕತೆ ತುಂಬಾ ಹಿಡಿಸಿತು. ಇದು ಭಯೋತ್ಪಾದಕ ವಸ್ತುವನ್ನೊಳಗೊಂಡ ಇಂದಿನ ತಲ್ಲಣಗಳ ಗಂಭೀರ ಕತೆ. ಶಾಂತಿ ಸಭೆಯನ್ನು ಪುಡಿಗೈಯ್ಯುವ ಕಿಡಿಗೇಡಿ ಕೃತ್ಯಗಳನ್ನು ತಿಳಿದ ವರದಿಗಾರ್ತಿ ಧೃತಿ, ತನ್ನ ಪತಿ ಸಿಆರ್ ಪಿ ಎಫ್ ಅಧಿಕಾರಿ ಭರತ್ ಗೆ ತಿಳಿಸಿ, ಹೇಗೆ ಈ ಕುಕೃತ್ಯವನ್ನು ಹುಡಿಗೈದರು ಎನ್ನುವ ಕುತೂಹಲ ಅಂತ್ಯ ಬೆರಗಾಗಿಸದಿರದು…

ಭಾರತೀಯ ಮೌಲ್ಯಗಳಿಗೆ ವಿದೇಶದಲ್ಲಿ ಸಿಕ್ಕ ಬೆಲೆಯನ್ನು ತಿಳಿಸುವ * ನಾವು ಹಾಡುವುದೆ ಸಂಗೀತ* , ಬೀದಿಯಲ್ಲಿ ಜ್ಞಾನೋದಯವಾಗಿ ಹೆಣ್ಣಿನ ಸಾರ್ಥಕತೆ ಎಲ್ಲಿದೆ ಎನ್ನುವುದನ್ನು ಅರ್ಥೈಸಿಕೊಂಡ * ಮಗುವೆ ತಾಯಿಯ ಹಾಡು* ನನಗಿಷ್ಟವಾಯ್ತು. ಎಲ್ಲವೂ ವಿಭಿನ್ನ ವಸ್ತುಗಳ ಕತೆ. ಎಷ್ಡು ಸಂಗತಿಗಳು, ಹೊಸ ಹೊಸ ವಿಚಾರಗಳು ಕತೆಗಳಲ್ಲಿ ಬಿಚ್ಚಿಕೊಂಡಿವೆ ಎಂದರೆ ಓದಿಯೇ ತಿಳಿಯಬೇಕು.

ನಾಗೇಶ್ ಕುಮಾರ್ ಅವರ ಈ ಕತೆಗಳ ಪಾತ್ರಗಳು ಯಾವುದೇ ಭಾವತೀವ್ರತೆಯಿಲ್ಲದೆ ಸಹಜವಾಗಿ ಬೆಳೆಯುತ್ತವೆ, ಕತೆಯನ್ನು ಬೆಳೆಸುತ್ತವೆ, ಹಾಗೆಯೇ ಅಂತ್ಯವನ್ನೂ ಕಾಣಿಸುತ್ತವೆ. ಅವರ ಬರವಣಿಗೆ ಅನೌಪಚಾರಿಕವಾಗಿ ಸಾಗುವುದು ಇನ್ನೊಂದು ವಿಶೇಷ. ಘಟನೆಗಳು ಕಣ್ಮುಂದೆ ನಡೆಯುತ್ತಿರುವಂತೆ ಚಿತ್ರಣ ಕೊಡುವ ಕಲೆ ಇವರಿಗೆ ಸಿದ್ಧಿಸಿದೆ. ಗಾಂಭೀರ್ಯದ ಜೊತೆಗೆ ಹಗುರವಾದ , ಮುಗುಳ್ನಗೆ ಹುಟ್ಟಿಸುವ ವಾಕ್ಯಗಳನ್ನೂ ಹುಟ್ಟಿಸಿ ಬಿಡುತ್ತಾರೆ. ಉದಾ, “ತೊಂದರೆಗೆ ತಾಳಿ ಕಟ್ಟಿದಂತಾಯ್ತು ”

ಗರಿ ಕಿತ್ತ ನವಿಲಿನ ರಹಸ್ಯ, ವಂಚಕಿಯ ಸಂಚು , ದುಡ್ಡಿಗಿಂತಾ ರುಚಿ ಬೇರೆಯಿಲ್ಲ, ವಜ್ರ ಬೇಟೆ, ಕೆಂಪಾದವೋ ಎಲ್ಲ , ರಕ್ತ ಚಂದನ ಈ ಎಲ್ಲ ಕತೆಗಳೂ ಬಹಳ ಉತ್ತಮ ರೀತಿಯಲ್ಲಿ ಸಾಗುವ ಕತೆಗಳು. ಸಿನಿಮಾದ ದೃಷ್ಯಗಳನ್ನು ನೋಡುತ್ತಿದ್ದೀವಾ ಎನ್ನಿಸುವಷ್ಟು ಸಣ್ಣ ಸಣ್ಣ ವಿವರಗಳನ್ನೂ ಕೊಡುತ್ತಾರೆ. ಹಾಗಾಗಿ ಕತೆಗಳು ನಿರಾಳವಾಗಿ, ಆಸಕ್ತಿಯಿಂದ ಓದಿಸಿಕೊಳ್ಳುತ್ತವೆ. ಇನ್ನೊಂದೆರಡು ಕತೆಗಳು ಬಾಕಿಯಿವೆ ಅಷ್ಟೆ.

ಅನ್ನ ಬೆಂದಿದೆಯೇ ನೋಡಲು ಇಡೀ ಪಾತ್ರೆಯ ಅಗುಳನ್ನೆಲ್ಲ ಹಿಸುಕಬೇಕಿಲ್ಲ, ಒಂದೆರಡು ಅಗುಳು ಸಾಕು. ಬಹಳಷ್ಟು ಕತೆಗಳು “ಚೆನ್ನಾಗಿವೆ ” ಎನ್ನುವ ವರ್ಗಕ್ಕೇ ಸೇರಿರುವುದರಿಂದ , ಉಳಿದ ಕತೆಗಳೂ ಹೀಗೇ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವುದೆನ್ನುವ ಭರವಸೆ ನನ್ನದು….

ನಾಗೇಶ್ ಕುಮಾರ್ ಉತ್ತಮ ಬರಹಗಾರರು, ಶುಭವಾಗಲಿ. ಉತ್ತಮ ಪತ್ತೇದಾರಿ ಕಾದಂಬರಿಗಳು ಇವರ ಬರಹದಲ್ಲಿ ಇನ್ನಷ್ಟು ಹೊರಬರಲಿ, ಓದುಗಪ್ರೇಮಿಗಳನ್ನು ತಣಿಸಲಿ ….

ಪುಸ್ತಕದ ರೂಪ ಕೂಡ ಚೆನ್ನಾಗಿದೆ ಎನ್. ರಾಮನಾಥರ ಪ್ರಕಾಶನದಲ್ಲಿ…

-ಎಸ್.ಪಿ.ವಿಜಯಲಕ್ಷ್ಮಿ

ನಿಮ್ಮ ಟಿಪ್ಪಣಿ ಬರೆಯಿರಿ